ಯಾರಿಗೆ ಯಾರುಂಟು ?

ಎಪ್ರಿಲ್‌ ಹನ್ನೊಂದರಂದು ಹೋಟೆಲ್‌ ಟರ್ಮಿನಸ್‌ನಲ್ಲಿ ಫಲಾಹಾರ ಮುಗಿಸಿ ನಾವು ಫಿಜೆಯಾಕ್‌ ಬಿಟ್ಟಾಗ ಬೆಳಗ್ಗಿನ ಒಂಬತ್ತೂವರೆ ಗಂಟೆ. ಹಿಂದಿನ ರಾತ್ರೆ ಫಿಜೆಯಾಕಿನ ಮಧ್ಯಯುಗೀನ ಕಟ್ಟಡವೊಂದರಲ್ಲಿನ ಲಾ ಫುಯಸ್‌ ಲೊರೇಲ್‌ ರೆಸ್ಟಾರೆಂಟ್‌ನಲ್ಲಿ ನಾವು ಫಿಜೆಯಾಕಿನ ರೊಟೇರಿಯನ್ನರಿಗೆ ಭಾರತದ ಸಂಸ್ಕೃತಿಯ ಸ್ಲೈಡ್‌ ಪ್ರದರ್ಶನ ಮಾಡಿದ್ದೆವು. ಕಂಬಳ, ಭೂತ ಕೋಲ ಮತ್ತು ಯಕ್ಷಗಾನಗಳ ವಿವರಣೆ ನೀಡುತ್ತಿದ್ದ ಅನಿತಾ ‘ನಮ್ಮ ತಂಡದ ಶಿಶಿಲ ಒಬ್ಬ ಯಕ್ಷಗಾನ ಕಲಾವಿದ’ ಎಂದು ಹೇಳಿ ನನ್ನ ಗೌರವವನ್ನು ಹೆಚ್ಚಿಸಿದ್ದಳು! ಅದಾದ ಬಳಿಕ ನಾವು ‘ಭಾರತೀಯ ಹೈ’ ಎಂಬ ದೇಶಭಕ್ತಿಗೀತೆಯನ್ನು ಸಾಮೂಹಿಕವಾಗಿ ಹಾಡಿ ಫಿಜೆಯಾಕಿಯನ್ನರ ಮನಗೆದ್ದಿದ್ದೆವು. ಅದಕ್ಕೆಲ್ಲಾ ಸಾಕ್ಷಿ ಎಂಬಂತೆ ನಮ್ಮನ್ನು ಫಿಜೆಯಾಕಿನಿಂದ ಬೀಳ್ಕೊಡಲು ನಲುವತ್ತಕ್ಕೂ ಹೆಚ್ಚು ಮಂದಿ ಸೇರಿದ್ದರು. ಅವರಲ್ಲಿ ನನ್ನ ಅತಿಥೇಯ ಮಾರ್ಸೆಲನೂ ಒಬ್ಬ. ಅವನು ಪ್ರಾಣಾಯಾಮ ಮತ್ತು ಯೋಗ ಎಂಬ ಶಬ್ದಗಳನ್ನು ಪದೇ ಪದೇ ಬಳಸುತ್ತಿದ್ದುದರಿಂದ ಆತ ನಿನ್ನೆಯ ‘ದ್ರಾವಿಡ ಪ್ರಾಣಾಯಾಮ’ದ ಬಗ್ಗೆ ಇತರರಲ್ಲಿ ಹೇಳುತ್ತಿದ್ದಾನೆಂದು ನನಗೆ ಖಚಿತವಾಯಿತು. ಇನ್ನು ಯಾರಿಗೆಲ್ಲಾ ಅದನ್ನು ಕಲಿಸಹೋಗಿ ಏನೆಲ್ಲಾ ಫಜೀತಿ ಮಾಡಿಕೊಳ್ಳುತ್ತಾನೊ?

ನಮ್ಮ ಮುಂದಿನ ಪಯಣ ಕ್ಯಾಸ್ತ್ರಕ್ಕೆ. ಅಲಿಪ್‌ಯ ಪೂರ್ವಕ್ಕೆ ನಲ್ವತ್ತೆರಡು ಕಿ.ಮೀ. ದೂರದಲ್ಲಿರುವ ಕ್ಯಾಸ್ತ್ರಕ್ಕೆ ಅಲಿಪ್‌ಯನ್ನು ಹಾದೇ ಹೋಗಬೇಕು. ಫಿಜೆಯಾಕಿನಿಂದ ಸುಮಾರು ನೂರೈವತ್ತು ಕಿ.ಮೀ. ದೂರದ ಕ್ಯಾಸ್ತ್ರಕ್ಕೆ ನಾವು ಮೂರು ಕಾರುಗಳಲ್ಲಿ ಹೊರಟೆವು. ಕ್ಯಾಸ್ತ್ರದ ಅಧ್ಯಕ್ಷ್ಷ ಸೌಬ್ರಿಯೆ, ರೋಟರಿ ಸದಸ್ಯ ಲ್ಯಾಸೇಜ್‌ ಮತ್ತು ಇನ್ನರ್‌ವೀಲ್‌ ಅಧ್ಯಕ್ಷ್ಷೆ ನಿಕೋಲ್‌ ನಮ್ಮೊಡನೆ ಕ್ಯಾಸ್ತ್ರಕ್ಕೆ ಬಂದರು. ಸುಂದರವಾದ ಅಲಿಪ್‌ಯನ್ನು ದಾಟಿ ನಾವು ಕ್ಯಾಸ್ತ್ರದ ರೋಟರಿ ಅಧ್ಯಕ್ಷ್ಷ ಆಂಡ್ರೇ ಅರ್ನಾಡಿಯ ಮನೆಗೆ ಮುಟ್ಟುವಾಗ ಮಧ್ಯಾಹ್ನ ಹನ್ನೆರಡು ದಾಟಿತ್ತು.

ಮಧ್ಯಾಹ್ನದ ಊಟ ಅರ್ನಾಡಿಯ ಮನೆಯಲ್ಲಿ. ನಮ್ಮ ಊಟವಾಗುತ್ತಿರುವಾಗ ಅರ್ನಾಡಿ ತಾನು ಅಂದೇ ಸಂಜೆ ಅರ್ಜೆಂಟಾಗಿ ಕ್ಯೂಬಾಕ್ಕೆ ಹೋಗಲಿರುವುದಾಗಿಯೂ, ಕ್ಯಾಸ್ತ್ರದಲ್ಲಿ ನಮ್ಮ ಯೋಗಕ್ಷೇಮವನ್ನು ಪಿಯರೆ ಬೆರ್ನಾರ್ಡಿನ್‌ ನೋಡಿಕೊಳ್ಳಲಿರುವುದಾಗಿಯೂ ತಿಳಿಸಿದ. ಊಟದ ಬಳಿಕ ಗುರು ಅರ್ನಾಡಿಯ ಈಜುಕೊಳಕ್ಕೊಂದು ಸುತ್ತು ಹೊಡೆದ. ಈಜು ಛಾಂಪಿಯನ್‌ ಗುರು ಕೊಳವನ್ನು ಆಸೆಗಣ್ಣುಗಳಿಂದ ನೋಡುತ್ತಾ ನನೊನಡನೆ ‘ನಾವು ಈಜೋಣವಾ?’ ಎಂದು ಕೇಳಿದ. ಅವನಲ್ಲಿ ಎಕ್ಸ್‌ಟ್ರಾ ಈಜುಡುಗೆ ಇತ್ತು. ನಾವು ಈಜುಡುಗೆ ತೊಟ್ಟು ತಣ್ಣನೆಯ ನೀರಿನಲ್ಲಿ ಈಜುತ್ತಿದ್ದಾಗ ಪಿಯರೆ ಬೆರ್ನಾರ್ಡಿನ್‌ ಬಂದ. ಆತನಿಗೆ ಗುರುವಿನ ಡೈವಿಂಗ್‌ ಖುಷಿಯಾಗಿ ಎರಡು ಫೋಟೋ ಹೊಡೆದೇಬಿಟ್ಟ. ನಾವೀಗ ಬೆರ್ನಾರ್ಡಿನ್‌ನ ಸುಪರ್ದಿಗೆ ಒಳಪಟ್ಟು ಕ್ಯಾಸ್ತ್ರದ ಉತ್ತರಕ್ಕಿರುವ ಆತನ ಮನೆಯತ್ತ ಹೊರಟೆವು.

ಕ್ಯಾಸ್ತ್ರದ ನೆನಪುಗಳು

ತಾರ್ನ್‌ ಪ್ರದೇಶದ ಸುಂದರ ನಗರಗಳಲ್ಲೊಂದಾದ ಕ್ಯಾಸ್ತ್ರ ಅಗೋತ್‌ (Agot) ನದಿಯ ಇಕ್ಕೆಲಗಳಲ್ಲಿ ಬೆಳೆದು ನಿಂತಿದೆ. ಅದರ ಜನಸಂಖ್ಯೆ ಸುಮಾರು 50000. ಒಂಬತ್ತನೇ ಶತಮಾನದಲ್ಲಿ ಇಲ್ಲಿ ಕ್ಯಾಸ್ತ್ರಂ ನಾಮಾಂಕಿತ ಕ್ರೈಸ್ತ ಸನ್ಯಾಸಿ ಮಠವೊಂದನ್ನು ಕಟ್ಟಲಾಯಿತು. ಅದರ ಸುತ್ತಮುತ್ತ ಜನವಸತಿ ಬೆಳೆದು ಕ್ಯಾಸ್ತ್ರ ನಗರ ರೂಪುಗೊಂಡಿತು. ಅಗೋತ್‌ ನದಿಯ ಇಕ್ಕೆಲಗಳಲ್ಲಿ ಕಲ್ಲು ಮತ್ತು ಮರವನ್ನು ಬಳಸಿ ಕಟ್ಟಿದ ಹದಿಮೂರು ಮತ್ತು ಹದಿನಾಲ್ಕನೆಯ ಶತಮಾನಗಳಿಗೆ ಸೇರಿದ ಅನೇಕ ಮನೆಗಳಿವೆ. ಈ ಮನೆಗಳ ನೆಲಕೋಣೆಗಳಿಗೆ ನೇರವಾಗಿ ನದಿಯಿಂದ ಪ್ರವೇಶಿಸಲು ದ್ವಾರಗಳಿವೆ. ಈ ಮನೆಗಳು ಚರ್ಮ ಹದಮಾಡುವವರಿಗೆ, ನೇಕಾರರಿಗೆ ಮತ್ತು ಬಟ್ಟೆಗೆ ಬಣ್ಣ ಹಾಕುವವರಿಗೆ ಸೇರಿದ್ದು. ಕ್ಯಾಸ್ತ್ರದ ಆರ್ಥಿಕತೆ ವಿಕಸನ ಹೊಂದಿದ್ದು ಈ ಮಂದಿಗಳಿಂದ. ಅಗೋತ್‌ ನದಿ ಸಾರಿಗೆಯ ಮಾಧ್ಯಮವಾಗಿ ಕ್ಯಾಸ್ತ್ರದ ವಸ್ತ್ರ ಮತ್ತು ಚರ್ಮ ಉದ್ದಿಮೆ ಬೆಳೆಯಲು ಕಾರಣವಾಯಿತು. ಇಂದಿಗೂ ಕ್ಯಾಸ್ತ್ರ ದಕ್ಷಿಣ ಫ್ರಾನ್ಸಿನ ಅತಿಪ್ರಧಾನ ವಸ್ತ್ತ್ರೋದ್ಯಮ ಕೇಂದ್ರವಾಗಿದೆ.

ಹನ್ನೊಂದನೇ ಶತಮಾನದವರೆಗೆ ಕ್ಯಾಸ್ತ್ರವು ಅಲಿಪ್‌ಯ ವೈಕೌಂಟನ (Viscount) ನಿಯಂತ್ರಣಕ್ಕೆ ಒಳಪಟ್ಟಿತ್ತು. ಹನ್ನೊಂದನೇ ಶತಮಾನದಲ್ಲಿ ಅದಕ್ಕೆ ಸ್ವಯಂ ಆಡಳಿತದ ಅಧಿಕಾರ ಲಭ್ಯವಾಯಿತು. ಹನ್ನೆರಡನೇ ಶತಮಾನದಲ್ಲಿ ಕ್ಯಾಥಲಿಕ್ಕರು ಕಥಾರರ ಸಾಮೂಹಿಕ ವಧೆ ಮಾಡುತ್ತಿದ್ದಾಗ, ಕಥಾರ್‌ ಪ್ರದೇಶವೇ ಆದರೂ ಕ್ಯಾಸ್ತ್ರ ತಟಸ್ಥ- ವಾಗುಳಿಯಿತು. ಆದರೂ ಕ್ಯಾಥಲಿಕ್‌ ಪಡೆಯ ಮುಖಂಡ ಸೈಮನ್‌ ಡಿ ಮೋಂಟ್‌ಪೋರ್ಟ್ ಕ್ಯಾಸ್ತ್ರವನ್ನು ತನ್ನ ನಿಯಂತ್ರಣಕ್ಕೆ ಒಳಪಡಿಸಿದ. ಹದಿನಾಲ್ಕನೆಯ ಶತಮಾನದಲ್ಲಿ ವಸ್ತ್ತ್ರೋದ್ಯಮದಿಂದಾಗಿ ಕ್ಯಾಸ್ತ್ರವು ಸಿರಿವಂತ ವಾಣಿಜ್ಯನಗರಿಯಾಗಿ ಬೆಳೆಯಿತು. ಅಗೋತ್‌ ನದಿ ವಸ್ತ್ರ ನಿರ್ಯಾತಕ್ಕೆ ರಹದಾರಿ ಕಲ್ಪಿಸಿಕೊಟ್ಟಿತು. ಕ್ರಿ.ಶ. 1560 ರಿಂದ 1629ರ ಆರ್ಲ್ಸ್ ಶಾಂತಿ ಒಪ್ಪಂದದವರೆಗಿನ ಅವಧಿಯಲ್ಲಿ ಕ್ಯಾಸ್ತ್ರವು ಧರ್ಮಯುದ್ಧಗಳಿಂದ ಕಂಗೆಟ್ಟಿತು. ಲ್ಯಾಂಗ್‌ಡಕ್ಕ್‌ ಪ್ರಾಂತ್ಯದಾದ್ಯಂತ ನಡೆದ ಹ್ಯುಗುನೋತ್ಸ್‌ ಮತ್ತು ಕ್ಯಾಥಲಿಕ್ಕರ ನಡುವಣ ಕದನ ಕ್ಯಾಸ್ತ್ರವನ್ನು ಬಲಿತೆಗೆದುಕೊಂಡಿತು. ಧರ್ಮ ಸುಧಾರಣೆಯ ಕಾಲದಲ್ಲಿ ನಡೆದ ಈ ಮಹಾಸಂಗ್ರಾಮದಲ್ಲಿ ಅನೇಕ ಮಧ್ಯಯುಗೀನ ಸ್ಮಾರಕಗಳು ನಿರ್ನಾಮಗೊಂಡವು. ಯುದ್ಧ ಮುಗಿದ ಬಳಿಕ ಹಳೆಯ ಸಾಂಪ್ರದಾಯಿಕ ವಾಸ್ತುಶಿಲ್ಪ ಶೈಲಿಯಲ್ಲಿ ಕ್ಯಾಸ್ತ್ರದ ಮರುನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಯಿತು.

ಕ್ಯಾಸ್ತ್ರದ ಟೌನ್‌ಹಾಲ್‌ ಒಂದು ಆಕರ್ಷಕ ಭವನ. ಮನ್‌ಪಾರ್ತ್ ಎಂಬ ಶಿಲ್ಪಿಯ ನಕ್ಷೆಗನುಗುಣವಾಗಿ ರೂಪುಗೊಂಡ ಈ ಭವನ ಹದಿನೇಳನೇ ಶತಮಾನದಲ್ಲಿ ಬಿಷಪ್ಪನ ಅರಮನೆಯಾಗಿತ್ತು. ಭವನದ ಸುತ್ತಲೂ ಲೆ ನೋತ್ರ್‌ ಎಂಬಾತ ನಿರ್ಮಿಸಿದ ನಯನಾಕರ್ಷಕವಾದ ಉದ್ಯಾನವಿದೆ. ಕ್ಯಾಸ್ತ್ರದಲ್ಲಿರುವ ಮೈಲ್‌, ಬ್ರಿಗ್ಯುಬೋಲ್‌, ಫ್ರಾಸ್ಕತಿ ಮುಂತಾದ ಉದ್ಯಾನಗಳು ಪರಸ್ಪರ ಸೌಂದರ್ಯ ಸ್ಪರ್ಧೆ ನಡೆಸುತ್ತವೆ. ರಿನೈಸೆನ್ಸ್‌ನ ಪ್ರಭಾವದಲ್ಲಿ ರೂಪುಗೊಂಡ ನಾಯಯ್ರಕ್‌, ವಿವಿಸ್‌, ಜುವಾನ್‌ ತಿರೋಯ್‌, ಪೋನ್ಸೆಟ್‌ ಮುಂತಾದ ಹೋಟೆಲುಗಳ ಕಿಟಕಿಗಳನ್ನು ಮತ್ತು ಬಾಗಿಲುಗಳನ್ನು ನೋಡಬೇಕು. ಅವು ಅಪ್ಪಟ ಕಲಾಕೃತಿಗಳು!

ಹದಿನೇಳನೇ ಶತಮಾನದ ಸೇಂಟ್‌ ಬೆನೈಟ್‌ ಕ್ಯಾಥಡ್ರಲ್‌ ಈಗ ಪ್ರಮುಖ ಫ್ರೆಂಚ್‌ ಚಿತ್ರಕಾರರಾದ ಡೈ ರೈವಲ್ಸ್‌, ಕಾಮಾ ಮತ್ತು ದೆಸ್ಪಾರ ಕಲಾಕೃತಿಗಳ ಸಂಗ್ರಹಾಲಯವಾಗಿದೆ. ಕ್ಯಾಸ್ತ್ರ ಸ್ಪಾನಿಷ್‌ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದ ನಗರ. ಇಲ್ಲಿ ಸ್ಪಾನಿಷ್‌ ಕಲಾಕೃತಿಗಳ ಅಪೂರ್ವವಾದ ಸಂಗ್ರಹಾಲಯವಿದೆ. ಟೌನ್‌ಹಾಲ್‌ನಲ್ಲಿರುವ ಗೋಯಾ ಮ್ಯೂಸಿಯಮ್ಮಮಿನಲ್ಲಿ ಕ್ಯತಲೋನಿಯನ್‌ ಮತ್ತು ಅರೆಗೋನಿಯನ್‌ ಚಿತ್ರಕಾರರಿಂದ ಆರಂಭಗೊಂಡು ತೀರಾ ಇತ್ತೀಚಿನವರೆಗಿನ ಸ್ಪಾನಿಷ್‌ ಚಿತ್ರಕಾರರ ಪ್ರಮುಖ ಕಲಾಕೃತಿಗಳನ್ನು ಸಂರಕಿಸಿ ಇಡಲಾಗಿದೆ. ಇವುಗಳಲ್ಲಿ ಮ್ಯುರಿಲೋ, ವೆಲಾಸ್ಕವೀಜ್‌, ರಿಬೆರಾ, ಆ್ಯಂತೋನಿಯೋ ಪುರ್ಗಾ ಮತ್ತು ಗೋಯಾರ ಕಲಾಕೃತಿಗಳು ಗಮನ ಸೆಳೆಯುತ್ತವೆ. ಅವುಗಳ ಪೈಕಿ ಮಹಾನ್‌ ದಾರ್ಶನಿಕ ಸಾಕ್ರಟೀಸ್‌, ಅಪೂರ್ವ ಚೆಲುವೆಯಾದ ನಗ್ನ ಹೆಣ್ಣೊಬ್ಬಳನ್ನು ಪರಿಶೀಲನಾ ದೃಷ್ಟಿಯಿಂದ ನೋಡುತ್ತಿರುವ ಚಿತ್ರವೊಂದು ಚರ್ಚೆಗೆ ಗ್ರಾಸವನ್ನೊದಗಿಸುತ್ತದೆ. ಕ್ಯಾಸ್ತ್ರದಲ್ಲಿ ಜನಿಸಿ, ಬಹುದೊಡ್ಡ ಭಾಷಣಕಾರನಾಗಿ ಹೆಸರು ಮಾಡಿದ ಜುವಾನ್‌ ಜಾವುರೆಸ್ಸ್‌ನ ಹೆಸರಲ್ಲಿ ಸಂಶೋಧನಾ ಕೇಂದ್ರವನ್ನು ನಿರ್ಮಿಸಲಾಗಿದ್ದು ಇದರಲ್ಲಿ ಅನೇಕ ರಾಷ್ಟ್ರೀಯ ದಾಖಲೆಗಳನ್ನು ಸಂರಕಿಸಿ ಇಡಲಾಗಿದೆ. ಕೇಂದ್ರದ ಮಂದುಗಡೆ ಜಾವುರೆಸ್ಸನ ಮೂರ್ತಿಯೊಂದನ್ನು ಕಡೆದಿರಿಸಲಾಗಿದೆ.

ಕ್ಯಾಸ್ತ್ರದ ಜೀವನದಿ ಅಗೋತ್‌ನಲ್ಲಿ ದೋಣಿ ವಿಹಾರ ಒಂದು ಚೇತೋಹಾರಿ ಅನುಭವ. ನದಿಯಲ್ಲಿ ಮಿರೆಡೇಂಸ್‌ ಎಂಬ ವಿಹಾರ ನೌಕೆಯೊಂದು ಪ್ರವಾಸಿಗರ ಸೇವೆಗೆ ಸದಾ ಸಿದ್ಧವಾಗಿ ನಿಂತಿರುತ್ತದೆ. ಅದು ನಮ್ಮನ್ನು ಗರ್ಜೇದ್‌ ಲೀಜರ್‌ ಪಾರ್ಕಿಗೆ ಒಯ್ಯುತ್ತದೆ. ಐವತ್ತು ಹೆಕ್ಟೇರು ಭೂ ಪ್ರದೇಶವನ್ನು ವ್ಯಾಪಿಸಿರುವ ಈ ಉದ್ಯಾನ ಹಿರಿಯರಿಗೆ ಒಂದು ವಿಶ್ರಾಂತಿಯ ಮತ್ತು ಕಿರಿಯರಿಗೆ ಮನೋರಂಜನೆಯ ತಾಣ. ಇಲ್ಲಿ ಪುಟ್ಟದಾದ ಒಂದು ಗಾಲೇ ಮೈದಾನವಿದೆ. ದಕ್ಷಿಣ ಫ್ರಾನ್ಸ್‌ನಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿರುವ ಹಾತ್‌ ಲ್ಯಾಂಗ್‌ಡಕ್ಕ್‌ ರೀಜನಲ್‌ ಪಾರ್ಕ್‌ ಕ್ಯಾಸ್ತ್ರದ ಬಳಿಯಲ್ಲೇ ಇದೆ. ಬೇಸಿಗೆಯಲ್ಲಿ ಕ್ಯಾಸ್ತ್ರದಲ್ಲಿ ಗೋಯಾ ಉತ್ಸವ ಮತ್ತು ಮುಕ್ತ ಉತ್ಸವಗಳು ನಡೆಯುತ್ತವೆ. ಆಗ ಯುರೋಪಿನ ಎಲ್ಲೆಡೆಯಿಂದ ಕ್ಯಾಸ್ತ್ರಕ್ಕೆ ಪ್ರವಾಸಿಗರು ಬರುತ್ತಾರೆ.

ಕ್ಯಾಸ್ತ್ರದಲ್ಲಿ ನಾನು ಉಳಿದುಕೊಂಡದ್ದು ಜುವಾನ್‌ ಅಲ್‌ಬೋನ ಮನೆಯಲ್ಲಿ. ಈತ ತನ್ನ ಹೆಂಡತಿಯೊಡನೆ ಶೇರು ದಲ್ಲಾಳಿಯಾಗಿ ತಿಂಗಳಿಗೆ ಲಕಗಟ್ಟಲೆ ಫ್ರಾಂಕ್‌ ಸಂಪಾದಿಸುತ್ತಾನೆ. ಮಧ್ಯಯುಗೀನ ಅರಮನೆಯೊಂದನ್ನು ತನ್ನ ಮನೆಯಾಗಿಸಿ ಕೊಂಡಿರುವ ಅಲ್‌ಬೋ ರಾಜವಂಶಕ್ಕೆ ಸೇರಿದವನು. ನಾಲ್ಕು ಮಹಡಿಗಳ ಈತನ ಮನೆ ತುಂಬಾ ಸೊಗಸಾಗಿದೆ. ಅದರ ಮೂರನೆಯ ಮಹಡಿಯ ವಿಶಾಲವಾದ ಕೋಣೆ ಮತ್ತು ಶಯನಾಗಾರಕ್ಕೆ ಒಂದು ರಾತ್ರಿಯ ಮಟ್ಟಿಗೆ ನಾನು ಚಕ್ರವರ್ತಿಯಾದೆ! ಅಲ್‌ ಬೋನ ಅರಮನೆಯ ಹಿಂಬದಿಯಲ್ಲಿ ಅರುವತ್ತೆಕರೆ ಖಾಲಿ ಸ್ಥಳವಿದೆ. ಎದುರಲ್ಲಿ ಸುಂದರವಾದ ಉದ್ಯಾನವನ. ‘ನನ್ನ ವೃತ್ತಿಯಲ್ಲಿ ನನಗೆ ಸಾಕಷ್ಟು ವರಮಾನವಿದೆ. ಹಾಗಾಗಿ ಕೃಷಿಯ ಉಸಾಬರಿಯೇ ಬೇಡವೆಂದು ಭೂಮಿಯನ್ನು ಹಾಗೆಯೇ ಬಿಟ್ಟಿದ್ದೇನೆ. ಹಾಗಂತ ಹಿರಿಯರಿಂದ ಬಂದ ಈ ಭೂಮಿಯನ್ನು ಎಂದಿಗೂ ಮಾರಾಟ ಮಾಡುವುದಿಲ್ಲ’ ಎಂದ. ಭಾರತದಲ್ಲಿ ಹೆಚ್ಚಿನವರು ಆಲ್‌ಬೋನ ಈ ತತ್ವಕ್ಕೆ ಬದ್ಧರಾದವರು. ಆಲ್‌ಬೋನಿಗೆ ಹಾಗಂತ ಹೇಳಿದಾಗ ಆತ ನಕ್ಕ. ಅವನ ಮೂವರು ಮಕ್ಕಳು ಭಾರತದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ನಾನು ಬೆವರೊರೆಸಿಕೊಳ್ಳಬೇಕಾಯಿತು. ಮರುದಿನ ನಾನು ಅವನ ಮನೆಯಿಂದ ಹೊರಟಾಗ ಆಲ್‌ಬೋ ನನಗೆ ಅಮೂಲ್ಯ ಉಡುಗೊರೆಯೊಂದನ್ನು ನೀಡಿದ. ಅದು ಆತನ ಮುತ್ತಾತನಿಂದ ಅವನಿಗೆ ಬಂದ ಆ ಹಳೆಯ ಅರಮನೆಯ ಚಿತ್ರದ ಯಥಾ ನಕಲು ಪ್ರತಿ!

ಕನ್ನಡಿಯೊಳಗಿನ ಗಂಟು : ಕ್ಯಾಸ್ತ್ರದಲ್ಲಿ ನಾವು ಮೊದಲ ದಿನ ನೋಡಿದ್ದು ಕೊಪ್ರೆವೊರ್‌ (COPREVOR) ಕನ್ನಡಿ ಫ್ಯಾಕ್ಟರಿಯನ್ನು. ಅದರ ಯಜಮಾನನ ಹೆಸರು ಪಿಯರೆ ಮಾಸ್‌. ಆತನಿಗೆ ಎಂಬತ್ತು ದಾಟಿದೆ. ಅವನ ಕೋಟ್ಯಂತರ ಫ್ರಾಂಕ್‌ ಆಸ್ತಿಗೆ ಆತನ ಮಗ ಮತ್ತು ಮಗಳು ವಾರೀಸುದಾರರು. ಇಬ್ಬರಿಗೂ ನಲುವತ್ತು ದಾಟಿದೆ. ಇನ್ನೂ ಮದುವೆಯಾಗಿಲ್ಲ!

ಈ ಕನ್ನಡಿ ಫ್ಯಾಕ್ಟರಿಯಲ್ಲಿ ಎಂಟು ಬೃಹತ್‌ ಯಂತ್ರಗಳಿವೆ. ಮೊದಲನೆಯ ಯಂತ್ರ ಕನ್ನಡಿಯನ್ನು ಬೇಕಾದ ಗಾತ್ರಕ್ಕೆ ಕೊಯ್ಯುತ್ತದೆ. ಗಾಜು ಯಾವ ಸೈಜಿನಲ್ಲಿ ತುಂಡಾಗಬೇಕು ಎಂಬ ಮಾಹಿತಿಯನ್ನು ಕಂಪ್ಯುಟರಿಗೆ ಫೀಡ್‌ ಮಾಡಿ, ಸಂಜ್ಞೆ ನೀಡಿ, ಬೃಹತ್‌ ಟಿ.ವಿ. ಮಾನಿಟರನ್ನು ನೋಡುತ್ತಾ ಕೂತುಕೊಂಡರೆ ಯಂತ್ರದ ವಿವಿಧ ಅಂಗಗಳು ಗಾಜಿನ ಮೇಲೆ ಉದ್ದಕ್ಕೆ ಮತ್ತು ಅಡ್ಡಕ್ಕೆ ಗೆರೆ ಎಳೆದು ಆ ಬಳಿಕ ತುಂಡರಿಸುವ ಯಾಂತ್ರಿಕ ಮಾಯಾಜಾಲ ಕಾಣಿಸುತ್ತದೆ. ಗಾಜಿನ ಹರಿತವನ್ನು ಕಡಿಮೆ ಮಾಡುವ ಮತ್ತು ಗಾಜನ್ನು ಒಪ್ಪ ಓರಣವಾಗಿ ಜೋಡಿಸಿಡುವ ಕೆಲಸವನ್ನು ಕೂಡಾ ಯಂತ್ರಗಳೇ ಮಾಡಿಬಿಡುತ್ತವೆ. ಇದು ಸಾಧಾರಣ ಗಾಜಿನ ಕತೆಯಾದರೆ, ಪ್ರತಿಫಲನದ ಕನ್ನಡಿಗಳು ರೂಪುಗೊಳ್ಳುವ ವಿಧಾನವೇ ಬೇರೆ. ಯಂತ್ರವೊಂದು ಕನ್ನಡಿಯ ಸಂಸ್ಕರಣ ಕ್ರಿಯೆ ನಡೆಸುತ್ತದೆ. ಇನ್ನೊಂದು ಯಂತ್ರ ಕಂಪೆನಿಯ ಟ್ರೇಡ್‌ಮಾರ್ಕನ್ನು ಛಾಪಿಸುತ್ತದೆ. ಮೂರನೆಯ ಯಂತ್ರ ಕನ್ನಡಿಗೆ ಚೌಕಟ್ಟು ಸಿಕ್ಕಿಸುತ್ತದೆ. ನಾಲ್ಕನೆಯದು ಚೌಕಟ್ಟನ್ನು ಗಟ್ಟಿಗೊಳಿಸುತ್ತದೆ ಮತ್ತು ಐದನೆಯದು ಚೌಕಟ್ಟಿಗೆ ಬಣ್ಣ ನೀಡುತ್ತದೆ.

ಇವೆಲ್ಲಾ ಕಾರ್ಯಗಳನ್ನು ಯಂತ್ರಗಳೇ ನಡೆಸುತ್ತವಾದರೂ ಕಾರ್ಖಾನೆಯಲ್ಲಿ ಒಟ್ಟು 120 ಮಂದಿ ಸಿಬ್ಬಂದಿಗಳು ಮತ್ತು ಕೆಲಸಗಾರರಿದ್ದಾರೆ. ಒಬ್ಬ ಕೂಲಿಯಾಳಿಗೆ ಗಂಟೆಗೆ 60 ಫ್ರಾಂಕು (ರೂ. 420) ಕೂಲಿ ನೀಡಲಾಗುತ್ತದೆ. ಕನಿಷ್ಠ ಕೂಲಿ ತಿಂಗಳಿಗೆ 9000 ಫ್ರಾಂಕುಗಳು (ರೂ.72000) ಮತ್ತು ಗರಿಷ್ಠ ವೇತನ ತಿಂಗಳಿಗೆ 36000 ಫ್ರಾಂಕುಗಳು. (ರೂ. 252000) ವರ್ಷದಲ್ಲಿ ಒಂದು ಬಾರಿ ಒಂದು ತಿಂಗಳ ವೇತನವನ್ನು ಬೋನಸ್ಸ್‌ ರೂಪದಲ್ಲಿ ನೀಡಲಾಗುತ್ತದೆ. ಇಡೀ ವರ್ಷದ ಪ್ಲಾನಿಂಗ್‌ ಚಾರ್ಟು ಕಛೇರಿಯಲ್ಲಿ ತೂಗುತ್ತಿದ್ದು, ಅದಕ್ಕನುಗುಣವಾಗಿ ಚಟುವಟಿಕೆಗಳು ನಡೆಯುತ್ತವೆ. ಲಾಭದಲ್ಲಿ ನಡೆಯುತ್ತಿರುವ ಈ ಕಾರ್ಖಾನೆ ತುಲೋಸಿನಲ್ಲಿ ಒಂದು ಶಾಖೆಯನ್ನು ಹೊಂದಿದೆ.

ಆದರೆ ಕಂಪೆನಿ ಯಜಮಾನ ಪಿಯರೆ ಮಾಸ್‌ನ ಮುಖದಲ್ಲಿ ನೋವಿನ ಗೆರೆಗಳಿವೆ. ನಲುವತ್ತು ದಾಟಿದ ತನ್ನ ಮಕ್ಕಳು ಮದುವೆಯಾಗದಿರುವ ಚಿಂತೆ ಅವನನ್ನು ಕಾಡುತ್ತಲೇ ಇರುತ್ತದೆ. ಈಗ ಅಣ್ಣ ತಂಗಿ ಯಾರನ್ನಾದರೂ ದತ್ತು ತೆಗೆದುಕೊಳ್ಳುವ ಯೋಚನೆಯಲ್ಲಿದ್ದಾರೆ. ಭಾರತದ ಯಾವುದಾದರೂ ಅನಾಥಾಶ್ರಮವೊಂದಕ್ಕೆ ಈ ಉದ್ದೇಶಕ್ಕಾಗಿ ತಂಗಿ ಬರಲಿದ್ದಾಳೆ. ವೈವಿಧ್ಯಮಯ ಸಂಸ್ಕೃತಿಯ ಭಾರತ ಅವಳಿಗಿಷ್ಟವಂತೆ. ಒಂದಲ್ಲ ಒಂದು ದಿನ ಭಾರತದ ಅನಾಥನೊಬ್ಬ ಅವಳಿಂದಾಗಿ ಕೋಟ್ಯಧೀಶನಾಗಿ ಆ ಕನ್ನಡಿ ಫ್ಯಾಕ್ಟರಿಯ ಯಜಮಾನನಾಗಲಿದ್ದಾನೆ. ಅಥವಾ ಅದು ಕೇವಲ ಕನ್ನಡಿಯೊಳಗಣ ಗಂಟೆ?

ಬೆರ್ನಾರ್ಡಿನ್‌ ಎಂಬ ರಸಿಕ :
ಕ್ಯಾಸ್ತ್ರದಲ್ಲಿ ನಮ್ಮ ತಂಡದ ಯೋಗ ಕ್ಷೇಮ ನೋಡಿಕೊಂಡಿದ್ದ ಬೆರ್ನಾರ್ಡಿನ್‌ ಒಬ್ಬ ರಸ್ತೆ ಕಂಟ್ರಾಕ್ಟುದಾರನಾಗಿದ್ದ. ಈತನ ವ್ಯವಹಾರವೆಲ್ಲವೂ ಕೋಟಿಗಳಲ್ಲೇ. ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ನೂರಕ್ಕೂ ಮಿಕ್ಕ ವೈವಿಧ್ಯಮಯ ಸ್ವಯಂರ್ಚಾಲಿತ ಯಂತ್ರಗಳನ್ನು ಆತ ನನಗೆ ತೋರಿಸಿ ದಂಗುಬಡಿಸಿದ್ದ. ಅವನ ಕಾರ್ಯಾಲಯ ಯಾವ ಜಿಲ್ಲಾ ಕಮಿಶನರ ಆಫೀಸಿಗೂ ಕಡಿಮೆ ಇರಲಿಲ್ಲ. ಅಷ್ಟು ಸಿಬ್ಬಂದಿ! ಬೆರ್ನಾರ್ಡಿನ್‌ನ ಹೆಂಡತಿ ನಾಡೈಟ್‌ ಲೆಬನಾನಿನವಳು. ಅವನ ಮಗ ದೂರದಲ್ಲೆಲ್ಲೋ ಓದುತ್ತಿದ್ದಾನೆ. ಹದಿನೈದರ ಹರೆಯದ ಮಗಳು ಆ್ಯಡ್ರೇ ವಯಸ್ಸಿಗೆ ಮೀರಿದ ಬೆಳವಣಿಗೆಯಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದಳು. ಆದರೆ ನಡವಳಿಕೆಯಲ್ಲಿ ಅವಳದ್ದು ಎಳೆಯ ಮಕ್ಕಳ ಮುಗ್ಧತನ!

ಕ್ಯಾಸ್ತ್ರದಲ್ಲಿ ನಾವು ಕಳೆದದ್ದು ಒಂದೇ ರಾತ್ರೆ. ರಾತ್ರಿಯ ಊಟವನ್ನು ನಮಗೆ ಹೋಟೆಲ್‌ ಲಾಸಿಟನ್‌ನಲ್ಲಿ ಏರ್ಪಡಿಸಲಾಗಿತ್ತು. ಅಲ್ಲಿನ ಬೃಹತ್ತಾದ ಅಕ್ವೇರಿಯಂ ನನ್ನ ಗಮನ ಸೆಳೆಯಿತು. ಅದರಲ್ಲಿ ಮೂರು ಬೃಹತ್‌ ಲಾಬ್‌ಸ್ಟರ್‌ಗಳಿದ್ದವು. ಲಾಬ್‌ಸ್ಟರ್‌ಗಳು ಏಡಿಜಾತಿಯ ಸಮುದ್ರಜೀವಿಗಳು. ಏಡಿಗಳ ಹಾಗೆ ಅವುಗಳಿಗೆ ಕೊಂಬ ಕಾಲುಗಳಿವೆ. ಅಲ್ಲಿಗೇ ಹೋಲಿಕೆ ನಿಂತುಬಿಡುತ್ತದೆ. ಉಳಿದಂತೆ ಲಾಬ್‌ಸ್ಟರ್‌ಗಳು ಕಪ್ಪು ಚೇಳಿನ ಹಾಗೆ ಕಾಣಿಸುತ್ತವೆ. ಎದುರುಗಡೆ ಹಾಗೇ ದೊಡ್ಡ  ಚಿಕ್ಕ ಕಾಲುಗಳು. ಚೇಳಿನ ಹಾಗೆ ಭಯಾನಕವಾದ ಆಕೃತಿ. ಲಾಬ್‌ಸ್ಟರ್‌ಗಳು ಒಂದನ್ನೊಂದು ಎದುರಿಸಿ ಜಗಳಾಡಬಾರದಲ್ಲಾ ? ಅದಕ್ಕಾಗಿ ಅವುಗಳ ಕೊಂಬಕಾಲುಗಳಿಗೆ ಇಲಾಸ್ಟಿಕ್‌ ಹಾಕಿ ಅವನ್ನು ಉಪಯೋಗವಿಲ್ಲದ ಹಾಗೆ ಮಾಡಿಬಿಟ್ಟಿದ್ದಾರೆ. ‘ಈ ಲಾಬ್‌ಸ್ಟರ್‌ಗಳು ಯಾವುದೇ ಕ್ಷಣದಲ್ಲಿ ಯಾರದಾದರೂ ಹೊಟ್ಟೆ ಸೇರಬಹುದು. ಇಲ್ಲಿಗೆ ಬಂದ ಗಿರಾಕಿ ಇವನ್ನು ಬಯಸಿದರೆ ತಕ್ಷಣ ಅಕ್ವೇರಿಯಂನಿಂದ ತೆಗೆದು ಬೇಯಿಸಿಬಿಡುತ್ತಾರೆ. ಮತ್ತೆ ಹೊಸ ಲಾಬ್‌ಸ್ಟರ್‌ ಅಕ್ವೇರಿಯಂ ಸೇರಿಕೊಳ್ಳುತ್ತದೆ’ ಎಂದು ಬೆರ್ನಾರ್ಡಿನ್‌ ಹೇಳಿದ.

ರಾತ್ರೆ ಊಟ ಸಾಗುತ್ತಿದ್ದಾಗ ಬೆರ್ನಾರ್ಡಿನ್‌ ಒಳ್ಳೆಯ ಲಹರಿಯಲ್ಲಿದ್ದ. ಪರಮಾತ್ಮನ ಸೇವನೆ ಸ್ವಲ್ಪ ಜಾಸ್ತಿಯಾಗಿ ಅವನು ಮೈಮರೆತು ಮಾತನಾಡತೊಡಗಿದ. ಊಟದ ನಡುವೆ ಭಾರತದಲ್ಲಿ ಗಂಡು ಹೆಣ್ಣಿನ ಸಂಬಂಧ ಹೇಗಿರುತ್ತದೆಂಬ ಪ್ರಶ್ನೆಯನ್ನು ಅದ್ಯಾರೋ ಕೇಳಿದರು. ಇಂತಹ ಪ್ರಶ್ನೆಗಳಿಗೆ ಹೆಚ್ಚಾಗಿ ಉತ್ತರಿಸುತ್ತಿದ್ದುದು ಸಮಾಜಶಾಸ್ತ್ರಜ್ಞೆಯಾದ ಅನಿತಾ. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ವಿವಾಹ ಪೂರ್ವ ಲೈಂಗಿಕ ಸಂಬಂಧ ನಿಷಿದ್ಧ ಎಂದು ಅನಿತಾ ಹೇಳುವಾಗ ಬೆರ್ನಾರ್ಡಿನ್‌ ಜೋರಾಗಿ ನಕ್ಕ.’ಫ್ರಾನ್ಸಿನಲ್ಲಿ ಮಾತ್ರ ಗಂಡಸರಿಗೆ ಒಂದೇ ಹೆಣ್ಣು. ಹೆಂಗಸರಿಗೆ ಒಂದೊಂದು ರಾತ್ರೆಗೆ ಒಂದೊಂದು ಗಂಡು’ ಎಂದುಬಿಟ್ಟ!

ಆ ಭೋಜನ ಕೂಟದಲ್ಲಿ ಸಾಕಷ್ಟು ಹೆಂಗಸರೂ ಪಾಲ್ಗೊಂಡಿದ್ದರು. ಬೆರ್ನಾರ್ಡಿನ್‌ನ ಚೆಲುವಿನ ಮಡದಿ ನಾಡೈಟ್‌ ಕೂಡೂ ಅಲ್ಲಿದ್ದಳು. ಸ್ವಯಂ ತನ್ನ ಪತಿಯ ಬಾಯಿಯಿಂದ ಅಂಥ ಮಾತು ಬರುವಾಗ ಆಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಆದರೆ ಹೆಣ್ಣನ್ನು ನಿಕೃಷ್ಟವಾಗಿ ಕಾಣುವುದನ್ನು ಎಲೈನ್‌ಳಿಂದ ಸಹಿಸಲಾಗಲಿಲ್ಲ. ಅವಳು ತಕ್ಷಣ ಉರಿದೆದ್ದು ‘ನೀನು ಹಾಗೆ ಹೇಳುವುದು ತಪ್ಪು. ನೀನು ಹೇಳಿದ್ದು ಸರಿಯೋ ತಪ್ಪೋಎಂದು ನಿನ್ನ ಹೆಂಡತಿ ಹೇಳಲಿ’ ಎಂದಳು. ನಾಡೈೕಟ್‌ ಆಗಲೂ ಮಾತಾಡಲಿಲ್ಲ. ಎಲೈನ್‌ ತಾನು ಮೊದಲು ಹೇಳಿದ್ದನ್ನು ಮತ್ತೆರಡು ಬಾರಿ ಉಚ್ಚರಿಸಿದಳು. ಆಗ ನಾಡೈಟ್‌ ‘ನನಗೆ ಗೊತ್ತಿಲ್ಲ’ ಎಂದುಬಿಟ್ಟಳು. ಊಟ ಗಂಭೀರವಾಗಿ ಸಾಗಿತು.

ಮರುದಿನ ಮಧ್ಯಾಹ್ನ ಹೆಬ್ಬಾರರು ಮಹಿಳಾ ಮಣಿಯರೊಡನೆ ಕ್ಯಾಸ್ತ್ರ ಸುತ್ತಲು ಹೊರಟರು. ನನಗೆ ಮತ್ತು ಗುರುವಿಗೆ ಬೆರ್ನಾರ್ಡಿನ್‌ನ ಈಜು ಕೊಳದಲ್ಲಿ ಈಜುವ ಆಸೆಯಾಗಿ ಮೊದಲೇ ಯೋಜನೆ ರೂಪಿಸಿಕೊಂಡಿದ್ದೆವು. ಬೆರ್ನಾರ್ಡಿನ್‌ ಕೊಳದ ಕವರ್‌ ತೆಗೆದು ಉಷ್ಣತಾ ಮಾಪಕ ತಂದು ನೀರಿಗೆ ಮುಳುಗಿಸಿ ‘ಓ! 16 ಡಿಗ್ರಿ ಸೆಲ್ಸಿಯಸ್‌. ಇದರಲ್ಲಿ ಈಜಿದರೆ ಜ್ವರ ಬರುತ್ತೆ. ಅರ್ಧ ಗಂಟೆ ನಿಲ್ಲಿ’ ಅಂದ. ಆ ಬಳಿಕ ಸೋಲಾರ್‌ ಹೀಟರ್‌ನಿಂದ ಕೊಳದ ನೀರನ್ನು ಬಿಸಿ ಮಾಡತೊಡಗಿದ. ನೀರಿನ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ ಆದಾಗ ನಮಗೆ ಈಜಲು ಅನುಮತಿ ಕೊಟ್ಟು ತಾನೂ ನೀರಿಗೆ ಹಾರಿದ.

ಹಾಗೆ ಈಜುವಾಗ ಅವನಲ್ಲಿ ಹೇಳಿದೆ. ‘ನೀನು ನಿನ್ನೆ ಹಾಗೆ ಹೇಳಿ ನಿನ್ನ ದೇಶದ ಹೆಂಗಸರ ಮರ್ಯಾದೆ ತೆಗೆದುಬಿಟ್ಟೆ.’ ಅವನೀಗ ನಶೆಯಲ್ಲಿರಲಿಲ್ಲ. ನಗುತ್ತಾ ಅವನೆಂದ. ‘ನಾನು ಹೇಳಿದ್ದೇನೆಂಬುದು ನನಗೆ ಈಗಲೂ ಚೆನ್ನಾಗಿ ನೆನಪಿದೆ. ಫ್ರಾನ್ಸಿನಲ್ಲಿ ಗಂಡಸರಿಗೆ ಒಂದೇ ಹೆಣ್ಣು. ಹೆಂಗಸರಿಗೆ ಮಾತ್ರ ಒಂದೊಂದು ರಾತ್ರೆಗೆ ಒಂದೊಂದು ಗಂಡು ಎಂದಲ್ಲವೆ? ಕೊನೆಯ ಮಾತನ್ನು ಚೆನ್ನಾಗಿ ಅರ್ಥ ಮಾಡಿಕೋ. ಹೆಂಗಸರಿಗೆ ಒಂದೊಂದು ರಾತ್ರೆಗೆ ಒಂದೊಂದು ಗಂಡು ಆದರೆ ಗಂಡಸರಿಗೆ ಒಂದೊಂದು ರಾತ್ರೆಗೆ ಒಂದೊಂದು ಹೆಣ್ಣು ಎಂದೂ ಆಗುತ್ತದಲ್ಲವೆ? ನಾನು ಗಂಡು ಮತ್ತು ಹೆಣ್ಣಿಗೆ ಸಮಾನ ಮರ್ಯಾದೆ ನೀಡಿದ್ದೇನೆ. ಯೋಚಿಸು. ನನ್ನ ಮಾತನ್ನು ನನ್ನ ದೇಶದವರು ಯಾರಾದರೂ ವಿರೋಧಿಸಿದರಾ? ನಾನು ಸುಳ್ಳೇ ಹೇಳಿರುತ್ತಿದ್ದರೆ ನನ್ನ ಪರಿಸ್ಥತಿ ಏನಾಗುತ್ತಿತ್ತು? ನಿನ್ನ ದೇಶದ ಮಟ್ಟಿಗೆ ನಿನ್ನೆ ಅನಿತಾ ಹೇಳಿದ್ದೇ ನಿಜವಿರಬಹುದು. ನಾವು ಮಾತ್ರ ಇರುವುದನ್ನು ಇರುವ ಹಾಗೆ ಹೇಳುವವರು. ಮುಚ್ಚು ಮರೆಯೆಂಬುದೇ ನಮ್ಮಲ್ಲಿಲ್ಲ. ನಮಗೆ ಬೇಕಾದ ಹಾಗೆ ಬದುಕುವುದನ್ನೇ ನಾವು ಸ್ವಾತಂತ್ರ್ಯ ಎಂದು ತಿಳಿದುಕೊಂಡಿದ್ದೇವೆ. ಆಷಾಢಭೂತಿ ಬದುಕನ್ನಲ್ಲ.’

ಬೆರ್ನಾರ್ಡಿನ್‌ ತುಂಬಾ ಅರ್ಥವತ್ತಾಗಿ ಮಾತಾಡಿದ್ದ!

ಎನ್‌ಕಲ್ಕದಲ್ಲಿ ಉಗಾದಿ

ಎಪ್ರಿಲ್‌ ಹನ್ನೆರಡರಂದು ಸಂಜೆ ಐದಕ್ಕೆ ಬೆರ್ನಾರ್ಡಿನ್‌ ಮತ್ತು ಕೊಲೆಟ್‌ ಮಾಸ್‌ ಎಂಬ ಮಹಿಳೆ ನಮ್ಮನ್ನು ಎನ್‌ಕಲ್ಕದ ಕ್ತೈಸ್ತ ಸನ್ಯಾಸಿ ಆಶ್ರಮಕ್ಕೆ ತಂದುಬಿಟ್ಟರು. ಅಂದು ಶನಿವಾರ. ವಾರಾಂತ್ಯಗಳಲ್ಲಿ ಫ್ರೆಂಚರು ಮಜವಾಗಿರಲು ಬಯಸುತ್ತಾರೆ. ಹಾಗಾಗಿ ಅತಿಥಿಗಳನ್ನು ಶನಿವಾರ ಮತ್ತು ಭಾನುವಾರ ಮನೆಗಳಿಗೆ ಅವರು ಆಹ್ವಾನಿಸುವುದಿಲ್ಲ. ನಮಗೂ ಹಾಯಾಗಿ ಕಾಲಕಳೆಯಲು ಸ್ಥಳವೊಂದು ಬೇಕಿತ್ತು. ಆಶ್ರಮಕ್ಕಿಂತ ಪ್ರಶಾಂತ ಸ್ಥಳ ಬೇರೆಲ್ಲಿ ದೊರಕಲು ಸಾಧ್ಯ? ಶನಿವಾರ ಆಶ್ರಮಕ್ಕೆ ಬಂದಾಗ ಅಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತು ಪ್ರಶಾಂತತೆ ನಮಗೆ ತುಂಬಾ ಇಷ್ಟವಾಯಿತು.

ಎನ್‌ಕಲ್ಕ ಕ್ಯಾಸ್ತ್ರದಿಂದ ಇಪ್ಪತ್ತು ಕಿ.ಮೀ. ದೂರದಲ್ಲಿರುವ ಒಂದು ಪುಟ್ಟ ಹಳ್ಳಿ. ಎನ್‌ಕಲ್ಕ ಆಶ್ರಮದಲ್ಲಿ ನಮ್ಮನ್ನು ಸ್ವಾಗತಿಸಿದ್ದು ಬ್ರದರ್‌ ಲಾರೆನ್ಸ್‌. ತೆಳ್ಳನೆಯ, ಬೆಳ್ಳನೆಯ, ಆರಡಿಗೂ ಮಿಕ್ಕ ಎತ್ತರದ 65 ವರ್ಷದ ಮೆಕ್ಸಿಕೋ ದೇಶದ ಈತ ತನ್ನನ್ನು ಬ್ರದರ್‌ ಎಂದು ಪರಿಚಯಿಸಿಕೊಂಡಾಗ ನಮಗೆ ಎಲ್ಲಿಲ್ಲದ ಅಚ್ಚರಿ. ಭಾರತದ ‘ಬ್ರದರ್‌’ಗಳು ತುಂಬಾ ಯುವಕರಾಗಿರುತ್ತಾರೆ. ಅದು ಫಾದರ್‌ ಆಗುವ ಪೂರ್ವದ ಒಂದು ಹಂತ ಮಾತ್ರ. ಎಂ.ಬಿ.ಬಿ.ಯಸ್ಸ್‌ ಆದವರು ಡಾಕ್ಟರ್‌ ಆಗುವ ಮುನ್ನ ಹೌಸ್‌ ಸರ್ಜನ್‌ಶಿಪ್ಪ್‌ ಮಾಡುವಂತೆ. ಬ್ರದರ್‌ ಅವಧಿ ಮುಗಿದ ಕೂಡಲೇ ಅವರೆಲ್ಲಾ ಫಾದರ್‌ಗಳಾಗಿ ಬಿಡುತ್ತಾರೆ. ಆದರೆ ಎನ್‌ಕಲ್ಕದಲ್ಲಿ ಹಾಗಿಲ್ಲ. ಬ್ರದರ್‌ಗಳಾದವರು ಫಾದರ್‌ ಆಗಲೇಬೇಕೆಂದೇನಿಲ್ಲ. ಬ್ರದರ್‌ಗಳಾದವರು ಅದೇ ಹಂತದಲ್ಲಿ ಜೀವನಯಾತ್ರೆ ಮುಗಿಸಿದ ಎಷ್ಟೋ ಉದಾಹರಣೆಗಳಿವೆ. 65 ದಾಟಿದರೂ ಪಾಪ ಲಾರೆನ್ಸ್‌ ಇನ್ನೂ ಫಾದರ್‌ ಆಗಿಲ್ಲ. ಫಾದರ್‌ ಆಗಲು ವಿಶೇಷ ಕಲಿಕೆಯಿದೆ. ಫಾದರ್‌ಗಳ ತಂಡವೊಂದು ಬ್ರದರ್‌ಗಳನ್ನು ಪರೀಕೆಗೊಳಪಡಿಸುತ್ತದೆ. ಅವನ್ನೆಲ್ಲಾ ಯಶಸ್ವಿಯಾಗಿ ಮುಗಿಸುವ ಮೊದಲೇ ಆಯುಸ್ಸು ಮುಗಿದುಹೋಗಬಹುದು. ಎನ್‌ಕಲ್ಕದ ದೇವಾಲಯದಲ್ಲಿ ಬ್ರದರ್‌ಗಳು ಪೂಜೆ ಮಾಡುವಂತೆಯೂ ಇಲ್ಲ. ಅದೇನಿದ್ದರೂ ಫಾದರ್‌ಗಳ ವಿಶೇಷ ಹಕ್ಕು. ಬ್ರದರ್‌ಗಳು ಕೇವಲ ಗಿಂಡಿಮಾಣಿಗಳ ಹಾಗೆ!

ಇಷ್ಟು ವಯಸ್ಸಾದ ಬ್ರದರ್‌ ಜತೆ ಅದೆಷ್ಟು ಸೀರಿಯಸ್ಸಾಗಿ ನಾವು ವರ್ತಿಸಬೇಕೋ ಎಂಬ ನಮ್ಮ ಆತಂಕವನ್ನು ಲಾರೆನ್ಸರ ನಡವಳಿಕೆ ಸಂಪೂರ್ಣವಾಗಿ ದೂರಮಾಡಿಬಿಟ್ಟಿತು. ನಗೆಮೊಗದ ಲಾರೆನ್ಸ್‌ ನಮ್ಮನ್ನೆಲ್ಲಾ ಅಪ್ಪಿ ಸ್ವಾಗತಿಸಿದರು. ಮಹಿಳಾ ಮಣಿಯರಿಗೆ ಸಾಂಪ್ರದಾಯಿಕ ಫ್ರೆಂಚ್‌ಕಿಸ್ಸ್‌ ಕೂಡಾ ದೊರೆಯಿತು. ಎನ್‌ಕಲ್ಕದ ಇತಿಹಾಸ ಮತ್ತು ವರ್ತಮಾನಗಳನ್ನು ನಮಗೆ ತಿಳಿಸಿದ ಲಾರೆನ್ಸ್‌ ನಮ್ಮೊಡನೆ ಆತ್ಮೀಯ ಸ್ನೇಹಿತರಂತೆ ನಡಕೊಂಡರು. ನಾವಲ್ಲಿದ್ದ ಎರಡೂ ದಿನಗಳಲ್ಲಿ ನಮ್ಮ ಕಾರ್ಯಕ್ಷ್ರಮಗಳನ್ನು ನಿಗದಿಗೊಳಿಸಿದ್ದು ಮತ್ತು ಅವು ಸರಿಯಾದ ಸಮಯಕ್ಷ್ಕೆ ನಡೆಯುವಂತೆ ನೋಡಿಕೊಳ್ಳುತ್ತಿದ್ದುದು ಅವರೇ. ಒಬ್ಬ ವಿಜ್ಞಾನಿಯಂತೆ ಕಾಣುತ್ತಿದ್ದ ಬಿಳಿಗಡ್ಡದ ಲಾರೆನ್ಸ್‌ ತಮ್ಮ ಆತ್ಮೀಯ ನಡವಳಿಕೆಗಳಿಂದ ನಮ್ಮೆಲ್ಲರ ಮೆಚ್ಚುಗೆಗೆ ಪಾತ್ರರಾದರು.

ಎನ್‌ಕಲ್ಕದ ಪ್ರಧಾನ ಪಾದ್ರಿಯ ಹೆಸರು ಡೊಮಿನಿಕ್‌. ಸುಮಾರು ಐದೂಮುಕ್ಕಾಲು ಅಡಿ ಎತ್ತರದ ಡೊಮಿನಿಕ್‌ಗೆ 89 ವರ್ಷ. ಭಾನುವಾರ ಮಧ್ಯಾಹ್ನ ಡೊಮಿನಿಕ್‌ ನಮ್ಮೊಡನೆ ಒಂದು ಗಂಟೆ ಕಾಲ ಮಾತಾಡಿದರು. ಕ್ರೈಸ್ತರ ಆಶ್ರಮ ಪರಿಕಲ್ಪನೆಗೆ ಬುದ್ಧನ ಸಂಘಗಳು ಮೂಲ ಪ್ರೇರಣೆ; ತಾನು ರಾಮಕೃಷ್ಣಾಶ್ರಮದಿಂದ ಪ್ರಭಾವಿತನಾದವನು ಎಂದು ಡೊಮಿನಿಕ್‌ ಭಾರತದ ಆಧ್ಯಾತ್ಮಿಕ ವೈವಿಧ್ಯಕ್ಷ್ಕೆ ಗೌರವ ಸೂಚಿಸಿದರು. ಮಾತುಕತೆಯ ಬಳಿಕ ಡೊಮಿನಿಕ್‌ರೊಡನೆ ಊಟ ಮಾಡುವ ಗೌರವ ಕೂಡಾ ನಮಗೆ ದೊರಕಿತು.

ಎನ್‌ಕಲ್ಕದ ಸನ್ಯಾಸಿಗಳು ಬೆನೆಡಿಕ್ಟ್‌ ಪಂಥಕ್ಕೆ ಸೇರಿದವರು. ಕ್ರಿ.ಶ. ಆರನೆಯ ಶತಮಾನದಲ್ಲಿ ಇಟೆಲಿಯಿಂದ ಫ್ರಾನ್ಸಿಗೆ ಬಂದ ಬೆನೆಡಿಕ್ಟ್‌ ಎಂಬ ಸಂತ ಈ ಪಂಥದ ಮೂಲ ಪುರುಷ. ಆತ ಕ್ರೈಸ್ತ ಸನ್ಯಾಸಿ ಮಠವೊಂದನ್ನು ನಿರ್ಮಿಸಿ, ಸನ್ಯಾಸಿಗಳಿಗಾಗಿ ಧರ್ಮಶಾಸ್ತ್ರವೊಂದನ್ನು ರಚಿಸಿದ. ಭಾರತದ ಮನುವಿನ ಹಾಗೆ. ಬೆನೆಡಿಕ್ಟನ ಧರ್ಮಶಾಸ್ತ್ರದ ಪ್ರಕಾರ ಆಶ್ರಮವಾಸಿ ಸನ್ಯಾಸಿಗಳು ಸಾರ್ವಜನಿಕ ಸಂಪರ್ಕ ಇರಿಸಿಕೊಳ್ಳುವಂತಿಲ್ಲ. ಸನ್ಯಾಸಿಗಳ ದೇವಾಲಯಗಳಲ್ಲಿ ಸಾರ್ವಜನಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಸನ್ಯಾಸಿಗಳು ತಮ್ಮ ಆಹಾರವನ್ನು ತಾವೇ ಬೆಳೆಯಬೇಕು. ಅದಕ್ಕಾಗಿ ಆಶ್ರಮ ಸಾಕಷ್ಟು ಭೂಮಿಯನ್ನು ಹೊಂದಿರಬೇಕು. ಆಶ್ರಮದ ಸಕಲ ಕೆಲಸಗಳನ್ನೂ ಸನ್ಯಾಸಿಗಳೇ ಮಾಡಬೇಕು. ಕಸ ಗುಡಿಸುವುದು, ನೆಲ ಸಾರಿಸುವುದು, ಅಡುಗೆ ಮಾಡುವುದು, ನೆಲ ಬೆಳಗುವುದು  ಎಲ್ಲವೂ. ಆಶ್ರಮವು ಸಂಪೂರ್ಣ ಸ್ವಾವಲಂಬೀ ಘಟಕವಾಗಿರಬೇಕು. ಸಾಮೂಹಿಕ ಜೀವನಕ್ಕೆ ಸನ್ಯಾಸಿಗಳು ಬದ್ಧರಾಗಿರಬೇಕು. ಇದು ಧರ್ಮಶಾಸ್ತ್ರಲ್ಲಿರುವ ನಿಯಮ.

ಫ್ರಾನ್ಸಿನಲ್ಲಿ ವಿವಿಧ ಪಂಥಗಳಿಗೆ ಸೇರಿದ ಹಲವಾರು ಸನ್ಯಾಸಿ ಆಶ್ರಮಗಳಿವೆ. ಆದರೆ ನೂರು ವರ್ಷಗಳ ಧರ್ಮಯುದ್ಧದ ಕಾಲದಲ್ಲಿ ಕ್ರೈಸ್ತ ಸನ್ಯಾಸಿಗಳನ್ನು ಫ್ರಾನ್ಸಿನಿಂದ ಗಡಿಪಾರು ಮಾಡಲಾಯಿತು. ಏಕೆಂದರೆ ಇವರಲ್ಲಿ ಬೇರೆ ಬೇರೆ ದೇಶಗಳಿಗೆ ಸೇರಿದ ವಿಭಿನ್ನ ಪಂಥದವರಿದ್ದರು. ಆಶ್ರಮಗಳು ಧಾರ್ಮಿಕ ಶಿಕ್ಷಣಕ್ಕೆ ಮಾತ್ರ ಮಹತ್ವ ನೀಡಿದ್ದವು. ಧರ್ಮನಿರಪೇಕ್ಷ ಶಿಕ್ಷಣ ನೀಡಿಕೆಗೆ ಈ ಸನ್ಯಾಸಿಗಳು ಒಂದು ತೊಡಕಾಗಿ ಕಂಡುದುದರಿಂದ ಅವರನ್ನು ಗಡೀಪಾರು ಮಾಡಲಾಯಿತು. ಆದರೆ ಈ ಗಡೀಪಾರು ಶಿಕೆ ಅಷ್ಟೊಂದು ಉಗ್ರವಾಗಿ ಜಾರಿಗೊಳ್ಳದ ಕಾರಣ ಅನೇಕ ಸನ್ಯಾಸಿಗಳು ಫ್ರಾನ್ಸಿನಲ್ಲೇ ಉಳಿದರು. ಫ್ರಾನ್ಸಿನ ಮಹಾಕ್ರಾಂತಿಯ ಸಂದರ್ಭದಲ್ಲಿ ಕ್ರೈಸ್ತ ಸನ್ಯಾಸಿಗಳನ್ನು ಹುಚ್ಚುನಾಯಿಗಳಂತೆ ಬೇಟೆಯಾಡಲಾಯಿತು. ಕ್ರಾಂತಿಯ ಕಾವು ನಿಧಾನವಾಗಿ ಇಳಿದ ಬಳಿಕ ಮತ್ತೆ ಆಶ್ರಮಗಳು ಉಸಿರಾಡತೊಡಗಿದವು.

ಎನ್‌ಕಲ್ಕದ ಆಶ್ರಮ ಬರಿಯ ಫ್ರಾನ್ಸಿನಲ್ಲಿ ಮಾತ್ರವಲ್ಲದೆ ಇಡೀ ಯುರೋಪಿನಲ್ಲೆಲ್ಲಾ ಪ್ರಖ್ಯಾತಿ ಗಳಿಸಿದೆ. ಎನ್‌ಕಲ್ಕ ಎಂಬ ಕುಟುಂಬವು ದಾನವಾಗಿ ನೀಡಿದ ನೂರು ಹೆಕ್ಟೇರು ಭೂಪ್ರದೇಶ ಆಶ್ರಮದ ಆಸ್ತಿಯಾಗಿದೆ. ನೂರು ವರ್ಷಗಳ ಹಿಂದೆ ನಿರ್ಮಿತವಾದ ಎನ್‌ಕಲ್ಕ ಆಶ್ರಮದಲ್ಲಿ 70 ಸನ್ಯಾಸಿಗಳಿದ್ದಾರೆ. ಸನ್ಯಾಸಿಗಳ ಮುಖ್ಯಸ್ಥನನ್ನು ಅಬೆಪಟ್‌ ಎಂದು ಕರೆಯಲಾಗುತ್ತದೆ. ಎಲ್ಲಾ ಸನ್ಯಾಸಿಗಳು ಸೇರಿ ತಮ್ಮ ಮುಖ್ಯಸ್ಥನನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಆರಿಸುತ್ತಾರೆ. ಹಾಗೆ ಆರಿಸಲ್ಪಟ್ಟವನು ಅವನ ಜೀವಿತದ ಅಂತ್ಯದವರೆಗೂ ಅಬೆಪಟ್‌ ಆಗಿರುತ್ತಾನೆ. ಎನ್‌ಕಲ್ಕದ ಈ ಆಶ್ರಮಕ್ಕೆ ಯಾವ್ಯಾವುದೋ ದೇಶಗಳಿಂದ ಜನರು ಬರುತ್ತಿರುತ್ತಾರೆ. ಅತಿಥಿಗಳಿಗಾಗಿ ಎರಡು ಒಳ್ಳೆಯ ಅತಿಥಿಗೃಹಗಳನ್ನು ನಿರ್ಮಿಸಲಾಗಿದೆ. ಇವನ್ನು ಅನುರಕ್ಷಿಸುವುದು ಕೂಡಾ ಸನ್ಯಾಸಿಗಳೇ. ಜನರಿಂದ ದೂರ ಇರಬೇಕಾದ ಈ ಸನ್ಯಾಸಿಗಳು ಇಲ್ಲಿಗೆ ಬರುವ ಜನರ ಸವಲತ್ತನ್ನು ಕೂಡಾ ನೋಡಿಕೊಳ್ಳಬೇಕಾಗಿದೆ. ‘ನಮ್ಮ ಮೂಲ ನಿಯಮದ ಪ್ರಕಾರ ನಾವು ಜನರಿಂದ ದೂರವಿರಬೇಕು ನಿಜ. ಆದರೆ ನೋವುಣ್ಣುವವರಿಗೆ ಸಾಂತ್ವನ ನೀಡುವುದಕ್ಕಿಂತ ಹೆಚ್ಚಿನ ದೇವರ ಸೇವೆ ಯಾವುದಿದೆ?’ ಎಂದು ಡೊಮಿನಿಕ್‌ ನಮ್ಮನ್ನೇ ಪ್ರಶ್ನಿಸಿದರು. ಅವರನ್ನು ನೋಡುತ್ತಿರುವಂತೆ ನನಗೆ ಅಳಿಕೆಯ ನೆನಪಾಯಿತು.

ಎಸ್‌.ಎಸ್‌.ಎಲ್‌.ಸಿ. ಮುಗಿಸಿದ ಬಳಿಕ ತೀವ್ರ ಬಡತನದಿಂದಾಗಿ ನನಗೆ ವಿದ್ಯಾಭ್ಯಾಸ ಮುಂದುವರಿಸಲಾಗಿರಲಿಲ್ಲ. ಆಗ ನನ್ನ ದೊಡ್ಡಮಾವ ಗೋಪಾಲಕೃಷ್ಣ ಮದ್ಲೆಗಾರ್‌, ನನ್ನನ್ನು ನಮ್ಮ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆಯ ಲೋಕಸೇವಾ ವೃಂದ ಎಂಬ ಸಂಸ್ಥೆಗೆ ಕರೆದೊಯ್ದರು. ಸಂಸ್ಥೆಯ ಸಂಸ್ಥಾಪಕ ಮಡಿಯಾಲ ನಾರಾಯಣ ಭಟ್ಟರು ವಿರಾಟ್‌ ಹಿಂದೂ ಮಿಶನರಿ ಸಂಸ್ಥೆಯೊಂದರ ಕನಸು ಕಾಣುತ್ತಿದ್ದು ಅದಕ್ಕಾಗಿ ಪ್ರೇಮಕುಟೀರ ಎಂಬ ಆಶ್ರಮವೊಂದನ್ನು ಸ್ಥಾಪಿಸಿದ್ದರು. ನಲುವತ್ತು ಮಂದಿ ಹಿಂದೂ ಮಿಶನರಿಗಳಿದ್ದ ಆ ಆಶ್ರಮದಲ್ಲಿ ಸಹಾಯಕ ಅಡುಗೆ ಭಟ್ಟನಾಗಿ ನಾನು ವೃತ್ತಿಜೀವನಕ್ಕೆ ಕಾಲಿಟ್ಟವ. ಎನ್‌ಕಲ್ಕದ ಆಶ್ರಮದಲ್ಲಿ ನನಗೆ ಅಳಿಕೆಯದ್ದೇ ನೆನಪಾಗುತ್ತಿತ್ತು. ಅಳಿಕೆಯಲ್ಲಿ ಆಶ್ರಮದ ಸಮೀಪದಲ್ಲಿ ವಿದ್ಯಾಸಂಸ್ಥೆಗಳಿದ್ದವು. ಇಲ್ಲಿರುವುದು ಮೌನ, ಗಾಢಮೌನ. ಮೌನದಲ್ಲೇ ಆತ್ಮಾನುಸಂಧಾನ ಮಾಡಿಕೊಳ್ಳಲು ಎನ್‌ಕಲ್ಕ ಹೇಳಿ ಮಾಡಿಸಿದ ಸ್ಥಳ. ಇಲ್ಲಿ ಗಟ್ಟಿಮಾತು ನಿಷಿದ್ಧ. ಯಾವುದೋ ದೇಶದ, ಯಾವುದೋ ಪ್ರಾಂತ್ಯದ, ಯಾವುದೋ ವ್ಯಕ್ತಿಗಳು, ಭೌತಿಕತೆಯ ಹುಚ್ಚು ಪ್ರವಾಹದಲ್ಲಿ ತಮ್ಮನ್ನು ಕಳಕೊಂಡವರು, ಜೀವಿತದ ಅಂಚಿನಲ್ಲಿ ವೈರಾಗ್ಯ ಮೂಡಿದ ಧನಾಢ್ಯರು, ಕೈ, ಕಾಲು, ದೃಷ್ಟಿ ಸರಿ ಇಲ್ಲದವರು…. ಹೀಗೆ ಅದೆಷ್ಟು ವಿಧದ ಜನರು ಇಲ್ಲಿಗೆ ಬರುತ್ತಾರೆ! ‘ಇಲ್ಲಿಗೆ ಯಾಕೆ ಬಂದಿದ್ದೀರಿ?’ ಎಂದು ಕೇಳಿದರೆ ‘ಶಾಂತಿಗಾಗಿ, ಶಾಂತಿಗಾಗಿ ಮಾತ್ರ. ಓಹ್‌! ಜೀವನದಲ್ಲಿ ಶಾಂತಿ ಅನ್ನುವುದು ಅದೆಷ್ಟು ಅಮೂಲ್ಯವಾದುದು’ ಎಂದು ಇಂಗ್ಲೆಂಡಿನ ಕೋಟ್ಯಧೀಶೆ ವೃದ್ಧಿ ಮಾರ್ಗರೆಟ್‌ ಉತ್ತರಿಸಿದಳು.

ಮರುದಿನ ಎಪ್ರಿಲ್‌ 14. ಅಂದು ಸೌರಮಾನ ಉಗಾದಿ. ಶಿಶಿಲದ ನಮ್ಮ ಕೂಡುಮನೆಯಲ್ಲಿ ಸೌರಮಾನ ಯುಗಾದಿಯನ್ನು ‘ವಿಷುಕಣಿ’ ಎಂದು ಆಚರಿಸಲಾಗುತ್ತದೆ. ಅಂದು ಹೊಸ ಹೂ ಹಣ್ಣು ತರಕಾರಿಗಳನ್ನು ನಡುಮನೆಯಲ್ಲಿ ಜೋಡಿಸಿಟ್ಟು, ಅದಕ್ಕೆ ಪ್ರದಕ್ಷಿಣೆ ಬಂದು ಅಡ್ಡಬಿದ್ದು, ಆ ಬಳಿಕ ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದು ರೂಢಿ. ನನಗೆ ಕಾಲು ಹಿಡಿಯುವುದು ಮತ್ತು ಹಿಡಿಸಿಕೊಳ್ಳುವುದು  ಎರಡೂ ತೀರಾ ಕಿರಿಕಿರಿಯ ವಿಷಯಗಳು. ಹಾಗಾಗಿ ಉಗಾದಿ ತಪ್ಪಿಸಿ ಮನೆಗೆ ಹೋಗಿ ಏನಾದರೂ ಕಾರಣ ಹೇಳಿ ಬಚಾವಾಗುತ್ತಿದ್ದೆ. ಇದೇ ಕಾರಣಕ್ಕಾಗಿ ನಾನು ಧಾರ್ಮಿಕ ಧುರೀಣರುಗಳ ಭೇಟಿಯನ್ನು ಕೂಡಾ ತಪ್ಪಿಸಿಕೊಳ್ಳುತ್ತಿದ್ದೆ. ಧಾರ್ಮಿಕ ಧುರೀಣರುಗಳಿಗೆ ಸಮಾನತೆಯಲ್ಲಿ ವಿಶ್ವಾಸವಿರದ ಕಾರಣ, ಎಲ್ಲರೂ ತಮ್ಮ ಕಾಲಿಗೆ ಬೀಳಬೇಕೆಂದು ಅವರು ಬಯಸುತ್ತಾರೆ. ಅವರನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಆದುದರಿಂದ ಅಂತಹವರಿಂದ ದೂರವಿರುವುದರಲ್ಲೇ ಮನಶಾಂತಿ ಇರುತ್ತದೆ.

ಆದರೆ ಎನ್‌ಕಲ್ಕದಲ್ಲಿ ನನಗೆ ಶಿಶಿಲದಲ್ಲಿ ನಾವು ಆಚರಿಸುತ್ತಿದ್ದ ಉಗಾದಿ ನೆನಪಾಗಿ ಕಾಡಬೇಕೆ? ಇಲ್ಲೂ ಉಗಾದಿ ಆಚರಿಸಬೇಕು. ಆದರೆ ಹೇಗೆ? ನಮ್ಮ ತಂಡದಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಂಸಾಹಾರಿಗಳು ಮತ್ತು ಮಾಂಸ ತಿನ್ನದವರೆಂಬ ಎರಡು ಗುಂಪು ನಿರ್ಮಾಣವಾಗಿತ್ತು. ಮಾಂಸ ತಿನ್ನದ ಹೆಬ್ಬಾರರು ಮತ್ತು ನಾನು, ಮಾಂಸ ತಿನ್ನುವವರ ಗೇಲಿಗೆ ತುತ್ತಾಗಿದ್ದೆವು. ಈ ಉಗಾದಿಯನ್ನು ತಂಡದಲ್ಲಿ ಸಾಮರಸ್ಯ ಮೂಡಿಸಲು ಬಳಸಬೇಕು ಎಂದು ಯೋಚಿಸಿ ಎರಡು ಸುಂದರವಾದ ಗ್ರೀಟಿಂಗ್ಸ್‌ ಸಿದ್ಧಪಡಿಸಿದೆ. ತಮಿಳು ಮೂಲದ ಗುರುವಿನ ಮತ್ತು ಕೇರಳ ಮೂಲದ ಅನಿತಾಳ ಮನೆಯಲ್ಲಿ ಸೌರಉಗಾದಿ ಆಚರಣೆ ಇದೆಯೆಂದು ನಾನು ಖಚಿತಪಡಿಸಿಕೊಂಡಿದ್ದೆ. ಹೆಬ್ಬಾರರು ಚಾಂದ್ರಮಾನ ಉಗಾದಿ ಸಂಪ್ರದಾಯದವರು. ಎಲೈನಳಿಗೆ ಉಗಾದಿಯೆಂದರೆ ಇಮಾಂಸಾಬಿಯ ಗೋಕುಲಾಷ್ಟಮಿಯಂತೆ ಅ ಹಾಗಾಗಿ ಒಂದು ಗ್ರೀಟಿಂಗ್ಸ್‌ನಲ್ಲಿ ಹೆಬ್ಬಾರರ, ಇನ್ನೊಂದರಲ್ಲಿ ಎಲೈನಳ ಹೆಸರು ಬರೆದೆ. ಗುರು ಮತ್ತು ಅನಿತಾಳನ್ನು ಕರೆದು ಏನು ಮಾಡಬೇಕೆಂದು ವಿವರಿಸಿದೆ. ನಾವು ಮೂವರೂ ಒಟ್ಟಾಗಿ ಮೊದಲು ಹೆಬ್ಬಾರರಿಗೆ ಗ್ರೀಟಿಂಗ್ಸ್‌ ನೀಡಿ ಕೈಕುಲುಕಿದೆವು. ಅನಿತಾ ಅಪ್ಪಟ ಮಲೆಯಾಳಿಯಂತೆ ಹೆಬ್ಬಾರರ ಕಾಲು ಹಿಡಿದು ಆಶೀರ್ವಾದ ಬೇಡಿದಳು. ಹೆಬ್ಬಾರರು ನಮಗೆ ಮೂವರಿಗೂ ತಲಾ 50 ರೂಪಾಯಿಗಳನ್ನು ಕೊಟ್ಟು ಆಶೀರ್ವದಿಸಿದರು. ಆ ಬಳಿಕ ಇದನ್ನೆಲ್ಲಾ ಆಶ್ಚರ್ಯದಿಂದ ನೋಡುತ್ತಿದ್ದ ಎಲೈನಳಿಗೂ ಗ್ರೀಟಿಂಗ್ಸ್‌ ನೀಡಿ ಸೌರಯುಗಾದಿಯ ಆಚರಣೆಯ ಕ್ರಮ ತಿಳಿಸಿದೆವು. ‘ಮನೆಯಲ್ಲಿರುತ್ತಿದ್ದರೆ ನಾವು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಬೇಡುತ್ತಿದ್ದೆವು. ನೀನು ನನಗಿಂತ ಕಿರಿಯಳಾದ ಕಾರಣ ನೀನೇ ನಮ್ಮ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಬೇಕಾಗುತ್ತದೆ ‘ ಎಂದೆ. ಎಲೈನ್‌ ನಕ್ಕು ‘ಗುರು ನನಗಿಂತ ಸಣ್ಣವ. ಪಕಡ್ರೇ ಪಾವ್‌’ ಎಂದು ದಬಾಯಿಸಿದಳು. ‘ಆಯ್ತಪ್ಪ’ ಎಂದು ಗುರು ಅವಳ ಕಾಲು ಹಿಡಿದೇಬಿಟ್ಟ! ಯಾವ್ಯಾವುದೋ ಸಂಪ್ರದಾಯಗಳ ಮತ್ತು ನಂಬಿಕೆಗಳ ನಾವು ಒಟ್ಟಾಗಿ ಯಾವುದೋ ದೇಶದಲ್ಲಿ ಹೀಗೆ ಉಗಾದಿ ಆಚರಿಸಿದೆವು.

ಅಂದು ಬೆಳಿಗ್ಗೆ ಎಂಟೂವರೆಗೆ ಡೊಮಿನಿಕ್‌ ನಮ್ಮನ್ನು ದೇವಾಲಯದ ಎದುರಲ್ಲಿ ಬೀಳ್ಕೊಡುವುದಾಗಿ ತಿಳಿಸಿದ್ದರು. ನಿನ್ನೆ ಸಂಜೆ ಎಲೈನ್‌, ಗುರು ಮತ್ತು ಅನಿತಾ ಪ್ರತ್ಯಪ್ರತ್ಯೇಕವಾಗಿ ಡೊಮಿನಿಕರನ್ನು ಭೇಟಿಯಾಗಿ ಪಾಪ ನಿವೇದನೆ ಮಾಡಿಕೊಂಡಿದ್ದರು. ಹೆಬ್ಬಾರರಿಗೆ ಮತ್ತು ನನಗೆ ಅದರ ಅಗತ್ಯ ಕಂಡುಬಂದಿರಲಿಲ್ಲ. ಆದರೆ ಡೊಮಿನಿಕ್ಕರಿಗೆ ಕೃತಜ್ಞತೆ ಹೇಳಬೇಕಾದುದು ನಮ್ಮ ಕರ್ತವ್ಯವಾಗಿತ್ತು. ಎರಡು ದಿವಸಗಳನ್ನು ನಾವಲ್ಲಿ ಆನಂದದಿಂದ ಕಳೆದಿದ್ದೆವು. ನಮಗೆ ಉಚಿತ ಊಟ ಮತ್ತು ವಸತಿ ನೀಡಲಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲಾ ಜಂಜಾಟಗಳಿಂದ ದೂರವಾಗಿ ಮನಸ್ಸಿಗೆ ಶಾಂತಿ ಸಿಕ್ಕಿತ್ತು. ಅದಕ್ಕೆ ಎನ್‌ಕಲ್ಕದ ಫಾದರ್‌ ಡೊಮಿನಿಕ್‌ ಮತ್ತು ಬ್ರದರ್‌ ಲಾರೆನ್ಸ್‌ ಕಾರಣರಾಗಿದ್ದರು.

ಸರಿಯಾದ ಸಮಯಕ್ಕೆ ದೇವಾಲಯದ ಮುಂಭಾಗಕ್ಕೆ ನಾವು ಹೋದಾಗ ಡೊಮಿನಿಕ್‌ ಮೆಟ್ಟಿಲ ಮೇಲೆ ನಮಗಾಗಿ ಕಾದಿದ್ದರು. ಲಾರೆನ್ಸ್‌ ವಸತಿಗೃಹಕ್ಕೇ ಬಂದು ನಮ್ಮನ್ನು ಅಲ್ಲಿಯವರೆಗೆ ಕರೆದೊಯ್ದರು. ಇಬ್ಬರಿಗೂ ನಾವು ಸಣ್ಣಪುಟ್ಟ ಉಡುಗೊರೆಗಳನ್ನು ನೀಡಿ, ಭಾರತದ ರಾಷ್ಟ್ರಧ್ವಜವನ್ನು ಕೊಟ್ಟು, ಕೈಗೆ ರಾಖಿ ಕಟ್ಟಿದೆವು. ರಾಖಿಯ ಮಹತ್ವ ತಿಳಿದ ಡೊಮಿನಿಕ್‌ ‘ಓ! ಇದೀಗ ಚೆನ್ನಾಯಿತು, ಫಾದರ್‌ ಆದ ನನ್ನನ್ನು ಈಗ ನಿಮ್ಮೆಲ್ಲರ ಬ್ರದರ್‌ ಮಾಡಿಕೊಂಡಿರಿ. ನಿಮ್ಮ ಭೇಟಿಯನ್ನು ನಾನು ಯಾವತ್ತೂ ನೆನಪಿಟ್ಟುಕೊಳ್ಳುತ್ತೇನೆ. ನಿಮಗೆ ಒಳ್ಳೆಯದಾಗಲಿ’ ಎಂದು ಹಾರೈಸಿದರು. ಆದರೆ ಎಲೈನ್‌ ಅಷ್ಟರಿಂದಲೇ ತೃಪ್ತಳಾಗುವ ಜಾಯಮಾನದವಳಲ್ಲ. ಅವಳು ಹೇಳಿಯೇಬಿಟ್ಟಳು. ‘ಇಂದು ದಕ್ಷಿಣ ಭಾರತೀಯರಿಗೆ ಹೊಸ ವರ್ಷ. ಹೊಸ ವರ್ಷ ಹಿರಿಯರ ಆಶೀರ್ವಾದ ಬೇಡುವುದು ನಮ್ಮಲ್ಲಿ ರೂಢಿ. ನೀವು ಆಶೀರ್ವಾದ ಮಾಡಬೇಕು ಫಾದರ್‌.’

ಕೆಂಪುಬಣ್ಣದ, ಮುಗ್ಧ ಮುಖದ, 89 ವರ್ಷದ ಪಾದ್ರಿ ಡೊಮಿನಿಕ್‌ ಎರಡು ಮೆಟ್ಟಿಲು ಮೇಲೇರಿ ನಿಂತು, ಒಂದು ಕ್ಷಣ ಗಂಭೀರರಾಗಿ ಕಣ್ಣುಮುಚ್ಚಿ ಧ್ಯಾನಾಸಕ್ತರಾದರು. ಮರುಕ್ಷಣ ಕಣ್ಣುತೆರೆದು ಕೈಯೆತ್ತಿ ಆಶೀರ್ವದಿಸಿದರು. ‘ನಾನು ಫಾದರ್‌ ಡೊಮಿನಿಕ್‌ ಆ ಸರ್ವಶಕ್ತನ ಹೆಸರಿನಲ್ಲಿ ನಿಮ್ಮನ್ನು ಆಶೀರ್ವದಿಸುತ್ತಿದ್ದೇನೆ. ಭಾರತದಿಂದ ಬಂದ ನೀವು ನಮಗೆಲ್ಲರಿಗೆ ಸೋದರ  ಸೋದರಿಯರಾದಿರಿ. ನಿಮ್ಮ ಹೊಸ ವರ್ಷದ ಈ ದಿನ ನಿಮಗೆ ಮತ್ತು ನಿಮ್ಮ ದೇಶಕ್ಕೆ ಒಳಿತಾಗಲಿ. ವಿಶ್ವದ ಎಲ್ಲೆಡೆ ಅಜ್ಞಾನ, ಅಂಧಕಾರ, ಬಡತನ ತೊಲಗಿ ಸುಖ ಶಾಂತಿ, ನೆಮ್ಮದಿ ನೆಲೆಗೊಳ್ಳಲಿ.’

ಡೊಮಿನಿಕ್‌ ಕೆಳಗಿಳಿದು ಬಂದು ನಮ್ಮನ್ನು ಆಲಿಂಗಿಸಿಕೊಂಡು ತಲೆ ನೇವರಿಸಿ ಕೈಕುಲುಕಿ ಬೀಳ್ಕೊಟ್ಟರು. ಲಾರೆನ್ಸ್‌ ಕೂಡಾ ಹಾಗೇ ಮಾಡಿ ಪೂಜೆಯ ವೇಳೆಯಾದುದರಿಂದ ದೇವಾಲಯದ ಒಳಗೆ ತೆರಳಿದರು. ನಾನು ಡೊಮಿನಿಕರ ಆಶೀರ್ವಾದದಿಂದ ಹೊರ ಬಂದಿರಲಿಲ್ಲ. ಅವರ ಮಾತುಗಳನ್ನು ಕೇಳುತ್ತಿದ್ದಂತೆ ನನ್ನ ಕಣ್ಣುಗಳು ತುಂಬಿಕೊಂಡವು. ಇಂದು ಶಿಶಿಲದಲ್ಲಿ ಇರುತ್ತಿದ್ದರೆ ಸಾಂಪ್ರದಾಯಿಕವಾಗಿ ಹಿರಿಯರ ಕಾಲು ಹಿಡಿಯಲೇಬೇಕಿತ್ತು. ನಾನು ಅಳಿಕೆಯಲ್ಲಿದ್ದಾಗ ಆಶ್ರಮವಾಸಿಗಳೊಂದಿಗೆ ಪ್ರತಿ ಬೆಳಿಗ್ಗೆ ಪ್ರಾರ್ಥನೆಯ ಬಳಿಕ ಗುರು ನಾರಾಯಣ ಭಟ್ಟರ ಕಾಲು ಹಿಡಿಯುತ್ತಿದ್ದೆ. ಹದಿಹರೆಯದ ನನಗೆ ಆಗ ಅದರ ಮಹತ್ವ ಗೊತ್ತಿರಲಿಲ್ಲ. ಅದೇಕೆ ಎಂದು ಕೇಳುವ ಧೈರ್ಯವೂ ಇರಲಿಲ್ಲ. ಒಂದು ದಿನ ಅವರಾಗಿಯೇ ‘ಇದ್ಯಾಕೆ ಹೀಗೆ ಕಾಲು ಹಿಡಿಯೋದು ಗೊತ್ತಾ?’ ಎಂದು ಕೇಳಿದರು. ನಾನು ಇಲ್ಲವೆಂದು ತಲೆಯಾಡಿಸಿದೆ. ಮನುಷ್ಯನಲ್ಲಿ ಕ್ಷಣಕ್ಷಣಕ್ಕೂ ಅಹಂಭಾವ ತಲೆಯೆತ್ತುತ್ತಿರುತ್ತದೆ. ನಮಗಿಂತ ಹಿರಿಯರ ಕಾಲು ಹಿಡಿಯುವಾಗ ನಾನು ಸಣ್ಣವನು ಎಂಬ ಸತ್ಯದ ಅರಿವಾಗಿ ಆತನಲ್ಲಿ ವಿನಯ ಮೂಡುತ್ತದೆ. ಅದಕ್ಕೇ ದಾಸರು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದಿರುವುದು’ ಎಂದು ಹೇಳಿದರು. ‘ಹಾಗಾದರೆ ಇಷ್ಟು ಜನರಿಂದ ಕಾಲು ಹಿಡಿಸಿಕೊಳ್ಳುವ ನಿಮ್ಮಲ್ಲಿ ಅಹಂಭಾವ ಮೂಡುವುದಿಲ್ಲವೆ?’ಎಂದು ನಾನು ಪ್ರಶ್ನಿಸಿದೆ. ಅದಕ್ಕವರು ನಗುತ್ತಾ ‘ನೀನಿನ್ನೂ ಚಿಕ್ಕವನು. ಅರ್ಥವಾಗುವುದು ಸ್ವಲ್ಪ ಕಷ್ಟ. ಆದರೂ ಅರ್ಥಮಾಡಿಕೊಳ್ಳುವುದಕ್ಕೆ ಯತ್ನಿಸು. ಸಾಧನೆ ಮಾಡುತ್ತಾ ಹೋದಂತೆ ನಾವು ಅಹಂಕಾರ  ಮಮಕಾರಗಳನ್ನು ಕಳೆದುಕೊಳ್ಳುತ್ತೇವೆ. ನೀನೀಗ ನನ್ನ ಕಾಲು ಹಿಡಿದಾಗ ನನಗೇನೂ ಅನಿಸುವುದಿಲ್ಲ. ಹಿಡಿಯದೆ ಹೋದರೆ ಬೇಸರವೂ ಆಗುವುದಿಲ್ಲ. ಆದರೆ ಯಾವುದೇ ಸಾಧನೆಗೆ ಮೂಲವಾಗಿ ವಿನಯ ಇರಲೇಬೇಕು. ಅದು ತೋರಿಕೆಯ ವಿನಯವಲ್ಲ. ಎನಗಿಂತ ಕಿರಿಯರಿಲ್ಲ ಎಂದು ವಚನಕಾರರು ಹೇಳಿದ ವಿನಮ್ರತೆ’ ಎಂದಿದ್ದರು.

ಅಂದು ನಾರಾಯಣಭಟ್ಟರ ನಿಷ್ಕಲ್ಮಶ ಉಪದೇಶ. ಇಂದು…. ಅ ಯಾವುದೋ ದೇಶದ, ಯಾವುದೋ ಪಂಥದ, ಯಾವ ಸಂಬಂಧವೂ ಇಲ್ಲದ, ನನ್ನಿಂದ ಯಾವ ಪ್ರಯೋಜನವನ್ನೂ ಪಡೆಯಲಾಗದ, ನಾನು ಇನ್ನೆಂದೂ ನೋಡಲು ಸಾಧ್ಯವಿಲ್ಲದ, ಜೀವಿತದ ಅಂಚಿನಲ್ಲಿರುವ, ಇಡೀ ವಿಶ್ವವನ್ನೇ ಗೆದ್ದಂತಿರುವ, ಆ ಪ್ರಶಾಂತ ಸೌಜನ್ಯ ಮೂರ್ತಿಯಾದ ಮುದಿ ಪಾದಿರಿ ಎಷ್ಟು ನಿರ್ಮಲಭಾವದಿಂದ ಆಶೀರ್ವದಿಸಿದರು? ನಾವು ದೇವರಲ್ಲಿ ನಮಗೆ ಸಿರಿ ಸಂಪತ್ತು, ಯಶಸ್ಸು ಮತ್ತು ಆರೋಗ್ಯ ಸಿಗಲೆಂದು ನಮ್ಮ ಸ್ವಾರ್ಥಕ್ಕಾಗಿ ಬೇಡುತ್ತೇವೆ. ಆ ಮುದಿ ಪಾದಿರಿ ನಮ್ಮ ನೆಪದಲ್ಲಿ ಸಮಸ್ತ ವಿಶ್ವದ ಒಳಿತನ್ನು ಹಾರೈಸಿದ್ದರು! ನನಗೆ ಗತಿಸಿಹೋದ ಮತ್ತು ಈಗಲೂ ಇರುವ ಹಿರಿಯರೆಲ್ಲರ ನೆನಪಾಯಿತು. ಮನುಷ್ಯರನ್ನು ಮನುಷ್ಯರಂತೆ ಕಾಣಲಾಗದ ಜಾತಿ, ಮತ, ಅಂತಸ್ತುಗಳ ನೆನಪಾಯಿತು. ಕೇವಲ ತಮಗಾಗಿ ಮಾತ್ರವೇ ಬದುಕುತ್ತಾ, ಇತರರಿಗೆ ಎಷ್ಟು ತೊಂದರೆ ಕೊಡಲು ಸಾಧ್ಯವೋ ಅಷ್ಟನ್ನೂ ಕೊಡುತ್ತಾ, ಬದುಕುವ ವಿಘ್ನ ಸಂತೋಷಿಗಳ ನೆನಪಾಯಿತು. ಸ್ವಾರ್ಥ ಮತ್ತು ಮತ್ಸರ ಇವೆರಡನ್ನೇ ಬಂಡವಾಳ ಮಾಡಿಕೊಂಡು ಬಾಳುವವರ ನೆನಪಾಯಿತು. ಜತೆಗೆ ಆ ಮುದಿ ಪಾದಿರಿಯ ನಿಸ್ವಾರ್ಥ ಮಾತುಗಳು ನೆನಪಾಗಿ ನನ್ನ ನೋವು ಕಣ್ಣೀರಾಗಿ ಹರಿಯಿತು.

ನನ್ನ ತಂಡದವರು ಕಾರಣ ಕೇಳಿದಾಗ ಅಳು ಉಕ್ಕಿ ಉಕ್ಕಿ ಬಂದು ಬಿಕ್ಕಿ ಬಿಕ್ಕಿ ಅತ್ತುಬಿಟ್ಟೆ. ನಾನು ಮತ್ತೆ ಮಾಮೂಲು ಸ್ಥಿತಿಗೆ ಮರಳಲು ತುಂಬಾ ಹೊತ್ತು ಬೇಕಾಯಿತು.

ಬಿಳಿಯರ ನಾಡಲ್ಲೊಂದು ಕರಿಪರ್ವತ

ಕರಿಪರ್ವತ ಎನ್ನುವುದು ಸುಮಾರು 25 ಚದರ ಮೈಲಿ ವ್ಯಾಪಿಸಿರುವ ಪ್ರದೇಶ. ಎನ್‌ಕಲ್ಕ ಕರಿಪರ್ವತ ಪ್ರದೇಶದಲ್ಲೇ ಬರುತ್ತದೆ. ಆದರೆ ನಿಜವಾದ ಪರ್ವತ ಸಿಗುವುದು ಎನ್‌ಕಲ್ಕದಿಂದ ಮಜಾಮೆಗೆ ಹೋಗುವ ಹಾದಿಯಲ್ಲಿ. ಎನ್‌ಕಲ್ಕದಿಂದ ಎಂಟು ಕಿ.ಮೀ. ದೂರದಲ್ಲಿ ದಟ್ಟಕಾಡು, ಅದಾದ ಬಳಿಕ ಪರ್ವತ, ಮತ್ತೆ ವಿಶಾಲ ಸರೋವರ. ಸರೋವರದ ಬಳಿಕ ಹ್ಯಾತ್‌ಪೋಲ್‌ ಎಂಬ ಮಧ್ಯಯುಗೀನ ಹಳ್ಳಿ. ಅಲ್ಲಿಂದ ಕೆಳಕ್ಕಿಳಿದರೆ ಮಜಾಮೆ ಸಿಗುತ್ತದೆ.

ಕರಿ ಪರ್ವತ ಪ್ರಾಂತ್ಯದಲ್ಲಿ ಡ್ಯುರ್‌ಪೋ ಎಂಬ ಹಳ್ಳಿಯೊಂದಿದೆ. ಡ್ಯುರ್‌ಪೋ ಕಂಚು ಮತ್ತು ಹಿತ್ತಾಳೆಯ ಸಲಕರಣೆಗಳಿಗೆ ಪ್ರಸಿದ್ಧಿ ಪಡೆದಿದೆ. ಪಕ್ಕದ ಮಜಾಮೆಯಿಂದ ಬರುವ ಚರ್ಮದ ಸಾಮಗ್ರಿಗಳು ಇಲ್ಲಿನ ಅಂಗಡಿಗಳಲ್ಲಿ ತುಂಬಿ ತುಳುಕುತ್ತಿವೆ. ಎಲ್ಲವೂ ನೋಡಲಿಕ್ಕೆ ಚೆನ್ನು. ಕೊಳ್ಳಲಿಕ್ಕೆ ಹೋದರೆ ಅವುಗಳ ಬೆಲೆಗೆ ರಕ್ತದೊತ್ತಡ ಏರಲೇಬೇಕು. ನಾವು ಅವುಗಳನ್ನು ತಯಾರಿಸಿದವರ ಕರಕುಶಲತೆಯನ್ನಷ್ಟೇ ಮೆಚ್ಚುಕೊಂಡು ತೃಪ್ತಿಪಟ್ಟುಕೊಳ್ಳುತ್ತಿರುವಾಗ ಹೆಬ್ಬಾರರ ಗಮನವನ್ನು ಅದೇನೋ ಸೆಳೆಯಿತು. ಸರಸರನೆಂದು ನಡೆದುಹೋದ ಅವರು ಕ್ಯಾಮರಾದಿಂದ ಅದೇನನ್ನೋ ಕ್ಲಿಕ್ಕಿಸತೊಡಗಿದರು. ಅವರ ‘ಪತ್ರಕರ್ತನ ಕಣ್ಣು’ ಚಕ್ಕುಲಿ ಯಂತ್ರವೊಂದನ್ನು ಕಂಡುಹಿಡಿದಿತ್ತು!

ಕಾಮನಬಿಲ್ಲು : ಡ್ಯುರ್‌ಪೋದ ಬಳಿಯ ಸೇಂಟ್‌ ಫೆರೋಲ್‌ ಸರೋವರ ನಿಸರ್ಗಪ್ರಿಯ ಫ್ರೆಂಚರ ಆಕರ್ಷಣಾ ಕೇಂದ್ರ. ಇದು ದ್ಯುಮಿದಿ ಕಾಲುವೆಗೆ ನೀರೊದಗಿಸುವ ಜಲಮೂಲಗಳಲ್ಲೊಂದು. ನಾವು ಈ ಸರೋವರವನ್ನು ನೋಡಿದ್ದು ನಿನ್ನೆ ಅಂದರೆ ಭಾನುವಾರ. ಸರೋವರ ಈಜುಗಾರರಿಂದ, ಸಾಹಸದ ಜಲಕ್ರೀಡೆಗಳನ್ನಾಡುವವರಿಂದ ತುಂಬಿತ್ತು. ದಂಡೆಯಲ್ಲಿ ನೆಪಮಾತ್ರಕ್ಕೆ ತುಂಡು ಬಟ್ಟೆಯೊಂದರಿಂದ ಗುಪ್ತಾಂಗವನನಷ್ಟೇ ಮುಚ್ಚಿ, ಯೌವನದಿಂದ ಹೊಳೆಯುವ ದೇಹವನ್ನು ಇಡಿಯಾಗಿ ಆ ಸೂರ್ಯನಿಗೆ ಒಡ್ಡಿಕೊಳ್ಳುವ ವೈಯಯ್ಯರಿಗಳಿಗೆ ಲೆಕ್ಕವಿರಲಿಲ್ಲ. ಫ್ರೆಂಚರಿಗೆ ಅದೆಲ್ಲಾ ದಿನಚರಿಯ ಒಂದು ಭಾಗವಾದರೆ ನಮಗೆ ಇರದುದರೆಡೆಗೆ ತುಡಿಯುವ ವಿಸ್ಮಯ!

ನಮ್ಮ ತಂಡ ಸರೋವರದ ಚೆಲುವನ್ನು ಸವಿದು ನೀರ ಕಾರಂಜಿ ಇರುವತ್ತ ನಡೆಯುತ್ತಿದ್ದಂತೆ, ಹಲವಾರು ಕಾಮನಬಿಲ್ಲುಗಳು ನಮ್ಮ ಕಣ್ಣೆದುರು ಮೂಡಿ ಮರೆಯಾಗತೊಡಗಿದವು. ಬೆರ್ನಾರ್ಡಿನ್‌ನ ಮಗಳು ಆ್ಯಡ್ರೆ ಕಾಮನಬಿಲ್ಲನ್ನು ನೋಡುತ್ತಾ ‘ನೀವಿಷ್ಟು ದಿನವಾಯಿತಲ್ಲಾ ಫ್ರಾನ್ಸಿಗೆ ಬಂದು? ಕಾಮನಬಿಲ್ಲಿಗೆ ಫ್ರೆಂಚಿನಲ್ಲಿ ಏನು ಹೇಳುತ್ತಾರೆ ಹೇಳಿ ನೋಡುವಾ’ ಎಂದು ನಮ್ಮ ಫ್ರೆಂಚ್‌ ಜ್ಞಾನಕ್ಕೆ ಸವಾಲೆಸೆದಳು. ನಮ್ಮ ಫ್ರೆಂಚ್‌ ಜ್ಞಾನ ಬೋಂಜೂರ್‌ (ಸುಪ್ರಭಾತ), ಕೊಮತಲೆವು (ಹೇಗಿದ್ದೀರಿಲ) ಸವಾ, ತ್ರೆಬ್ಯಾಂ (ತುಂಬಾ ಚೆನ್ನಾಗಿದ್ದೇವೆ), ಅವಾತ್ರ ಸಾಂತೆ (ನಿಮ್ಮ ಆರೋಗ್ಯಕ್ಷ್ಕಾಗಿ ಕುಡಿಯುತ್ತಿದ್ದೇವೆ), ಕಫೆ ಅವೇಕ್‌ ದ್ಹುಲೇ ‘ಹಾಲಿನೊಡನೆ ಕಾಫಿ’, ಅವ್ಪ ‘ಇನೊನಮ್ಮೆ ನೋಡೋಣ’  ಇತ್ಯಾದಿ

ಮೂಲಭೂತ ಪದಗಳಿಗಷ್ಟೇ ಸೀಮಿತವಾಗಿದ್ದುದರಿಂದ ಈಗ ಸಂಕಟಕ್ಕಿಟ್ಟುಕೊಂಡಿತು. ನಮ್ಮ ಸೋತ ಮುಖ ನೋಡಿ ರಾಗದಿಂದ ಸೇಲೆಮಾಡಿ ಅವಳು ಹೇಳಿದಳು.’ಆಂಕೋಂಸೇಲ್‌’. ಅವಳು ಹೇಳಿದಂತೆ ನಾನು ಅಣಕಿಸಿ ಹೇಳತೊಡಗಿದೆ. ಅದು ಬಾಯಿಪಾಠ ಬಂದೇಬಿಟ್ಟಿತು. ಆದರೆ ಮರುದಿನ ಗುರು ‘ಕಾಮನಬಿಲ್ಲಿಗೆ ಫ್ರೆಂಚಲ್ಲಿಹೇಗೆ ಹೇಳೋದು’ ಎಂದು ಪ್ರಶ್ನಿಸಿದಾಗ ನನಗೆ ಮರೆತೇಹೋಗಿತ್ತು. ಎಷ್ಟಾದರೂ ಅದು ಕಾಮನಬಿಲ್ಲಲ್ಲವೆ?

ನಾವು ಕಾಮನಬಿಲ್ಲು ನೋಡಿ ವಾಪಾಸಾಗುವಾಗ ತನ್ನ ತಾಯಿಯ ಕೈ ಹಿಡಿದುಕೊಂಡು ನಡೆದು ಬರುತ್ತಿದ್ದ ಎರಡು, ಎರಡೂವರೆ ವರ್ಷದ ಹೆಣ್ಣು ಮಗುವೊಂದು ಎಲೈನಳ ಹಣೆಯತ್ತ ಕೈ ತೋರಿಸಿ ತನಗೆ ಅದು ಬೇಕು ಎಂದು ಹಠ ಹಿಡಿದುಬಿಟ್ಟಿತು. ಅದರ ದೃಷ್ಟಿ ಎಲೈನಳ ಬೊಟ್ಟಿನ ಮೇಲಿತ್ತು. ತನ್ನ ಹಣೆಯಿಂದ ಸ್ಟಿಕರ್‌ ತೆಗೆದು ಎಲೈನ್‌ ಮಗುವಿಗೆ ಕೊಡಹೋದಾಗ ಅದು ಹೆದರಿ ಅಮ್ಮನ ಹಿಂದೆ ಅಡಗಿಕೊಂಡಿತು. ಎಲೈನ್‌ ಬೊಟ್ಟನ್ನು ಅಮ್ಮನ ಕೈಗೇ ಕೊಟ್ಟಳು. ನಾವು ಸ್ವಲ್ಪ ಮುಂದೆ ಹೋದಾಗ ನಮಗೆ ಆ ಮಗುವಿನ ಕಿಲಕಿಲ ನಗು ಕೇಳಿಸಿತು. ತಿರುಗಿ ನೋಡಿದರೆ ಅದು ಬೊಟ್ಟನ್ನು ಹಣೆಗಿಟ್ಟುಕೊಂಡು ಕುಣಿಯುತ್ತಿತ್ತು!

ಕಾಡಲ್ಲೊಂದು ಕತೆ :
ಕರಿಪರ್ವತ ಪ್ರದೇಶವನ್ನು ಫ್ರೆಂಚ್‌ ಭಾಷೆಯಲ್ಲಿ ಮೋಂಟೇನ್‌ ನೈರ್‌ ಎಂದು ಕರೆಯುತ್ತಾರೆ. ಇದು ಅಟ್ಲಾಂಟಿಕ್‌ ಮತ್ತು ಮೆಡಿಟರೇನಿಯನ್‌ ಜಲಾನಯನ ಪ್ರದೇಶಗಳನ್ನು ಪ್ರತ್ಯೇಕಿಸುವ ಸ್ಥಳವಾಗಿದೆ. ಇಲ್ಲಿನ ಸಮೃದ್ಧ ಜಲಸಂಪನ್ಮೂಲವೇ ದ್ಯುಮಿದಿ ಕಾಲುವೆಯ ನಿರ್ಮಾಣಕ್ಕೆ ಪ್ರೇರಣೆ. ಸಮುದ್ರ ಮಟ್ಟಕ್ಕಿಂತ 1210 ಮೀಟರ್‌ ಎತ್ತರದಲ್ಲಿರುವ ಇಲ್ಲಿನ ಪರ್ವತ ಪ್ರದೇಶವು ದಟ್ಟವಾದ ಅರಣ್ಯದಿಂದ ಆವೃತ್ತವಾಗಿದೆ. ಅರಣ್ಯದಿಂದ ಮರವನ್ನು ಯಾರೂ ಕಡಿಯುವಂತಿಲ್ಲ. ಮರದ ಅವಶ್ಯಕ್ಷತೆ ಇರುವವರು ನಗರಪಾಲಿಕೆಗೆ ಅರ್ಜಿ ಸಲ್ಲಿಸಬೇಕು. ನಗರಪಾಲಿಕೆಯೇ ಮರವನ್ನು ಕಡಿಯುತ್ತದೆ. ಒಂದು ಮರವನ್ನು ಕಡಿದರೆ ಅಲ್ಲಿ ಎರಡು ಸಸಿಗಳನ್ನು ನೆಡಲಾಗುತ್ತದೆ. ಹಾಗಾಗಿ ಕರಿಪರ್ವತದ ಅರಣ್ಯ ಎಂದೂ ಬರಡಾಗಲು ಸಾಧ್ಯವಿಲ್ಲ.

ಕರಿಪರ್ವತದ ಎತ್ತರ ಪ್ರದೇಶದಲ್ಲಿ ಮೋಂಟೇನ್ಸ್‌ ಸರೋವರವಿದೆ. ಇದು ಮಜಾಮೆ ಪಟ್ಟಣಕ್ಕೆ ನೀರು ಪೂರೈಸುವ ಜಲಾಶಯ. ಸರೋವರಗಳನ್ನೆಲ್ಲಾ ರಮ್ಯ ಪ್ರವಾಸಿ ತಾಣವಾಗಿಸುವ ಫ್ರೆಂಚರು ಈ ಅದ್ಭುತ, ವಿಶಾಲ ಸರೋವರವನ್ನು ಬಿಡುತ್ತಾರೆಯೇ! ಸರೋವರದ ಸಮೀಪ ಪ್ರವಾಸಿಗರಿಗಾಗಿ ಸಾಕಷ್ಟು ಹೋಟೇಲುಗಳನ್ನು ನಿರ್ಮಿಸಲಾಗಿದೆ. ಏನಿದ್ದರೂ ಈ ಹೋಟೆಲಿಗರದು ಪಾರ್ಟ್  ಟೈಂ ಬಿಸಿನೆಸ್ಸು. ಬೇಸಿಗೆಯಲ್ಲಿ ಕಿಕ್ಕಿರಿದು ತುಂಬುವ ಈ ಹೋಟೆಲುಗಳು, ಚಳಿಗಾಲದಲ್ಲಿ ಬಿಕೋ ಅನ್ನುತ್ತವೆ. ಮೋಂಟೇನ್‌ ಅಂದರೆ ಕಪ್ಪು ಎಂದರ್ಥ. ಈ ಕೃಷ್ಣ ಸರೋವರವು ಕುಡಿಯುವ ನೀರನ್ನು ಪೂರೈಸುವ ಜಲಾಶಯವಾದುದರಿಂದ ಅದರಲ್ಲಿ ಈಜುವಂತಿಲ್ಲ. ದೋಣಿವಿಹಾರಕ್ಕೆ ಮಾತ್ರ ಆಸ್ಪದವಿದೆ. ಸರೋವರದ ಸುತ್ತಮುತ್ತ ಗುಪ್ತಾಂಗವನನಷ್ಟೇ ಕಷ್ಟದಿಂದ ಮುಚ್ಚಿ ಸೂರ್ಯಸ್ನಾನ ಮಾಡಲು ಯಾವ ದೊಣೆನಾಯಕನ ಅಪ್ಪಣೆಯೂ ಬೇಕಿಲ್ಲ. ಈ ಸರೋವರದಲ್ಲಿ ಈಜುತ್ತಾ ಮೀನು ಹಿಡಿಯುವ ಬಾತಿನ ವಂಶಕ್ಕೆ ಸೇರಿದ ವಿವಿಧ ಹಕ್ಕಿಗಳಿವೆ. ಸರೋವರದ ಆಸುಪಾಸಿನಲ್ಲಿ ಮೊಂಟಾಡ್‌, ಹಾಟನಿಬೋಲ್‌ ಮತ್ತು ರಮೋನ್‌ಡನ್ಸ್‌ ನಾಮಾಂಕಿತ ಅರಣ್ಯಗಳಿದ್ದು ಅವು ಓಕ್‌, ಚೆಸ್ಟನಟ್‌, ಪೈನ್‌ ಮತ್ತು ಸ್ಪ್ರುಸ್‌ ಮರಗಳಿಂದ ನಿಬಿಡವಾಗಿವೆ.

ಕರಿಪರ್ವತದ ನೈಸರ್ಗಿಕ ಸೌಂದರ್ಯದ ನಡುವಲ್ಲಿರುವ ಯುದ್ಧ ಸ್ಮಾರಕವೊಂದು ನೋವಿನ ಕತೆಯನ್ನು ಹೇಳುತ್ತದೆ. ದ್ವಿತೀಯ ವಿಶ್ವಸಮರದ ಅವಧಿಯಲ್ಲಿ ಫ್ರಾನ್ಸ್‌ ಜರ್ಮನಿಗೆ ಸೋತಾಗ, ಫ್ರೆಂಚರನ್ನು ಜರ್ಮನ್‌ ಸೇನೆಗೆ ಬಲಾತ್ಕಾರದಿಂದ ಸೇರಿಸುವ ಪ್ರಕ್ರಿಯೆ ಆರಂಭವಾಯಿತು. ಇದನ್ನು ವಿರೋಧಿಸಿದವರು ಶಿಕ್ಷೆಗೊಳಗಾಗಿ ಕಾಣೆಯಾದವರ ಪಟ್ಟಿಯಲ್ಲಿ ಸೇರಿಹೋದರು. ಕೆಲವರು ಈ ಪ್ರಕ್ರಿಯೆಯನ್ನು ಪ್ರತಿಭಟಿಸಲು ಒಗ್ಗೂಡಿ ರಹಸ್ಯ ತಾಣವೊಂದನ್ನು ಹುಡುಕಿದಾಗ ಅವರಿಗೆ ದೊರೆತದ್ದು ಈ ಕರಿಪರ್ವತ. ಇದನ್ನು ಅಡಗುದಾಣಮಾಡಿಕೊಂಡ ಫ್ರೆಂಚ್‌ ಧೀರರ ತಂಡವೊಂದು ಬ್ರಿಟನಿನ್ನಿಂದ ಶಸ್ತ್ರಾಸ್ತ್ರಗಳನ್ನು ತರಿಸಿಕೊಂಡು ಹಿಟ್ಲರನ ಸೈನ್ಯಕ್ಕೆ ಸಡ್ಡುಹೊಡೆಯಿತು. ಆದರೆ ಜರ್ಮನಿಯ ಪ್ರಚಂಡ ಬೇಹುಗಾರಿಕಾ ಸಂಸ್ಥೆ ಗೆಸ್ಟಾಪೋ ಈ ರಹಸ್ಯ ತಾಣವನ್ನು ಪತ್ತೆ ಹಚ್ಚಿ ಎಲ್ಲಾ ಕಡೆಗಳಿಂದ ಮುತ್ತಿಗೆ ಹಾಕಿತು. ಈ ಧೀರರ ತಂಡ ಹೋರಾಡುತ್ತಾ ವೀರ ಮರಣವನ್ನಪ್ಪಿತು. ಅವರೆಲ್ಲಾ ಹದಿನೆಂಟರಿಂದ ಮೂವತ್ತರವರೆಗಿನ ವಯಸ್ಸಿನವರು. ತಮ್ಮ ಕನಸುಗಳನ್ನೆಲ್ಲಾ ಯುದ್ಧ ಮಾರಿಗೆ ಬಲಿಕೊಟ್ಟ ಈ ವೀರರ ಹದಿನಾಲ್ಕು ಮಂದಿ ನಾಯಕ್ಷರಿಗೆ ಇಲ್ಲಿ ಸಮಾಧಿ ನಿರ್ಮಿಸಲಾಗಿದೆ. ಅವರಲ್ಲಿ ಫ್ರೆಂಚರು ಮಾತ್ರವಲ್ಲದೆ, ಯೆಹೂದ್ಯರು ಮತ್ತು ಮುಸ್ಲಿಮರೂ ಇದ್ದರು. ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲಿ ದುರಂತ ಸಾವನ್ನನಪ್ಪಿದ ಯುವಕನೊಬ್ಬನ ಸಮಾಧಿಯ ಮೇಲೆ ಅವನ ಹೆಸರಿನ ಹಿಂದೆ ಕಮಾಂಡರ್‌ ಎಂಬ ಉಪಾಧಿ ಇದೆ. ಯುದ್ಧದಲ್ಲಿ ಮಡಿದ ಪ್ರಮುಖರ ವಿವರಗಳನ್ನು ಗೋರಿಯ ಗೋಡೆಗಳಲ್ಲಿ ಬರೆದಿಡಲಾಗಿದೆ. ಹಾಗೆ ನೋಡಿದರೆ ನಾವು ಈವರೆಗೆ ನೋಡಿದ ಊರುಗಳಲ್ಲೆಲ್ಲಾ ಯುದ್ಧ ಸ್ಮಾರಕಗಳಿದ್ದವು. ಆದರೆ ಅಲ್ಲೆಲ್ಲೂ ಇಂತಹ ದುರಂತ ಕತೆಯಿರಲಿಲ್ಲವಾದರೂ ಯುದ್ಧ ಸ್ಮಾರಕಗಳನ್ನು ತೋರಿಸಿದವರೆಲ್ಲರೂ ಇದೊಂದು ಮಾತನ್ನು ಹೇಳದೆ ಬಿಡುತ್ತಿರಲಿಲ್ಲ; ‘ಯುದ್ಧವೆಷ್ಟು ಭಯಾನಕ! ನಮ್ಮ ಪ್ರಗತಿಯೆಲ್ಲವನ್ನೂ ನಾವೇ ಕಂಡುಹಿಡಿದ ಒಂದು ಅಸ್ತ್ರ ಸಂಪೂರ್ಣವಾಗಿ ನಾಶಮಾಡಿಬಿಡಬಹುದು. ಇನ್ನೊಂದು ಯುದ್ಧ ಮಾತ್ರ ಬೇಡವೇ ಬೇಡ. ಯುರೋಪಿನಲ್ಲಿ ಮಾತ್ರವಲ್ಲ, ಎಲ್ಲೆಲ್ಲು !’

ಮಜಾಮೆಗೆ ಐದು ಕಿ.ಮೀ. ಮುನ್ನ ಹಾತ್‌ಪೋಲ್‌ ಎಂಬ ಮಧ್ಯಯುಗೀನ ಹಳ್ಳಿಯೊಂದು ಸಿಗುತ್ತದೆ. ಒಂದು ಕಾಲದಲ್ಲಿ ಅಲ್ಲಿ ಜನವಸತಿಯಿತ್ತು. ಬಟ್ಟೆ ತಯಾರಿಕೆಯ ಗಿರಣಿಗಳಿದ್ದವು. ಅರಮನೆ, ಶಾಲೆ, ಚರ್ಚು, ಆರೋಗ್ಯಕ್ಷೇಂದ್ರ  ಎಲ್ಲವೂ ಇದ್ದವು. ರೋಮನನರು ಇದನ್ನು ವಶಪಡಿಸಿಕೊಂಡು ಇಲ್ಲಿ ಕೋಟೆಯೊಂದನ್ನು ಕಟ್ಟಿದರು. ಕ್ರಿ.ಶ. ಐದನೇ ಶತಮಾನದಲ್ಲಿ ಇದು ವಿಸಿಗೋಥರ ಪಾಲಾಯಿತು. ಕಥಾರರ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ಕ್ಯಾಥಲಿಕ್ಕ್‌ ಪಡೆಯ ಮುಖಂಡ ಸೈಮನ್‌ ಡಿ ಮೋಂಟ್‌ಫೋರ್ಟ್ ಈ ಹಳ್ಳಿಯ ಮೇಲೆರಗಿ ಇದನ್ನು ತನ್ನ ವಶಪಡಿಸಿಕೊಂಡ. ಕ್ಯಾಥಲಿಕ್ಕರ ಮತ್ತು ಪ್ರಾಟೆಸ್ಟೆಂಟರ ನಡುವಣ ನೂರು ವರ್ಷಗಳ ಯುದ್ಧದ ಸಂದರ್ಭದಲ್ಲಿ ಇಲ್ಲಿನ ಅರಮನೆ ಮತ್ತು ಚರ್ಚು ನಾಶವಾಯಿತು. ಪದೇ ಪದೇ ಆಗುತ್ತಿದ್ದ ಆಕ್ರಮಣಗಳಿಂದ ಜೀವ ಉಳಿಸಿಕೊಳ್ಳಲು ಹಾತ್‌ಪೋಲಿಗರು ಊರು ಬಿಟ್ಟೋಡಿದರು. ಆ ಬಳಿಕ ಹಾತ್‌ಪೋಲ್‌ ಮೊದಲಿನಂತಾಗಲೇ ಇಲ್ಲ. ನಿಧಾನವಾಗಿ ದಕ್ಷಿಣದ ಕಣಿವೆ ಪ್ರದೇಶ ಮಜಾಮೆಯಲ್ಲಿ
ಜನವಸತಿ ಆರಂಭವಾಗಿ ಅದೊಂದು ವಾಣಿಜ್ಯನಗರವಾಗಿ ತಲೆಯೆತ್ತುವುದರೊಂದಿಗೆ ಹಾತ್‌ಪೋಲ್‌ ತನ್ನ ಮಹತ್ವವನ್ನು ಕಳಕೊಂಡರೂ ಅದೊಂದು ಪ್ರವಾಸಿಗರ ಆಕರ್ಷಣಾ ತಾಣವಾಗಿ ಉಳಿದುಕೊಂಡಿತು.

ಮಜಾಮೆ ಎಂಬ ಕಣಿವೆ ನಗರ

ಮಜಾಮೆ ತಾರ್ನ್‌ ವಿಭಾಗದಲ್ಲಿ ದಕ್ಷಿಣಕ್ಕಿರುವ ಒಂದು ಕಣಿವೆ ನಗರ. ಕರಿಪರ್ವತದ ನೆತ್ತಿಯ ಹಾತ್‌ಪೋಲ್‌ ಪತನದತ್ತ ಸಾಗುತ್ತಿದ್ದಂತೆ, ಕರಿಪರ್ವತದ ಪದತಲದ ಮಜಾಮೆ ಪ್ರವರ್ಧಮಾನಕ್ಕೆ ಬಂತು. ಬಟ್ಟೆಗೆ ಮತ್ತು ಚರ್ಮದ ಉತ್ಪನ್ನಗಳಿಗೆ ಹೆಸರುವಾಸಿಯಾದ ಮಜಾಮೆಯಲ್ಲಿ ನಾವು ಮೊದಲಿಗೆ ನೋಡಿದ್ದು ‘ಸಾವಿನ ಬಳಿಕ’ ಎಂಬ ಮ್ಯೂಸಿಯಮ್ಮನ್ನು. ಮಧ್ಯಯುಗಕ್ಕೂ ಹಿಂದೆ ಸಾವಿನ ಬಳಿಕ ಏನೇನು ಮಾಡುತ್ತಿದ್ದರು ಎನ್ನುವುದನ್ನು ತೋರಿಸುವ ಮ್ಯೂಸಿಯಮ್ಮು ಅದು. ಶವಗಳನ್ನು ದೊಡ್ಡ ಗುಂಡಿ ತೋಡಿ ಹೂಳುವುದು, ಹೂಳುವಾಗ ಸತ್ತ ವ್ಯಕ್ತಿಯ ಅತ್ಯಂತ ಪ್ರೀತಿಯ ವಸ್ತುಗಳನ್ನು ಶವದ ಬಳಿ ಇರಿಸುವುದು, ಆತ್ಮಗಳು ಹೊರಬರಲು ಸಮಾಧಿಯಲ್ಲೊಂದು ರಂಧ್ರ ಮಾಡುವುದು, ವರ್ಷಕ್ಕೊಮ್ಮೆ ಸಮಾಧಿ ಬಳಿಗೆ ಹೋಗಿ ಸತ್ತವರಿಗಿಷ್ಟವಾದ ತಿಂಡಿ ತೀರ್ಥಗಳನ್ನು ಇರಿಸುವುದು, ಮಾಂತ್ರಿಕರ ಮೂಲಕ ಸತ್ತವರ ಆತ್ಮದೊಡನೆ ಸಂಭಾಷಣೆ ನಡೆಸುವುದು, ಪ್ರೇತೋಚ್ಛಾಟನೆ, ಸತ್ತವರ ಆತ್ಮ ಗರ್ಭಸ್ಥ ಶಿಶುವಿನ ದೇಹದಲ್ಲಿ ಪ್ರವೇಶಿಸುವುದು (ಪುನರ್ಜನ್ಮ) ಹೀಗೆ ಫ್ರಾನ್ಸಿನಲ್ಲಿ ಹನ್ನೆರಡನೇ ಶತಮಾನದ ಪೂರ್ವದಲ್ಲಿದ್ದ, ಭಾರತದ ಅನೇಕ ಸಮುದಾಯಗಳಲ್ಲಿ ಈಗಲೂ ಇರುವ, ಅನೇಕ ನಂಬಿಕೆಗಳು ಅಲ್ಲಿ ಚಿತ್ರರೂಪ ತಾಳಿವೆ. ಸಮಾಧಿಗಳ ಪ್ರತಿಕೃತಿ, ಪುರಾತನ ಮಾನವರ ಅವಶೇಷಗಳು, ಅವರು ಬಳಸುತ್ತಿದ್ದ ಪಾತ್ರೆ  ಪರಡಿಗಳು , ಮ್ಯೂಸಿಯಮ್ಮಮಿನಲ್ಲಿ ಸಂರಕಿಸಲ್ಪಟ್ಟಿವೆ. ಅಲ್ಲಿ ‘ಸಾವಿನ ಬಳಿಕ’ ಎಂಬ ವಿಡಿಯೋ ಚಿತ್ರವೊಂದನ್ನು ಕೂಡಾ ನಮಗೆ ತೋರಿಸಲಾಯಿತು.

ಅಂದು ಸೋಮವಾರ ವಾಸ್ತವವಾಗಿ ಆ ಮ್ಯೂಸಿಯಮ್ಮಮಿಗೆ ರಜಾದಿನ. ನಮಗಾಗಿ ಮಾತ್ರ ಅಂದು ಮ್ಯೂಸಿಯಮ್ಮನ್ನು ತೆರೆದಿಡಲಾಗಿತ್ತು. ಬೇರಾರಿಗೂ ಅಂದು ಪ್ರವೇಶವಿರಲಿಲ್ಲ. ‘ಭಾರತದಿಂದ ಬಂದವರೆಂದು ನಿಮಗಾಗಿ ನಾನಿದನ್ನು ತೆರೆದದ್ದು. ಬೇರೆ ದಿನಗಳಲ್ಲಿ ಇಲ್ಲಿ ನಿಲ್ಲಲೂ ಸ್ಥಳವಿರುವುದಿಲ್ಲ. ಅಷ್ಟೊಂದು ಜನ ಇಲ್ಲಿಗೆ ಬರುತ್ತಾರೆ. ಸಾವಿನ ಬಳಿಕ ಏನು ಎನ್ನುವುದು ಬಹುಷಃ ಎಂದಿಗೂ ತಣಿಯದ ಕುತೂಹಲ’ ಎಂದು ಮ್ಯೂಸಿಯಮ್ಮಮಿನ ಕ್ಯುರೇಟರ್‌ ಹೇಳಿದಳು. ‘ಸಾವಿನ ಬಳಿಕ ಏನು ಎನ್ನುವುದನ್ನು ನೀನು ತೋರಿಸುತ್ತಿದ್ದೀಯಲ್ಲಾ’ ಅದರಲ್ಲಿ ನಿನಗೆ ನಂಬಿಕೆಯಿದೆಯೇ?’ ಎಂದು ಅವಳನ್ನು ಪ್ರಶ್ನಿಸಿದೆ. ಅದಕ್ಕವಳು ನಗುತ್ತಾ ‘ಖಂಡಿತಾ ಇಲ್ಲ. ಆದರೆ ನಮ್ಮ ಹಿರಿಯರ ನಂಬಿಕೆಗಳು ಹೇಗಿದ್ದವು ಎನ್ನುವುದರ ಅರಿವು ನಮಗಿರಬೇಕೆಂದು ನಾವು ಭಾವಿಸುತ್ತೇವೆ. ಅದಕ್ಕಾಗಿಯೇ ಈ ಮ್ಯೂಸಿಯಮ್ಮು’ ಎಂದಳು.

ಮಜಾಮೆಯಲ್ಲಿ ನಮ್ಮನ್ನು ಹೋಟೆಲೊಂದರಲ್ಲಿ ಉಳಿಸಿಕೊಳ್ಳಲಾಗಿತ್ತು. ಸಂಜೆ ನಮ್ಮನ್ನು ಭೇಟಿಯಾದ ರೋಟರಿ ಅಧ್ಯಕ್ಷ ಜಾಕ್ವಿಸ್‌ ಬ್ಯುಲಿಯು ‘ಮಜಾಮೆ ರೋಟರಿಯ ಎಲ್ಲಾ ಸದಸ್ಯರು ಮತ್ತವರ ಮಡದಿಯರು ಉದ್ಯೋಗಗಳಲ್ಲಿದ್ದಾರೆ. ಮನೆಗಳಲ್ಲಿ ಉಳಿಸಿಕೊಂಡರೆ ನಿಮ್ಮನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗಲಾರದೆಂಬ ಹೆದರಿಕೆಯಿಂದ ಹೀಗೆ ಇಲ್ಲಿ ಉಳಿಸಿಕೊಳ್ಳಬೇಕಾಗಿದೆ’ ಎಂದು ವಿಷಾದಿಸಿದ. ಆ ಬಳಿಕ ಮಜಾಮೆಯ ಮೇಯರನಲ್ಲಿಗೆ ನಮ್ಮನ್ನು ಕರಕೊಂಡು ಹೋಗಿ ಪರಿಚಯಿಸಿದ. ಅಂದು ಸಂಜೆ ಭೋಜನಕೂಟಕ್ಕೆ ಬಂದಿದ್ದ ರೋಟರಿ ಸದಸ್ಯನೊಬ್ಬ ‘ನನ್ನದೊಂದು ಬ್ಯಾಗು ತಯಾರಿಕಾ ಘಟಕವಿದೆ. ನಾಳೆ ನಿಮ್ಮನ್ನು ಅಲ್ಲಿಗೆ ಕರೆದೊಯ್ಯುತ್ತೇನೆ ‘ ಎಂದು ತಾನಾಗಿಯೇ ಹೇಳಿದ. ನಾಳೆ ನಮಗೊಂದು ಬ್ಯಾಗು ಉಡುಗೊರೆ ಸಿಗುತ್ತದೆಂದು ನಾವು ಕಾದೆವು. ಆದರೆ ಮರುದಿನ ಆತ ಬರಲೇಇಲ್ಲ!

ಚೆಲುವಿನ ಮಡದಿ : ಮಜಾಮೆಯಲ್ಲಿ ನಾವು ಉಳಿದುಕೊಂಡದ್ದು ಸೌರಮಾನ ಉಗಾದಿಯಂದು. ಅಂದು ಸಂಜೆ ಮಜಾಮೆಯ ಬೀದಿ ಸುತ್ತುತ್ತಿದ್ದಾಗ ಒಂದು ತಮಾಷೆ ನಡೆಯಿತು.

ಫ್ರಾನ್ಸಿನ ಅಂಗಡಿಗಳಲ್ಲಿ ವಸ್ತುಗಳನ್ನು ಒಪ್ಪವಾಗಿ ಜೋಡಿಸಿಡುವುದನ್ನು ನೋಡುವುದೇ ಒಂದು ಚೆಂದ. ವಸ್ತುಗಳ ಮೇಲೆ ಬೆಲೆಯನ್ನು ನಮೂದಿಸಿರುವುದರಿಂದ ಆಯ್ಕೆಯ ತೀರ್ಮಾನ ಮಾಡುವುದೂ ಕೂಡಾ ಸುಲಭ. ಇಡೀ ಅಂಗಡಿಯನ್ನು ಸುತ್ತಿ ಏನನ್ನೂ ಕೊಳ್ಳದಿದ್ದರೂ ಅಂಗಡಿಯವರಿಗೆ ಸಿಟ್ಟು ಬರುವುದಿಲ್ಲ. ಬದಲಾಗಿ, ಖಾಲಿ ಕೈಯಲ್ಲಿ ಅಂಗಡಿಯಿಂದ ಹೊರಗೆ ಹೋಗುವಾಗ ವಿನಯದಿಂದ ‘ಮೆರ್ಸಿ, ಅವ್ಪು (ಧನ್ಯವಾದಗಳು, ಇನ್ನೊಮ್ಮೆ ನೋಡೋಣ)’ ಎಂದು ಹೇಳಲು ಅವರು ಮರೆಯುವುದಿಲ್ಲ. ಫ್ರಾನ್ಸಿನಲ್ಲಿ ಅಂಗಡಿಯವರಿಂದ ಹೀಗೆ, ಏನೂ ಕೊಳ್ಳದೆಯೂ ‘ಮೆರ್ಸಿ’ ಪಡೆದವರಲ್ಲಿ ನಮ್ಮದು ಖಂಡಿತಾ ವಿಶ್ವ ದಾಖಲೆಯಾಗಿರಬಹುದು!

ಮಜಾಮೆಯ ಅಂಗಡಿಯೊಂದರ ಮುಂದುಗಡೆ ಒಂದು ಬೋರ್ಡು ಇರಿಸಲಾಗಿತ್ತು. ಅದರಲ್ಲಿ ಏನೋ ಫ್ರೆಂಚ್‌ ಬರವಣಿಗೆಗಳಿದ್ದವು. ಕೆಳಗಡೆ ದೊಡ್ಡದಾಗಿ 10 ಫ್ರಾಂಕುಗಳು(ಎಪ್ಪತ್ತು ರೂ) ಎಂದು ಬರೆದಿದ್ದರು. ‘ಈ ಅಂಗಡಿಯಲ್ಲಿ ಎಲ್ಲವೂ ಹತ್ತು ಫ್ರಾಂಕುಗಳಿಗೆ ದೊರೆಯುತ್ತವೆ. ನೋಡಿಕೊಂಡು ಬರೋಣ’ ಎಂದು ನಮ್ಮ ಮಹಿಳಾಮಣಿಯರಿಬ್ಬರೂ ಆತುರಾತುರವಾಗಿ ಆ ಅಂಗಡಿಯೊಳಗೆ ನುಗ್ಗಿದರು. ಸ್ವಲ್ಪವೇ ಹೊತ್ತಲ್ಲಿ ಪೆಚ್ಚುಮೋರೆ ಹಾಕಿಕೊಂಡು ಹೊರಬಂದರು. ನಾವಾಗ ಕುತೂಹಲದಿಂದ ‘ಏನಾಯಿತು’ ಎಂದು ಪ್ರಶ್ನಿಸಿದೆವು.

ನಿರಾಶೆಯ ದನಿಯಲ್ಲಿ ಅನಿತಾ ಹೇಳಿದಳು. ‘ಅಲ್ಲಿ 10 ಫ್ರಾಂಕು ಕೊಟ್ಟರೆ ಯಾವುದೇ ಬಟ್ಟೆಗೂ ಇಸ್ತ್ರಿ ಹಾಕಿ ಕೊಡುತ್ತಾರಂತೆ!’

ಅಂದು ರಾತ್ರಿಯ ಭೋಜನ ಕೂಟಕ್ಕೆ ಮುನ್ನ ಇನ್ನೂ ಹೆಚ್ಚಿನ ವಿನೋದವೊಂದು ನಡೆಯಿತು. ಭೋಜನ ಕೂಟವನ್ನು ನಾವಿದ್ದ ಹೋಟೆಲಿನ ಹಾಲೊಂದರಲ್ಲಿ ಏರ್ಪಡಿಸಲಾಗಿತ್ತು. ಅತಿಥೇಯ ರೋಟರಿ ಸದಸ್ಯನೊಬ್ಬ ಇಂಗ್ಲಿಷ್‌ ಚೆನ್ನಾಗಿ ಬಲ್ಲ ತನ್ನ ಮಡದಿಯನ್ನು ಭೋಜನಕೂಟಕ್ಕೆ ಕರಕೊಂಡು ಬಂದಿದ್ದ. ಅವರೆಲ್ಲರೂ ನಮ್ಮ ತಂಡ ಮಹಡಿಯಿಂದ ಇಳಿಯುವುದನ್ನು ಕಾಯುತ್ತಾ ಕುಳಿತಿದ್ದರು.

ನಮ್ಮ ಪೈಕಿ ಮೊದಲು ಇಳಿದು ಬಂದ ಹೆಬ್ಬಾರರು ತಮ್ಮ ಪರಿಚಯವನ್ನು ಹೇಳಿಕೊಂಡರು. ಅವರ ಹಿಂದೆಯೇ ಇದ್ದ ಗುರುವೂ ಕೂಡಾ ಹಾಗೇ ಮಾಡಿದ. ಅಷ್ಟು ಹೊತ್ತಿಗೆ ಎಲೈನ್‌ ಇಳಿದು ಬಂದಳು. ಅವಳನ್ನು ಕಾಣುತ್ತಲೇ ಇಂಗ್ಲೀಷ್‌ ಬಲ್ಲ ಆ ಮಹಿಳೆ  ಗುರುವಿನೊಡನೆ ‘ಯುವರ್‌ ವೈಫ್‌ ಈಸ್‌ ಬ್ಯೂಟಿಫುಲ್‌’ (ನಿನ್ನ ಹೆಂಡತಿ ಅಂದವಾಗಿದ್ದಾಳೆ) ಅಂದಳು. ಬ್ರಹ್ಮಚಾರಿ ತಾನೆಂದು ದೃಢವಾಗಿ ನಂಬಿರುವ ಗುರು, ಏನು ಹೇಳಬೇಕೆಂದು ತಿಳಿಯದೆ ನಾಚುತ್ತಾ ಕೆಂಪಾಗಿ ನಿಂತುಬಿಟ್ಟ. ಕೊನೆಗೆ ಆ ಫ್ರೆಂಚ್‌ ಮಹಿಳೆಗೆ ಎಲೈನ್‌ ಗುರುವಿನ ಮಡದಿಯಲ್ಲ ಎನ್ನುವುದು ಗೊತ್ತಾಗಿ ಪೆಚ್ಚಾಯಿತು. ಆದರೆ ಆಡಿದ ಮಾತನ್ನು ವಾಪಾಸು ತೆಗೆದುಕೊಳ್ಳಲು ಸಾಧ್ಯವಿದೆಯೇ?

ಎಲ್ಲರಿಗಿಂತ ತಡವಾಗಿ ಮಹಡಿಯಿಂದಿಳಿದ ನನಗೆ ಇದೊಂದೂ ಗೊತ್ತಿರಲಿಲ್ಲ. ಊಟವಾಗಿ ಎಲ್ಲರೂ ಹೋದ ಮೇಲೆ ಎಲೈನ್‌ ಗುರುವನ್ನು ತರಾಟೆಗೆ ತೆಗೆದುಕೊಂಡಳು. ‘ನಿನಗೆ ಇಪ್ಪತ್ತೆಂಟು ವರ್ಷ. ನನಗೆ ಮೂವತ್ತೆಂಟು. ಅವಳಿಗೆ ಪ್ರಾಯವೂ ಗೊತ್ತಾಗುವುದಿಲ್ಲವೆ? ಅವಳು ಹಾಳಾಗಿ ಹೋಗಲಿ. ನಿನಗಾದರೂ ಈಕೆ ನನ್ನ ಹೆಂಡತಿ ಅಲ್ಲವೆಂದು ಹೇಳಲು ಬಾಯಿ ಬರಲಿಲ್ಲವೆ? ಪೆದ್ದ!’

ಆಗ ನಿಕೋಲ್‌ ಹೇಳಿದ ‘ನನಗೆ ಮೂರು ಮಕ್ಕಳು, ನನ್ನ ಗಂಡನಿಗೆ ಎರಡು ಮಕ್ಕಳು’ ಎಂಬ ವಾಕ್ಯ ನೆನಪಾಗಿ ತುಂಬಾ ಕೂಲ್‌ ಆಗಿ ಹೇಳಿದೆ. ‘ಎಲ್ಲಕ್ಕಿಂತ ಒಳ್ಳೆಯ ಹಾದಿಯೊಂದಿತ್ತು. ನಿನ್ನ ಹೆಂಡತಿ ಅಂದವಾಗಿದ್ದಾಳೆಂದು ಆ ಫ್ರೆಂಚ್‌ ಮಹಿಳೆ ಹೇಳುವಾಗ ಗುರು ‘ನನಗೆ ಮಕ್ಕಳಿಲ್ಲದ ನನ್ನ ಹೆಂಡತಿಗೆ ಇಬ್ಬರು ಮಕ್ಕಳು’ ಎಂದು ಹೇಳಬೇಕಿತ್ತು!’

ಇಬ್ಬರು ಮಕ್ಕಳ ತಾಯಿ ಎಲೈನ್‌ ನಮ್ಮ ನಗುವಿನ ಅಬ್ಬರಕ್ಕೆ ಕರಗಿ ಅದಕ್ಕೆ ತನ್ನ ಕಾಣಿಕೆಯನ್ನೂ ಸಲ್ಲಿಸಿದಳು.

….. ದಂತಭಗ್ನಂ :
ಮಜಾಮೆಯಲ್ಲಿ ಸೋಫಿಕ್‌ ನೀಡಲ್ಸ್‌ ಎಂಬ ಹಲ್ಲಿಗೆ ಇಂಜೆಕ್ಷನ್‌ ಕೊಡಲು ಬಳಸುವ ಸೂಜಿಯನ್ನು ಉತ್ಪಾದಿಸುವ, ಕಾರ್ಖಾನೆಯೊಂದಕ್ಕೆ ಭೇಟಿ ನೀಡುವ ಅವಕಾಶ ನಮಗೆ ಎಪ್ರಿಲ್‌ ಹದಿನೈದರಂದು ಸಿಕ್ಕಿತು. ಈ ಕಾರ್ಖಾನೆ ತುಲೋಸ್‌ನ ಪೂರ್ವಕ್ಕೆ 160 ಕಿ.ಮೀ. ದೂರದಲ್ಲಿರುವ ಮಜಾಮೆಗೆ ವಿಶ್ವದ ನಕ್ಷೆಯಲ್ಲಿ ಸ್ಥಾನ ಗಳಿಸಿಕೊಡುವಂತೆ ಮಾಡಿದೆ. ಸೋಫಿಕ್‌ ನೀಡಲ್ಸ್‌ನ ಯಜಮಾನನ ಹೆಸರು ಪ್ಯಾಟ್ರಿಕ್‌. ಈತ ಒಬ್ಬ ರೋಟೇರಿಯನ್‌. ಇಂಗ್ಲೀಷಲ್ಲಿ ನಿರರ್ಗಳವಾಗಿ ಮಾತಾಡಬಲ್ಲ ಈತನದು ಆಕರ್ಷಕ ವ್ಯಕ್ಷ್ತಿತ್ವ. ಕಂಪೆನಿಯ ವಿವರ ಕೇಳಿದಾಗ ನಾಲ್ಕು ವರ್ಷಗಳ ಬ್ಯಾಲೆನ್ಸ್‌ ಶೀಟು ನಮಗಿತ್ತು ವಿವರಿಸತೊಡಗಿದ. ವಿವರಣೆ ಮುಗಿದ ಬಳಿಕ ನಮ್ಮ ತಲೆಯನ್ನು ಪ್ಲಾಸ್ಟಿಕ್‌ ಟೊಪ್ಪಿಯಿಂದ ಪೂರ್ತಿಯಾಗಿ ಮುಚ್ಚಿ ಕೂದಲು, ಎಲ್ಲೂ ಬೀಳದಂತೆ ನೋಡಿಕೊಂಡು ಕಾರ್ಖಾನೆಯ ಒಳಗೆ ಕರೆದೊಯ್ದ. ಇಂಗ್ಲೀಷ್‌ ಬಲ್ಲ ತರುಣ ಎಂಜಿನಿಯರನೊಬ್ಬ ನಮ್ಮ ಮಾರ್ಗದರ್ಶಕನಾದ.

ಸೋಫಿಕ್‌ ನೀಡಲ್ಸ್‌ ಡಿಸ್‌ಪೋಸೇಬಲ್‌ ಇಂಜೆಕನ್‌ ಸೂಜಿಯನ್ನು ತಯಾರಿಸುವ ಕಾರ್ಖಾನೆ. ಅದರಲ್ಲಿ ಎರಡು ಘಟಕಗಳಿವೆ. ಒಂದರಲ್ಲಿ ಸೂಜಿಯ ಉತ್ಪಾದನೆಯಾಗುತ್ತದೆ. ಎರಡನೆಯದರಲ್ಲಿ ಸೂಜಿಯ ಸಂಸ್ಕರಣ ಕಾರ್ಯ ನಡೆಯುತ್ತದೆ. ನಾವು ನೋಡಿದ್ದು ಎರಡನೆಯ ಘಟಕವನ್ನು. ಈ ಘಟಕದ ಒಂದನೇ ಮಹಡಿಯಲ್ಲಿ ಸೂಜಿಗಳ ಸಂಸ್ಕರಣ ಕಾರ್ಯವನ್ನು, ಯಂತ್ರವೊಂದು ನಡೆಸುತ್ತದೆ. ಎರಡನೇ ಮಹಡಿಯಲ್ಲಿ ದಂತವೈದ್ಯಕೀಯಕ್ಕೆ ಸಂಬಂಧಿಸಿದ ಪ್ಲಾಸ್ಟಿಕ್ಕು ಸಾಧನಗಳನ್ನು ಮತ್ತು ಸಿರಿಂಜುಗಳನ್ನು ಉತ್ಪಾದಿಸಲಾಗುತ್ತದೆ. ಸಂಸ್ಕರಿತ ಸೂಜಿಯನ್ನು ಅಂತಿಮವಾಗಿ ಕಂಪ್ಯುಟರ್‌ ಒಂದು ಪರಿಶೀಲನೆಗೊಳಪಡಿಸಿ ದೋಷಪೂರಿತವಾದವನ್ನು ತಿರಸ್ಕರಿಸುತ್ತದೆ. ಎರಡನೆಯ ಮಹಡಿಯಲ್ಲಿ ಹನ್ನೆರಡು ವಿಭಿನ್ನ ಯಂತ್ರಗಳಿದ್ದು ಅವೆಲ್ಲವನ್ನೂ ಒಬ್ಬನೇ ಎಂಜಿನಿಯರ್‌ ನಿಭಾಯಿಸುತ್ತಾನೆ. ಯಂತ್ರಗಳ ದುಡಿತ ಮತ್ತು ದಕ್ಷತೆಯ ಬಗ್ಗೆ ಮಾತಾಡುವಂತಿಲ್ಲ. ಆದರೆ ಅವು ಉದ್ಯೋಗವನ್ನಂತೂ ಸೃಷ್ಟಿಸಲಾರವು ಎಂಬ ಗಾಂಧೀಜಿಯವರ ಮಾತುಗಳು ಆ ಕ್ಷಣಕ್ಕೆ ನನ್ನನ್ನು ಕಾಡಿದವು.

ಸೋಫಿಕ್‌ ನೀಡಲ್ಸ್‌ನಲ್ಲಿ ಮೂರು ಶಿಫ್ಟ್‌ಗಳಲ್ಲಿ ಕೆಲಸಕಾರ್ಯಗಳು ನಡೆಯುತ್ತವೆ. ಇಲ್ಲಿರುವ 36 ಸಿಬ್ಬಂದಿಗಳ ಪೈಕಿ 24 ಮಂದಿ ಎಂಜಿನಿಯರುಗಳು. ಸೋಫಿಕ್‌ ನೀಡಲ್ಸ್‌ ಯುರೋಪಿನಲ್ಲೇ ಅತಿದೊಡ್ಡ ದಂತಸೂಜಿ ಕಾರ್ಖಾನೆಯಾಗಿದ್ದು ಯುರೋಪಿನಲ್ಲಿ ಉತ್ಪಾದನೆಯಾಗುವ ಒಟ್ಟು ದಂತ ಸೂಜಿಗಳಲ್ಲಿ ಇದರ ಪಾಲು ಶೇಕಡಾ ಎಪ್ಪತ್ತರಷ್ಟು; ಕಾರ್ಖಾನೆ ಉತ್ಪಾದಿಸುವ ದಂತಸೂಜಿಗಳಲ್ಲಿ ಶೇಕಡಾ ಇಪ್ಪತ್ತೈದರಷ್ಟು ಫ್ರಾನ್ಸಿನಲ್ಲೇ ಖರ್ಚಾಗುತ್ತದೆ. ಉಳಿದ ಶೇಕಡಾ ಎಪ್ಪತ್ತೈದರಷ್ಟು ಅಮೇರಿಕಾದ ಸಂಯುಕ್ತ ಸಂಸ್ಥಾನ, ಜಪಾನ್‌, ದಕ್ಷಿಣ ಅಮೇರಿಕಾ ಮತ್ತು ಏಶಿಯಾದ ಕೆಲವು ರಾಷ್ಟ್ರಗಳಿಗೆ ರಫ್ತಾಗುತ್ತದೆ. ‘ಭಾರತಕ್ಕೂ ನಮ್ಮ ಸೂಜಿ ಹೋಗುತ್ತಿದೆ. ಪೂನಾದಲ್ಲಿರುವ ಮಿ. ಫೆರೋಕರ್‌ ಭಾರತದಲ್ಲಿ ನಮ್ಮ ಡೀಲರ್‌’ ಎಂದು ಯಜಮಾನ ಪ್ಯಾಟ್ರಿಕ್‌ ಹೇಳಿದ. ತನ್ನ ಕಂಪೆನಿ ಒಳ್ಳೆಯ ಲಾಭದಾಯಕ ಸ್ಥಿತಿಯಲ್ಲಿದೆಯೆಂದೂ ಆತ ತಿಳಿಸಿದ. ಅಲ್ಲಿಂದ ಬರುವಾಗ ನಮಗೆಲ್ಲರಿಗೂ ಆರು ಸೂಜಿಗಳುಳ್ಳ ಒಂದು ಪ್ಯಾಕನ್ನು ಉಡುಗೊರೆಯಾಗಿ ನೀಡಿದ. ಅದರ ಜತೆಯಲ್ಲಿ ಆರು ಸಿರಿಂಜ್‌ಗಳನ್ನೂ ಕೂಡಾ.

ನಾನು ಉದ್ಯೋಗಿಯಾಗಿರುವ ನೆಹರೂ ಮೆಮೋರಿಯಲ್‌ ಕಾಲೇಜನ್ನು ನಡೆಸುತ್ತಿರುವ, ಸುಳ್ಯದ ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಶನ್‌ ಸಂಸ್ಥೆ ಒಂದು ಡೆಂಟಲ್‌ ಕಾಲೇಜನ್ನು ನಡೆಸುತ್ತದೆ. ಅದರಲ್ಲಿ ಸ್ನಾತಕೋತ್ತರ ತರಗತಿಗಳೂ ಇವೆ. ಭಾರತಕ್ಕೆ ಬಂದ ಬಳಿಕ ಸೋಫಿಕ್‌ ನೀಡಲ್ಸ್‌ ನನಗೆ ನೀಡಿದ ಸೂಜಿ ಮತ್ತು ಸಿರಿಂಜುಗಳನ್ನು ನಮ್ಮ ವಿದ್ಯಾಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ಕುರುಂಜಿ ವೆಂಕಟ್ರಮಣ ಗೌಡರಿಗೆ ಕೊಟ್ಟು ದಂತಫ್ಯಾಕ್ಟರಿಯ ವಿವರಗಳನ್ನು ತಿಳಿಸಿದೆ. ಅವರಿಗೆ ಖುಷಿಯಾಗಿ ಒಳಗೆ ಹೋಗಿ ಗಂಧದ ಮಾಲೆಯೊಂದನ್ನು ತಂದು ನನಗೆ ತೊಡಿಸಿ ‘ವಿದೇಶಕ್ಕೆ ಹೋಗಿದ್ದಾಗಲೂ ನಮ್ಮನ್ನು ನೀವು ಮರೆಯಲಿಲ್ಲವಲ್ಲಾ. ಬಹಳ ಸಂತೋಷ’ ಎಂದು ಆದರದಿಂದ ನಗುತ್ತಾ ಹೇಳಿದರು.

ಮಜಾಮೆಯ ವೃದ್ಧಾಶ್ರಮ

ದಂತ ಸೂಜಿ ಫ್ಯಾಕ್ಟರಿಯ ಬಳಿಕ ನಾವು ನೋಡಿದ್ದು ಮಜಾಮೆಯ ಮುನಿಸಿಪಲ್‌ ಆಸ್ಪತ್ರೆಯನ್ನು. ಹೆಸರು ಕೇಳಿ ಎಲ್ಲೋ ನಮ್ಮ ಸರಕಾರಿ ಆಸ್ಪತ್ರೆಗಳಂತಿರಬಹುದು ಎಂದುಕೊಂಡಿದ್ದ ನಮಗೆಲ್ಲರಿಗೂ ಅಚ್ಚರಿಯಾಗುವಷ್ಟು ಅತ್ಯಾಧುನಿಕ ವ್ಯವಸ್ಥೆಯ ಆಸ್ಪತ್ರೆಯದು. ಮನುಷ್ಯರಿಗೆ ಬರುವ ಕ್ಷುಲ್ಲಕ ಶೀತದಿಂದ ಹಿಡಿದು ಭಯಾನಕ ಏಡ್ಸ್‌ವರೆಗಿನ ಎಲ್ಲಾ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಅಲ್ಲಿ ಪ್ರತ್ಯಪ್ರತ್ಯೇಕ ವಿಭಾಗಗಳಿವೆ. ಮನೋರೋಗಿಗಳಿಗಾಗಿ ಬೇರೆಯೇ ವ್ಯವಸ್ಥೆಯೊಂದಿದೆ. ಭಾರತದ ಯಾವುದೇ ಖಾಸಗಿ ಆಸ್ಪತ್ರೆಯಲ್ಲೂ ಇಷ್ಟೊಂದು ಮುತುವರ್ಜಿಯಿಂದ ದುಡಿಯುವ ಸಿಬ್ಬಂದಿಗಳನ್ನು ಕಾಣುವುದು ಕಷ್ಟವೇನೋ? ಫ್ರಾನ್ಸಿನ ಸಾಮಾಜಿಕ ಭದ್ರತಾ ವ್ಯವಸ್ಥೆಯಲ್ಲಿ ಆರೋಗ್ಯ ಸೌಲಭ್ಯವೂ ಒಂದು. ಪ್ರಜೆಗಳ ಆರೋಗ್ಯವನ್ನು ಕಾಪಾಡುವುದು ಪ್ರಭುತ್ವದ ಹೊಣೆಗಾರಿಕೆ. ಆದುದರಿಂದ ಆಸ್ಪತ್ರೆಗಳು ಅತ್ಯಾಧುನಿಕವಾಗಿರುತ್ತವೆ. ಬಿಡಿಕಾಸು ಖರ್ಚಿಲ್ಲದೆ ಫ್ರೆಂಚರು ಅತ್ಯಾಧುನಿಕ ಚಿಕಿತ್ಸಾ ವಿಧಾನಗಳಿಂದ ತಮ್ಮ ಆರೋಗ್ಯ ಸಂರಕಿಸಿಕೊಳ್ಳುತ್ತಾರೆ.

ಆದರೆ ಫ್ರಾನ್ಸಿನಲ್ಲಿ ವೃದ್ಧಾಪ್ಯ ಒಂದು ಶಾಪ ಎನ್ನುವುದು ಅರ್ಥವಾಗಬೇಕಾದರೆ ಅಲ್ಲಿನ ಯಾವುದಾದರೂ ಒಂದು ವೃದ್ಧಾಶ್ರಮಕ್ಕೆ ಭೇಟಿ ನೀಡಬೇಕು. ಮಜಾಮೆ ಮುನಿಸಿಪಾಲಿಟಿಯ ಆಶ್ರಯದಲ್ಲಿ ಕಾರ್ಯವೆಸಗುವ ವೃದ್ಧಾಶ್ರಮದ ದರ್ಶನವನ್ನು ನಾನಂತೂ ಎಂದಿಗೂ ಮರೆಯಲಾರೆ. ಪಟ್ಟಣದ ಹೊರವಲಯದಲ್ಲಿ, ಹತ್ತು ಮೈಲಿ ದೂರದ ಪ್ರಶಾಂತ ಪರಿಸರದಲ್ಲಿ, ವಿಶಾಲವಾದ ಹೊಲದ ಮಧ್ಯದಲ್ಲಿ, ಈ ವೃದ್ಧಾಶ್ರಮವಿದೆ. ವೃದ್ಧರನ್ನು ಶಬ್ದ ಮತ್ತು ವಾಯು ಮಾಲಿನ್ಯಗಳಿಂದ ರಕಿಸಲಿಕ್ಕಾಗಿ ವೃದ್ಧಾಶ್ರಮವನ್ನು ಊರಿನ ಹೊರಗೆ ದೂರದಲ್ಲಿ ನಿರ್ಮಿಸಲಾಗಿದೆ.

ಈ ವೃದ್ಧಾಶ್ರಮದ ಕೆಪಾಸಿಟಿ ನೂರು. ಅಲ್ಲಿದ್ದದ್ದು ಎಪ್ಪತ್ತು ಮಂದಿ ವೃದ್ಧರು ಮಾತ್ರ. ಅಂದರೆ ಇನ್ನೂ ಮೂವತ್ತು ಮಂದಿಗೆ ಅಲ್ಲಿ ಅವಕಾಶವಿದೆ. ಅಲ್ಲಿದ್ದ ಎಪ್ಪತ್ತು ಮಂದಿಯಲ್ಲಿ ಸರೀ ಅರ್ಧಾಂಶದಷ್ಟು ಮಂದಿ ವೃದ್ಧಿಯರು. ಬುದ್ಧಿಮಾಂದ್ಯರು, ನೆನಪು ಶಕ್ತಿ ಕಳೆದುಕೊಂಡವರು, ನಡೆಯಲಾಗದವರು, ದೃಷ್ಟಿಕಳಕೊಂಡವರು  ಹೀಗೆ ಬೇರೆಯವರ ಸಹಾಯವಿಲ್ಲದೆ ಜೀವಿಸಲು ಸಾಧ್ಯವೇ ಇಲ್ಲದ ಮಂದಿಗಳವರು.

ಫ್ರಾನ್ಸಿನಲ್ಲಿ ಪ್ರೌಢರಾದ ಮಕ್ಕಳು ಹೆತ್ತವರಿಂದ ಪ್ರತ್ಯೇಕವಾಗಿ ಸ್ವತಂತ್ರ ಜೀವನ ಸಾಗಿಸುತ್ತಾರೆ. ಬಿಡುವಾದಾಗ ಬಂದು ಹೆತ್ತವರನ್ನು ನೋಡಿ, ಮಾತಾಡಿಸಿಕೊಂಡು ಹೋಗುತ್ತಾರೆ. ಹೆತ್ತವರು ಮುದುಕರೋ, ರೋಗಪೀಡಿತರೋ ಆಗಿ ಅಸಹಾಯ ಸ್ಥತಿಯಲ್ಲಿದ್ದರೂ ಮಕ್ಕಳು ಅವರ ಸೇವೆಗಾಗಿ ಮನೆಯಲ್ಲಿ ನಿಲ್ಲುವುದಿಲ್ಲ. ತಮ್ಮ ಮನೆಗೂ ಹೆತ್ತವರನ್ನು ಕರೆತಂದು ಅವರ ಸೇವೆ ಮಾಡುವುದಿಲ್ಲ. ವೃದ್ಧ ಪತಿ ಪತ್ನಿಯರು ಪರಸ್ಪರ ನೆರವಾಗುತ್ತಾ, ಹೆಚ್ಚೆಂದರೆ ಮನೆಗೆಲಸದಾಕೆಯನ್ನು ಆಶ್ರಯಿಸಿ ಜೀವನ ಸಾಗಿಸಬೇಕು. ಮನೆಗೆಲಸದಾಕೆಯಾದರೋ ದಿನಕ್ಕೆ ಮೂರು ಗಂಟೆಗಳಿಗಿಂತ ಹೆಚ್ಚು ಹೊತ್ತು ನಿಲ್ಲುವವಳಲ್ಲ. ಮನೆಗೆಲಸದಾಕೆಗೆ ಗಂಟೆಗೆ ಕನಿಷ್ಠ ಕೂಲಿ ಹದಿನೈದು ಫ್ರಾಂಕುಗಳು (ನೂರಾ ಐದು ರೂಪಾಯಿಗಳು!) ಆಕೆಯಿಲ್ಲದ ಹೊತ್ತಲ್ಲಿ ಈ ವೃದ್ಧರ ಪಾಡು ಹೇಳಿ ಸುಖವಿಲ್ಲ.

ವೃದ್ಧ ಪತಿ  ಪತ್ನಿಯರಲ್ಲಿ ಯಾರಾದರೂ ಒಬ್ಬರು ತೀರಿಕೊಂಡು ಬಿಟ್ಟರೆ ಬದುಕಿ ಉಳಿದವರನ್ನು ನೋಡುವವರು ಯಾರು? ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುವುದೊಂದೇ ಉಳಿದ ಹಾದಿ. ಸುಖದುಃಖ ಹೇಳಿಕೊಳ್ಳಲು ಸಂಗಾತಿ ಇಲ್ಲದೆ, ಮಕ್ಕಳು, ಮೊಮ್ಮಕ್ಕಳಿಂದ ದೂರವಾಗಿ, ಯಾರಿಗೂ ಬೇಡವಾದ ಜೀವವಾಗಿ ಅವರು ದಿನ ದೂಡಬೇಕು. ಅದೂ ಯಾರ ಮಧ್ಯೆ! ತಮ್ಮ ಹಾಗೆ ಸಾವು ಎಂದು ಬಂದೀತೋ ಎಂದು ಕಾಯುವ ದುರ್ದೈವಿಗಳ ಮಧ್ಯೆ! ಸಾವು ಬೇಗ ಬಾರದೆ ಇದ್ದರೆ ಎರಡು ಅಥವಾ ಮೂರು ತಿಂಗಳುಗಳಿಗೊಮ್ಮೆ ಮಕ್ಕಳೋ, ಮೊಮ್ಮಕ್ಕಳೋ ಬಂದು ಅವರನ್ನು ಮಾತಾಡಿಸಿಹೋಗುತ್ತಾರೆ. ಆದರೆ ಕಣ್ಣೇ ಕಾಣದ, ಮಾತು ನಿಂತುಹೋದ, ಬುದ್ಧಿಭ್ರಮಣೆಗೊಂಡ ಮಂದಿಗಳಿಗೆ ನೋಡುವ, ಮಾತಾಡುವ ಪ್ರೀತಿಯನ್ನು ಅನುಭವಿಸುವ ಭಾಗ್ಯವೂ ಇರುವುದಿಲ್ಲ.

ನಾವು ವೃದ್ಧಾಶ್ರಮದಲ್ಲಿದ್ದಾಗ ಸುಮಾರು ಮೂವತ್ತರ ಹರೆಯದ ಹೆಣ್ಣೊಬ್ಬಳು, ಅವಳ ತಾಯಿಯನ್ನು ನೋಡಲು ತನ್ನ ಮೂರು ವರ್ಷದ ಹೆಣ್ಣು ಮಗಳೊಡನೆ ಬಂದಿದ್ದಳು. ಸುಂದರವಾದ ಗುಲಾಬಿಯ ಪಕಳೆಗಳಿಂದಲೇ ಸೃಷ್ಟಿಯಾದಂತಿದ್ದ ಆ ಪುಟ್ಟ ಹುಡುಗಿ ತನ್ನ ಅಜ್ಜಿಗೆ ಮಾತ್ರವಲ್ಲದೆ ವಿಸಿಟರ್ಸ್‌ ಹಾಲ್‌ನಲ್ಲಿದ್ದ ಎಲ್ಲಾ ವೃದ್ಧರಿಗೆ ದೂರದಿಂದಲೇ ಟಾಟಾ ಮಾಡುತ್ತಾ, ಪಾಸಿಂಗ್‌ ಕಿಸ್ಸ್‌ ನೀಡುತ್ತಾ ರಂಜನೆ ಒದಗಿಸಿದಳು. ಆದರೆ ಎಲ್ಲವೂ ದೂರದಿಂದಲೇ. ಹತ್ತಿರ ಹೋದರೆ ಅಜ್ಜಿಗಿರಬಹುದಾದ ರೋಗ ಮೊಮ್ಮಗಳಿಗೂ ಬಂದುಬಿಟ್ಟರೆ! ಗ್ರಾಮೀಣ ಭಾರತದಲ್ಲಿ ಮಕ್ಕಳು ಹೆತ್ತವರಿಗಿಂತಲೂ ಹೆಚ್ಚು ಹಚ್ಚಿಕೊಳ್ಳುವುದು ಅಜ್ಜ ಅಜ್ಜಿಯರನ್ನು. ತಮ್ಮನ್ನು ತಮ್ಮ ಮೊಮ್ಮಕ್ಕಳಲ್ಲಿ ಗುರುತಿಸುವ ಮಂದಿಗಳು ಅದೆಷ್ಟು ಮಂದಿ ಭಾರತದಲ್ಲಿಲ್ಲ? ಇಲ್ಲಿ ತಿಮ್ಮಪ್ಪಯ್ಯರ ಮೊಮ್ಮಗನ ಹೆಸರೂ ತಿಮ್ಮಪ್ಪಯ್ಯನೆಂದೇ. ದೇವಕಿಯ ಮೊಮ್ಮಗಳು ದೇವಕಿ ಎಂಬ ಹೆಸರಿನವಳೇ ಆಗಿರುತ್ತಾಳೆ. ಒಂದೇ ಕುಟುಂಬದಲ್ಲಿ ಅದೆಷ್ಟು ವೆಂಕಟರಮಣರು, ನಾರಾಯಣರು, ಅಬ್ದುಲ್ಲಗಳು ಮತ್ತು ಅಂತೋಣಿಗಳು! ಆದರೆ ಫ್ರಾನ್ಸಿನ ಅಜ್ಜ ಅಜ್ಜಿಯರಿಗೆ ಆ ಯೋಗವಿಲ್ಲ. ಮೊಮ್ಮಕ್ಕಳಿಗೆ ಆ ಭಾಗ್ಯವಿಲ್ಲ.

ಭೌತಿಕ ಸೌಕರ್ಯದ ದೃಷ್ಟಿಯಿಂದ ಆಶ್ರಮದ ಬಗ್ಗೆ ಯಾವುದೇ ತಕರಾರು ತೆಗೆಯಲು ಸಾಧ್ಯವಿಲ್ಲ. ಪ್ರತಿ ಕೋಣೆಗೂ ವಿಪುಲವಾದ ನೈಸರ್ಗಿಕ ಗಾಳಿ ಮತ್ತು ಬೆಳಕಿನ ವ್ಯವಸ್ಥೆಯಿದೆ. ಇಪ್ಪತ್ತನಾಲ್ಕು ತಾಸೂ ವಿದ್ಯುತ್ತು ಮತ್ತು ನೀರಿನ ಸೌಕರ್ಯವಿದೆ. ಕೋಣೆಯ ಬಾಗಿಲು, ಕಿಟಕಿ ಮತ್ತು ಬಾತ್‌ರೂಮಿನ ಬಾಗಿಲುಗಳಿಗೆ ಬೇರೆ ಬೇರೆ ಬಣ್ಣ ಬಳಿದಿದ್ದಾರೆ. ಬಣ್ಣದಿಂದಲೇ ವೃದ್ಧರಿಗೆ ಗುರುತುಹಿಡಿಯಲು ಸಾಧ್ಯವಾಗಲಿ ಎನ್ನುವುದಕ್ಕಾಗಿ ಈ ವ್ಯವಸ್ಥೆ. ವೃದ್ಧರ ಮಂಚವನ್ನು ಅಗತ್ಯಬಿದ್ದಾಗ ಎತ್ತರಿಸಲೂಬಹುದು, ತಗ್ಗಿಸಲೂಬಹುದು. ಹೆಚ್ಚು ಚಲನೆ ಸಾಧ್ಯವಾಗದ ವೃದ್ಧರನ್ನು ಮಂಚದಿಂದಲೇ ನೇರವಾಗಿ ಸ್ನಾನದ ತೊಟ್ಟಿಗೆ ವರ್ಗಾಯಿಸುವ ಸೌಲಭ್ಯವಿದೆ. ಒಟ್ಟಿನಲ್ಲಿ ವೃದ್ಧರ ದೇಹಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಇವೆಲ್ಲಾ ಪ್ರಯತ್ನ. ಆದರೆ ಮನಸ್ಸಿಗೆ?

ವೃದ್ಧಾಶ್ರಮದ ಖರ್ಚುವೆಚ್ಚ ಹೇಗೆ? ಇಲ್ಲಿ ಒಬ್ಬರಿಗೆ ತಿಂಗಳೊಂದಕ್ಕೆ ಹದಿನಾರುಸಾವಿರ ಫ್ರಾಂಕು (ಒಂದುಲಕ್ಷದ ಎರಡುಸಾವಿರ ರೂ.) ವ್ಯಯವಾಗುತ್ತದೆ. ಇದರಲ್ಲಿ ಶೇ. 45ರಷ್ಟನ್ನು ವೃದ್ಧರ ಮಕ್ಕಳು ನೀಡಬೇಕು. ಉಳಿದ ಶೇ. 55ರಷ್ಟನ್ನು ವೃದ್ಧರ ಸಂಪತ್ತಿನಿಂದ ಅಥವಾ ಉಳಿತಾಯದಿಂದ ಭರಿಸಲಾಗುತ್ತದೆ. ಮಕ್ಕಳೊಟ್ಟಿಗೇ ವೃದ್ಧರು ಬದುಕುವದಾದರೆ ಅವರ ಪೋಷಣೆಗೆ ಇಲ್ಲಿ ಖರ್ಚಾಗುವುದರ ಹತ್ತನೇ ಒಂದರಷ್ಟು ಹಣವೂ ಬೇಕಾಗಲಾರದು. ಆದರೆ ಫ್ರೆಂಚರಿಗೆ ಹಣ ಮುಖ್ಯವಲ್ಲ. ವೃದ್ಧರನ್ನು ನೋಡಿಕೊಳ್ಳಲು ಅವರಲ್ಲಿ ಸಮಯವೇ ಇಲ್ಲ.

ವೃದ್ದಾಶ್ರಮದಲ್ಲಿ ನಾವು ಸಂಚರಿಸುತ್ತಿದ್ದಾಗ ನಮ್ಮ ಮಾರ್ಗದರ್ಶಕಿಯಾಗಿದ್ದ ನರ್ಸ್‌ನ ಬಳಿಗೆ ಅಜ್ಜಿಯೊಬ್ಬಳು ಬಂದು ಅದೇನೇನೋ ತೊದಲತೊಡಗಿದಳು. ನೆನಪಿನ ಶಕ್ತಿ ಕಳೆದುಕೊಂಡಿದ್ದ ಆ ಅಜ್ಜಿಯ ಮಾತಿನಲ್ಲೂ ಸ್ಪಷ್ಟತೆಯಿರಲಿಲ್ಲ. ಅವಳ ಮುಖ ಮಾತ್ರ ಹತ್ತು ವರ್ಷಗಳ ಹಿಂದೆ ತೀರಿಹೋದ ನನ್ನ ಅಜ್ಜಿ ಬರ್ಗುಳ ಕಾವೇರಮ್ಮನವರ ಮುಖದಂತೆಯೇ ಇತ್ತು. ನನಗೆ ಆ ಅಜ್ಜಿಯನ್ನು ಮಾತಾಡಿಸುವ ಹಂಬಲವಾಗಿ ಹತ್ತಿರಹೋದರೆ ಆಕೆ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಳು.
ಆಶ್ರಮದುದ್ದಕ್ಕೂ ನನ್ನ ಕೈ ಹಿಡಿದುಕೊಂಡೇ ಅದೇನೇನೋ ಹೇಳುತ್ತಾ ಬಂದಳು. ‘ಮನೆಗೆ ಕರೆದುಕೊಂಡು ಹೋಗು ಅನ್ನುತ್ತಿದ್ದಾಳೆ. ಅಜ್ಜಿಗೆ ನಿನ್ನಷ್ಟೇ ಎತ್ತರದ ಮೊಮ್ಮಗನಿದ್ದಾನೆ’ ಎಂದು ನರ್ಸು ಹೇಳಿದಳು. ಅಲ್ಲಿಂದ ಹೊರಡುವ ಹೊತ್ತಿಗೂ ಅಜ್ಜಿ ನನ್ನ ಕೈ ಬಿಡಲಿಲ್ಲ. ಕೊನೆಗೆ ನರ್ಸ್‌ ಬಲಾತ್ಕಾರದಿಂದ ಅಜ್ಜಿಯ ಕೈಬಿಡಿಸಿ ಆಕೆಯನ್ನು ಎಳೆದುಕೊಂಡೇ ಹೋಗಬೇಕಾಯಿತು. ಆ ಅಜ್ಜಿ ದೈನ್ಯತೆ ತುಂಬಿದ ಮುಖದಿಂದ ತಿರುಗಿ ತಿರುಗಿ ನನ್ನನ್ನು ನೋಡುತ್ತಿದ್ದಳು. ತನ್ನ ಹರೆಯದಲ್ಲಿ ಅದೆಂತಹ ಸಿರಿವಂತ ಮತ್ತು ವರ್ಣಮಯ ಬದುಕು ಇವಳದಾಗಿತ್ತೋ? ಈಗ….. ? ಒಂದು ದಿನ ನನ್ನದೂ ಇದೇ ಸ್ಥಿತಿ.

ಮಜಾಮೆಯಿಂದ ಅಂದೇ ಸಂಜೆ ನಾವು ಕ್ಯಾಸ್ತಲ್‌ನೂದರಿಗೆ ಹೋದೆವು. ಎನ್‌ಕಲ್ಕದಿಂದ ಮಜಾಮೆಗೆ ಬರುವಾಗ ನಾನು ಮುದಿಪಾದಿರಿ ಡೊಮಿನಿಕ್ಕರ ಆಶೀರ್ವಾದದ ಗುಂಗಿನಲ್ಲಿದ್ದರೆ, ಮಜಾಮೆಯಿಂದ ಕ್ಯಾಸ್ತಲ್‌ನೂದರಿಗೆ ಮುಟ್ಟುವವರೆಗೂ ವೃದ್ಧಾಶ್ರಮದ ಆ ಅಜ್ಜಿ ನನ್ನನ್ನು ಎಡೆಬಿಡದೆ ಕಾಡಿದಳು.

******

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಪ್ತಚಾರ ಕ್ಯಾಮರಾಗಳು
Next post ಸೌದಿ ಮಹಿಳೆಯರ ಬದುಕು

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…