ಚೌಕು ರಸ್ತೆಯ ಬದಿಗೆ ನಿಂತು ಹಣ್ಣು ಮುದುಕಿ ಬೇಡುತ್ತಿದ್ದಳು. “ಅಪ್ಪಾ, ಸ್ವಾಮೀ….” ಎಂದು ಕೈ ಚಾಚಿ ಕರೆಕರೆದು ಬಾಯಿ ಒಣಗಿದರೂ ಮೂರೂಸಂಜೆಯೊಳಗೆ ಆರುಕಾಸು ಹುಟ್ಟಲಿಲ್ಲ.
ಮುದುಕಿಯ ದೃಶ್ಯ ಕರುಣಾಜನಕವಾಗಿತ್ತು. ಸಮೀಪದ ಮನೆಯ ಮಹಡಿಯಿಂದ ಒಬ್ಬ ಚಿತ್ರಕಾರ ಅವಳ ಚಿತ್ರ ಬರೆದ. ಬಹಳ ಒಳ್ಳೆಯದಾಯಿತು ಚಿತ್ರ.
ಅದೇ ಚೌಕು ರಸ್ತೆಗೆ ಹೊಂದಿದ ನಗರಸಭೆಯಲ್ಲಿ ಏರ್ಪಡಿಸಿದ ಚಿತ್ರಕಲಾ ಪ್ರದರ್ಶನದಲ್ಲಿ, ಆ ಚಿತ್ರಕ್ಕೆ ಮುನ್ನೂರು ರೂಪಾಯಿ ಬಹುಮಾನ ದೊರೆಯಿತು.
ಆ ಮುದುಕಿ ಇನ್ನೂ ಅಲ್ಲೇ ಬಾಯಿಬಿಡುತ್ತಿದ್ದಾಳೆ. ನಿಲ್ಲಲು ಶಕ್ತಿಯಿಲ್ಲದ್ದರಿಂದ ಕುಳಿತು ಕರೆಯುತ್ತಾಳೆ.
ಈಗಿನ ಅವಳ ಚಿತ್ರವನ್ನು ಚೆನ್ನಾಗಿ ಬರೆದರೆ ಬಹುಮಾನ ಎಷ್ಟುಸಿಗಬಹುದೋ!
*****

















