ಹೆಣ್ಣು ಬಣ್ಣದ ಅಗತ್ಯ

ಹೆಣ್ಣು ಬಣ್ಣಗಳೆಂದರೆ ರಕ್ಕಸ ಸ್ವಭಾವದ ಹೆಣ್ಣು ಪಾತ್ರಗಳು. ಅಜಮುಖಿ, ತಾಟಕಿ, ಶೂರ್ಪನಖಿ, ವೃತ್ರಜ್ವಾಲೆ, ಲಂಕಿಣಿ, ಪೂತನಿ, ಇತ್ಯಾದಿ ಪಾತ್ರಗಳು ಯಕ್ಷಗಾನದಲ್ಲಿ ಹೆಣ್ಣು ಬಣ್ಣಗಳೆಂದು ಕರೆಯಲ್ಪಡುತ್ತವೆ. ಹೆಣ್ಣು ಬಣ್ಣಗಳ ಮುಖವರ್ಣಿಕೆ ಫೋರವಾಗಿರುತ್ತದೆ. ವೇಷದ ಭೀಷಣತೆ ಹೆಚ್ಚಲು ಉದ್ದನೆಯ ಕತ್ತರಿ ಕಿರೀಟವೆಂಬ ಬಕೆಟ್ಟಿನಾಕಾರದ ಕಿರೀಟ ವನ್ನು ಇವು ಇರಿಸಿಕೊಳ್ಳುತ್ತವೆ. ಯಕ್ಷಗಾನದ ಹೆಣ್ಣು ಬಣ್ಣದ ವೇಷಗಳಲ್ಲಿ ಶೂರ್ಪನಖಿಗೆ ಮೊದಲ ಸ್ಥಾನ. ಆದುದರಿಂದ ಹೆಣ್ಣು ಬಣ್ಣದ ಕಿರೀಟವನ್ನು ಶೂರ್ಪನಖಿ ಕಿರೀಟವೆಂದು ಕರೆಯುವುದುಂಟು.

ಹೆಣ್ಣು ಬಣ್ಣ ಎಲ್ಲಾ ಪ್ರಸಂಗಗಳಲ್ಲಿ ಬರಲೇಬೇಕಾದ ಅನಿವಾರ್ಯ ವೇಷವಲ್ಲ. ಆದುದರಿಂದ ಚೌಕಿಯಲ್ಲಿ ಹೆಣ್ಣು ಬಣ್ಣಕ್ಕೆ ನಿರ್ದಿಷ್ಟ ಸ್ಥಾನವಿಲ್ಲ. ಹೆಣ್ಣು ಬಣ್ಣ ಚೌಕಿಯಲ್ಲಿ ಕುಳಿತುಕೊಳ್ಳುವ ಸ್ಥಾನವನ್ನು ಕಲಾವಿದನ ಸ್ಥಾನಮಾನಗಳು ನಿರ್ಧರಿಸುತ್ತವೆ. ಹೆಣ್ಣು ಬಣ್ಣದ ವೇಷಗಳಿರುವ ಪ್ರಸಂಗಗಳು ಕೆಲವೇ ಕೆಲವು. ಉದಾ : ಕುಮಾರವಿಜಯ, ಪುತ್ರಕಾಮೇಷ್ಟಿಸೀತಾ ಸ್ವಯಂವರ, ಪಂಚವಟಿ, ಲಂಕಾದಹನ, ವಿದ್ಯುನ್ಮತಿ ಕಲ್ಯಾಣ ಕೃಷ್ಣಲೀಲೆ ಇತ್ಯಾದಿ. ಹೆಣ್ಣು ಬಣ್ಣವಿರುವ ಪ್ರಸಂಗಗಳು ತುಂಬಾ ಆಕರ್ಷಕವಾಗಿರುತ್ತವೆ. ವಿಶಿಷ್ಟ ಪ್ರಕಾರದ ವೇಷವೊಂದು ಪ್ರೇಕ್ಷಕರ ಕುತೂಹಲ ಕೆರಳಿಸುವುದು ಸಹಜ.

ಹೆಣ್ಣು ಬಣ್ಣದ ವೇಷಗಳ ಅಗತ್ಯವು ಕಥಾವಸ್ತುವನ್ನು ಆಧರಿಸಿಕೊಂಡಿರುತ್ತದೆ:

1. ಅಜಮುಖಿ : ಇವಳು ಮುದ್ದಣ ಕವಿಯ ಕುಮಾರ ವಿಜಯ ಪ್ರಸಂಗದಲ್ಲಿ ಕಾಣಿಸಿಕೊಳ್ಳುವ ಹೆಣ್ಣು ಬಣ್ಣ. ನಾರದ ಮುನಿಯ ಉಪದೇಶದಂತೆ ಶೂರಪದ್ಮಾಸುರನೆಂಬ ದಾನವನು ದೇವೇಂದ್ರನ ಮಡದಿ ಶಚಿಯನ್ನು ಬಯಸಿ ತನ್ನ ಮಗ ಭಾನುಕೋಪನ ನೇತೃತ್ವ ದಲ್ಲಿ ಸ್ವರ್ಗಕ್ಕೆ ಸೇನೆ ಕಳುಹಿಸುತ್ತಾನೆ. ಮುನ್ಸೂಚನೆ ಸಿಕ್ಕಿದ ದೇವೇಂದ್ರ ಶಚಿಯೊಡನೆ ಪಲಾಯನ ಮಾಡುತ್ತಾನೆ. ಅವಳನ್ನು ಹುಡುಕಿ ತರಲು ಶೂರಪದ್ಮನ ತಂಗಿ ಅಜಮುಖಿ ಹೊರಡುತ್ತಾಳೆ. ಅವಳ ಉದ್ದೇಶ ಅಣ್ಣನ ಮನಸ್ಸಿಗೆ ಸಂತೋಷ ನೀಡುವುದು. ಕಾಡಿನಲ್ಲಿ ದೂರ್ವಾಸನಲ್ಲಿ ಅವಳಿಗೆ ಪ್ರೇಮಾಂಕುರವಾಗುತ್ತದೆ. ಅವನನ್ನು ರೂಪ ಬದಲಿಸಿ ಮೋಹಕ ತರುಣಿಯಾಗಿ ಕೂಡುತ್ತಾಳೆ. ಶಚಿಯ ಇರವನ್ನ್ನು ಅವನಿಂದ ತಿಳಿದು ಅವಳನ್ನು ಹಿಡಿದೆಳೆದೊಯ್ಯು ವಾಗ ಶಾಸ್ತಾರ ಬಂದು ಅಜಮುಖಿಯ ಕೈಗಳನ್ನು ಕಡಿಯುತ್ತಾನೆ. ಅಣ್ಣನಲ್ಲಿಗೆ ಬಂದು ಶಚಿ ಇರುವ ತಾಣವನ್ನು ತಿಳಿಸಿದಲ್ಲಿಗೆ ಅವಳ ಪಾತ್ರ ಕೊನೆಗೊಳ್ಳುತ್ತದೆ. ಅಜಮುಖಿ ಪಾತ್ರ ಭಯಾನಕ ಮತ್ತು ಬೀಭತ್ಸ ರಸಗಳೊಡನೆ, ಶೃಂಗಾರ ರಸಾಭಿವ್ಯಕ್ತಿ ಮಾಡಲು ರೂಪುಗೊಂಡಿದೆ.

2. ತಾಟಕಿ : ರಾಮಾಯಣದ ಹೆಣ್ಣು ಬಣ್ಣಗಳು ಸಾಂಪ್ರದಾಯಿಕ ನಂಬಿಕೆಗಳಿಗೆ ಸೆಡ್ಡು ಹೊಡೆಯುತ್ತವೆ. ತಾಟಕಿ ಮತ್ತು ಶೂರ್ಪನಖಿಯರ ವಿರುದ್ಧ ರಾಮಲಕ್ಮಣರು ಶಸ್ತ್ರವೆತ್ತುವುದನ್ನು ದ್ರಾವಿಡಆರ್ಯ ಸಂಘರ್ಷವೆಂದೇ ಭಾವಿಸಲಾಗುತ್ತದೆ. ತಾಟಕಿ ವಾಸಿಸುವ ಅರಣ್ಯದ ಬಳಿಯಲ್ಲಿ ಗುರುಕುಲ ನಡೆಸುವ ವಿಶ್ವಾಮಿತ್ರ ತಾಟಕಿಯಿಂದ ಕಿರುಕುಳಕ್ಕೆ ಒಳಗಾಗುತ್ತಾನೆ. ಯಜ್ಞ, ಸಂರಕಣೆಯ ನೆಪದಲ್ಲಿ ರಾಮ ಲಕ್ಮಣರನ್ನು ಕರೆತಂದು ತಾಟಕಿಯನ್ನು ಕೊಲ್ಲಿಸುತ್ತಾನೆ. ಇಲ್ಲಿ ತಾಟಕಿಗೆ ವೀರ ಬಿಟ್ಟರೆ ಬೇರೆ ರಸಾಭಿವ್ಯಕ್ತಿಗೆ ಅವಕಾಶವಿಲ್ಲ. ದ್ರಾವಿಡ ರನ್ನು ನಿರ್ಮೂಲನ ಮಾಡಿ ಆರ್ಯರು ಉತ್ಕರ್ಷಕ್ಕೆ ಬಂದುದಕ್ಕೆ ಸಂಕೇತವಾಗಿ ಅವಳು ನಿಲ್ಲುತ್ತಾಳೆ. ಅಲೆಮಾರಿ ಆರ್ಯರು ಒಂದೆಡೆ ನಿಂತು ಕೃಷಿ ಚಟುವಟಿಕೆ ಆರಂಭಿಸುವುದಕ್ಕೆ ವಿಶ್ವಾಮಿತ್ರ ಸಂಕೇತವಾಗುತ್ತಾನೆ.

3. ಶೂರ್ಪನಖಿ : ರಾಮಾಯಣ ಕತೆ ಬೆಳೆಯಲು ಇವಳು ಕಾರಣ. ಶೂರ್ಪನಖಾ ಮಾನಭಂಗವಾಗದಿರುತ್ತಿದ್ದರೆ ಸೀತಾ ಪಹಾರ, ವಾಲಿ ವಧೆ, ರಾವಣ ವಧೆ ನಡೆಯುತ್ತಿರಲಿಲ್ಲ. ಸ್ತ್ರೀ ಸ್ವಾತಂತ್ರ್ಯಮರ್ಹತಿ ಮತ್ತು ವಿಧವಾ ವಿವಾಹ ಸಲ್ಲ ಎಂಬ ಮೌಲ್ಯಗಳನ್ನು ಸಮರ್ಥಿಸಲು ಶೂರ್ಪನಖಿಯ ಪಾತ್ರ ಬಳಕೆಯಾಗುತ್ತದೆ. ದ್ರಾವಿಡ ಹೆಣ್ಣೊಬ್ಬಳು ಆರ್ಯರ ಜೀವನ ಮೌಲ್ಯ ಗಳನ್ನು ಒಪ್ಪಿಕೊಳ್ಳದಿದ್ದರೆ ಅವಳ ಗತಿಯೇನಾಗುತ್ತದೆ ಎಂಬುದಕ್ಕೆ ಅವಳು ಪ್ರತೀಕ.

4. ಲಂಕಿಣಿ ಮತ್ತು ಪೂತನಿ : ಲಂಕಿಣಿ ರಾಮಾಯಣದಲ್ಲಿ ಬರುವ ಪಾತ್ರ. ಇವಳು ಲಂಕೆಯನ್ನು ರಾತ್ರಿ ಕಾಯುವವಳು. ದ್ರಾವಿಡರಲ್ಲಿ ಸ್ತ್ರೀಯರಿಗೆ ಸಮಾನತೆ ಇತ್ತು ಎಂಬ ವಾದಕ್ಕೆ ಸಮರ್ಥನೆಯಾಗಿ ಇವಳು ನಿಲ್ಲುತ್ತಾಳೆ. ಪೂತನಿಯನ್ನು ಕಂಸ, ಕೃಷ್ಣನನ್ನು ಕೊಲ್ಲಲೆಂದು ಬಳಸುತ್ತಾನೆ. ಪುರುಷರಿಂದ ಆಗದ್ದು ಸ್ತ್ರೀಯರಿಂದ ಸುಲಭ ಸಾಧ್ಯವೆನ್ನುವುದಕ್ಕೆ ಪೂತನಿಯ ಪಾತ್ರ ದೃಷ್ವಾಂತವಾಗಿದೆ.

5. ವೃತ್ರಜ್ವಾಲೆ : ಇವಳು ವಿದ್ಯುನ್ಮತಿ ಕಲ್ಯಾಣದಲ್ಲಿ ಬರುವ ಪಾತ್ರ. ಅದರಲ್ಲಿ ರಾಮನ ಮೊಮ್ಮಕಳಾದ ಚಿತ್ರಕೇತಚಿತ್ರವಾಹನ ಪ್ರಧಾನ ಪಾತ್ರಗಳು. ವೃತ್ರಜ್ವಾಲೆಯ ಅಣ್ಣ ಕಾಲಜಂಘ ವಿದ್ಯುನ್ಮತಿ ಎಂಬ ಗಂಧರ್ವ ಕನ್ಯೆಯನ್ನು ಅಪಹರಿಸಿ ತಂದು ತಾನು ವಿವಾಹವಾಗಬೇಕೆಂದು ಸೆರೆಯಲ್ಲಿ ಹಾಕಿರುತ್ತಾನೆ. ವೃತ್ರಜ್ವಾಲೆ ಚಿತ್ರಕೇತನ್ನ್ನು ಅಪಹರಿಸಿ ತಂದು ತಾನು ವಿವಾಹವಾಗ ಬಯಸಿ ಅದೇ ಸೆರೆಯಲ್ಲಿರಿಸುತ್ತಾಳೆ. ಅಲ್ಲಿ ವಿದ್ಯುನ್ಮತಿ ಮತ್ತು ಚಿತ್ರಕೇತರ ಗಾಂಧರ್ವ ವಿವಾಹವಾಗುತ್ತದೆ. ಆಶಾಭಂಗವಾಗಿ ರೋಷಗೊಂಡ ಕಾಲಜಂಘ ತಂಗಿಯ ಕಿವಿ ಮೂಗುಗಳನ್ನು ಕೊಯ್ದು ಹೊರಗಟ್ಟುತ್ತಾನೆ. ಈ ಪ್ರಸಂಗದ ಹೆಣ್ಣು ಬಣ್ಣ ಕತೆಯ ಓಟಕ್ಕೇನೋ ಮುಖ್ಯವೇ. ಆದರೆ ಇದರಲ್ಲಿ ಯಾವುದೇ ಮೌಲ್ಯದ ಪ್ರತಿಪಾದನೆ ಕಂಡು ಬರುವುದಿಲ್ಲ. ಮನರಂಜನೆ ಪ್ರಸಂಗದ ಪ್ರಮುಖ ಉದ್ದೇಶವಾಗಿರುವುದರಂದ ಹೆಣ್ಣು ಬಣ್ಣ ಅದಕ್ಕೇ ಬಳಕೆಯಾಗಿದೆ.

8.2 ಹೆಣ್ಣು ಬಣ್ಣಗಳ ಪ್ರಸ್ತುತಿ

ಹೆಣ್ಣು ಬಣ್ಣಗಳನ್ನು ರಂಗದಲ್ಲಿ ಈಗ ಹೇಗೆ ಪ್ರಸ್ತುತ ಪಡಿಸಲಾಗುತ್ತದೆ ಎನ್ನುವುದು ಅಧ್ಯಯನಕ್ಕೆ ಯೋಗ್ಯವಾದ ವಿಷಯ. ಇದನ್ನು ಭಾಗವತರ ಮತ್ತು ಕಲಾವಿದರ ದೃಷ್ಟಿ ಕೋನದಿಂದ ಪರಿಶೀಲಿಸಬಹುದು.:

1. ಭಾಗವತರ ದೃಷ್ಟಿಕೋನ : ಯಕ್ಷಗಾನ ಪ್ರಸಂಗಗಳಲ್ಲಿ ಹೆಣ್ಣು ಬಣ್ಣವನ್ನು ದುರುಳೆ, ಕುಲಗೇಡಿ, ಹೆಮ್ಮಾರಿ, ಹೆಣ್ಣು ಮೂಳಿಎಂದೆಲ್ಲಾ ಬಣ್ಣಿಸಲಾಗಿದೆ. ಭಾಗವತರು ಗಳು ಅದೇ ದೃಷ್ಟಿಕೋನದಿಂದ ಹೆಣ್ಣು ಬಣ್ಣವನ್ನು ನೋಡುತ್ತಾರೆ. ಅದಕ್ಕೆ ಹೆಣ್ಣು ಬಣ್ಣದ ಪ್ರವೇಶವಾದ ಕೂಡಲೇ ಭಾಗವತರು ಅದರೊಡನೆ ನಡೆಸುವ ಸಂಭಾಷಣೆ ಸಾಕ್ಷಿ:

ಭಾಗವತ: ಭಳಿರೇ ಪರಾಕ್ರಮ ಕಂಠೀರವ,

ಶೂರ್ಪನಖಿ: ಭಲ್ಲಿರೇನಯ್ಯ?

ಭಾಗವತ: ಇರುವಂತಹ ಸ್ಥಳ?

ಶೂರ್ಪನಖಿ: ಲಂಕಾ ಸಾಮ್ರಾಜ್ಯಕ್ಕೆ ಯಾರೆಂದು ಕೇಳಿಬಲ್ಲಿರಿ?

ಭಾಗ: ರಾವಣೇಶ್ವರ ಮಹಾಪ್ರಭು ಎಂದು ಕೇಳಿಬಲ್ಲೆವು.

ಶೂರ್ಪ: ಅವರಿಗೊಬ್ಬಳು ತಂಗಿ ಇರುವುದನ್ನು ಕೇಳಿದ್ದೀರಾ?

ಭಾಗ: ಹೌದಂತೆ……ಯಾರೋ ಒಬ್ಬಳು ಇದ್ದಾಳಂತೆ.

ಶೂರ್ಪ: ಅಣ್ಣನಿಗೆ ಬಹುವಚನ. ತಂಗಿಗೆ ಏಕವಚನವೆ?

ಭಾಗ: ಮತ್ತೆ ಹೇಗೆ ಕರೆಯಬೇಕು?

ಶೂರ್ಪ: ಶೂರ್ಪನಖಾ ದೇವಿಯವರು.

ಭಾಗ: ದೇವಿಯವರು ಗುಡಿಯಲ್ಲಿ.

ಶೂರ್ಪ: ಶೂರ್ಪನಖಾ ಅಮ್ಮನವರು.

ಭಾಗ: ಅಮ್ಮನವರು ಮಕ್ಕಳಿಗೆ.

ಶೂರ್ಪ: ಶೂರ್ಪನಖಾ ಅಕ್ಕನವರು

ಭಾಗ: ಅಕ್ಕನವರು ತಮ್ಮಂದಿರಿಗೆ

ಶೂರ್ಪ: ಶೂರ್ಪನಖಾ ತಂಗೆಯವರು

ಭಾಗ: ನಿನ್ನಂತಹಾ ತಂಗಿ ನನಗೆ ಬೇಡ

ಶೂರ್ಪ: ಬೇಡವೋ, ಯಾರು? ಯಾರು? ಯಾರು ಹಾಗೆ ಹೇಳುತ್ತಿರುವುದು ? ಓಹೋ……ನೀವಾ ? ನೀವು ನನಗೆ ಆದೀತು!

ಭಾಗ: ನನಗೆ ಆಗಲಿಕ್ಕಿಲ್ಲ. ಅಂದ ಹಾಗೆ ನಿನ್ನ ಪ್ರಾಯ……. ?

ಶೂರ್ಪ: ಎಷ್ಟಾದೀತು ಹೇಳಿ ನೋಡುವಾ?

ಭಾಗ: ಏನು ಹೆಚ್ಚೆಂದರೆ ಸುಮಾರು ತೊಂಬತ್ತು.

ಶೂರ್ಪ: ಅದು ನಿಮ್ಮ ಹೆಂಡತಿಗೆ.

ಭಾಗ: ಆಯ್ತಪ್ಪ, ಈಗ ಗಾಡಿ ಹೊರಟದ್ದು ಎಲ್ಲಿಗೆ?

ಶೂರ್ಪ: ಗಾಡಿ ನಿಮ್ಮ ಅಜ್ಜಿ.

ಇಲ್ಲಿಂದ ಭಾಗವತರು ಮುಂದಿನ ಪದ್ಯ ಎತ್ತುಗಡೆ ಮಾಡುತ್ತಾರೆ. ಹೊರ ನೋಟಕ್ಕೆ ಇದೊಂದು ಹಾಸ್ಯ ಸಂಭಾಷಣೆಯಂತೆ ಕಂಡರೂ ಹೆಣ್ಣು ಬಣ್ಣಗಳನ್ನು ಭಿನ್ನ ದೃಷ್ಟಿಕೋನದಿಂದ, ಕಾಮುಕಿಯರ ಅಥವಾ ಮುಕ್ತ ಲೈಂಗಿಕತೆಯ ಸ್ತ್ರೀಯರ ವರ್ಗಕ್ಕೆ ಸೇರಿಸಿ ನೋಡಲಾಗುತ್ತದೆ ಎನ್ನುವುದು ಇಲ್ಲಿ ಸ್ಪಷ್ಟ.

2. ಕಲಾವಿದರ ದೃಷ್ಟಿಕೋನ : ಹೆಣ್ಣು ಬಣ್ಣದ ಕಲಾವಿದರದೂ ಅದೇ ದೃಷ್ಟಿ ಕೋನ. ಅದಕ್ಕೆನನಗೆ ನೀವು ಆದೀತು ಎಂದು ಭಾಗವತರೊಡನೆ ಅವರು ಆಡುವ ಮಾತುಗಳೇ ಸಾಕಿ. ಅಜಮುಖಿಯನ್ನು ಅಣ್ಣ ಶೂರಪದ್ಮ ಶಚಿಯ ಹುಡುಕಾಟಕ್ಕೆ ಕಳುಹಿಸು ವಾಗಆದೆಡೆ ಕೇಳ್‌ ಸ್ಮರ ಬಾಧೆಯೊಳೆಡ ಬಲ ಹಾದಿಗರನು ನೀ ಬಾಧಿಸದಿಹುದು ಎನ್ನುತ್ತಾನೆ. ವಿವಾಹಿತನಾಗಿ ತರುಣ ಮಗನಿರುವ ಶೂರಪದ್ಮ ದೇವೇಂದ್ರನ ಮಡದಿ ಶಚಿಯನ್ನು ಬಯಸಬಹುದು. ಅವಿವಾಹಿತೆ ಅಜಮುಖಿ ಯಾರನ್ನೂ ಬಯಸಬಾರದು!

ಶೂರಪದ್ಮನ ಈ ಮಾತಿಗೆ ಪ್ರಸಂಗದಲ್ಲಿ ಉತ್ತರ ರೂಪದ ಪದ್ಯವಿಲ್ಲ. ಅಜಮುಖಿ ಪಾತ್ರಧಾರಿಯೂ ಪ್ರತಿಭಟಿಸುವುದಿಲ್ಲ!

ತಾಟಕಿಲಂಕಿಣಿಯಂತಹ ಪಾತ್ರಗಳನ್ನು ಚಿತ್ರಿಸುವಾಗಲೂ ಹಾಗೆಯೇ. ತಾವೇನೋ ತಪ್ಪುಪ ಮಾಡುತ್ತಿದ್ದೇವೆ, ತಾವು ಸಾಯುವುದೇ ಅದಕ್ಕೆ ಪರಿಹಾರ ಎಂಬ ರೀತಿಯಲ್ಲಿ ಈ ಪಾತ್ರಗಳು ರಂಗದಲ್ಲಿ ಪ್ರಸ್ತುತಗೊಳ್ಳುತ್ತವೆ. ಸತ್ತ ತಕ್ಷಣ ಅವು ಹಿಂದಿನ ಜನ್ಮದ ರೂಪ ತಾಳಿ ಸ್ವರ್ಗಕ್ಕೇ ಹೋಗಿಬಿಡುತ್ತವೆ! ಶೂರ್ಪನಖಿಗೆ ಆ ಭಾಗ್ಯವೂ ಇಲ್ಲ. ಅವಳು ಜೀವಮಾನ ವಿಡೀ ಮೂಗು ಕಿವಿ ಮೊಲೆಗಳಿಲ್ಲದೆ ನರಳಬೇಕಾಗುತ್ತದೆ. ಈ ಪಾತ್ರಗಳನ್ನು ನಿಭಾಯಿಸುವ ಬಣ್ಣದ ವೇಷಧಾರಿಗಳ ಆಂಗಿಕ ಮತ್ತು ಆಹಾರ್ಯದ ಬಗ್ಗೆ ಆಕೇಪ ಎತ್ತುವಂತಿಲ್ಲ. ಆದರೆ ಪಾತ್ರಗಳ ಒಳಗಿಳಿದು ಸಮರ್ಥಿಸಿಕೊಳ್ಳಲು ಇವರಿಂದ ಸಾಧ್ಯವಾಗುತ್ತಿಲ್ಲ. ಸ್ವಲ್ಪ ಮಟ್ಟಿಗೆ ತಾಳಮದ್ದಳೆ ಅರ್ಥಧಾರಿಗಳು ಈ ಪಾತ್ರಗಳಾಗಿ ತಮ್ಮನ್ನು ಸಮರ್ಥಿಸಿ ಕೊಂಡರೂ ಅಂತರ್ಯದಲ್ಲಿ ರಕ್ಕಸ ಸ್ತ್ರೀಯರು ಶಿಕ್ಷೆಗೆ ಅರ್ಹರು ಎಂಬ ಭಾವನೆಯೇ ಅವರಲ್ಲೂ ಇದ್ದಂತಿದೆ. ಅರ್ಥಧಾರಿಗಳು ಮನು ಧರ್ಮಶಾಸ್ತ್ರದ ಪ್ರತಿಪಾದಕರೆಂದರೆ ಹೆಣ್ಣು ಬಣ್ಣಗಳಿಗೆ ನ್ಯಾಯ ಹೇಗೆ ಸಿಕ್ಕಿತು? ಇದನ್ನು ಪ್ರಸಂಗ ನಿಷ್ಠೆಯೆಂದು ಕರೆದು ಕಲಾವಿದರು ರಕಣಾಬೇಲಿ ನಿರ್ಮಿಸಿಕೊಳ್ಳಬಹುದು. ಆದರೂ ಆತ್ಮಸಾಕಿ ಉಳ್ಳ ಕಲಾವಿದರು ಹೆಣ್ಣು ಬಣ್ಣಗಳಿಗೆ ಅನ್ಯಾಯವಾಗಿದೆಯೆಂದು ಯೋಚಿಸದಿರಲು ಸಾಧ್ಯವಿಲ್ಲ.

ಹೆಣ್ಣು ಬಣ್ಣಗಳನ್ನು ದುರುಳೆ ಕಾಮುಕಿಯರಂತೆ ಚಿತ್ರಿಸುವುದು ತಪ್ಪು. ರಕ್ಕಸಿಯ ರೆಂದರೆ ಅನಾರ್ಯರು ದ್ರಾವಿಡರು. ಅವರಿಗೆ ಶಿಕ್ಷೆ ಕೊಡುವವರು ಆರ್ಯರು. ಆದುದರಿಂದ ಈ ಪಾತ್ರಗಳನ್ನು ಆರ್ಯಅನಾರ್ಯ ಸಂಘರ್ಷವೆಂಬಂತೆ ಚಿತ್ರಿಸಬೇಕೆಂದು ತಾಳಮದ್ದಳೆ ಅರ್ಥಧಾರಿಗಳು ಹೇಳುವುದುಂಟು. ತಾಟಕಿ ಸಂಹಾರ ಮತ್ತು ಶೂರ್ಪನಖಾ ಮಾನಭಂಗವನ್ನು ಉತ್ತರದಕಿಣ ಸಂಘರ್ಷವೆಂದೂ ಚಿತ್ರಿಸಬಹುದು ಎನ್ನುವವರಿದ್ದಾರೆ. ಹಾಗೆ ಚಿತ್ರಿಸುವ ಮನಸ್ಸು ಇಲ್ಲದವರು ಪಾತ್ರದ ಆಳಕ್ಕಿಳಿದು ಅಂತರಂಗವನ್ನು ಬಹಿರಂಗಗೊಳಿಸುವ ಕೆಲಸ ವನ್ನಾದರೂ ಮಾಡಬೇಕು.

ಪ್ರಮುಖ ಮೂರು ಹೆಣ್ಣು ಬಣ್ಣಗಳನ್ನು ಹೇಗೆ ಚಿತ್ರಿಸಬಹುದೆಂಬ ಒಂದೆರಡು ಅನಿಸಿಕೆಗಳನ್ನು ಇಲ್ಲಿ ದಾಖಲಿಸಲಾಗಿದೆ.

8.3 ಅಜಮುಖಿಯ ಪಾತ್ರ ಚಿತ್ರಣ

ಅಜಮುಖಿಗೆ ಸ್ವಗತವಿಲ್ಲ. ಅವಳು ಶೂರಪದ್ಮನ ಆಸ್ಥಾನಕ್ಕೆ ಬಂದು ವಂದಿಸಿ ಮಾತು ಆರಂಭಿಸುತ್ತಾಳೆ. ಅವಳಿಗೆ ಭಾಗವತರೊಡನೆ ಸಂಭಾಷಣೆಯಿಲ್ಲ. ಅಣ್ಣನ ಬಯಕೆ ತಪ್ಪೆಂದು ತಿಳಿದರೂ ಅಣ್ಣನ ಮೇಲಿನ ಪ್ರೀತಿಯಿಂದ ಶಚಿಯನ್ನು ತರಲು ಹೊರಟವಳು.

ಅಣ್ಣನೀನು ದಾರಿ ಹೋಕರಮೇಲೆ ಕಣ್ಣು ಹಾಕಬೇಡಎಂದಾಗ ಅವಳು ಅಣ್ಣನ ತಪ್ಪನ್ನು ತೋರಿಸುವ ಧೈರ್ಯ ಮಾಡಬೇಕು. ಅಣ್ಣನಿಗಿಂತ ತಾನು ಶ್ರೇಷ್ಠಳು ಎನ್ನುವುದನ್ನು ತೋರಿಸಲು ಅವಳಿಗೆ ಇಲ್ಲೊಂದು ಅವಕಾಶವಿದೆ. ಆದರೂ ಸಿಂಹಾಸನ ನಿಷ್ಠೆ ತನ್ನನ್ನು ಈ ಕೆಲಸ ಮಾಡಿಸು ತ್ತಿದೆ ಎನ್ನಬೇಕು. ಅದೊಂದು ಮಾತಿನಿಂದ ಪ್ರೇಕಕರು ಭೀಷ್ಮನನ್ನು ನೆನಪಿಸಿಕೊಳ್ಳುವಂತೆ ಮಾಡಬಹುದು. ಅಲ್ಲದೆ ಈ ಮಾತಿನಿಂದ ರಾಷ್ಟ್ರಭಕ್ತಿಯನ್ನು ಕೂಡಾ ಸಂಕೇತಿಸಬಹುದು.

ಅಣ್ಣನ ಅನುಮತಿ ದೊರೆತ ಬಳಿಕ ಅಜಮುಖಿಯದು ಮೇಲುಲೋಕ ಮತ್ತು ಕೆಳಲೋಕ ಸಂಚಾರ. ಅದು ನಿಷೇಲವಾಗಿ ಅವಳು ಭೂಲೋಕಕ್ಕೆ ಬರುತ್ತಾಳೆ. ಆಗ ಅವಳಿಗೆ ಮುದ್ದಣ ಒಂದು ವಾರ್ಧಿಕ ಪದ್ಯ ನೀಡುತ್ತಾನೆ. ಅದಕ್ಕೆ ಅರ್ಥ ಹೇಳುವುದು ಸುಲಭದ ಮಾತಲ್ಲ.

ಕಾದಂಬನಿಕರ ಪಾರುತ್ತೈದಿ ತಮಗೆ ಬೇೕ

ಕಾದಂಬನೀಕಿಸುತ ನೆರೆ ಸೇರೆ ಲುಬ್ಧಕರ್‌ೕ

ಕಾದಂಬನೆಸೆಯುತಿರಲರಿತು ಮುಂದೊತ್ತು ತನಿಬರ ಪಿಡಿದು ಭಕಿಸುತಲೀೕ

ಕಾದಂಬಿನುಗ್ರದೊಳ್‌ ಮಡಿದು ಬಿದ್ದಿರ್ದ ಖಗೕ

ಕಾದಂಬಮದರ ಜೊತೆಗಿಕ್ಕಿ ಪಶುಗಳೆದು ತಾೕ

ಕಾದಂಬಕುಟ ದಡಿಯೊಳೆಲರಿಗೊಡ್ಡುತ ತನುವ ಗಾಡಿಯಿಂ ಕುಳ್ಳಿರ್ದಳೀೕ

ಇದು ಮುದ್ದಣ್ಣನ ಕವಿತ್ವಕ್ಕೊಂದು ಸಾಕ್ಷಿ. ಸರಿಯಾದ ಅರ್ಥಗೊತ್ತಿರುವ ಕಲಾವಿದ ಅದುಪತವಾಗಿ ಅಭಿನಯಿಸಲು ಸಾಧ್ಯವಿರುವ ಪದ್ಯವಿದು. ವಾರ್ಧಿಕವಾದುದರಿಂದ ನೃತ್ಯವಿಲ್ಲ. ವಾರ್ಧಿಕವನ್ನು ಝುಂಪೆ ಮತ್ತು ತ್ವರಿತ ಝುಂಪೆಯಲ್ಲಿ ಹಾಡಬಹುದು. ಇಲ್ಲಿ ಹಾಡಬೇಕಾಗಿಲ್ಲ. ಹೆಣ್ಣು ಬಣ್ಣಕ್ಕೆ ಆ ತಾಳ ಹೊಂದಿಕೆಯಾಗುವುದಿಲ್ಲ.

ಹೊಟ್ಟೆ ತುಂಬಿದ ಬಳಿಕ ಅವಳಲ್ಲಿ ವಯೋಸಹಜವಾದ ಕಾಮವಾಂಛೆ ಮೂಡುತ್ತದೆ. ಆಗ ದೂರ್ವಾಸನ ಆಗಮನವಾಗುತ್ತದೆ. ಅವನೊಡನೆ ರೂಪ ಮರೆಸಿ ಕೂಡುತ್ತಾಳೆ. ಈ ಸಂದರ್ಭದಲ್ಲಿ ಹೆಣ್ಣು ಬಣ್ಣಕ್ಕೆ ಯಾವುದೇ ಅವಕಾಶವಿಲ್ಲ. ಆದರೆ ಸಮಾಗಮದ ಬಳಿಕ ನಿಜರೂಪಿನಲ್ಲಿ ಕಾಣಿಸಿಕೊಂಡ ಮೇಲೆ ತನ್ನ ಒಳತೋಟಿಯನ್ನು ಅವಳು ತೋಡಿಕೊಳ್ಳು ತ್ತಾಳೆ. ದೂರ್ವಾಸನಿಂದ ಶಚಿಯ ಇರವು ಗೊತ್ತಾಗಿ ಅವಳನ್ನು ಎಳೆದೊಯ್ಯಲು ಯತ್ನಿಸು ವಾಗ ಶಾಸ್ತಾರ ಬಂದು ಅವಳ ಕೈ ಕಡಿದು ಹಾಕುತ್ತಾನೆ.

ಆಗ ಅವಳು ಶಚಿಯೆದುರು ಶಪಥ ಮಾಡುತ್ತಾಳೆ.

ಪೊತ್ತಿಹ ಮೊಲೆ ದಿಟವಾಗೆ ನೀ ನೆನತ್ತಿಕೊಂಡೊಯ್ಯದ ಮೇಗೇೕ
ಕೊತ್ತಿಯೆಂದೆಣಿಸಿಕೊ ಮನದೀ ಇೕ ನೆನತ್ತಲಡಗಲೀ ವನದೀೕ
ಅಣ್ಣನೊಳೊರೆದಿದನೆಲ್ಲ ಮೀ ಕ್ಕಣ್ಣನು ಬರೆ ಭಯವಿಲ್ಲೕೕ
ಬಣ್ಣ ಗೆಡಿಸುತೊಯ್ಯದಿರೆ ನಾೕ ಪೆಣ್ಣಿನ ಜನ್ಮವೆ ಮದಿರೇೕ

ಇದೇ ಅರ್ಥದ ಪದ್ಯಗಳು ಪಂಚವಟಿಯಲ್ಲಿ ಬರುತ್ತವೆ. ಅಲ್ಲಿ ಶೂರ್ಪನಖಿಗೆ ಸಮರ್ಥಿಸಿಕೊಳ್ಳುವುದು ಸುಲಭ. ಇಲ್ಲಿ ಅಜಮುಖಿಗೆ ಸಮರ್ಥಿಸಿಕೊಳ್ಳಲು ತುಂಬಾ ಕಷ್ಟವಿದೆ. ಆದರೆ ಅಣ್ಣನಿಗಾಗಿ ಅಥವಾ ಸಿಂಹಾಸನ ನಿಷ್ಠೆಯಿಂದ ಈ ಕಾರ್ಯ ಮಾಡುತ್ತಿದ್ದೇನೆ ಎನ್ನಬಹುದು. ಆ ಬಳಿಕ ಅವಳು ಅಣ್ಣನಲ್ಲಿಗೆ ಹೋಗಿ ವಿಷಯವನ್ನು ತಿಳಿಸಿದಲ್ಲಿಗೆ ಪಾತ್ರ ನಿರ್ವಹಣೆ ಮುಕ್ತಾಯ ಕಾಣುತ್ತದೆ.

ಕೊನೆಯ ಭಾಗ ಬಿಟ್ಟರೆ ಅಜಮುಖಿಯದು ತುಂಬಾ ಸೊಗಸಾದ ಪಾತ್ರ. ಶಚಿಯ ಹುಡುಕಾಟ, ದೂರ್ವಾಸನನ್ನು ಕಂಡಾಗ ಮನದಲ್ಲಿ ಮೂಡುವ ಭಾವನೆಗಳು, ಸಮಾಗಮದ ಬಳಿಕ ಬೇರೆ ಕಾರಣಕ್ಕಾಗಿ ದೂರ್ವಾಸನ ಮನವೊಲಿಸುವುದು ಇಲ್ಲೆಲ್ಲಾ ಅಭಿನಯಕ್ಕೆ ಮಾತ್ರವಲ್ಲದೆ ವಿಭಿನ್ನ ಚಿಂತನೆಗೆ ಅವಕಾಶವಿದೆ. ಇಲ್ಲಿ ಬರುವ ದೂರ್ವಾಸ ತುಂಬಾ ಒಳ್ಳೆಯವ. ಅವನು ಪುರುಷಾತಿಕ್ರಮಣವೆಂದು ಅಜಮುಖಿಯ ಕಿವಿ, ಮೂಗು, ಮೊಲೆಗಳನ್ನು ಕತ್ತರಿಸುವುದಿಲ್ಲ. ಅಷ್ಟರ ಮಟ್ಟಿಗೆ ಈ ಭಾಗದಲ್ಲಿ ಪ್ರಗತಿಪರತೆಯನ್ನು ಕಾಣಬಹುದು.

8.4 ತಾಟಕಿಯ ಪಾತ್ರ ಚಿತ್ರಣ

ತಾಟಕಿಯ ಪಾತ್ರಕ್ಕೆ ಮೂರು ಆಯಾಮಗಳಿವೆ. ಮೊದಲನೆಯದು ಅವಳು ಸಾವಿರ ಆನೆಗಳ ಬಲವುಳ್ಳ ಒಬ್ಬಳು ಯಕ್ಷಕಕನ್ಯೆ. ಸುಂದನೆಂಬ ಯಕ್ಷ ಅವಳ ಪತಿ. ಮಾರೀಚ ಸುಬಾಹು ಅವಳ ಮಕ್ಕಳು. ಅವಳು ಮಲದ ಕರೂಶ ದೇಶಗಳ ನಡುವಣ ವನದಲ್ಲಿ ಸಂಚರಿಸಿ ಕೊಂಡಿರುವಾಗ ಅವಳ ಸುಂದರ ರೂಪ ಋಷಿಗಳ ಚಿತ್ತಚಾಂಚಲ್ಯಕ್ಕೆ ಕಾರಣವಾದೀತೆಂಬ ಭೀತಿಯಿಂದ ಅಗಸ್ತ್ಯ ಶಾಪ ಕೊಟ್ಟ. ಅವಳು ಮಕ್ಕಳ ಸಹಿತ ಫೋರ ರೂಪಿಣಿ ರಕ್ಕಸಿ ಯಾದಳು. ಆ ಬಳಿಕ ಋಷಿಮುನ್ನಿಗಳ ಯಜ್ಞಯಾಗಾದಿಗಳಿಗೆ ಉಪಟಳ ಕೊಡಲು ಆರಂಭಿಸಿದಳು. ಇದು ಮೂಲಕಥೆ. ಈ ಕಥೆಯ ಪ್ರಕಾರ ತಾಟಕಿ ಮಾಡುವ ಅನಾಹುತಗಳಿಗೆ ಮೂಲ ಕಾರಣ ಅಗಸ್ತ್ಯವೆಂಬ ಋಷಿ ವಿನಾಕಾರಣ ನೀಡಿದ ಶಾಪ. ಆದರೆ ಆತ ಕೆಟ್ಟವನಾಗದೆ, ತಾಟಕಿ ಕೆಟ್ಟವಳಾಗಿಬಿಟ್ಟಳು. ತಾಟಕಿ ಪಾತ್ರ ಮಾಡುವವರೂ ಅಗಸ್ತ್ಯನದ್ದು ತಪ್ಪು ಎಂದು ಹೇಳದಿರುವುದೇ ದೊಡ್ಡ ಸೋಜಿಗ. ಹೆಣ್ಣು ಸೌಂದರ್ಯವತಿ ಯರಾಗಿರುವುದೇ ತಪ್ಪು ಎಂಬ ಅಗಸ್ತ್ಯ ಋಷಿಯ ಚಿಂತನೆ ತೀರಾ ಪ್ರತಿಗಾಮಿತನದ್ದು.

ಸೂರ್ಯವಂಶೀಯರ ಸಾಮ್ರಾಜ್ಯ ವಿಸ್ತರಣೆಗೆ ತಾಟಕಿ ಮೊದಲ ಬಲಿ ಎನ್ನುವುದು ಇನ್ನೊಂದು ಆಯಾಮ. ಸೂರ್ಯನ ಕಿರಣ ಬೀಳುವ ಪ್ರದೇಶವೆಲ್ಲಾ ಸೂರ್ಯವಂಶೀಯರಿಗೆ ಸೇರಿದ್ದು ಎಂಬ ಅಹಂ ಆ ವಂಶೀಯರಿಗಿತ್ತು. ರಾಮಲಕ್ಮಣರನ್ನು ವಿಶ್ವಾಮಿತ್ರರೊಡನೆ ಕಳುಹಿಸಲು ಹಿಂದೇಟು ಹಾಕಿದ ದಶರಥ ಆಮೇಲೆ ಒಪ್ಪಬೇಕಾದರೆ ಬಲವಾದ ಕಾರಣಗಳಿರ ಲೇಬೇಕು. ಮೊದಲನೆಯದು ಸಾಕೇತವು ಮಲದ ಕರೂಶ ದೇಶಗಳವರೆಗೆ ವಿಸ್ತರಿಸಲ್ಪಡು ತ್ತದೆ ಎನ್ನುವುದು. ಎರಡನೆಯದು ಮನಸ್ಸು ಮಾಡಿದರೆ ಪ್ರತಿಸ್ವರ್ಗವನ್ನು ಸೃಷ್ಟಿಸಬಲ್ಲ ಸಾಮಥ್ರ್ಯದ ವಿಶ್ವಾಮಿತ್ರ ಮತ್ತವನ ಶಿಷ್ಯ ಸಮೂಹ ಎಲ್ಲಾ ಕಾಲಕ್ಕೂ ಸೂರ್ಯವಂಶಕ್ಕೆ ಬೆಂಬಲವಾಗಿರುತ್ತದೆ ಎನ್ನುವುದು. ತಾಟಕಿ ವಿಶ್ವಾಮಿತ್ರನನ್ನು ವಿರೋಧಿಸುತ್ತಿದ್ದುದು ಮೂಲತಃ ಕ್ಷತ್ರಿಯನಾಗಿದ್ದ ವಿಶ್ವಾಮಿತ್ರನಲ್ಲಿ ರಾಜತ್ವಭಾವ ಮೂಡಿದರೆ ಕಾಡೆಲ್ಲಾ ನಾಡಾಗಿ ತನಗೆ, ತನ್ನ ಮಕ್ಕಳಿಗೆ ಅಸ್ತಿತ್ವವೇ ಇಲ್ಲದಂತಾಗುತ್ತದೆ ಎಂಬ ಕಾರಣಕ್ಕಾಗಿ. ಹೀಗೆ ತಾಟಕಿಯನ್ನು ಪ್ರಸ್ತುತಿ ಪಡಿಸಿದರೆ ಆ ಪಾತ್ರಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ.

ಮೂರನೆಯದು ಆರ್ಯದ್ರಾವಿಡ ಸಂಘರ್ಷವನ್ನು ಆಧರಿಸಿದ್ದು. ಸಿಂಧೂ ಕಂದರದ ದ್ರಾವಿಡ ನಾಗರಿಕತೆಯನ್ನು ನಿರ್ನಾಮ ಮಾಡಿದ ಆರ್ಯರು ಅವರನ್ನು ದಕ್ಷಿಣದತ್ತ ಬೆಂಬತ್ತಿದರು. ದ್ರಾವಿಡರು ಇಂದಿನ ಶ್ರೀಲಂಕಾದವರೆಗೂ ಹರಡಿಕೊಂಡರು. ಪ್ರಬಲರಾದ ಸೂರ್ಯವಂಶೀಯ ಆರ್ಯ ಜನಾಂಗದವರಿಂದ ತಮಗೆ ತೊಂದರೆಯಾಗ ಬಾರದೆಂದು ಶ್ರೀಲಂಕಾ ಪ್ರಭುತ್ವ ರಾವಣದಿ ದಂಡಕಾರಣ್ಯದಲ್ಲಿ ಖರದೂಷಣ ತ್ರಿಶಿರರೊಡನೆ ಶೂರ್ಪನಖಿಯರನ್ನು ನೆಲೆಗೊಳಿಸಿದರೆ ಅದಕ್ಕೂ ಉತ್ತರದಲ್ಲಿ ಮಲದಕರೂಶ ದೇಶಗಳ ಮಧ್ಯೆ ತಾಟಕಿ ಮತ್ತು ಆಕೆಯ ಮಕ್ಕಳಾದ ಮಾರೀಚಸುಬಾಹುರನ್ನು ನೆಲೆಗೊಳಿಸಿತು. ಇವರೆಲ್ಲರೂ ಅರಣ್ಯದ ಆದಿವಾಸಿಗಳು. ಆರ್ಯರಾದ ಋಷಿ ಮುನಿಗಳು ವಲಸೆ ಬಂದು ಅರಣ್ಯವನ್ನು, ಅರಣ್ಯ ಸಂಸ್ಕೃತಿಯನ್ನು ಮತ್ತು ಪರಿಸರವನ್ನು ನಾಶ ಮಾಡುವವರು. ಪ್ರಕೃತಿಯ ಆರಾಧಕರಾದ ಆದಿವಾಸಿ ದ್ರಾವಿಡರಲ್ಲಿ ಹೋಮಯಜ್ಞಗಳಿರಲಿಲ್ಲ. ತಮ್ಮದಲ್ಲದ ಸಂಸ್ಕೃತಿಯನ್ನು ತಮ್ಮ ಮೇಲೆ ಹೇರಬಹುದು ಎಂಬ ಭಯವೇ ಅವರು ಯಜ್ಞಯಾಗಾದಿ ಗಳನ್ನು ಹಾಳುಗೆಡಹಲು, ಋಷಿ ಮುನ್ನಿಗಳನ್ನು ಪೀಡಿಸಲು ಕಾರಣ. ಸೂರ್ಯವಂಶೀಯ ಆರ್ಯರು ಋಷಿಮುನಿಗಳ ಬೆಂಬಲದಿಂದ ಸಾಮ್ರಾಜ್ಯ ವಿಸ್ತರಣೆಗಾಗಿ ಆದಿವಾಸಿ ಜನಾಂಗ ಗಳನ್ನು ಅರಣ್ಯದಿಂದ ಓಡಿಸಲೆಂದೇ ಅನಗತ್ಯ ಯುದ್ಧ ಮಾಡಲು ಉದ್ಯುಕ್ತರಾಗಿದ್ದಾರೆ ಎಂದು ತಾಟಕಿ ಹೇಳಿದರೆ ಅದು ಅದ್ಭುತವಾದ ಒಂದು ವಿಶ್ಲೇಷಣೆಯಾಗುತ್ತದೆ.

ತಾಟಕಿ ಹೆಣ್ಣೆಂಬ ಕಾರಣಕ್ಕೆ ಅವಳನ್ನು ಕೊಲ್ಲಲು ರಾಮನಿಗೆ ಮನಸ್ಸು ಬರುವುದಿಲ್ಲ. ಆಗ ವಿಶ್ವಾಮಿತ್ರಪೂರ್ವದೊಳ್‌ ಮೃತ್ಯುವಿನ ಶಿವಕೊಲ್ವ ಸಮಯದೋಳ್‌ೕ ಗರ್ವದಿಂದ ಬಲೆಯೆಂದುಳುಹಿದನೇ  ಎಂದು ಕೇಳಿ ರಾಮನನ್ನು ಹೆಂಗೊಲೆಗೆ ಪ್ರಚೋದಿಸುತ್ತಾನೆ. ರಾಮ ತನ್ನನ್ನು ಕೊಲ್ಲುವ ಮುನ್ನ ತಾಟಕಿ ‘ನೀವಿಬ್ಬರು ನನ್ನ ಮಕ್ಕಳಾದ ಮಾರೀಚ
ಸುಬಾಹುಗಳ ಹಾಗೆ. ಕಾಡನ್ನು ಕಡಿದು ನಾಡು ಮಾಡಲು ಯತ್ನಿಸುತ್ತಿರುವ ಈ ಪ್ರಕೃತಿ ವಿರೋಧಿ ಋಷಿಯ ಪ್ರಚೋದನೆಯಿಂದ ರಾಮಾ, ನೀನೇದರೂ ನನ್ನನ್ನು ಕೊಂದರೆ, ಸ್ತ್ರೀ ಹತ್ಯಾ ಪಾತಕ ನಿನ್ನನ್ನು ಕೊನೆಯವರೆಗೂ ನರಳುವಂತೆ ಮಾಡುತ್ತದೆ, ಸ್ತ್ರೀ ನಿಮಿತ್ತವಾಗಿ ನಿನ್ನ ಜೀವನವೇ ಸರ್ವನಾಶವಾಗಿ ಬಿಡುತ್ತದೆ’ಎನ್ನಬೇಕು. ಅದು ಮುಂದೆ ಶೂರ್ಪನಖಿಯಿಂದಾಗಿ ರಾಮ ಅನುಭವಿಸಬೇಕಾಗಿ ಬರುವ ಬವಣೆ ಮತ್ತು ಸೀತಾ ಪರಿತ್ಯಾಗದ ಬಳಿಕಿನ ದುರಂತಗಳಿಗೆ ಮುನ್ನ್ಸೂಚನೆಯಾಗುತ್ತದೆ. ಆ ದೂರದೃಷ್ಟಿ ತಾಟಕಿ ವೇಷಧಾರಿಗಿರಬೇಕು.

8.5 ಶೂರ್ಪನಖಿಯ ಪಾತ್ರ ಚಿತ್ರಣ

ಹೆಣ್ಣು ಬಣ್ಣಗಳಲ್ಲಿ ‘ರಾಣಿ’ ಎಂಬ ಹೆಗ್ಗಳಿಕೆಗೆ ಪಾತ್ರಳಾದವಳು ಶೂರ್ಪನಖಿ. ಇವಳ ಪ್ರವೇಶ ತಾಟಕಿಯಂತೆ. ಇವಳು ತಾಟಕಿಯಂತೆ ಭಾಗವತರೊಡನೆ ಸಂಭಾಷಣೆ ಮಾಡಲಿಕ್ಕಿದೆ. ಶೂರ್ಪನಖಿ ತನ್ನ ಹೆಸರಿನ ಅರ್ಥವನ್ನು ವಿವರಿಸಿ ಎಡಗೈಯಲ್ಲಿ ಉಗುರು ಬೆಳೆಸಿ ಬಣ್ಣ ಬಳಿಯುವ ಸ್ತ್ರೀಯರೆಲ್ಲರೂ ಶೂರ್ಪನಖಿಯರೇ ಎಂದು ಹೇಳಲು ಅವಕಾಶವಿದೆ!

ಶೂರ್ಪನಖಿಯದು ವಿಷಾದಯುಕ್ತ ವಿಶಿಷ್ಟ ಪಾತ್ರ. ಗಂಡ ವಿದ್ಯುಜ್ಜಿಹ್ವನನ್ನು ಅವಳ ಅಣ್ಣ ರಾವಣ ದಿಗ್ವಿಜಯ ಕಾಲದಲ್ಲಿ ಕೊಂದಿರುತ್ತಾನೆ. ಪತಿ ಮಡಿಯುವಾಗ ಶೂರ್ಪನಖಿ ಗರ್ಭಿಣಿಯಾಗಿದ್ದಳು. ಅವಳನ್ನು ಖರದೂಷಣ ತ್ರಿಶಿರ ಸಹಿತ ಹದಿನಾಲ್ಕು ಸಾವಿರ ಮಂದಿ ರಕ್ಕಸ ಸೇನೆಯೊಡನೆ ರಾವಣ ದಂಡಕಾರಣ್ಯದಲ್ಲಿ ನೆಲೆಗೊಳಿಸಿರುತ್ತಾನೆ. ತಾಟಕಿ ಸಂಹಾರದ ಬಳಿಕ ಆರ್ಯರು ಇನನಷ್ಟು ದಕಿಣಕ್ಕೆ ಬಂದಾರೆಂಬ ಭೀತಿ ಇದಕ್ಕೆ ಕಾರಣವಾಗಿರಬೇಕು. ಅವಳು ತನ್ನ ಮಗ ಶಂಭೂಕನನ್ನು ರಾವಣನಿಗೆ ಗೊತ್ತಾಗದಂತೆ ಬಿದಿರಮೆಳೆಗಳ ನಡುವೆ ಅಡಗಿಸಿ ಸಂರಕಿಸುತ್ತಿರುತ್ತಾಳೆ. ಇಷ್ಟು ವಿವರಗಳನ್ನು ಶೂರ್ಪನಖಿ ಪಾತ್ರ ಮಾಡುವ ಪ್ರತಿಯೊಬ್ಬ ಕಲಾವಿದನೂ ಸಾಮಾನ್ಯವಾಗಿ ಹೇಳುತ್ತಾನೆ.

ಪ್ರವೇಶದಲ್ಲೇ ಶೂರ್ಪನಖಿಯ ಒಳತೋಟಿಗಳನ್ನು ಹೇಳಿಕೊಳ್ಳುವುದು ಬಹಳ ಮುಖ್ಯ:

ತಂಗಿಯ ಹೊಟ್ಟೆಯಲ್ಲಿ ಲಂಕೆಗೊಬ್ಬ ಉತ್ತರಾಧಿಕಾರಿ ಹುಟ್ಟುವುದು ಬೇಡವೆಂದೇ ಅಣ್ಣ ವಿದ್ಯುಜ್ಜಿಹ್ವನನ್ನು ದಿಗ್ವಿಜಯದ ನೆಪದಲ್ಲಿ ಬೇಕೆಂದೇ ಕೊಂದ.

ತಂಗಿಯ ಹೊಟ್ಟೆಯಲ್ಲಿ ಮಗ ಹುಟ್ಟಿದ್ದು ತಿಳಿದರೆ ಅವನನ್ನೂ ಕೊಲ್ಲಿಸದಿರಲಾರನೆಂದು ಮಗ ಶಂಭೂಕನನ್ನು ಬಿದಿರಮೆಳೆಗಳ ನಡುವೆ ಗೋಪ್ಯವಾಗಿ ಬೆಳೆಸುತ್ತಿರುವುದು.

ದ್ರಾವಿಡ ಬ್ರಾಹ್ಮಣನಾದ ರಾವಣನು ವಿಧವೆ ತಂಗಿಯನ್ನು ಅಮಂಗಳಕರವೆಂದು ಭಾವಿಸಿ ಕಾಡಿಗೆ ಅಟ್ಟಿದ್ದು.

ತಾಟಕಾ ವಧೆಯ ಬಳಿಕ ಸೂರ್ಯವಂಶೀಯ ಆರ್ಯರು ದಕಿಣದತ್ತ ಸಾಮ್ರಾಜ್ಯ ವಿಸ್ತರಿಸದಂತೆ ತಡೆಯೊಡ್ಡಲೆಂದೇ ಶೂರ್ಪನಖಿಯನ್ನು ದಂಡಕಾರಣ್ಯದಲ್ಲಿ ನೆಲೆಗೊಳಿಸಿದ್ದು. ಅದರ ಹಿಂದೆ ತಂಗಿ ಸತ್ತರೆ ಸಾಯಲಿ, ಪೀಡೆ ತೊಲಗಿತು ಎಂಬ ಭಾವ ಇದ್ದದ್ದು.

ಶೂರ್ಪನಖಿಯ ಪ್ರವೇಶವಾದಾಗ ಅವಳಿಗೆ ಕಂಡದ್ದು ರುಂಡಮುಂಡ ಬೇರೆ ಬೇರೆಯಾದ ತನ್ನ ಏಕೈಕ ಮಗ ಶಂಭೂಕನ ಶವ. ಹಿಂದಿನ ದಿನ ರಾಮಲಕ್ಮಣರು ಪರ್ಣಕುಟಿ ನಿರ್ಮಿಸಲೆಂದು ಬಿದಿರಮೆಳೆ ಕೊಂಡೊಯ್ಯಲು ಬಂದವರು ಋಷಿಗಳಿಂದ ಶಂಭೂಕನ ಇರವನ್ನು ಪತ್ತೆ ಹಚ್ಚಿ ಅವನನ್ನು ಕೊಂದು ಹಾಕಿದ್ದರು. ಬಡಪಾಯಿ ಶೂರ್ಪನಖಿಯ ಜೀವನದಲ್ಲಿ ಕನಸುಗಳೇ ಇರಲಿಲ್ಲ. ರಾಮನನ್ನು ಕಂಡಾಗ ಹೊಸ ಕನಸು ಮೂಡಿತು. ರಾಮ ಅವಳನ್ನು ಮದುವೆಯಾಗಲಿಲ್ಲ. ಅಣ್ಣ ಹೇಳುತ್ತಿದ್ದರೆ ತಮ್ಮ ಮದುವೆಯಾಗುತ್ತಿದ್ದ. ಅದಕ್ಕೂ ರಾಮ ಬಿಡಲಿಲ್ಲ. ಶೂರ್ಪನಖಿಯ ಕಿವಿ, ಮೂಗು, ಮೊಲೆಗಳನ್ನು ಲಕ್ಮಣನಿಂದ ಕುಯ್ಸಯಿದ. ಆಗ ಶೂರ್ಪನಖಿಯಾಡುವ ಪಂಥದ ಮಾತುಗಳು ಕುಮಾರ ವಿಜಯದಲ್ಲಿ ಶಾಸ್ತಾರನಿಂದ ಕೈ ಕಡಿಸಿಕೊಂಡ ಅಜಮುಖಿ ಶಚಿಯೆದುರು ಆಡುವ ಮಾತುಗಳಂತಿವೆ. ಆದರೆ ಪ್ರಭಾವಿತನಾದದ್ದು ಪಾರ್ತಿಸುಬ್ಬನಿಂದ ಮುದ್ದಣ! ಅಜಮುಖಿಯ ರೋಷಕ್ಕೆಪಂಥಕ್ಕೆ ನೈತಿಕ ನೆಲೆಗಟ್ಟಿಲ್ಲ. ಆದರೆ ಶೂರ್ಪನಖಿಯ ಪಂಥಕ್ಕಿದೆ. ಅದುವೇ ಶೂರ್ಪನಖಿ ಪಾತ್ರದ ವೈಶಿಷ್ಟ್ಯ. ಅದರ ಅರಿವು ವೇಷಧಾರಿಗಿರಬೇಕು.

ಋಷಿಮುನ್ನಿಗಳ ಹೋಮಧೂಮಗಳನ್ನು ವಿರೋಧಿಸಲು ತಾಟಕಿ ನೀಡುವ ಕಾರಣಗಳನ್ನು ಶೂರ್ಪನಖಿಯೂ ಧಾರಾಳವಾಗಿ ನೀಡಬಹುದು, ಅಗಸ್ತ್ಯ ಶಾಪವೊಂದನ್ನು ಹೊರತುಪಡಿಸಿ. ಪುರಾಣ ಕಾಲದ ರಾಮಲಕ್ಮಣ, ಋಷಿ ಮುನ್ನಿಗಳು ಎಲ್ಲಾ ಪ್ರಾಣಿಗಳ ಮಾಂಸಗಳನ್ನು ತಿನ್ನುತ್ತಿದ್ದರು ಮತ್ತು ಯಜ್ಞಕುಂಡಕ್ಕೆ ಅರ್ಪಿಸುತ್ತಿದ್ದರು. ತಾನು ಹೇಳಿ ಕೇಳಿ ಒಬ್ಬ ದ್ರಾವಿಡ ಬ್ರಾಹ್ಮಣನ ಮಗಳಾಗಿದ್ದುದರಿಂದ ಯಜ್ಞಕುಂಡಕ್ಕೆ ಮಾಂಸ ಹಾಕಿದರೆ ಅದನ್ನು ತಪ್ಪೆಂದು ಹೇಳುವುದೇ ತಪ್ಪು ಎಂದು ಹೇಳಿಕೊಳ್ಳಲು ಶೂರ್ಪನಖಿಗೆ ಅವಕಾಶ ವಿದೆ. ದ್ರಾವಿಡರಲ್ಲಿ ಹಿಂದೆ ವಿಧವೆ ಅನ್ನುವ ಪರಿಕಲ್ಪನೆಯೇ ಇರಲಿಲ್ಲ. ಬಹುಪತ್ನಿತ್ವ ಅಸ್ತಿತ್ವದಲ್ಲಿದ್ದ ಕಾಲದಲ್ಲಿ ಪತಿ ಇಲ್ಲದ ಹೆಣ್ಣೊಬ್ಬಳು ಬಹುವಲ್ಲಭನಾದ ರಾಜನ ಪುತ್ರನಲ್ಲಿ ತನ್ನನ್ನು ವರಿಸು ಎಂದು ಕೇಳಿದ್ದು ತಪ್ಪಾಗಲು ಸಾಧ್ಯವೇ ಇಲ್ಲ. ಇದನ್ನು ಅರ್ಥ ಮಾಡಿಕೊಳ್ಳದ ವೇಷಧಾರಿಗಳು ಶೂರ್ಪನಖಿಯನ್ನು ಕುಲಗೇಡಿ, ಕಾಮುಕಿ, ಮೂಳಿ, ದುಷ್ಟೆ ಎಂಬಂತೆ ರಂಗದಲ್ಲಿ ಪ್ರಸ್ತುತಿ ಪಡಿಸಿ ರಾಮಾಯಣ ಮಹಾಕಾವ್ಯಕ್ಕೆ ಅಪಚಾರವೆಸಗುತ್ತಾರೆ.

ಹೆಣ್ಣು ಬಣ್ಣಗಳು ರಕ್ಕಸಿ ಪಾತ್ರಧಾರಿಗಳಿಂದಾಗಿ ಅಪಮೌಲ್ಯಕ್ಕೊಳಗಾಗಿವೆ. ಹೆಣ್ಣು ಬಣ್ಣ ವೇಷಧಾರಿಗಳು ಪಾತ್ರಗಳ ಆಳಕ್ಕಿಳಿದು ಹೆಣ್ಣುಗಳ ಅಂತರಂಗ ಶೋಧ ಮುಖೇನ ಈ ಪಾತ್ರಗಳಿಗೆ ನ್ಯಾಯ ಒದಗಿಸಬೇಕಾಗಿದೆ. ಅದಕ್ಕೆ ರಕ್ಕಸಿಯರೆಂದರೆ ಶೋಷಣೆಗೆ ಒಳಗಾದ ದ್ರಾವಿಡ ಹೆಣ್ಣುಗಳು ಎಂಬ ಇತಿಹಾಸ ಪ್ರತಿಜ್ಞೆ ಅವರಿಗಿರಬೇಕು. ಅಷ್ಟೆ.

ಅಭ್ಯಾಸಾತ್ಮಕ ಪ್ರಶ್ನೆಗಳು

1. ಹೆಣ್ಣು ಬಣ್ಣಗಳು ಯಾವುವು?

2. ಅಜಮುಖಿ ವೇಷದ ಅಗತ್ಯವೇನು?

3. ತಾಟಕಿ ವೇಷದ ಅಗತ್ಯವೇನು?

4. ಲಂಕಿಣಿ ಮತ್ತು ಪೂತನಿ ವೇಷಗಳ ಅಗತ್ಯವೇನು?

5. ಶೂರ್ಪನಖಿ ವೇಷದ ಅಗತ್ಯವೇನು?

6. ಹೆಣ್ಣು ಬಣ್ಣಗಳ ಬಗ್ಗೆ ಭಾಗವತರ ದೃಷ್ಟಿಕೋನವೇನು?

7. ಹೆಣ್ಣು ಬಣ್ಣಗಳ ಬಗ್ಗೆ ಕಲಾವಿದರ ದೃಷ್ಟಿಕೋನವೇನು?

8. ಅಜಮುಖಿಯ ಪಾತ್ರ ಚಿತ್ರಣವನ್ನು ಹೇಗೆ ಮಾಡಬಹುದು?

9. ತಾಟಕಿಯ ಪಾತ್ರಚಿತ್ರಣವನ್ನು ಹೇಗೆ ಮಾಡಬಹುದು?

10. ಶೂರ್ಪನಖಿಯ ಪಾತ್ರಚಿತ್ರಣವನ್ನು ಹೇಗೆ ಮಾಡಬಹುದು?

ಕಠಿಣ ಪದಗಳು

ಎಲರ್‌ = ಗಾಳಿ

ಕಾದಂಬ ಕುಟ = ಈಚಲ ಮರ

ಕಾದಂಬ ನಿಕರ = ಕಲಹಂಸ ಸಮೂಹ

ಕಾದಂಬಿನುಗ್ರ = ಬಾಣದ ಹರಿತ ತುದಿ

ಕಾದಂಬು = ಬಿಸಿಯಾದ ನೀರು

ಗಾಡಿಯಿಂ ಕುಳ್ಳಿರು = ಸೊಬಗಿನಿಂದ ಕುಳಿತಿರುವುದು

ಲು್ಧಿಕರ್‌ = ಬೇಡರು.

ಕೀಲಿಕರಣ : ಎಮ್.ಎನ್.ಎಸ್.ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಲಿನ್ಯ ರಹಿತ ಪ್ಲಾಸ್ಟಿಕ್
Next post ಶಿಕ್ಷಕರಿಗೊಂದು ಮನವಿ-ಡಾ|| ಅಂಬೇಡ್ಕರ್

ಸಣ್ಣ ಕತೆ