ಗಾಡಿ ಓಡುತಿದೆ; ಅಕೋ ತಡೆಯದೆ
ದುಡುಕುತಿದೆ ತಾ ಮುಂದಿನ ಎಡೆಗೆ
ನಡುಹಗಲೆನ್ನದೆ; ಚಳಿ ಬಿಸಿಲೆನ್ನದೆ
ಓಡುತಿದೆ ಆಕೆ ಹೊಸಬಾಳುವೆಗೆ

ನಿಲ್ವನೆಗಳಲಿ ನಿಲ್ಲುತ ನುಗ್ಗುತಿದೆ
ತನ್ನಯ ನಿಯಮವ ಮಾಡುತಿದೆ
ಬಂದವರೆನ್ನದೆ ಇಳಿದವರೆನ್ನದೆ
ಮುಂದಿನ ನಿಲ್ವನೆ ಮುಟ್ಟುತಿದೆ

ಹತ್ತುವರೆಷ್ಟೊ ಇಳಿವರದೆಷ್ಟೊ
ಹುಟ್ಟು ಸಾಯುವವರೆಷ್ಟೆಷ್ಟೊ
ಮಂಗಲ ವಿಧಿಗೆ; ದುಃಖದ ಬದಿಗೆ
ಹಿಗ್ಗುತ ಕುಗ್ಗುತ ನಡೆವವರದೆಷ್ಟೊ

ಮೇಲ್ತರ ಡಬ್ಬಿಗೆ ಸಿರಿವರ ಜೀವನ
ಕೆಳದರ್ಜೆಗೆ ಬಡವರ ವಾಸನ
ಬಡಬಲ್ಲಿದರ ಸಮರಸದನಿವೋಲ್
ಶಿಳ್ಳು ಹಾಕುತಿದೆ ಜೀನನಗಾಡಿ

ಯುಗ ಯುಗ ನಡೆಯುತಿದೆ ತಾ
ಯುಗದಾ ನಿಲ್ವನೆ ಮುಟ್ಟುತಿದೆ
ಯುಗಭಯಂಕರ ಪ್ರಳಯದ ನಡುವೆ
ಇಳಿವರು ಏರ್ವರು ಹೊಸ ಬಾಳುವೆಗೆ
*****