ಏ, ಏ, ಪೂರ‍್ಣಿ,
ನಿನಗೆ ಬುದ್ಧಿ ಇಲ್ಲವೆ? ನೀನು ಅಲ್ಲಿಗೆ ಹೋಗಬಾರದಿತ್ತು. ಹೋದುದೇಕೆ, ಈ ಮಾರುದ್ದ ರೋದನದ ಕೊರಗಿನ ಪತ್ರವೇಕೆ? ನಾನು ಇಲ್ಲದ ಜಾಗದಲ್ಲಿ ನಿನಗೇನು ಕೆಲಸ? ಇರುವ ಸಂಕಟವೇ ವ್ಯಸನವೇ ಸಾಕಾಗಿದೆ. ಕೆರೆದು ಹುಣ್ಣು ಮಾಡಿಕೊಳ್ಳಬೇಕೇಕೆ?
ಗೊತ್ತಿದೆ ನಿನಗೆ ಅವರೆಲ್ಲರ ಸ್ವಭಾವ? ಅವರು ಸಮಯ ಕಾದು ತಮ್ಮ ಕಣ್ಣುರಿಯನ್ನು ತೀರಿಸಿಕೊಳ್ಳಬೇಕೆನ್ನುವವರು. ನಾನು ನನ್ನ ತಂಗಿಯನ್ನು ದೂಷಿಸುವುದಿಲ್ಲ. ಅವಳ ಅತ್ತೆ ಮಾವಂದಿರನ್ನೂ ದೂಷಿಸುವುದಿಲ್ಲ. ಸಾರಾಸಾರ ವಿವೇಚಿಸದೆ ಮಕ್ಕಳು ಮರಿಗಳನ್ನು ಕಟ್ಟಿಕೊಂಡು ನಿನ್ನ ಅತ್ತೆಯ ಪುಣ್ಯ ತಿಥಿಯನ್ನು ಮಾಡಲು ಅಲ್ಲಿಗೆ ಹೋದ ನಿನ್ನನ್ನೇ ದೂಷಿಸುವೆನು. ಒಂದೊಂದು ಸಾರಿ ನೀನೆಷ್ಟು ಅಭಿಮಾನಕ್ಕೊಳಗಾಗುವೆ, ಅದೂ ನನ್ನ ಕೋಪ ಕಲಕುವಷ್ಟರಮಟ್ಟಿಗೆ!
ಅಮ್ಮ ಸತ್ತು ಹನ್ನೆರಡು ವರುಷವಾಯಿತು. ಅಪ್ಪ ಸನ್ಯಾಸಿಯಾಗಿ ಹತ್ತು ವರುಷವಾಯಿತು. ಇಷ್ಟು ದಿನದವರೆಗೆ ಸನ್ಯಾಸಿಯವರಿಗೆ ನನ್ನ ಅಮ್ಮನ ನೆನಪು ಇರದೆ, ಈ ವರುಷವೇಕೊ ತನ್ನ ಹೆಂಡತಿಯ ನೆನಪು ಬಂದಿತೋ? ಅಮ್ಮನ ಹೆಸರಿನಲ್ಲಿ ಆರಾಧನೆ. ಪೂರ‍್ಣೀ, ನಿನ್ನ ವತ್ರಕ್ಕೆ, ನೀನು ಅಪ್ಪನ ಸನ್ಯಾಸಾಶ್ರಮಕ್ಕೆ ಹೋಗಿ ಅತ್ತೆಯ ಆರಾಧನೆಗೆ ಹೋಗಿ ಅನ್ನಿಸಿ ಕೊಂಡು ಬಂದುದಕ್ಕೆ ಚೆನ್ನಾಗಿ ಬುದ್ಧಿ ಹೇಳಬೇಕೆಂದು ಸಿಟ್ಟಿನಿಂದ ಕುಳಿತು ಕೊಂಡ ಕೂಡಲೇ ನನ್ನ ನೆನಪು ಅಮ್ಮನನ್ನು ಕಳೆದುಕೊಂಡ ದಿನಗಳತ್ತ ಹೋಗಿಯೇಬಿಟ್ಟಿತು. ಇನ್ನು ಅದೆಲ್ಲವನ್ನೂ ಎದೆಯಿಂದ ಕಾಗದದ ಮೇಲೆ ಇಳಿಸದಿದ್ದರೆ ಲೇಖನಿಯು ಮುಂದಕ್ಕೋಡುವುದೇ ಇಲ್ಲ.
ಕಾಳಮ್ಮನವರ ಮನೆ, ಮೈಸೂರಿನ ಹಳೆಯ ಅಗ್ರಹಾರ, ಅಮ್ಮ ಸತ್ತ ಶುಕ್ರವಾರ, ಈ ಮೂರೂ ನನ್ನೆದುರಿಗೆ ಧುತ್ತೆಂದು ಬಂದು ನಿಂತವು. ಕೊರಗಿ ಸಣ್ಣಾಗುವುದೊಂದೇ ಅಮ್ಮನಿಗಿದ್ದ ಖಾಯಿಲೆ, ಛಳಿಯಿಲ್ಲ, ಜ್ವರವಿಲ್ಲ. ಆದರೂ ಅಮ್ಮ ಸತ್ತು ಹೋದಳು. ಕಛೇರಿಗೆ ಹೋಗುತ್ತಿದ್ದ ನನ್ನನ್ನು ಹೋಗಬೇಡವೆಂದು ಅಂದು ತಡೆದು ಸುಖವಾಗಿ ಕುಳಿತು ಪ್ರಾಣ ಬಿಟ್ಟಳು. ತಾನೇ ಅಡಿಗೆ ಮಾಡಿದಳು. ತನಗೆ ಬಲು ಇಷ್ಟವಾದ ಬೆಲ್ಲದ ಅನ್ನವನ್ನು ಮಾಡಿ ದೇವರಿಗೆ ನಿವೇದಿಸಿ, ಮಧ್ಯಾಹ್ನದ ಪೂಜೆಸಲ್ಲಿಸುತ್ತಿರುವಾಗಲೇ ಆಕೆಯ ಭಜನೆಯ ಸ್ವರದಲ್ಲಿ ಏನೋ ಒಂದು ಹೊಸ ಬಗೆಯ ರವವಿದ್ದಿತು. ಎಷ್ಟು ಹೊತ್ತು ಆ ಪೂಜೆ! ಅದೆಷ್ಟು ಹೊತ್ತು ತಾಳ ತಟ್ಟುತ್ತ ಕುಣಿವ ಕುಣಿತ! ದಿನದ ಪೂಜೆಗಿಂತಲೂ ಏನೋ ಹೊಸದಾಗಿ ಕಂಡಿತು. ಆದರೂ ನಾನೆಂತು ಅಮ್ಮನ ಅಂತ್ಯವನ್ನು ಅಷ್ಟರಿಂದಲೇ ಊಹಿಸಲಿ?
ಪೂಜೆ ಮುಗಿಯುವದರೊಳಗಾಗಿ ಹೊರಗೆ ಹೋದ ಅಪ್ಪ ಬಂದರು. ಬಂದೊಡನೆಯೇ ಅವರನ್ನು ಕರೆದು ಪೂಜೆಗೆ ಕುಳ್ಳಿರಿಸಿಕೊಂಡು ಅವರ ಪಾದ ತೊಳೆಯಲಾರಂಭಿಸಿದಳು. ಪ್ರತಿ ದಿನ ಬೆಳಗಿನ ಜಾವದಲ್ಲಿ ಆಗುತ್ತಿದ್ದ ಈ ನಿತ್ಯ ವಿಧಿಯು ಮತ್ತೊಮ್ಮೆ ಈ ನಡುಹಗಲಲ್ಲಿ ಏಕೆ ಎಂಬುದು ಅರ್ಥವಾಗಲಿಲ್ಲ.
ಏ ಹುಚ್ಚೀ, ಇದೇನು ಈಹೊತ್ತು ಇಷ್ಟು ಹೊತ್ತಿಗೆ ಈ ಪೂಜೆ ಎಂದವರು ಎಂದೂ ಕಾಣದ ಪ್ರಸನ್ನ ಮುಖಮುದ್ರೆಯಿಂದ ಅಮ್ಮನನ್ನು ಕೇಳಿದರು, ನೋಡಿದರು. ಅವನಿಗೆ ಅದೇ ಮಹಾಭಾಗ್ಯವಾಯಿತು. ತಲೆ ಎತ್ತಿ ನೋಡಿದರು. ಪಾದಗಳ ಮೇಲೆ ತಲೆಯನ್ನು ಹೊರಳಾಡಿಸಿ “ನಾನೇನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿಬಿಡಿ, ಇದೇ ನನ್ನ ಕೊನೆಯ ಪೂಜೆ,” ಎಂದು ನನ್ನ ಕಡೆಗೆ ತಿರುಗಿ ನನ್ನ ಹೆಗಲಿನ ಆಸರವನ್ನು ಬಯಸಿದರು. ಅಪ್ಪನಿಗೆ ಇದರ ಅರ್ಥವೇ ಆಗಲಿಲ್ಲ. “ಹೋ, ಹೋ, ನಿಮ್ಮಮ್ಮ ಕಾಯ ಬೆರಸೆ ಕೈಲಾಸಕ್ಕೆ ಹೋಗಿಬಿಡುವಳು ಈಹೊತ್ತು” ಎಂದು ಹಾಸ್ಯ ಮಾಡಿದರು. ಎರಡು ತಿಂಗಳ ಕೂಸು ಲೀಲಾಳನ್ನು ತೊಡೆಯಮೇಲಿಟ್ಟು ಕೊಂಡು ಕತ್ತಲು ಕೋಣೆಯ ಬಾಣಂತಿಯಾಗಿದ್ದ ನಿನಗೂ ಇದೆಲ್ಲವೂ ಕೇಳಿಸಿದ್ದರೂ ಹಗಲು ನಿದ್ದೆಯ ಗೊರಕೆ ನಮಗೂ ಕೇಳಿಸುತ್ತಿತ್ತು.
ಮಧ್ಯಾಹ್ನ ಒಂದು ಗಂಟೆಯ ಸಮಯ; ಎಂದೂ ಆರಾಮ ಕುರ್ಚಿಯ ಮೇಲೆ ಕುಳಿತುಕೊಳ್ಳದ ಅಮ್ಮ ಅಂದು ಕುಳಿತುಕೊಳ್ಳಲು ಆಶಿಸಿದಳು. ನನಗೂ ನಗು ಬಂತು. ಕುರ್ಚಿಯನ್ನು ಹಾಕಿಕೊಟ್ಟೆ, ಒರಗಿ ಕುಳಿತಾಗ ನನ್ನನ್ನು ಹತ್ತಿರ ಕರೆದು ಬಲದ ಕೆನ್ನೆಗೆ ಮುತ್ತಿಡುತ್ತಾ ಎಡದ ಕೆನ್ನೆಯನು ಸವರಿದಳು. ನನ್ನ ಮೈ ಮೇಲೆ ಬಿಸಿನೀರು ಚೆಲ್ಲಿದಂತಾಯಿತು. ನನ್ನ ತಲೆಯನ್ನು ತೊಡೆಯ ಮೇಲೆ ಇಟ್ಟು ಕೊಂಡಳು. ಅನಂತರ ಒಂದು ಗಳಿಗೆ ಗೀತೆಯನ್ನು ತೆಗೆದುಕೊ ಹದಿನೆಂಟನೆಯ ಅಧ್ಯಾಯವನ್ನು ಓದು ಎಂದಳು. ಅಪ್ಪನು ವಿಶ್ವರೂಪದರ್ಶನದ ಹನ್ನೊಂದನೆಯ ಅಧ್ಯಾಯವನ್ನು ಓದು ಎಂದು ಸೂಚಿಸಿದರು. ಕೊನೆಗೆ ಅಮ್ಮನ ಕೋರಿಕೆಯಂತೆ ಹದಿನೆಂಟನೆಯ ಅಧ್ಯಾಯದ ಶ್ಲೋಕಗಳನ್ನು ಓದಿದಾಗ ನಿತ್ಯ ಪಾರಾಯಣ ಕಾಲದಲ್ಲಿ ಕೇಳುವಂತೆ ಕೇಳಿದಳು, “ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂಶರಣಂ ವ್ರಜ”|| ಎಂಬ ಶ್ಲೋಕವನ್ನು ಓದಿದಾಗ ಇನ್ನೊಮ್ಮೆ ಓದು ಎಂದಳು. ತಾನೂ ಬಾಯಲ್ಲಿ ಅನ್ನಲಾರಂಭಿಸಿದಳು. ಓದು ಬರದ ಬಾಯಿ ಅದು; ಈ ಶ್ಲೋಕವನ್ನು ವಿಪ್ರಕಂಠದ ವೇದಘೋಷದಂತೆ ಅನ್ನುತ್ತಿದ್ದಾಗ ಕೇಳುತಿದ್ದ ನನ್ನ ಎದೆ ಝಲ್ಲೆಂದಿತು. ಅರ್ಥವನ್ನು ಕೇಳಿಕೊಂಡಳು, ಆ ಮೇಲೆ ಕಷ್ಟ ಪಟ್ಟು ಕೂತು ಕೊಂಡು “ಮೂಕಂ ಕರೋತಿ ವಾಚಾಲಂ ಫಂಗುಂ ಲಂಘಯತೆ ಗಿರಿ೦” ಎಂಬ ಪ್ರಾರ್ಥನಾ ಗೀತೆಯನ್ನು ಅನ್ನುತ್ತಿರುವಾಗಲೇ ಅಮ್ಮನ ಧ್ವನಿ ಕುಗ್ಗಿದಂತಾಯಿತು.
ನನ್ನನ್ನು ಅವಸರ ಅವಸರವಾಗಿ ಹತ್ತಿರ ಕರೆದಳು. ಮುಂಗುರುಳು ನೇವಿಸಿ ಪಕ್ಕದಲ್ಲಿದ್ದ ಅಪ್ಪನಿಗೆ ಕಾಲು ಮುಟ್ಟಿ ನಮಸ್ಕರಿಸಿದಳು. ಕಂಠ ಬಿಗಿದು ಬಂದಿತ್ತು ನನ್ನ ತಪ್ಪನ್ನು ಕ್ಷಮಿಸಿರಿ” ಎಂದು ಇನ್ನೊಮ್ಮೆ ಕೇಳಿದಾಗ ಇಬ್ಬರ ಕಣ್ಣಿನಲ್ಲೂ ಒಂದೇ ಸಾರಿ ನೀರು ಚಿಮ್ಮುತ್ತಿತ್ತು. ಅ೦ದು ಚಿಮ್ಮಿದ ಅಮ್ಮನ ಕಣ್ಣೀರಿನಲ್ಲಿ ಅಪ್ಪನ ಕಣ್ಣೀರಿನ ಸಂಗಮವಾಗಿ ಅಮ್ಮನನ್ನು ಅಪ್ಪ ಒಂದು ದುಡಿಯುವ ಎತ್ತಿನಂತೆ ಬಳಸಿಕೊಂಡ, ಜ್ಞಾನ ಸ್ನಾನವಾಗಿರಬೇಕು. ಪೂರ‍್ಣೀ, ಅಮ್ಮನ ಕ್ಷಮಾಯಾಚನೆಯ ಕೊನೆಯ ಉಸಿರೇ ಅಪ್ಪನನ್ನು ಸನ್ಯಾಸಿಯನ್ನಾಗಿ ಮಾಡಿಸಿದ ವಿಶ್ವಶಕ್ತಿಯೆಂದು ನನಗೆ ಆಮೇಲೆ ತಿಳಿಯುತ್ತ ಬಂದಿತು. ಇದೇ ಶಕ್ತಿಯೆ ಅಪ್ಪನು ನನ್ನನ್ನು ಬೀದಿಗೆಳೆದು ಹೋಗಿಬಿಟ್ಟಾಗ ಬೇಡವೆಂದರೂ ಅಪ್ಪನನ್ನು ತಡೆಯದೆ ನಿಲ್ಲಿಸಿತ್ತೇನೋ? ನೀನು ಮಾತ್ರ ಮಾತು ಸುಮ್ಮ ಸುಮ್ಮನೆ ನಿನ್ನ ಮೇಲೆ ಬರುವದೆಂದು ಹೆದರಿ ಕಾಲಿಗೆ ಬಿದ್ದಾಗ ಮುಂದೇನು ಮಾಡುವುದು ತಿಳಿಯದೆ ನಾನು ಸುಮ್ಮನಾದೆನು.
ಅಮ್ಮ ಮುಂದೆರಡು ನಿಮಿಷಗಳಲ್ಲಿ ಕೊನೆಯುಸಿರನ್ನೆಳೆದಳು. ಆಗ ಅಮ್ಮನು ನನಗೆ ಹೇಳಿದ ಮಾತೊಂದನ್ನು ನನ್ನ ಕೊರಳಲ್ಲಿ ಮುತ್ತಿನ ಹಾರವನ್ನಾಗಿ ಮಾಡಿ ಹಾಕಿಕೊಂಡಿರುವಾಗ, ಜನರನ್ನು ಮೆಚ್ಚಿಸುವ ಈ ವಾರ್ಷಿಕ ತಿಥಿಗಳ ಅವಶ್ಯವೇನು ನನಗೆ? ಅಮ್ಮನ ಹೆಸರಿನಲ್ಲಿ ದಾನ ಧರ್ಮ ಮಾಡಿ ಆಕೆಗೆ ಪುಣ್ಯಗಳಿಸಿಕೊಳ್ಳಬೇಕೆಂಬ ಅವಶ್ಯಕತೆಯಿಲ್ಲ. ಆಕೆ ತನ್ನ ಮೂವತ್ತು ವರುಷ ದಾಂಪತ್ಯ ಜೀವನದಲ್ಲಿ ಪತಿವೃತೆಯಾಗಿ ಗಂಡನಕೋಪ, ದುಡುಕು ಮುಂತಾದವುಗಳಿಗೆಲ್ಲಾ ಈಡಾಗಿ ಸ೦ಯಮನದಿಂದ ಹಿಮಾಲಯದಷ್ಟು ಪುಣ್ಯವನ್ನು ಗಳಿಸಿದ್ದಾಳೆ. ಅಮ್ಮನ ಆ ಪುಣ್ಯದಿಂದಲೇ ಕಳ್ಳರು ದೋಚಿಕೊಂಡು ಹೋಗದಂಥ ಭಾವನಾ ಸಂಪತ್ತಿನಲ್ಲಿ ನಾವು ಕುಬೇರರಾಗಿ ಬದುಕುತ್ತಿದ್ದೇನೆ.
ಅಮ್ಮ ಏನು ಹೇಳಿ ಹೋದಳೆಂಬುದು ನಿನಗೆ ಗೊತ್ತಿದೆಯಲ್ಲವೆ? “ಬಡವನಾಗಿಯೇ ಕೊನೆಯವರೆಗೂ ನೀನಿರು ಮಗು. ಆಗ್ಲೇ ನಿಂಗೆ ಬಡವರನ್ನು ಕಂಡರೆ ಮರ‍್ಕ ಬರ್ತದೆ. ಇದೊಂದು ಗುಣಾನೇ ಸಾಕು ದೇವರು ನಿನ್ನ ಕಾಪಾಡ್ತಾನೆ” ಎಂದು ಹೇಳಿದ ತಾಯಿಯ ಮಾತು ನನಗೆ ವರಶಕ್ತಿಯಾಗಿದೆ. ಬಡವನಾಗಿ ಬಡವನಿಗೆ ಮರುಗವುದಷ್ಟೇ ನನ್ನಿಂದಾ ಗುತ್ತಿರುವ ಕೆಲಸ, ಅವರ ಕಷ್ಟ ಪರಿಹರಿಸಲಾಗುವುದಿಲ್ಲವೆಂಬ ವ್ಯಥೆಯು ನನಗಿಲ್ಲವಾದರೂ ನಾನು ಅವರಿಗಾಗಿ ಪಡುವ ಸಂಕಷ್ಟದಲ್ಲಿ ನಿಜವಾದ ಅನುತಾಪವಿದ್ದರೆ ಖಂಡಿತವಾಗಿಯೂ ಅದೊಂದು ವಿಶ್ವಶಕ್ತಿಯಲ್ಲಿನ ಸಣ್ಣ ಅಣುವಾಗಿ ಇರುವುದೆಂಬ ವಿಶ್ವಾಸವು ನನಗಿರುವುದರಿಂದಲೇ ನಾನು ನನ್ನ ಭಾವನಾಶಕ್ತಿಯನ್ನೆಲ್ಲ ನಿನ್ನೆದುರಿಗೆ ಇಂತು ಪ್ರಕಟಿಸುತ್ತಿರುವೆನು. ಇದನ್ನು ಸ್ವೀಕರಿಸುವಂತೆ ಹೃದಯವು ನಿನ್ನದಾಗಿರುವುದು, ನನ್ನ ಪುಣ್ಯವೇ. ನಾನು ಬರೆದ ಪತ್ರಗಳನ್ನೂ ಓದಲಾರದಂತಹ ಓದಿದರೂ ಅರಗಿಸಿಕೊಳ್ಳದಂತಹ, ಹೆಂಡತಿ ಮಾತ್ರ ನನಗೆ ಸಿಕ್ಕಿದ್ದರೆ ಕೇಳಬೇಕೇ ನನ್ನ ಜೀವನ ನಾಟಕದ ವೈವಿಧ್ಯತೆಯನ್ನು?
ಅಮ್ಮನು ಸತ್ತ ಆರುತಿಂಗಳಲ್ಲಿಯೇ ಅಪ್ಪನ ಜೀವನದಲ್ಲಿ ಕ್ರಾಂತಿಯಾಗತೊಡಗಿತು. ಅವರ ಸಿಟ್ಟು ಸಿಡುಕಿಗೆ ನೀನು ಸಾಕಷ್ಟು ತಡೆದು ಕೊಂಡರೂ, ನಾನೂ ಶಕ್ತಿ ಮೀರಿ ಸಹಿಸಿದರೂ ಸಹನೆಯೇ ಅವರನ್ನು ಮನೆಯಲ್ಲಿರಗೊಡಿಸದಂತಾಯಿತು. ಆದರೂ ಅಂದು ಅಪ್ಪ ಬಹುರೇಗಿದ್ದಾಗ ನಾನು ಆಡಿದ ಮಾತನ್ನು ಆಡದಿದ್ದರೆ, ಅಪ್ಪನು ಸನ್ಯಾಸಿಯಾಗುತ್ತಿರಲಿಲ್ಲವೆನಿಸುತ್ತದೆ. ನನಗೆ ಕೊಟ್ಟ ಕಷ್ಟಗಳನ್ನೆಲ್ಲಾ ಸಹಿಸಿಕೊಂಡೆನು. ನಿನಗೆ ಕೊಡುತ್ತಿರುವ ವಿಚಿತ್ರವ್ಯಥೆ ನೋಡಿ ನೋಡಿ ಸುಮ್ಮನಿದ್ದೆನು. ಏಕೆಂದರೆ ಅವರು ನನ್ನನ್ನು ಬಲು ಮಮತೆಯಿಂದ ಪ್ರೀತಿಸುತ್ತಿದ್ದರು. ಅವರ ಪ್ರೀತಿ ಋಷ್ಯಶೃಂಗನನ್ನು ಪ್ರೀತಿಸಿದ ವಿಭಾಂಡಕನ ಪ್ರೀತಿಯಂತಿದ್ದಿತು. ನಾನು ಎರಡು ಮಕ್ಕಳ ತಂದೆಯಾಗಿದ್ದರೂ ಉದ್ಯೋಗದಲ್ಲಿ ಪ್ರತಿಷ್ಟಿತ ಸ್ಥಾನಮಾನವನ್ನು ಪಡೆಯಲಾರಂಭಿಸಿದ್ದರೂ ನನಗೆ ಇನ್ನಾವ ಸ್ವಾತಂತ್ರವೂ ಬೇಕಿರಲಿಲ್ಲ. ಕೊನೆಗೆ ನನ್ನ ಒಳ್ಳೆಯ ಸ್ನೇಹಿತರು ಮನೆಗೆ ಬಂದು ಹೋಗುವ ಸೌಲಭ್ಯವನ್ನು ಮಾತ್ರ ಕೇಳಿಕೊಂಡಿದ್ದೆನು. ಸ್ನೇಹಿತರ ಸಹವಾಸದಿಂದ ತನ್ನ ಮಗನೆಲ್ಲಿ ಕೆಟ್ಟು ಹೋಗುವನೋ ಯೆಂಬ ಸದಭಿಲಾಷೆ ಅಪ್ಪನಿಗೆ ಇದ್ದರೂ ನನಗೆ ಆಗ ಅದು ಸ್ವಲ್ಪ ಅತಿಯಾದಂತೆ ಕಂಡಿತು. ಆದರೂ ನನ್ನ ಅತ್ಯಂತ ಪ್ರೀಯ ಸ್ನೇಹಿತನನಾದ ಶಂಕರ ಒಂದು ದಿನ ಮನೆಗೆ ಬಂದಾಗ ಆತನನ್ನೂ ನಡೆಸಿಕೊಂಡರೀತಿ, ಇಬ್ಬರಿಗೂ ಆದ ಬಿಸಿಮಾತು ಇವು ನನ್ನ ಮನಸ್ಸನ್ನು ನೋಯಿಸಿದವು. ಶ೦ಕರನಿಗೆ ತಿಳಿಯಹೇಳಿದೆ. ಅದನ್ನವನು ನುಂಗಿಕೊಂಡ. ಆದರೂ ನನ್ನ ನೋವು ಅಪ್ಪನಿಗೆ ಅರ್ಥವಾಗಲಿಲ್ಲ.
ನೆನಪಿದೆಯ ಪೂರ‍್ಣೀ? ಒಂದು ದಿನ ನಿನ್ನ ತಾಯಿ ನಿನ್ನನ್ನು ನೋಡಲು ಬಂದಾಗ ಆಕೆಯನ್ನು ಹೊರಬಾಗಿಲಿಂದ ಒಳಗೆ ಬಿಡದೆ,ನಿನ್ನನ್ನು ಒಳಬಾಗಲಲ್ಲಿಟ್ಟು ಕದಹಾಕಿದ ಆ ದೃಶ್ಯ? ಅಂದು ನಾನು ತಂದೆಯ ವಿರುದ್ಧ ಸಿಡಿದೇಳಬೇಕಾಗಿದ್ದಿತು. ನಿನ್ನ ವಕೀಲಿಗಾಗಿ ಅಲ್ಲ. ಮಗಳನ್ನು ನೋಡಲು ತಾಯಿಗೆ ಯಾವಾಗಲೂ ಪೂರ್ಣ ಹಕ್ಕಿರುವುದೆಂಬ ಸಿದ್ಧಾಂತವನ್ನು ಒತ್ತಿ ಹೇಳಲು ತಲೆಯೆತ್ತಿ ನಿಂತೆನು. ಮಾತು ತುಟಿಯೊಳಗೆ ಅಡಗಿ ಕೊಂಡವು. ಇನ್ನೊಂದು ಸಾರಿ ನಿನ್ನ ತಂದೆ ಬಂದಾಗಲೂ ನಿನ್ನನ್ನು ನೋಡಲು ಮತ್ತೆ ತಿರುಗಿ ಬಂದರೆಂದು ಅವರ ಮೇಲೆ ರೇಗಿಬಿದ್ದು ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಹತ್ತಿದಾಗ ನಾನು ನಿನ್ನ ಗಂಡನಾಗಿ ಅಲ್ಲದಿದ್ದರೂ ಒಬ್ಬ ಧ್ಯೇಯವಾದಿಯಾಗಿ ನಿಂತು ನೋಡುತ್ತಿದ್ದೆ; ಈ ವರ್ತನೆಯನ್ನು ಹೇಗೋ ಸಹಿಸಿಕೊಂಡೆ. ಆದರೂ ಪರಿಸ್ಥಿತಿ ತೀರ ಮಿತಿಮೀರಿದಾಗ ಉಪಾಯವಿಲ್ಲದೆ ನ್ಯಾಯಾಧಿಪತಿಯು ತೀರ್ಮಾನ ಹೇಳುವಂತೆ ಇಬ್ಬರ ಮಧ್ಯ ನಿಂದು, “ಮಾವನವರೇ, ನೀವು ನಿಮ್ಮ ಮಗಳನ್ನು ಎಷ್ಟು ಸಾರಿ ಬೇಕಾದರೂ ಬಂದು ನೋಡಿಕೊಂಡು ಹೋಗಬಹುದು. ಇದಕ್ಕೆ ಯಾರೂ ನಿಮ್ಮನ್ನು ಅಡ್ಡಿ ಪಡಿಸಲಾರರು” ಎಂದು ಹೇಳಿಯೇ ಬಿಟ್ಟೆ.
ಅಪ್ಪನಿಗೆ ನೋವು ಆಯಿತು; ಅಂದೇ ಅವರ ಅಭಿಮಾನಕ್ಕೆ ಪೆಟ್ಟು ಬಿದ್ದಿತು. ಅಪ್ಪನ ಮಗನ ಪ್ರೀತಿಯೆಲ್ಲವೂ ಕುಸಿದು ಬಿದ್ದಿತು. ಅಂದಿನಿಂದ ಹೆಚ್ಚಾಗಿ ನನ್ನ ಮತ್ತು ನಿನ್ನ ಅಂತರಂಗ ಜೀವನದಲ್ಲಿ ಅವರು ಅಡ್ಡ ಬರುತ್ತಿರಲಿಲ್ಲ. ಆದರೇನು? ಮನಸ್ಸಿನಿಂದ ಮಗನಿಗೆ ಸ್ವಾತಂತ್ರವನ್ನು ಇನ್ನೂ ಕೊಟ್ಟಿರಲಿಲ್ಲ.
ಇಂತಹ ಮೌನ ವಾತಾರವರಣದಲ್ಲಿ ಇಡೀ ಕುಟುಂಬಕ್ಕೆ ನೆಮ್ಮದಿ ಇರಲಿಲ್ಲ. ನಾನು, ನೀನು ಹೇಳುವದನ್ನೆಲ್ಲ ಕೇಳಿದರೂ, ಅನುಭವಿಸುವದನ್ನೆಲ್ಲ ನೋಡಿದರೂ, ಸುಮ್ಮನೆ ಕಾಣದವನಂತೆ ಇರುತ್ತಿದ್ದೆ. ಏಕೆಂದರೆ, ಅಪ್ಪನ ಸುಹೃದಯವು ಅವರು ನನಗಾಗಿ ಪಟ್ಟಿರುವ ಕಷ್ಟ ಇವುಗಳು ನನ್ನನ್ನು ಸುಮ್ಮನಿರುವಂತೆ ಮಾಡಿದವು. ಒಬ್ಬನೇ ಮಗನೆಂದು ಬಡತನದ ಬಾವಿಯಲ್ಲಿ ಮುಳುಗಿ ಹೋಗಿದ್ದರೂ ಅವರು ನನಗೆ ಓದು ಕಲಿಸಲು ಪಟ್ಟ ಪಾಡನ್ನು ಈಗ ನೆನೆದುಕೊಂಡರೆ ನನಗೆ ದುಃಖವೆನಿಸುತ್ತದೆ. ಸಿರಿವಂತರಾದ ಭಾವಮೈದುನರು ನಕ್ಕು, ಅವರ ಅಟ್ಟಹಾಸದ ಮಧ್ಯೆ ನನ್ನ ಬಗ್ಗೆ ತೋರುತ್ತಿದ್ದ ಉದಾಸೀನತೆಯಿಂದ (ನಿಮ್ಮ ತಂದೆಯಲ್ಲ ಆದರೆ ಇನ್ನಿಬ್ಬರು ತಮ್ಮಂದಿರು) ಉಮ್ಮಳಿಸುತ್ತಾ ಕಳವಳಗೊಂಡ ಅಪ್ಪನ ಜೀವಿತದ ನೋವನ್ನು ನಾನು ಮರೆತಿಲ್ಲ. ಹದಿನೈದು ಮೈಲಿ ದೂರವಿರುವ ಬೆಂಗಳೂರಿಗೆ ತಲೆಯಮೇಲೆ ತಾನು ಮಾಡಿದ ಬಿದಿರು ಕುಕ್ಕೆ ಮರಗಳನ್ನು ಹೊತ್ತುಕೊಂಡು ಹೋಗಿ ಅತಿ ಮಮತೆಯಿಂದ ನನ್ನನ್ನು ಬೆಳೆಸಿದ ಅವರ ಪ್ರೀತಿಗೆ ನಾನು ಎಷ್ಟು ಋಣಿ ಯಾಗಿರಬೇಕು? ಮಗ ಬೆಳೆಯಲೆಂದು, ಮಗ ವಿದ್ಯೆ ಕಲಿಯಲೆಂದು ತನಗಿಂತ ಸಾವಿರಪಾಲು ಕೀಳಾದವರನ್ನು, ಅವರು ಓಲೈಸಿದುದನ್ನು ನಾನು ನನ್ನ ಚಿಕ್ಕತನದಲ್ಲಿ ನೋಡಿದ್ದೆನು. ಇಬ್ಬರೂ ಊಟಕ್ಕೆ ಕುಳಿತಾಗ ತನ್ನ ಅನ್ನದ ಮೇಲೆ ಹಾಕಿದ ತುಪ್ಪವನ್ನು ಅಮ್ಮ ತಿರುಗಿ ನೋಡುವ ಮೊದಲೇ ನನ್ನ ತಟ್ಟೆಗೆ ಹಾಕಿ ಕುಳಿತುಕೊಂಡು ಬಿಡುತ್ತಿದ್ದುದನ್ನು ನಾನು ಎಂತು ಮರೆಯಲಿ? ಶನಿವಾರ ಬಂದರಂತೂ ಇಂದಿಗೂ ಅಪ್ಪ ಸನ್ಯಾಸಿಯಾಗಿ ಹತ್ತು ವರ್ಷವಾಗಿದ್ದರೂ ಅವರ ನೆನಪು ಬರದಿರುವದಿಲ್ಲ. ಮನೆಗೆ ಹೆಂಡತಿ ಬಂದು ಮಕ್ಕಳಾಗಿದ್ದರೂ, ಸ್ನಾನದ ಬಚ್ಚಲಲ್ಲಿ ನನ್ನನ್ನು ಕುಳ್ಳಿರಿಸಿ ತಾನೇ ಮೈ ಉಜ್ಜದ ಹೊರತು ಅವರಿಗೆ ಸಮಾಧಾನವಿಲ್ಲ. ಮೈ ವರಸಬೇಕು, ಹಾಸಿ ದಪ್ಪವಾದ ರಗ್ಗನ್ನು ತಂದು ಹೊದಿಸಿ ಮಲಗಿಸಬೇಕು. ಮನೆಯಲ್ಲಿ ಸ್ವಲ್ಪವೂ ಸದ್ದು ಮಾಡದಂತೆ ಕಾಯಬೇಕು, ಇದೆಲ್ಲವನ್ನು ನೆನೆಸಿ
ಕೊಂಡಾಗ ಅಪ್ಪನ ಕೋಪವನ್ನು ಒಂದು ಕ್ಷಣ ತಡೆದುಕೊಳ್ಳುವದು ಅತಿಶಯವೇನಲ್ಲ ಎಂದು ಎನಿಸುತ್ತಿತ್ತು.
ಆದರೆ, ಪೂರ‍್ಣೀ, ಆ ದಿನದ ನೆನಪಾಗಬಾರದು, ಶಾಂತಂ ಪಾಪಂ! ಅಂದೇನೋ ತಂದೆ ಮಕ್ಕಳ ಸಂಬಂಧ ತೀರಿಬಂದಿತ್ತು. ಅಪ್ಪ ಸನ್ಯಾಸಿಯಾಗುವ ಸಮಯ ಯೋಗವು ಒದಗಿ ಬಂದಿತ್ತೋ? ಅಂದು ಅವರು ನಿಷ್ಕಾರಣವಾಗಿ ಸಿಟ್ಟಗೆದ್ದದ್ದನ್ನು ಸಹಿಸಿಕೊಂಡೆ. ಕೆನ್ನೆಗೆರಡು ಬಿಗಿದುದಕ್ಕೆ ಕೋಪ ಬರಲಿಲ್ಲ. ನನ್ನ ಮೈ ಮೂಳೆಗಳೆಲ್ಲ ಅವರು ಹೇಳಿದಂತೆ ಕೇಳಿರುವಾಗ ಈ ಎಂಟೇಟು ಎಷ್ಟರದು. ಆದರೆ………….. ಆದರೆ……………ಬರೆಯಲೇ, ಪೂರ‍್ಣಿ,
ಅವರು ಸಿಟ್ಟಿನ ಭರದಲ್ಲಿ ಹಾಗೆ ಅನ್ನಬಾರದಿತ್ತು.
ನನ್ನನ್ನು ಬೈಯುವ ಭರದಲ್ಲಿ ಸ್ವರ್ಗವಾಸಿಯಾದ ಅಮ್ಮನಿಗೆ……. ಈ ಮಾತು ಕೇಳಿಸುವದೆಂದು ಅವರಿಗೆ ಅನಿಸಿರಲಿಲ್ಲವೆಂದು ಕಾಣುತ್ತೆ? “ನೀನು ನನ್ನ ಮಗನಾಗಿಲ್ಲ. …ನನಗೆ…… ರೇ, ಇಂತು ನೀನು ಎದುರು ಹೇಳುತ್ತಿರಲಿಲ್ಲ” ಎಂದವರು ಮುಂದೇನು ಅನ್ನುತ್ತಿದ್ದರೋ. ಆ ಮಾತನ್ನು ತಡೆಯಬೇಕೆಂದು ಪ್ರಯತ್ನಿಸಿದೆ. ಆದರೆ ಆ ಕೆಟ್ಟ ಮಾತನ್ನೂ ಅಂದುಬಿಟ್ಟರು.
ನನ್ನ ಸಿಟ್ಟಿನ ಕಟ್ಟೆ ಒಡೆಯಿತು. ಹೀಗೆ ಅನ್ನುವ ಅವರಿಗೆ ಆ ಅಧಿಕಾರ ವಿರುವದು ನಿಜವಲ್ಲದಿದ್ದರೂ, ಸಿಟ್ಟಿನ ಬೈಗುಳವಿದ್ದಿರಬಹುದು. ನನಗೆ ಆ ಮಾತು ಸಹಿಸುವದಾಗಲಿಲ್ಲ. ಅವರೆಂದ ಮಾತು ಸಾಮಾನ್ಯವಲ್ಲ. ಆದರೆ ನನ್ನ ತಾಯಿಯನ್ನು ನಾನು ದೇವರೆಂದು ಭಾವಿಸುತ್ತಿದ್ದ ನನಗೆ ಈ ಮಾತು ಸೇರಲಿಲ್ಲ. ಮಾರುತ್ತರ ಕೊಡುವ ಧೈರ್ಯವಿಲ್ಲದಿದ್ದರೂ ಸಿಟ್ಟಿನಂದ ನನಗೇ ನಾನು ಗಡಬಡಿಸ ಕೊಂಡೆನಲ್ಲವೇ? ತಿಳಿಯಿತು, ಅಪ್ಪನಿಗೆ; ತಾಳ್ಮೆ ಮೀರಿಕೊಂಡು ತನ್ನ ಮಗ ತನಗೇ ತಿರುಗಿ ಬಿದ್ದನೆಂದು ಅದೇ ವ್ಯಸನದಲ್ಲಿ ಅವರು ಉಪವಾಸ ಮಾಡಿದರು. ಏಕೋ, ಏನೋ ನಾನವರನ್ನು ಸಂತೈಸಲು ಹೋಗಲಿಲ್ಲ. ನಿನೇನೋ ಹೇಳುತ್ತಿದ್ದೆ ನಿಜ. ಆದರೆ ನಾನು ತೀರಾ ಉದಾಸೀನನಾಗಿ ಬಿಟ್ಟೆನು. ನನ್ನ ಈ ವರ್ತನೆ ಅವರ ಜೀವನದಲ್ಲಿ ವಿರಾಗವನ್ನು ತಂದು ಕೊಟ್ಟಿತು. ಇದ್ದ ಒಬ್ಬ ಮಗ ಇಂಥ ಅವಿಧೇಯನಾದುದು ಅವರಿಗೆ ಮೋಹದ ಪರೆಯನ್ನು ಮರೆಯಾಗಿಸಿತೆಂದು, ನನ್ನ ಅನ್ನಿಸಿಕೆ ಇಲ್ಲವಾದರೆ…………
ಇದೇನು ಹನ್ನೆರಡು ವರುಷದ ಜೀವನ ಕಾದಂಬರಿಯನ್ನು ಬರೆಯಲಾರಂಭಿಸಿದೆರಲ್ಲಾ?
ಪತ್ರಕ್ಕೆ ಇತಿಮಿತಿ ಇರಬೇಕೆಂದೆನಿಸಿದರೂ ಓದುವ ನಿನ್ನ ಹೃದಯ ವಿಶಾಲವಾಗಿರುವಾಗ ಬರೆದರೆ ತಪ್ಪೇನು?
ಪ್ರೀಯ ಪೂರ‍್ಣಿ,ಹೆಚ್ಚೇನು ಬರೆಯಲಿ? ಅಪ್ಪನು ಸನ್ಯಾಸಿಯಾದ ದಿನವೇ ನನಗೆ ತಂದೆ ಇರುವನೆಂಬುದನ್ನು ಮರೆತೆನು, ಮರೆಯಬೇಕಾಯಿತು. ಆದರೆ ಅವರು ನಿನ್ನ ಮಾವನೆಂದು ತಿಳಿದುಕೊಂಡಿದ್ದುದರಿಂದಲೇ ಅವರ ಆಶ್ರಮದಲ್ಲಿ ನೀನು ಅವರ ಸೊಸೆ. ನಿನಗೆ ಗೌರವ ಸಿಗಬೇಕೆಂದು ಆಶಿಸಿದೆ. ಇದೆಂತಹ ಹಕ್ಕು ನಿನ್ನದು? ಅವರು ನನ್ನ ತಂದೆಯೂ ಅಲ್ಲ. ನಿನ್ನ ಮಾವನವರೂ ಅಲ್ಲ. ರಾಗದ್ವೇಷಗಳನ್ನು ತೊರೆದ ಸನ್ಯಾಸಿಗಳು. ಅಲ್ಲಿ ಯಾರಿಗೂ ಪುರಸ್ಕಾರವೂ ಇಲ್ಲ ತಿರಸ್ಕಾರವೂ ಇಲ್ಲ. ಅವರಿಗೆ ನೀನೇನು, ನಾನೇನು, ಅವರ ಮಗಳೇನು ಮತ್ತೊಬ್ಬ ಭಕ್ತನೇನು ಎಲ್ಲರೂ ಸಮರು, ನನ್ನ ತಂಗಿ ಅವರನ್ನು ಇನ್ನೂ ಅಪ್ಪನೆಂದು ತಿಳಿದುಕೊಂಡಿದ್ದರೆ ಆಕೆಯದು ಕುರುಡ ಮೋಹವಷ್ಟೆ.
ಅಪ್ಪ ಈಗ ಭಿಕ್ಷುಕ ನಾಥರು ಸಾಧಕರು ಅಂತಂದೇ ಅವರನ್ನು ಗೌರವಿಸೋಣ. ಹಾಗೆಯೇ ಪೂಜಿಸೋಣ. ಲೋಕದ ಜನರಿಗೆ ಅವರ ಮೇಲೆ ಎಷ್ಟು ಹಕ್ಕಿದೆಯೋ ಅಷ್ಟೇ ನನಗೂ ನಿನಗೂ ಇದೆ. ನೀನು ಅವರ ಸೊಸೆಯೆಂಬ ಅಧಿಕಾರವನ್ನು ಸನ್ಯಾಸಿಯ ಆಶ್ರಮದಲ್ಲಿ ಚಲಾಯಿಸುವದು ಒಳಿತಲ್ಲ.
ಇತಿ ನಿನ್ನವನೇ
*****
















