ಎಡೆಬಿಡದೆ ಸುತ್ತುವುದು ಅಪ್ಪುವಿನ ರೈಲು
ಹೈದರಾಬಾದಿನ ಬಯಲು
ಫಲಕ್‌ನುಮಾದಿಂದ ಬೋಲಾರಾಮಿಗೆ
ಯಾಕೆ ಏನೆಂಬ ಗೊಡವೆಯಿಲ್ಲದೆ
ಕರೆಯುವುದು ಮಂದಿಯನು ರಾತ್ರಿಹಗಲು
ಮಲಕ್‌ಪೇಟೆ ಕಾಚಿಗುಡ ಸೀತಾಫಲ ಮಂಡಿ
ಎಲ್ಲ ಕಡೆಗೂ ಇದೊಂದೇ ಬಂಡಿ
ಬೆಳಿಗ್ಗೆ ಮಧ್ಯಾಹ್ನ ಸಂಜೆ ಇಳಿಸಂಜೆ
ಕೂತಲ್ಲೆ ಕಣ್ಣಿಗೆ ನಿದ್ದೆ ಹತ್ತುವ ತನಕ
ನಿದ್ದೆಯಲ್ಲಿ ಹೊಸ ಹೊಸ ಕನಸು ಬೀಳುವ ತನಕ
ಯಾವಾಗ ಬಂದರು ಮಂದಿ ಅವರವರ ಮನೆಗೆ
ಒಬ್ಬೊಬ್ಬರ ಕೈಯಲ್ಲೂ ಒಂದೊಂದು ಮೂಟೆ
ಏನದರ ಒಳಗೆ ಎಲ್ಲ ರಹಸ್ಯ!

ಕೆಲವೊಮ್ಮೆ ಮಾತ್ರ ನಿಂತು ಬಿಡುವುದು
ಅಪ್ಪುವಿನ ರೈಲು ಅರ್ಧದಾರಿಯಲ್ಲಿ
ಅದರ ಕೊಳವೆಯಿಂದ ಹೋಗುವುದು ಹೊಗೆ
ಅಕಾಶಕ್ಕೆ ಹೋಗಿ ಆಗುವುದು ಮೋಡ
ಮಳೆಯಾಗಿ ಸುರಿದು ಕಪ್ಪೆಗಳ ಕರೆಯುವುದು
ಜನ ಮಾತ್ರ ಕಾಯುವುದಿಲ್ಲ. ಅವರು
ಎಲ್ಲೆಂದರಲ್ಲಿ–ಸಂಕದಲ್ಲಿ, ಬಯಲಲ್ಲಿ
ಭ್ರಮೆಗೊಂಡ ಇರುವೆಗಳಂತೆ
ಇಳಿದು ಚದರುವರು; ದಾರಿ ಬದಿಯ
ಎಮ್ಮೆಗಳು ಹಳ್ಳಕೊಳ್ಳಗಳಿಂದ ಎದ್ದು
ಇದು ಹೀಗೇಕೆಂದು ನೋಡುವುವು
ಅರ್ಥವಾಗದೆ ಹೊರಟುಹೋಗುವುವು

ಅಷ್ಟೂ ಹೊತ್ತು ನಿಂತಲ್ಲೆ ನಿಂತ ಅಪ್ಪುವಿನ ರೈಲು
ಇನ್ನೇನು ರಾತ್ರಿ ಇಲ್ಲೇ ತೆಗೆಯುವುದು ನಿದ್ದೆ
ಎಂದುಕೊಂಡರೆ ಥಟ್ಪನೆ ಹಾಹಾ ಎಂದು
ಅದರ ಗಾಲಿಗಳಿಗೆ ಜೀವ ಬಂದು
ಹೊರಟುಬಿಡುವುದು-ಅದೋ ಆಗ ಬರುವರು
ಇದು ತನಕ ಎಲ್ಲೂ ಕಾಣಿಸದ ಜನರು
ಎಲ್ಲಿ ಹೋಗಿದ್ದರು ಅವರು? ಮಸೀದಿಗೆ.
ದೇವರ ಗುಡಿಗೆ-ಇದು ಪ್ರಾರ್ಥನೆಯ ಸಮಯ!
ಅಪ್ಪುವಿಗೊ ಕುಳಿತಲ್ಲೆ ತೂಕಡಿಕೆ
ರೆಪ್ಪೆಗಳೆಡೆಯಿಂದ ಕಾಣಿಸುವುದೇನು?
ಓಹೊ ನೂರು ಮೆಟ್ಟಿಲ ಮಹಡಿ-ಅದರೊಳಗೆ
ಕುಣಿಯುವುದು ಒಂದು ಕರಡಿ
*****

Latest posts by ತಿರುಮಲೇಶ್ ಕೆ ವಿ (see all)