ಅರವಿಂದ ಅರವಿಂದ ನಂದನದ ಕಂದ
ಎಲ್ಲರೆದೆ ಬೆಳಗಿಸುವ ಹೃದಯಾರವಿಂದ

ಬಾಲ್ಯವನು ಕಳೆದದ್ದು ಬಿಳಿಯ ದೇಶದಲಿ
ಯೌವನವು ಬೆಳಗಿದ್ದು ಭಾರತಕೆ ಮರಳಿ

ಚಿಕ್ಕಂದಿನಿಂದಲೇ ಮೇಧಾವಿತನವು
ಅಚ್ಚರಿಯ ಮೂಡಿಸಿತು ಅಂತಃಚೇತನವು

ತಂದೆ ಬಿಳಿಯರ ರೀತಿ ತಾಯಿ ಭಾರತ ಗರತಿ
ಎರಡು ಸಂಸ್ಕೃತಿಗಳನು ಉಂಡಿತೀ ಜ್ಯೋತಿ

ಕೆಸರಿನಲ್ಲಿದ್ದರೂ ಕಮಲ ಕಮಲವೇ ಹೌದು
ಲಂಡನ್ನಿನಲ್ಲಿಯೇ ತಾಯ್ನಾಡ ಓದು

ಎನಿತೊ ಭಾಷಗಳನ್ನು ಕರಗತವ ಗೈದು
ಸಂಸ್ಕೃತದ ತಿರುಳೆಲ್ಲ ಮೈಗೊಂಡ ಸಾಥು

ಸ್ಥಾತಂತ್ರ್ಯ ಸಂಗ್ರಾಮ ಸೆರೆಮನೆಗೆ ಕಳಿಸಿತ್ತು
ಆತ್ಮಶಕ್ತಿಯ ಪಡೆಯೆ ಗರಡಿ ಮನೆಯಾಯ್ತು

ನಲವತ್ತು ವರ್ಷಗಳ ಏಕಾಂತ ತಪಿಸಿ
ಪೂರ್ಣಯೋಗವ ಕಂಡನಾ ಗುರುಮಹರ್ಷಿ

ದೇಶಸೇವೆಯ ದೀಕ್ಷೆ ತೊಟ್ಟು ಸ್ಥಾತಂತ್ರ್ಯಕ್ಕೆ
ದುಡಿಯುತ್ತ ದಿವ್ಯಾತ್ಮ ಒಳ್ಳೆ ಹಣ್ಣಾಯ್ತು

ಕೊನೆಗೆ ಪಾಂಡೀಚೆರಿಯು ಆತ್ಮಸಂಧಾನಕ್ಕೆ
ಎಲೆಮನೆಯ ಶಾಂತಿಯ ಪುಣ್ಯನೆಲೆಯಾಯ್ತು

ಅನ್ನಮಯ ಪ್ರಾಣಮಯ ಮನೋಮಯ ದಾಟಿ
ವಿಜ್ಜಾನ ಮಯದಿಂದ ಆನಂದ ಗುರಿಗೆ

ಮಾನವನು ದೇವಮಾನವನಾಗುವ ವಿಕಾಸ
ಪ್ರೇಮ ಶಕ್ತಿ ಜ್ಞಾನ ಬಾಳ ಮುಪ್ಪರಿಗೆ

ಎಂಬ ತತ್ವವ ಸಾರಿ ಆಧ್ಯಾತ್ಮ ಸಿರಿಯ
ಜಗಕೆಲ್ಲ ಬೀರಿದರು, ಭಾರತವ ಬೆಳಗಿ

ಆರೊವಿಲ್ಲಾಗಿರುವ ವಿಶ್ವಚೇತನ ಕೇಂದ್ರ
ಮಾನವರ ನಡೆಸುತಿದೆ ಹೊಸ ತೂರ್ಯ ಮೊಳಗಿ
***

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)