ಬೆಳಕು ಚಿಮ್ಮಿತು ಬೆಳ್ಳಿ ಹಾಡಿತು.
ದಿವ್ಯ ಬಾಗಿಲು ತೆರೆಯಿತು ||

ಎಡದ ಕಡಲಿನ ನಿಬಿಡ ಒಡಲಲಿ
ಜ್ಯೋತಿ ತೆಪ್ಪವು ತೇಲಿತು
ತೆರೆಯ ಹೊರೆಯಲಿ ನೊರೆಯ ನೆಲೆಯಲಿ
ಆತ್ಮದೀಪವ ತೂರಿತು

ಮುಗಿಲ ಬಾಂಡಿಯ ಕರಿಯ ಕಂಠವ
ಮಿಂಚು ಕಿರಣದಿ ತೊಳೆಯಿತು
ದೂರ ದಂಡೆಯ ಕರಿಯ ಅಂಚಿಗೆ
ಆಗ್ನಿ ತೇರನು ಎಳೆಯಿತು

ಎಲುಬು ಗೂಡಿನ ಶವದ ಹುಡಿಯಲಿ
ಶಿವನ ಕೆಂಡವ ತುಂಬಿತು
ಕಲ್ಲು ನಗಿಸಿತು ಮಣ್ಣು ಕುಣಿಸಿತು
ಆತ್ಮ ಕೇಕೆಯ ಹಾಕಿತು
*****