ಹೇಗೆ ಹೋಗುತಿದೆ ನೋಡಿ
ಸೋಮವಾರದ ಗಾಡಿ
ಸುತ್ತಾಡಿ ಗಲ್ಲಿ ಗಲ್ಲಿ
ಒಡೆದು ದಾಮರ ಜಲ್ಲಿ
ಗುರುತುಗಳು ವಕ್ರ ವಕ್ರ
ತುಳಿದಲ್ಲಿ ಭಾರೀ ಚಕ್ರ
ಕಾಣಿಸುವುದೇಕ ಪಾತ್ರ

ಕಣ್ಣುಗಳು ಅನೇಕ ಮಾತ್ರ
ಮಾತಿಗೆ ಮಾತು ಜೋತು
ನಿಂತಿರುವುದು ಸೇತು
ಅಲ್ಲಿ ಹೊಳೆ ಇಲ್ಲಿ ಹೊಳೆ
ಕೆಳ ಬಾಯತೆರೆದ ಮೊಸಳೆ
ಬಿಟ್ಟಲ್ಲಿ ಖಂಡಿತ ಬಿರುಕು
ಮುಳುಗುವುದು ಸರಕು
ದೈವವೆಂಬ ವಿಶ್ವಾಸ
ತೀರ ಕೊನೆಯ ಪ್ರಾಸ

ಕೂಲಿ ಕುತುಬ್‌ಶಹನ ಘಜಲು
ಹಾಡಲಾಗದು ಹಗಲು
ಮಿನಾರದ ಮೇಲೆ ರೆಂಜೆ
ಹೂ ಚೆಲ್ಲಿದಾಗ ಸಂಜೆ
ಕುಣಿಯುವಳು ಭಾಗ್ಯಮತಿ
ಕವಿಯ ಚಿರಂತನ ಯುವತಿ
ನಿನ್ನೆಗಳ ಗೋರಿಯಲಿ ನಿಂದು
ನಮ್ಮ ಕನಸಿನಲಿ ಬಂದು

ರೂಪರೂಪಕಗಳಲ್ಲಿ ನಿಮಗೆ
ಪ್ರಿಯವಾದುದಾವ ಬಗೆ?
ಅಥವ ಭಾಷೆಯನದರ
ನಗ್ನತೆಯಲೆ ಕೊಳ್ಳಬಯಸುವಿರ ?
ಕೊಂಡೇನು ಮಾಡುವಿರಿ-
ಇದ್ದ ಶಬ್ದಗಳಲ್ಲಿ ಯಾವುದಷ್ಟೆ ಸರಿ?
ಒಮ್ಮೆ ಬಂದಾದ ನಂತರ
ಬರುವುದೇನು ಅದೇ ವಾರ?
*****