
ಹೇಳು ಬೇಗ – ಕೇಳು ಈಗ
ರಾಮನೇನು? – ಕಾಮಧೇನು!
**
ಈತನಾರು? – ಪ್ರೀತಿಪೈರು!
ಎಂತು ಕೀರ್ತಿ?- ಪ್ರೀತಿ-ಮೂರ್ತಿ;
ರಾಸರಾಜ್ಯಚಕ್ರವರ್ತಿ!-
ಏಕೆ ಈತ?-ಪ್ರೀತಿಯೇಕೆ?
**
ಈತನೆಂಥ ಪ್ರೀತಿಕಾಂತ?-
ಎನ್ನ ಚೆನ್ನ ಚಂದ್ರಕಾಂತ!
ಓತುಸೋತು ಓಡಿಬಂದ
ಕಾವ ಜೀವ ನೋಡಿ ನಿಂದ
ಮದ್ವಿಕ್ಲಾಂತ ಹೃದ್ ವಿಶ್ರಾಂತ
‘ಪೂತಭಾವರೀತಿಪ್ರಾಂತ
ಪ್ರಾಣಕಾಂತ’ ಪದವಿಯಾಂತ
ಪ್ರೀತಿದ ಪ್ರೀತಿಭ್ರಾಂತ!
**
ಪ್ರೀತಿ ಹೆತ್ತ ಪ್ರೀತಿಭ್ರಾಂತ
ರಾಮನಲ್ಲಿ?- ಸೋಮನೆಲ್ಲಿ!
ಈತನಲ್ಲಿ?-ಆತನಲ್ಲಿ!
ಆತನೆಲ್ಲಿ? ಈತನಲ್ಲಿ!
*****

















