ಕನ್ನಡಕ್ಕೆ ಜರ್ಮನಿಯ ಕಿಟ್ಟೆಲ್ ಆದರು.
ಈ ಮಣ್ಣಿನ ಕುಡಿ ನಾನಾಗಲಿಲ್ಲ ಕಣ್ಮಣಿ-
ನೆಲ ನುಡಿಯ ಬಲ್ಮೆಗೆ
ತಿಳಿದುಕೊಳ್ಳಲಾಗಲಿಲ್ಲ ಕನ್ನಡದ ಬಣ್ಣ.
ಹೊಂಬಣ್ಣವೆಂದು

ಕನ್ನಡವ ಮೆಲ್ಲುತ್ತ ಹಾಡಿದರು
ಕುಡಿಯುತ್ತ ತೇಗಿದರು
ಕನ್ನಡದಲೇ ಮಿಂದರು ಜನಪದರು
ಕಾಯಕದ ಕಸ್ತೂರಿ
ಕನ್ನಡದ ತುತ್ತೂರಿ ಊದಿದರು.
ಈ ಮಣ್ಣಿನ ಕುಡಿ ನಾನಾಗಲಿಲ್ಲ
ತಾಯ್ನುಡಿಯ ಹಿರಿಮೆಗೆ ಕನ್ನಡಿ
ಅರಿಯಲಾಗಲಿಲ್ಲ ತಿರುಳ್ಗನ್ನಡದ
ಮೈ ವಜ್ರ ವಡ್ಯಾಣವೆಂದು.

ಹಳ್ಳಿಗಾಡಿನ ಹುಂಬ ಹೈಕಳು
ಹಬ್ಬಿಸಿದರು, ಹರಳುಗಟ್ಟಿಸಿ
ನುಡಿಯ ಬೆಳಸುತಿಹರು
ಈ ಮಣ್ಣಿನ ಕುಡಿ ಕಲಿತ ಮಣಿ
ನಾನಾಗಲಿಲ್ಲ ಮುನ್ನುಡಿ
ಕೋಶ ಓದಿ, ನಾಡ ಸುತ್ತಿ ಪರಂಪರೆ ಸಂಸೃತಿಯ
ಉದ್ದೂದ್ದ ಭಾಷಣವ ಬಿಗಿದೆ.
ಕಟ್ಟಲಿಲ್ಲ, ಕಿವಿಗೊಡಲೂ ಇಲ್ಲ
ಕನ್ನಡದ ಹಾಡಿಗೆ.
ಬಗೆಯಲಾಗಲಿಲ್ಲ ಬಗೆಗೂಡಿಗೆ
ಕನ್ನಡವು ಬೆಳ್ನುಡಿಯೆಂದು

ಪೇಟೆ ಜನರ ಬಾಯಲ್ಲಿ
ಟೂಸ್ಸುಪುಸ್ಸು ಇಂಗ್ಲೀಷ ಕೇಳಿ ಬೆರಗಾದೆ
ಮಣಿದೆ, ಮರಳುಗೊಳಿಸಿತು ಆಂಗ್ಲತೆ
ಮರೆತೆ ಹೆತ್ತೊಡಲ ನುಡಿಯ ಒರತೆ ಇಲ್ಲ.
ಮರೆತೆನೆಂಬುದು ಬರಿಯ ನಾಟಕದ ನಿದ್ರೆ.
ತಾಯ್ಮೊಲೆಯ ಚೀಪುತ್ತ ಕೇಳಿದೊಂದು
ನುಡಿಯ ನೆನಪು ನಾಭಿಯಲಿ ಮುದ್ರೆ
ಅಂಬೆಗಾಲಿಕ್ಕಿ ಮಗುವಿನಂತೆ
ತೊದಲುನುಡಿಯಲಿ ಕನ್ನಡಮ್ಮಗೆ ಹರಕೆ
ತನುಮನಧನವೂ ಕನ್ನಡಕೆ
ಕನ್ನಡದ ನುಡಿಗೋಪುರದಿ ತಾನತನನಕೆ.
*****

ನಾಗರೇಖಾ ಗಾಂವಕರ