ನೆಲಮುಗಿಲಿನೆತ್ತರಕು ನಿಂತಿದೆ ಭೂತ
ಕಂಡ ನೆತ್ತರು ಕೆಂಡದ ಮೇಲೆ ಕುದಿಯುತಿದೆ
ತನ್ನ ಬಾಲವನ್ನೇ ತಿನ್ನುತ್ತಾ ಸುರುಳಿಸುತ್ತಿಕೊಂಡಂತೆ ಆಗಿದೆ
ಪಂಜರದಿಂದ ಹೊರಬಂದ ಪಕ್ಷಿ
ಹಾರಲಾರದೆ ಹೊಯ್ದಾಡಿದಂತೆ ಸೋತಿದೆ
ನಂದನವನದಲ್ಲಿ ಕಣ್ಣೀರ ಹೊಳೆ
ಹೊದರಲ್ಲಡಗಿ ಹರಿಯುತ್ತದೆ ಗಳಗಳ
ಕೃಷ್ಣನ ಕೊಳಲಲ್ಲಿ ಕಂಸನುಸಿರು ಬಿಡುತ್ತಿದ್ದಾನೆ
ಹುಡುಕುತ್ತಿದ್ದ ಬಳ್ಳಿ ಕಾಲ್ತೊಡಕಿದಾಗ
ಹರಕೊಂಡು ತಿಂದರೆ
ಬಾಯೆಲ್ಲ ವಿಷವಾಯ್ತು
ಕಾವೇರಿಗೆ ಕಟ್ಟಿದಾಣೆಕಟ್ಟು
ಕಟ್ಟುವ ಮುನ್ನವೇ
ವಿಶ್ವೇಶ್ಚರಯ್ಯನಣಕಿಸಿ
ಹೊಲಹಳ್ಳಿಗಳಲ್ಲೆಲ್ಲ ನುಗ್ಗಿತು
ಸಮುದ್ರಕ್ಕೆ ನೀರು ಕುಡಿಯಲು ಬಿಟ್ಟಂತೆ
ಭಕ್ಷ್ಯ ರಾಶಿಯ ಬಾಚಿ ತಬ್ಬಿ ಉಪವಾಸ ನರಳಿದಂತೆ
ಪಟ್ಟೆ ಪೀತಾಂಬರದ ಮೇಲೆ ಬೆತ್ತಲೆ ಹೊರಳಾಡಿದಂತೆ
ತನ್ನರಮನೆಯಂಗಳದಲ್ಲಿ ನಿಂತು ತಾ ತಿರಿದುಂಡಂತೆ
ಚಿಕ್ಕೆಗಳನೆಣಿಸಲು ಕೋತಿ
ಮರದಿಂದ ಕೆಳಬಿದ್ದು ಹಲ್ಲುಕಿರಿದಂತೆ
ತೆಕ್ಕೆಗೆ ಅಮರದ ಬೊಡ್ಡೆ ಹಿಡಿದೇರಿ
ಬಾಯ್ತೆರೆದು ಬಿದ್ದಾಗ
ಯಾರಾದರೂ ನೋಡಿದರೇನೋ
ಎಂದು ಸುತ್ತ ನೋಡುವ ದುಸ್ಥಿತಿ
(೨೭-೧೨-೭೬)
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)