೧
ಮನದ ಮುಗಿಲಿನ ತೆರೆಯ ಮುಸುಕಿನಲಿ ಮರೆಯಾಗಿ
ಜನದ ಮಾತಿನ ಶೆಲೆಯ ತಿಳಿನೀರ ಹನಿಯಾಗಿ
ಕನಸು ಕಾಣದ ಬಣ್ಣ ಬಣ್ಣಗಳ ತೆನೆಯಾಗಿ
ತೂಗಿ ಬಾ, ತಾಗಿ ಬಾ, ಬೀಗಿ ಬಾ ಬಂಧು!
೨
ದಿವ್ಯ ತೇಜೋನಿಧಿಯ ಕೈ ಹಣತೆ ನೀನಾಗಿ
ಭವ್ಯ ಬಂಧುರ ಭಾಗ್ಯದರಮನೆಯ ಸಿರಿಯಾಗಿ
ಕಾವ್ಯ ಸರಸಿಯ ಚೆನ್ನ ಹೊನ್ನ ತಾವರೆಯಾಗಿ
ಉರಿದುರಿದು, ಸರಿಸರಿದು ಬಿರಿಬಿರಿದು ಬಾರೈ!
೩
ಮಂಗಲದ ಮಧುಗೀತ ನೆಲ್ಲಿರ್‍ಪೆ? ಬನದಲ್ಲಿ
ಬಂಗಾರದರಮನೆಯ ನಿರ್ಮಿಸುವೆ; ಜನದಲ್ಲಿ?
ಸಿಂಗಾರದೈಸಿರಿಯ ಚೆಲ್ಲುವೆಯೊ; ಮನದಲ್ಲಿ
ನಲಿದು ಬಾ, ಉಲಿದು ಬಾ, ಒಲಿದು ಬಾ ಚೆನ್ನ!
*****
ಬೆಂಗಳೂರು: ೧೯೪೨

















