ಓ ನೋಡು ಮಾನವತೆ ನೀ ಕಾಣು ದಾನವತೆ
ಕಣ್ದೋರು ಕರುಣೆಯಿಂ ವಿಜಯೇಶನೆ
ಕೊನೆಯಿಲ್ಲವೇ ತಂದೆ ಕತ್ತಲೆಯ ಕಾಳಕ್ಕೆ
ತಾಳ ತಪ್ಪಿದೆಯಯ್ಯ ಸೂತ್ರಧರನೆ

ಪ್ರೇಮದಿಂ ನೀ ತಾಯಿ ಯೋಗದಿಂ ನೀ ತಂದಿ
ತೂಗು ತೊಟ್ಟಿಲದಲ್ಲಿ ತುಂಬಿ ತೂಗೈ
ಸಾಕು ಬಿಸಿಲಿನ ಹಲಿಗೆ ಬೇಕು ಜೋಗುಳ ಸಲಿಗೆ
ಆತ್ಮ ಜ್ಞಾನದ ಶಿಖರ ಏರಬೇಕೈ

ಪ್ರೀತಿಯೇ ಸಿದ್ಧಾಂತ ರೀತಿಯೇ ಆಧ್ಯಾತ್ಮ
ಶಾಂತಿಯೇ ಶಿವಧರ್ಮ ಸತ್ಯಧರ್ಮ
ದೇಹ ಧರ್ಮವೆ ವರ್ಣ ಸ್ವೈರ ಕರ್ಮವೇ ವರ್ಗ
ಕಾರ್ಮೋಡ ಕರ್ಬೊಗೆಯೆ ವಿಶ್ವಚೂರ್ಣ

ಕಬ್ಬಿಣವೆ ಕಲಿಯುಗವು ಶಿವಯುಗವೆ ಬಂಗಾರ
ಮುಳ್ಳುಗಳು ಹೂವಾಗಿ ಅರಳಬೇಕು
ಹೊಸಯುಗದ ಶಂಕರನೆ ಓ ವಿಜಯ ಝೇಂಕರನೆ
ಝೇಂಕರಿಸು ಠೇಂಕರಿಸು ಠೀವಿಯಿಂದ
*****