Home / ಕವನ / ಕವಿತೆ / ಚಂದದಿ ಕೇಳಿದರ ವಿಸ್ತಾರ

ಚಂದದಿ ಕೇಳಿದರ ವಿಸ್ತಾರ

ಚಂದದಿ ಕೇಳಿದರ ವಿಸ್ತಾರ
ವೇದಾಂತದ ಸಾರಾ
ಮನಸುಗೊಟ್ಟು ಆಲಿಸಿರಿ ಪೂರಾ || ಪ||

ಮೊದಲಿಗಿತ್ತು ನಿರಾಕಾರಾ
ಅದರಿಂದ ಸಾಕಾರ
ಶಬ್ದ ಹುಟ್ಟಿತೋ ಓಂಕಾರ
ಅಕಾರ ಉಕಾರ ಮಕಾರ
ನಾದಬಿಂದು ಕಳಾಕಾರ
ಸತ್ವ ರಜ ತಮದಿಯ ವಿಸ್ತಾರ
ಸ್ಥೂಲ ಸೂಕ್ಷ್ಮ ಕಾರಣ ಪೂರಾ
ಆದೀತೋ ಶರೀರಾ
ವಿಶ್ವತೇಜಸದ ಪ್ರಜ್ಞಹಾರಾ
ಬ್ರಹ್ಮ ವಿಷ್ಣು ಮಹೇಶ್ವರಾ
ಅವರವರ ವ್ಯಾಪಾರಾ
ಸೃಷ್ಟಿ ಸ್ಥಿತಿ ಲಯದ ಕಾರಭಾರಾ
ಲಕ್ಷವಿಟ್ಟು ಕೇಳ ವಿಚಾರ ||೧||

ಆದಿಬ್ರಹ್ಮನಿಂದಲಿ ಮುನ್ನಾ
ಪ್ರಕೃತಿಯು ಉಪ್ಪನ್ನಾ
ಅದರಿಂದ ಅಹಂಕಾರದ ಜನನಾ
ಅಹಂಕಾರದಿ ಹುಟ್ಟಿತು ಗಗನಾ
ಗಗನದಿಂದ ಪವನಾ
ಪವನದಿಂದ ಅಗ್ನಿ ಆಯಿತಣ್ಣಾ
ಅಗ್ನಿಯಿಂದ ಜಲ ಕೇಳಣ್ಣಾ
ಪೃಥ್ವಿಯ ರಚನಾ
ಅದರೊಳು ಔಷಧಿಗಳಾದವಿನ್ನಾ
ಔಷಧದಿಂದ ಹುಟ್ಟಿತು ಅನ್ನಾ
ಅನ್ನದಿಂದ ವೀರ್ಯ ಉತ್ಪನ್ನಾ
ಪುರುಷ ಪಶು-ಪಕ್ಷಿಗಳ ಜನನಾ
ಈ ಪರಿ ಆದೀತೋ ಚರಾಚರಾ ||೨||

ಪೃಥ್ವಿಯ ಅಂಶಗಳೆಲ್ಲಾ
ಅಸ್ಥಿಮಾಂಸವುಳ್ಳ ಚರ್ಮನಾಡಿಗಳ ರೋಮವೆಲ್ಲಾ
ಕಫಾ ಮೂತ್ರ ಮಜ್ಜಗಳೆಲ್ಲ ರಕ್ತಕೇತುಕೆಲ್ಲಾ
ಆಪ್ತತತ್ವವೇ ಅವಕೆ ಮೂಲ
ಹಸಿವು ತೃಷಾ ನಿದ್ರೆಯು ಬಲಾ ಆಲಸ್ಯ ಸಂಗವೆಲ್ಲಾ
ತೇಜ ತತ್ವದಲ್ಲಿ ಪೇಳಿತಲ್ಲಾ
ನಡಿದು ಹಾರಿ ಓಡುವದಲ್ಲಾ
ವಿಸ್ತರಿಸುವೆನಲ್ಲಾ
ನಲದಾಡುವದು ವಾಯು ಉಳಿದೌ ಕಲಾ
ಕಾಮ ಕ್ರೋಧ ಶೋಕ ಮೋಹ ಭಯಂಕರಾ || ೩ ||

ಶಬ್ದ ಹುಟ್ಟಿತೋ ಗಗನದಲಿ
ಸ್ಪರಿಸೆ ಅದನ ವಾಯುವಿನಲಿ
ರೂಪ ಉದ್ಭವಿಸಿತೋ ತೇಜದಲಿ
ರಸವಾಯ್ತೋ ಜಲತತ್ವದಲಿ
ಪೃಥ್ವಿ ನಿಜ ಅಂಶದಲಿ ವಿಷ ಹುಟ್ಟಿತಲ್ಲಿ
ಶಬ್ದ ಒಂದೇ ಗುಣ ನಭದಲ್ಲಿ
ಶಬ್ದ ಸ್ಪರ್ಶ ವಾಯುವಿನಲ್ಲಿ
ಶಬ್ದ ಸ್ಪರ್ಶ ರೂಪ ತೇಜದಲಿ
ಶಬ್ದ ಹಡಿದು ನಾಲ್ಕು ದಿಕ್ಕಿನಲ್ಲಿ
ನೋಡು ಪೃಥ್ವಿಯಲ್ಲಿ
ಶಬ್ದ ಹಿಡಿದು ಐದು ಗುಣವಲ್ಲಿ
ಪಿಂಡ ಬ್ರಹ್ಮಾಂಡ ಒಂದೇ ಪ್ರಕಾರ || ೪ ||

ಗಗನದ ನಿಜ ಆಂಶದಲಿ ಹುಟ್ಟಿತು ಈ ಜ್ಞಾನಾ
ವಾಯು ಕೂಡಿದರೆ ಆಯಿತು ಮನಾ
ತೇಜದಿಂದ ಬುದ್ಧಿಯು ಗಹನ
ಜಲಕೆ ಚಿತ್ತವಿನ್ನಾ
ಪೃಥ್ವಿಗಹಂಕಾರದ ಕೂನಾ
ಬರಿವಾಯುವಿನಿಂದಾದಿತು ವ್ಯಾನಾ ತೇಜದ ಉದಾನಾ
ತೇಜದಿಂದಲುದಾನಾ
ಅವು ಕೂಡಿದರೆ ಆಯಿತು ಪಾನಾ
ಪೃಥ್ವಿ ಕೂಡಲುದಿಸಿತು ಪ್ರಾಣಾ
ನಭ ಕೂಡಿ ಸಮಾನಾ
ಹೀಂಗ ಹುಟ್ಟಿದವು ಪಂಚಪ್ರಾಣಾ
ಮುಂದೆ ಕೇಳೋ ಇಂದ್ರಿಯ ವಿಚಾರ || ೫||

ಬರಿಯ ತೇಜದ ಅಂಶದ ನೇತ್ರಾ
ಜಲಕೆ ಜಿವ್ಹೆ ಪವಿತ್ರಾ
ಪೃಥ್ವಿಕೂಡಲು ಪ್ರಾಣ ವಿಚಿತ್ರಾ
ಗಗನ ಕೂಡಲಾಯಿತೋ ಶ್ರೋತ್ರಾ
ಪವನಂಶವೇ ಗಾತ್ರಾ
ಜ್ಞಾನ ಇಂದ್ರಿಯ ಕೇಳು ಸರ್ವತ್ರ
ವಾಯು ಬೆರತು ಪ್ರಾಣಿಯ ಸೂತ್ರಾ
ತೇಜಕ ಪದಯತ್ರಾ
ಗಗನಕೂಡಲ್ಕೆ ವಾಕಸೂತ್ರಾ
ಪೃಥ್ವಿಯೊಳು ಜಲಕೂಡಿ ಲಿಂಗಮಾತ್ರಾ
ಬರೆ ಪೃಥ್ವಿಗೆ ಗುದತಂತ್ರಾ
ಕರ್ಮ ಇಂದ್ರಿಯಗಳ ಚರಿತ್ರಾ
ಮುಂದೆ ಕೇಳ ವಿಷಯಗಳಂಕುರಾ ||೬||

ಕೆಲವು ದಿವಸ ಗಗನದೊಳಿದ್ದು
ಜಲದೊಳಗೆ ಬಿದ್ದು
ಪಾವಾಮಾತ್ರದ ಲಿಪಿತನದಲಿ ಬಂದು
ಮೂರು ತಿಂಗಳುದರದಿ ನಿಂದು
ರತಿಕೂಡಲು ಬಿಂದು
ಜನನಿಯ ಗರ್ಭಕೈತಂದು
ನವತಿಂಗಳ ವಿಧಾನದೊಂದು ಜನಿಸಿ ಬರಲೊಂದು
ಪೂರ್ವಜನ್ಮದ ಸ್ಮರಣೆಯ ಮರೆದು
ಶಿಶುತನದಲಿ ತಿಳಿಯದು
ಅಂದು ಪ್ರಾಯಕಾಲ ಕೂಡಿಯದು
ವಿಷಯದಲಾತ ಮರುಗಿ ಬೆಂದು
ವೃದ್ಧನಾಗಿ ಬಿಡತೈತಿ ಘೋರಾ ||೭||

ಒಂದೆ ಮನದಿ ಗುರುಮತವರಿದು
ಎರಡು ಬುದ್ಧಿಯ ಮರಿತು
ಮೂರು ತಾಪವನೆ ಮೊದಲು ಮುರಿದು
ಚತುರ್ವಿಧ ಪುರುಷಾರ್ಥವನೆ ಜರಿದು
ಪಂಚಕ್ಲೇಶ ಕೊರಿದು
ಪಂಚ ವಿಷಯಗಳನೆಲ್ಲಾ ತರಿದು
ಷಟ್ಪದ ವೈರಿಗಳಿಗೆ ಅರಿದು
ಷಡ್ ಭ್ರಮಗಳ ಉರಿದು
ಸಪ್ತವ್ಯಸನಗಳೆಲ್ಲಾ ಸರಿದು
ಅಷ್ಟ ಪಾಶಗಳ ಪರಿಹರಿದು
ಅಷ್ಟ ಮದಗಳನರಿದು
ನವವಿಧ ಭಕ್ತಿಯಲಿ ಮೆರಿದು
ರಾಜಯೋಗಿಯೆನಿಸುವ ಶೂರಾ ||೮||

ಈ ಪರಿಯಲಿ ಸಾಧನಮಾಡೋ
ಸಂತ ಜನರ ಕೂಡೋ
ತಾರಿಸುವ ಸದ್ಗುರುವಿನ ನೋಡೋ
ತನು ಮನ ಧನ ವಹಿಸಿಬಿಡೋ
ಚರಣದಿ ಚಿತ್ತವಿಡೋ
ಗುರುವಿನ ನಿರುತದಿ ಕೊಂಡಾಡೋ
ಬಂದದಕೇನು ತೋಡೋ
ಮುಂದ ಯಾರಿಲ್ಲ ನಿನಗ ಜೋಡೋ
ಗುರುಗೋವಿಂದನ ಒಡಗೂಡೋ
ಚಿತ್ತಸುಖವನು ಬೇಡೋ
ನಿತ್ಯಾನಂದದಲಿ ನಲಿದಾಡೋ
ಸರ್ವ ಬ್ರಹ್ಮಮಯ ಬರ್ಪುರಾ
ವೇದಾಂತಾ ಸಾರಾ ||೯||

*****

 

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...