ಅದಾವ ಲೀಲಾಜಾಲ ಮಾಯೆ ಮುಸುಕು!
ಬಲೆಯೋ, ಭವಣೆಯೋ, ಬಣ್ಣ ಜೀವನ ವರ್ಣವೈಚಿತ್ರ್ಯವೋ ?
ಕನಸು ನನಸಿನ ನೋಟ; ಮಿಂಚದಾ ಬದುಕು!
ಇಹ-ಪರ ಪಾತಾಳಗಳ ಬಗೆಯು ಅರಿಯಲಸದಳವೋ ?

ಭುವಿಯನೇ ಹೆತ್ತು, ನೀರು ಜೀವವ ಇತ್ತು
ಅನಿಲ ಅನಲರ ತೆತ್ತು; ನಮ್ಮ ನಿತ್ತ ತಂದೆ ಇರುವರಾರು ?
ವಿಶ್ವಗರ್ಭವೈಚಿತ್ರ್ಯವಾವಿರ್ಭವಿಸಿದಾರ ಸೊತ್ತು?
ಸುತ್ತುತಿದೆ ಸರ್ವಸ್ವ, ಸರಿಯುತಿದೆ ಸಮಯ; ಹಿರಿಯರಿದಕಾರು?

ಆಚಿನಾಚೆಯ ದಿಶೆಯ ಉರಿಯ ರವಿಯಾರು?
ಏನಿದೀ ಒಳಸಂಚು. ಅರ್ಥ ಅರಿಯದ ನೀಲಿವ್ಯೋಮವು !
ಕೈಚಳಕವೆನಿತು ? ಸೂತ್ರವಿಡಿದವರಾರು ?
ಬೇರು ಇಲ್ಲದ ಕಾಂಡ, ಮೂಲವಿಲ್ಲದ ಶಾಖ ಜಗದೊಳಾವು ?

ಹಗಲಿರುಳು ಯುಗ ಯುಗಕೆ ಮುಗಿಯದೇ
ತಿರುಗುತಿಹನದೊ ತಿಂಗಳನು! ತಿರುಗಿ ಮಾಡುವನೇನು?
ಹೆಣೆದು ನಿಂತಿಹವು ಚುಕ್ಕೆಗಳು ಬಾಡದೇ!
ಅದ್ಭುತ ಬ್ರಹ್ಮಾಂಡ ಭ್ರಮೆಯೋ ನೈಜವೋ, ತಿಳಿಯದೇನು

ಜೀವರಾಶಿಯ ನಾಟ್ಯ ಸಾವಕಂಟಿಹುದು
ನಾವಳಿದು ಮುಂದೇನು? ಜನ್ಮ ಕಲ್ಪನೆಯಾಟ ನನಸೇನು?
ಏನಿದಗಮ್ಯನಾ ಕರ್ತನ ಕುಸಿರಹುದು!
ಸಾಸಿರ ವರ್ಣ ರಂಧ್ರದೀ ಕುಸುರು; ಅತೀತ ಅವ್ಯಕ್ತ ಉಸಿರೇನು ?
*****