ನಿನ್ನ ಮೌನದೊಳಗಿನ ಮಾತು
ನೀಲಾಂಜನ ಉರಿದಂತೆ ಮನೆ
ತುಂಬ ತಣ್ಣನೆಯ ಬೆಳಕು ಪಸರಿಸಿ
ಸಂಜೆಯಲಿ ಮನೆ ಬೆಚ್ಚಗಾಯಿತು.
ನಿನ್ನ ಮೌನದೊಳಗಿನ ನಡುಗೆ
ಚಿಕ್ಕಿಗಳು ಆಕಾಶದಲಿ ಮಿನುಗಿದಂತೆ
ತಣ್ಣನೆಯ ತಂಗಾಳಿ ತೀಡಿ ಹಾಸಿತು
ಕಣ್ಣ ತುಂಬ ನಿದ್ದೆ ಗುಂಗು ಹರಡಿತು.
ನಿನ್ನ ಮೌನದೊಳಗಿನ ಉತ್ತರ
ಉಲ್ಲಾಸದ ಸೂರ್ಯೋದಯ ಹರಡಿ
ಹಸಿರು ಟೊಂಗೆಯಲಿ ಚಿಲಿಪಿಲಿ
ಗುಟ್ಟಿದವು ಹಕ್ಕಿಗಳು ಮನವು ಕಂಪಿಸಿತು.
ನಿನ್ನ ಮೌನದೊಳಗಿನ ಹಾಡು
ಎಲ್ಲಾ ದಾರಿಯ ಇಕ್ಕೆಲೆಗಳು ಹರಡಿ
ಹಾಸಿದ ಇಬ್ಬನಿಯ ಹನಿಬಿಂದುಗಳು
ಪ್ರತಿಫಲಿಸಿ ಹುರುಪುಗೊಂಡಿತು ಜೀವಭಾವ.
ನಿನ್ನ ಮನದೊಳಗಿನ ಸ್ಪರ್ಶಕೆ
ಪುಲಕಗೊಂಡವು ಸಮಸ್ತ ಜಗದ
ನಿಯಮಗಳು ಅರಳಿದವು ಹೂವುಗಂಧ
ಎಲ್ಲದರಲಿ ಒಂದಾಗಿ ನಾನು ತುಂಬ ಮಾತನಾಡಿದೆ.
*****


















