ಕರೆದರೆ ಬರುವುದಿಲ್ಲ ಏಡಿಗಳು-ಪ್ರವಾಹದ
ವಿರುದ್ಧ ಕೂಡ ಒಂದೇ ಓಟ ಓಡಬಲ್ಲವು.  ಓಡಿ
ಕೆಸರಿನ ಕೆಳಗೊ, ಮಾಟೆಗಳ ಒಳಗೊ ಅಡಗಿ ಕುಳಿತು
ಕೊಳ್ಳುತ್ತವೆ.  ಹೋದರೆ ಇವರು ಎಂದು ಇಣಿಕಿ ನೋಡುತ್ತವೆ.
ಹುಳ ಹುಪ್ಪಟೆಗಳ ಆಸೆ ತೋರಿಸಿ ಕರೆಯಬೇಕು ಇವನ್ನು.
ಕಚ್ಚಿದ ತಕ್ಷಣ ಈಚೆಗೆ ಎಳೆಯಬೇಕು.  ಸುಮ್ಮನೆ
ಕರೆದರೆ ಬರುವುದಿಲ್ಲ ಯಾರೂ.

ಹೇಗೆ ಕಾಣಿಸುತ್ತಿದೆ ಈಗ ಈ ಅಂಗಾತ
ಬಿದ್ದು ವದ್ದಾಡುತ್ತಿರುವ ಏಡಿ? ಕೆಂಪಗೆ ಕರೆದ
ಉದ್ದಿನ ವಡೆಯಂತೆ?  ಆದರೆ ಅದರ ಹೊಟ್ಟೆಗೆ
ಚುಚ್ಚಿದ ಫೋರ್ಕಿನಂತೆ ಕಾಣುವ ಸಾಧನ
ನಿಜಕ್ಕೂ ಫೋರ್ಕಲ್ಲ-ಅದರದೇ ಕೈ.
*****