ಆಗದಾಗದು ಮರ್ತ್ಯದ ಮನುಜರಿಗೆ ಶಿವಸುಖ.
ಅದೆಂತೆಂದರೆ ಕಾಳು ವಿಷಯದಲ್ಲಿ
ಬಿದ್ದು ನುಡಿವುತ್ತ, ಮರವೆ ನಡೆವುತ್ತ,
ಮರವೆ ಮುಟ್ಟುತ್ತ, ಮರವೆ ಕೇಳುತ್ತ,
ಮರವೆ ನೋಡುತ್ತ, ಮರವೆ ಇಂತು ಮರಹಿನೊಳಗಿರ್ದು,
ಅರುಹ ಕಂಡಿಹೆನೆಂಬ ಅಣ್ಣಗಳಿರಾ, ನೀವು ಕೇಳಿರೋ.
ನಮ್ಮ ಶರಣರ ನಡೆ ಎಂತೆಂದರೆ,
ಐದು ಗುಣವನೆ ಅಳಿದು, ಐದು ಗುಣವನೆ ಹಿಡಿದು,
ನುಡಿವುತ್ತ ಲಿಂಗವಾಗಿ ನುಡಿದರು.
ಮುಟ್ಟುತ್ತ ಲಿಂಗವಾಗಿ ಮುಟ್ಟುವರು.
ನಡೆವುತ್ತ ಲಿಂಗವಾಗಿ ನಡೆವರು.
ಕೇಳುತ್ತ ಲಿಂಗವಾಗಿ ಕೇಳುವರು.
ನೋಡುತ್ತ ಲಿಂಗವಾಗಿ ನೋಡುವರು.
ಸರ್ವಾಂಗವು ಲಿಂಗವಾಗಿ,
ಅಂಗಲಿಂಗವೆಂಬೆ ಉಭಯವಳಿದು,
ಮಂಗಳದ ಮಹಾ ಬೆಳಗಿನಲ್ಲಿ,
ಲಿಂಗವೆ ಗೂಡಾಗಿರ್ದ ಕಾರಣ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****