ನಾವೇ ಅದರೊಳಗೆ ಹೋಗುತಲಿದ್ದರೂ
ರಾಕ್ಷಸಾಕಾರದ ಕರಿಮೋಡಗಳ
ಗುಂಪು ಗುಂಪೇ ನಮ್ಮೆಡೆಗೆ ಬರುವಂತಿದೆ
ಗಬಕ್ಕನೆ ಅವು
ನಮ್ಮನ್ನು ನುಂಗಿ ನೀರು ಕುಡಿಯುತ್ತವೆಯೋ-
ನಮ್ಮ ವಿಮಾನವೇ
ಆ ರಾಕ್ಷಸರನ್ನು ಚಚ್ಚಿ ಕೊಲ್ಲುತ್ತದೆಯೋ-
ಏನೋ ಜಿದ್ದಾಜಿದ್ದಿ ಸ್ಪರ್ಧೆ.

ಸೀಟ್ ಬೆಲ್ಟ್ ಎದೆಗುಂಡಿಗೆ ಬಿಗಿಹಿಡಿದ್ದರೂ
ಮೈಯೆಲ್ಲಾ ಥರಗುಟ್ಟುವಿಕೆ
ಯಮನೇ ಎದುರು ನಿಂತು
ಕರಿ ಕೋಣಗಳ ಬಿಟ್ಟಂತೆ.
ವಿಮಾನತುಂಬ ಕತ್ತಲಾವರಿಕೆ
ಯಮನ ಹಲ್ಲು ಹೊಳೆದು ನಕ್ಕಂತೆ
ಲೈಟು ಹತ್ತಿಕೊಂಡವೇನೋ ನಿಜ.

ಮೋಡ ಸೀಳಿ ನುಗ್ಗುವ
ವಿಮಾನದ ಕರಗಸ ಶಬ್ದ
ಸಖಿಯರು ಏನೇನೋ ಹೇಳುತ್ತಾ
ಎಲ್ಲೋ ಕುಳಿತಿದ್ದಾರೆ
ಕಿವಿಗೆ ಎಲ್ಲರೂ ಹತ್ತಿ ಸೇರಿಸಿಕೊಂಡಾಗಿತ್ತು
ಪಿಳಿಪಿಳಿ ಕಣ್ಣುಬಿಡುವುದೊಂದೇ ಬಾಕಿ
ಇನ್ನೇನು ಮೂಗಿಗೂ ಹತ್ತಿಹಾಕಿಸಿಕೊಳ್ಳೋ
ಸಮಯ ಬಂತೇನೋ ದೇವರೇ….
ದೀರ್ಘ ಉಸರೆಳೆದು
ಸೀಟಿಗೊರಗಿದೆ.
*****