ನಿನ್ನೊಳೆನಗೊಲವಿಲ್ಲ – ಇಲ್ಲ, ಒಲವಿಲ್ಲ-
ನೀನು ಹೋದೆಯೆನೆ ಕಂದುವೆನದೇನು!
ಬಾನ ತಣ್ಪೆಳಕೆಲ್ಲ ಕಣ್ದಣಿಯ ನಿನ್ನನ್ನು
ನೋಡಿ ನಲಿವುವೆ ಎಂದು ಕರುಬುವೆನದೇನು!
ನಿನ್ನೊಳೆನಗೊಲವಿಲ್ಲ – ಆದರೆ, ಅದೇನೋ ,
ನೀನೇನೆ ಮಾಡುತಿರು. ಅದೆ ನನಗೆ ಚೆಲುವು!
ಒಬ್ಬಳಿರುತಾಗಾಗ ಸುಯ್ಯುವೆನು ನಿನ್ನಂತೆ
ನಾನೊಲಿದರಿರಬಾರದೆ ಎಂದು ನೊಂದು.
ನಿನ್ನೊಳೆನಗೊಲವಿಲ್ಲ-ಕಣ್ಣಿಲ್ಲವಾಗಿ,
ಕಿವಿಯೊಳಾದರು, ನಿನ್ನ ಸವಿನುಡಿಗಳುಲುಹು
ಉಳಿದಿರಲು, ಮಾತಾಡಿ, ಅಳಿಸುವರೆ ಅದನೆಂದು
ಮುಳಿಯುವೆನು ನನ್ನ ಕಟ್ಟಕ್ಕರಿನ ಬಳಿಯೂ.
ನಿನ್ನೊಳೆನಗೊಲವಿಲ್ಲ – ಆದರೂ ಕಪ್ಪಾಗಿ,
ಆಳದಲಿ ಹೊಳಪಿಡುವ ನಿನ್ನ ನುಡಿಗಣ್ಣು,
ನಾ ಕಂಡ ಮಿಕ್ಕಾವ ಕಣ್ಣನೂ ಮರೆಮಾಡಿ,
ಮುಂದೆ ನಿಲುವುವು ಬಂದು, ನಡುವಿರಳ ಹೊತ್ತು.
ನಿನ್ನೊಳೆನಗೊಲವಿಲ್ಲ – ಬಲ್ಲೆ, ಒಲವಿಲ್ಲ!
ನೆಚ್ಚರೇ, ಆದರೂ, ಮಾಜದೆನ್ನೆದೆಯ!
ನಿನ್ನೆಡೆಯೆ ನೆಟ್ಟೆನ್ನ ಕಣ್ಣ ಕಂಡವರೆಲ್ಲ,
ಅತ್ತಿತ್ತ ಸುಳಿಯುತ್ತ ನಸುನಗುವರಕಟ!
*****
CAROLINE NORTON ( 1808 – 1877): I do not love thee















