ಗಾನ ಮಾನಸ ಗಗನ ಅರಳಿತು
ವಿಶ್ವ ಕಾನನ ತಟದಲಿ
ಆತ್ಮ ವೀಣಾ ತಂತಿ ತುಡಿಯಿತು
ಝನನ ಝೇಂಕರ ನಟಿಯಲಿ

ಮಾಯೆ ಶಿಲ್ಪಿನಿ ರೂಪ ಬಲ್ಪಿನಿ
ಕಟಿಯ ಕಂಪಿಂ ಕುಣಿದಳು
ಎದಯ ಲಿಂಗನ ಆತ್ಮ ಲೋಲನ
ತಪವ ಚಂಛಂ ಮಿಡಿದಳು.

ಬಣ್ಣವಾಯಿತು ಬದುಕು ಮೂಡಿತು.
ರಾಗ ಯೌವನ ತಂದಳು.
ಹುಟ್ಟು ಸಾವಿನ ತಾಳ ಥೈ ಥೈ
ತಟ್ಟಿ ಹೈ ಹೈ ಎಂದಳು

ಅಬ್ಬ ಘಾಯಾ ಘೋರ ಮಾಯಾ
ಕೂಸು ಸತ್ತಿತು ಎದೆಯೊಳು
ಏನು ದಾಹಾ ಎಂಥ ಮೋಹಾ
ಹೂವು ಸುಟ್ಟಿತು ಹಣೆಯೊಳು

ಚರ್ಮ ಲೋಕದ ಕರ್ಮ ಸಾಕೈ
ಕಾವ್ಯಯೋಗದ ಲೀಲನೆ
ಬೇಕು ವಿಮಲಾ ಬೇಕು ಕಮಲಾ
ಮುರಳಿ ಮಂಜುಲ ಲೋಲನ
*****