Home / ಬಾಲ ಚಿಲುಮೆ / ಕಥೆ / ಮಣಿಭದ್ರನ ಕಥೆ

ಮಣಿಭದ್ರನ ಕಥೆ

ನೋಡದೆ ಮಾಡಿದರೆ.
“ನೋಡದೆ ಮಾಡಿದರೆ” ಎಂಬ ಎರಡನೆಯ ತಂತ್ರದ ಮೊದಲನೆಯ ಶ್ಲೋಕವಿದು.
ಅರಿಯದೆ, ನೋಡದೆ, ತಿಳಿಯದೆ ಪರಿಕಿಸದೆ * |
ಮಾಡಲುಬಾರದು ಕಾರ್ಯವ ನಾಪಿತನಂತೆ ॥೧॥
* ಪರಿಕಿಸದೆ – ಪರೀಕ್ಷೆ ಮಾಡದೆ
“ನಾಪಿತನು ಅಂತಹುದನ್ನೇನು ಮಾಡಿದನು?” ಎಂದು ಅರಸು ಮಕ್ಕಳು ಕೇಳಲು, ವಿಷ್ಣುಶರ್ಮನು ಹೇಳಿದನು:-
ಮಣಿಭದ್ರನ ಕಥೆ
ದಕ್ಷಿಣ ದೇಶದಲ್ಲಿ ಪಾಟಲೀಪುತ್ರ ಎಂಬ ಒಂದು ನಗರವುಂಟು. ಅಲ್ಲಿ ಮಣಿಭದ್ರನೆಂಬ ಶಟ್ಟಿಯಿದ್ದನು. ಆತನು ಧರ್ಮವನ್ನು ಬಿಟ್ಟವನಲ್ಲ; ಅರ್ಥವನ್ನು ಮರೆತವನಲ್ಲ; ಕಾಮವನ್ನು ಬೇಡೆಂದವನಲ್ಲ; ಮೋಕ್ಷವನ್ನು ತಿರಸ್ಕರಿಸಿದವನಲ್ಲ. ಹೀಗೆ ಅವನು ಸಜ್ಜನನಾಗಿದ್ದರೂ ಆತನ ಹಣೆಯ ಬರೆಹದಿಂದ ಕೆಟ್ಟ ಕಾಲವು ಬಂದು ಇದ್ದ ಹಣವೆಲ್ಲಾ ಕರಗಿ ಹೋಯಿತು. ಹಣವು ಹೋಗಲು ಅವನಿಗೆ ಎಲ್ಲೆಲ್ಲೂ ಅಪಮಾನದ ಮೇಲೆ ಅಪಮಾನವಾಗಿ ಅವನು ಬಹಳ ಸಂಕಟಪಡುನಂತಾಯಿತು. ಒಂದು ದಿನ ರಾತ್ರಿ ಮಲಗಿರುವಾಗ ಅವನಿಗೆ ಒಂದು ಯೋಚನೆ ಬಂತು. “ಅಯ್ಯೋ, ಈ ಬಡತನವು ಎಂಥದು! ಹೇಳಿಯೇ ಇದೆಯಷ್ಟೆ!
ಬುದ್ಧಿಯು ಜ್ಞಾನವು ಮಾನವು ದರ್ಪವು ॥
ಶೀಲವು ಶೌಚವು ಒಳ್ಳೆಯ ಜನ್ಮವು | 
ವಿತ್ತವು ಇಲ್ಲದೆ ಸರ್ವವು ವ್ಯರ್ಥ ॥ ೨ ॥
ಉಪ್ಪು ಬೇಳೆಯ ಚಿಂತೆ ಹಿಡಿಯೆ ॥ 
ಬುದ್ದಿವಂತನ ಬುದ್ದಿಯೆಲ್ಲವು | 
ಕರಗಿ ಹೋಹುದು ಶಿಶಿರ ಹಿಮದಂತೆ ॥ ೩ ॥ 
ಸಾಗರ ಹಗಲಿರುಳೆನ್ನದೆ ಮೊರೆಯುವುದು । 
ಸುಮ್ಮನೆ ಇಹುದೀ ಲೋಕವು ದೊಡ್ಡವನೆಂದು ॥ 
ದುಡ್ಡಿನ ದೊಡ್ಡವ ನಾಚಿಕೆ ಬಿಟ್ಟರು ॥ 
ಲೋಕವು ಬಿಡುವುದೆ ಅವನನ್ನು ? ॥ ೪ ॥
ಅದರಿಂದ, ಈ ಬಡತನದ ಬಾಳು ಬದುಕಾವುದಕ್ಕಿಂತ, ಉಪವಾಸಮಾಡಿ ಪ್ರಾಣ ಬಿಡುವುದು ಒಳ್ಳೆಯದು. ಫಲವಿಲ್ಲದ ಈ ಬಂಜೆ ಬಾಳಿನಿಂದ ಅಗುವುದೇನು?” ಎರೆದು ನಿಶ್ಚಯಮಾಡಿ ಕೊಂಡು ಮಲಗಿಕೊಂಡನು.
ಅವನಿಗೆ ಕೊಂಚ ಹೊತ್ತಿನಲ್ಲಿಯೇ ನಿದ್ದೆ ಬಂದು ಒಂದು ಕನಸು ಬಿತ್ತು. ಲೋಕದಲ್ಲಿರುವ ಐಶ್ವರ್ಯವೆಲ್ಲಾ ನಿಧಿಗಳು ಎಂಬ ಒಂಭತ್ತು ದೇವತೆಗಳ ವಶದಲ್ಲಿರುವುದು. ಅವರಲ್ಲಿ ಒಬ್ಬನಾದ ಪದ್ಮನು ಜೈನಸನ್ಯಾಸಿಯ ಹಾಗೆ ಆ ಕನಸಿನಲ್ಲಿ ಕಾಣಿಸಿಕೊಂಡು “ಎಲೈ ಶೆಟ್ಟಿಯೇ, ನೀನು ಒಳ್ಳೆಯವನು. ಬೇಸರ ಪಟ್ಟು ಪ್ರಾಣ ಕಳೆದುಕೊಳ್ಳಬೇಡ. ನಾನು ಪದ್ಮ ನಿಧಿಯು ನಿನ್ನ ಹಿರಿಯರು ಮಾಡಿರುವ ಪುಣ್ಯದಿಂದ ನಾನು ನಿನಗೆ ದರ್ಶನಕೊಟ್ಟಿರುವೆನು. ನಾಳೆ ನಾನು ಈ ರೂಪದಿಂದಲೇ ನಿಮ್ಮ ಮನೆಗೆ ಬರುವೆನು. ಆಗ ನೀನು ನನ್ನನ್ನು ಒಂದು ದೊಣ್ಣೆಯಿಂದ ಹೊಡೆದರೆ ನಾನು ಚಿನ್ನ ವಾಗುವೆನು.” ಎಂದು ಹೇಳಿದನು:
ಶೆಟ್ಟಯು ಬೆಳಗೆದ್ದು “ಅದೇನು ಹೀಗೆ ಕನಸಾಯಿತು? ಈ ಕನಸು. ನಿಜವಾಗುವುಜೋ ಇಲ್ಲವೋ ಬಲ್ಲವರಾರು? ನಾನು ಕೇವಲ ಹಣ ಹಣ, ಎಂದೇ ಚಿಂತಿಸುತ್ತಾ ನಿದ್ದೆ ಹೋದೆನು.
ಅದರಿಂದ ಹೀಗೆ ಆಗಿದ್ದರೂ ಆಗಿರಬಹುದು. ಅಲ್ಲದೆ, ರೋಗ, ದುಃಖ, ಶೋಕ, ಕಾಮಗಳಿಂದ ಒದ್ದಾಡುವವರಿಗೆ ಬೀಳುವ ಕನಸುಗಳು ಫಲವಾಗುವುದಿಲ್ಲ ಎನ್ನುವರು. ಅದರೂ ಇರಲಿ ನೋಡೋಣ ಏನಾಗುವುದೋ?” ಎಂದು ಮಡಿಯುಟ್ಟು ಕಾದಿದ್ದನು.
ಇಷ್ಟರಲ್ಲಿ ಆ ಶೆಟ್ಟಿಯ ಮಡದಿಯು ತನ್ನ ಕಾಲಿಗೆ ಔಷಧವನ್ನು ಹಾಕಿಸಿಕೊಳ್ಳಲು ಒಬ್ಬ ನಾಪಿತನನ್ನು, ಕರೆಯಿಸಿದ್ದಳು. ಅವನು ಔಷಧವನ್ನು ಮಾಡುತ್ತಿದ್ದ ಹಾಗೆಯೇ ಜೈನ ಸನ್ಯಾಸಿಯು ಎಲ್ಲಿಂದಲ್ಲೊ ಬಂದೇ ಬಿಟ್ಟನು. ಶೆಟ್ಟಿಯು ಅವನನ್ನು ಕಂಡು ಸಂತೋಷದಿಂದ ಆತನನ್ನು ಒಳಕ್ಕೆ ಕರೆದುಕೊಂಡು ಹೋಗಿ ಕುಳ್ಳಿರಿಸಿ, ಒಂದು ದೊಣ್ಣೆಯಿಂದ ಅತನ ತಲೆಯ ಮೇಲೆ ಹೊಡೆದನು.  ಕೂಡಲೇ ಆ ಸನ್ಯಾಸಿಯು ಕನಸಿನಲ್ಲಿ ಹೇಳಿದದಂತೆ ಚಿನ್ನದ ರಾಶಿ ಯಾದನು. ಅದನ್ನೆಲ್ಲ ಶೆಟ್ಟಿಯು ಒಳಗೆ ಭದ್ರ ಮಾಡಿಟ್ಟು, ನಾಪಿತನನ್ನು ಕರೆದು ಅವನಿಗೂ ಅಷ್ಟು ಕೊಟ್ಟು, “ಇದನ್ನು ಯಾರಿಗೂ ಹೇಳಬೇಡ” ಎಂದು ಒಪ್ಪಿಸಿ ಕಳುಹಿಸಿಕೊಟ್ಟನು.
ದಾರಿಯಲ್ಲಿ ಹೋಗುತ್ತಾ ಆ ನಾಪಿತನು ಯೋಚಿಸಿದನು :- “ಈ ಜೈನ ಸನ್ಯಾಸಿಗಳೆಲ್ಲರೂ ಹೀಗೆಯೇ ತಲೆಯಮೇಲೆ ಹೊಡೆದರೆ ಚಿನ್ನದ ರಾಶಿಗಳಾಗುವರು ಎಂದು ತೋರುತ್ತದೆ. ಅದರಿಂದ ನಾಳೆ ನಾನೂ ಬೇಕಾದಷ್ಟು ಜನರನ್ನು ಕರೆದು. ಅವರನ್ನೆಲ್ಲ ದೊಣ್ಣೆಯಿಂದ ಹೊಡೆದು ಬೇಕಾದಹಾಗೆ ಚಿನ್ನವನ್ನು ಸಂಪಾದಿಸುವೆನು” ಎಂದು ಕೊಂಡು ಅದೇ ಯೋಚನೆಯಲ್ಲಿಯೇ ಆ ದಿನವನ್ನೆಲ್ಲಾ ಕಳೆದನು.
ಮರುದಿನ ಬೆಳಗಾಗುತ್ತಿದ್ದ ಹಾಗೆಯೇ ಮಿಂದು ಮಡಿಯುಟ್ಟು, ಜೈನರ ದೇವಾಲಯಕ್ಕೆ ಹೊಗಿ ಜಿನೇಂದ್ರನಿಗೆ ಮೂರು ಪ್ರದಕ್ಷಿಣೆ ಮಾಡಿ, ಮೊಳಕಾಲೂರಿ ನಮಸ್ಕಾರ ಹಾಕಿ, ಬಾಯನ್ನು ಸೆರಗಿನಿಂದ ಮುಚ್ಚಿಕೊಂಡು, ಗಟ್ಟಿಯಾಗಿ ಸ್ತೋತ್ರಗಳನ್ನು ಹೇಳಿದನು :-
ಜಯಂತಿ ತೇ ಜಿನಾ ಯೇಷಾಂ ಕೇವಲ ಜ್ಞಾನ ಶಾಲಿನಾಂ ॥ 
ಆಜನ್ಮನಃ ಸ್ಮರೋತ್ಪತ್ತೌ ಮಾನಸೇನೋಷರಾಯಿತಂ ॥ 
ಜಿನರು ಕೇವಲ ಜ್ಞಾನವುಳ್ಳವರು. ಹುಟ್ಟಿದುದು ಮೊದಲು ಅವರು ಕಾಮನಿಗೆ ವಶವಾದವರಲ್ಲ ಅಂಥಹ ಜಿನರಿಗೆ ಜಯವಾಗಲಿ.
ಜಿನನ ಹೊಗಳುವ ನಾಲಿಗೆಯು ನಾಲಿಗೆಯು ॥ 
ಜಿನನಲ್ಲಿ ನಿಂತಿರುವ ಚಿತ್ತವೇ ಚಿತ್ತ ॥ 
ಜಿನನ ಪೂಜೆಯ ಮಾಳ್ಪ ಹಸ್ತಗಳೆ ಹಸ್ತಗಳು ॥  
ಜಿನನಲ್ಲದಿನ್ನೊಂದು ದೈವಮುಂಟೆ ॥ ೫ ॥ 
ಹೀಗೆಲ್ಲ ಸ್ತ್ರೋತ್ರಗಳನ್ನು ಮಾಡಿ, ಆ ವಿಹಾರ ೧ ದಲ್ಲಿದ್ದ ಕ್ಷಪಣಕರ ೨ ಲ್ಲೆಲ್ಲಾ ಮುಖ್ಯನಾದವನನ್ನು ಕಂಡು “ನಮೋಸ್ತು, ವಂದೇ” ಎಂದು ನಮಸ್ಕಾರ ಮಾಡಿದನು. ಅವರು “ನಿನ್ನ ಧರ್ಮವು ಬೆಳೆಯಲಿ” ಎಂದು ಆಶೀರ್ವಾದ ಮಾಡಿ, ಆ ಧರ್ಮವು ಏನು ಎಂಬುದನ್ನು ಹೇಳಿದರು. ಅದನ್ನೆಲ್ಲಾ ಭಕ್ತಿಯಿಂದ ಕೇಳಿ “ಎಲೈ ಭಗವಂತರೆ, ತಾವು ಈ ದಿನ ಈ ಮುನಿಗಳೆಲ್ಲರನ್ನೂ ಕರೆದುಕೊಂಡು ನಮ್ಮ ಮನೆಗೆ ದಯಮಾಡಿಸಬೇಕು” ಎಂದು ಕೇಳಿಕೊಂಡನು. ಅದಕ್ಕೆ ಆ ಮುನೀಂದ್ರನು “ಅಯ್ಯಾ ಶ್ರಾವಕ, ೩ ನೀನು ಧರ್ಮವನ್ನು ಬಲ್ಲೆ. ಆದರೂ ಹೀಗೆ ನುಡಿಯುತ್ತಿರುವೆಯಲ್ಲ. ಬ್ರಾಹ್ಮಣರನ್ನು ಕರೆಯುವಂತೆ ಕರೆಯುತ್ತಿರುವಿಯೆಲ್ಲ! ನಮ್ಮ ಪಾಡಿಗೆ ನಾವು ಹೋಗುತ್ತಿರುವಾಗ ಯಾರಾದರೂ ಬನ್ನಿರೆ೦ದರೆ, ಆಗ ಹೋಗಿ, ಪ್ರಾಣಧಾರಣಕ್ಕೆ ಬೇಕಾಗುವಷ್ಟು ಭಿಕ್ಷೆಯನ್ನು ಮಾತ್ರ ಸ್ವೀಕರಿಸುವವರು. ಅದರಿಂದ ನಮ್ಮನ್ನು ಹೀಗೆ ಕರೆಯಬಾರದುಹೋಗು” ಎಂದನು.
೧ ಜೈನ ಸನ್ಯಾಸಿಗಳಿರುವ ಮಠಕ್ಕೆ ವಿಹಾರ ಎಂದು ಹೆಸರು.
೨ ಜೈನಸನ್ಯಾಸಿಗಳನ್ನು ಕ್ಷಪಣಕರು, ಮುನಿಗಳು ಎಂದು ಕರೆಯುವರು.
೩ ಜೈನರಲ್ಲಿ ಇನ್ನೂ ವ್ರತವನ್ನು ಹಿಡಿಯದಿದ್ದವರಿಗೆ ಶ್ರಾವಕರೆಂದು ಹೆಸರು.
ನಾಪಿತನು ಬಿಡಲಿಲ್ಲ. “ಭಗವಂತರೆ, ನಾನು ತಮ್ಮ ಧರ್ಮವನ್ನು ಬಲ್ಲೆ. ತಾವು ಬೀದಿಯಲ್ಲಿ ಹೊರಟರೆ ತಮ್ಮನ್ನು ಕರೆಯುವವರು ಎಷ್ಟೋ ಮುಂದಿ. ಆದರೆ ನಾನು ಈ ದಿನ ತಮಗಾಗಿ ಪುಸ್ತುಕಗಳನ್ನು ಕಟ್ಟುವುದಕ್ಕೆ ಪಟ್ಟು (ದಪ್ಪ ರೇಷ್ಮೆಯ ಬಟ್ಟೆ) ಗಳನ್ನು ತೆಗದಿಟ್ಟಿರುವೆನು. ಪುಸ್ತಕಗಳನ್ನು ಬರೆಸುವುದಕ್ಕೆಂದು ಹಣವನ್ನು ತೆಗೆದಿಟ್ಟಿರುವೆನು. ಅದರಿಂದ ತಾವು ದಯಮಾಡಿ ಅನುಗ್ರಹಿಸಬೇಕು?” ಎಂದು ಮತ್ತೆ ನಮಸ್ಕಾರ ಮಾಡಿದನು. ಅವರು ಆ ಪಟ್ಟಗಳು, ಪುಸ್ತಕ ಬರೆಯುವುದಕ್ಕೆ ಹಣ ಸಿಕ್ಕುವುದೆಂಬ ಲೋಭದಿಂದ ಅವನ ಹಿಂದೆಯೇ ಹೋದರು. – ಲೋಕವೇ ಹೀಗೆ :-
ಮನೆಯನು ಬಿಟ್ಟು ಒಂಟಿಗನಾಗಿ | ಬಟ್ಟೆಯ ತೊರೆದು ಕಂದೊಳು ಉಂಡು॥  
ತಿರುಗುವ ಯತಿಯೂ ಆಶೆಯ ದಾಸನು | ಆಶೆಯ ಬಿಟ್ಟಿಹುದಾರನ್ನು ॥ ೬ ॥ 
ನಾಪಿತನು ಅವರನ್ನೆಲ್ಲ ತನ್ನ ಮನೆಗೆ ಕರೆದುಕೊಂಡು ಹೋಗಿ ನಡುಮನೆಯಲ್ಲಿ ಕೂರಿಸಿದನು. ಬಾಗಿಲುಗಳನ್ನೆಲ್ಲಾ ಭದ್ರವಾಗಿ ಮುಚ್ಚಿ, ಮದಲೇ ಇಟ್ಟಿದ್ದ ಭಾರಿಯ ದೊಣ್ಣೆಗಳಿಂದ ಅವರ ತಲೆಗಳನ್ನು ಒಡೆಯಲು ಆರಂಭಿಸಿದನು. ಅವರು ಏಟು ತಡೆಯಲಾರದೆ ಹೋ ಎಂದು ಅತ್ತರು. ಕೆಲವರು ಸತ್ತ ಹೋದರು.
ಆ ಅಳುವಿನ ಸದ್ದು ಕೇಳಿ ಅವರೂ ಇವರೂ ಅಲ್ಲಿಗೆ ಬಂದರು. ನಗರ ರಕ್ಷಕರೂ ಬಂದು ಬಾಗಿಲು ತೆಗೆಯಿಸಿ ನೋಡಲು ಒಳಗೆ ಆಗುತ್ತಿರುವ ಕ್ಷಪಣಕ ಸಂಹಾರವು ಕಾಣಿಸಿತು. ಸಾಯದೆ ಉಳಿದಿದ್ದವರು ತಲೆಯಿಂದ ರಕ್ತವನ್ನು ಸುರಿಸಿಕೊಂಡು ಈಚೆಗೆ ಓಡಿ ಬಂದರು. ಅವರಿಂದ ಎಲ್ಲವನ್ನೂ ಕೇಳಿ, ರಕ್ಷಕರು ಆ ನಾಪಿತನನ್ನು ಹಿಡಿದು ಕೊಂಡು ಹೋಗಿ ನ್ಯಾಯಾಸ್ಥಾನದಲ್ಲಿ ನಿಲ್ಲಿಸಿದರು. ಧರ್ಮಾಧಿಕಾರಿಗಳು ನಾಪಿತನನ್ನು “ಇದೇಕೆ ಹೀಗೆ ಮಾಡಿದೆ?” ಎಂದು ಕೇಳಲು, ಮಣಿಭದ್ರನು ಮಾಡಿದಂತೆ ತಾನೂ ಮಾಡಿದೆನೆಂದು ಹೇಳಿದನು. ಅವರು ಆ ಶೆಟ್ಟಿಯನ್ನು ಕರೆಸಿ “ಏನಯ್ಯಾ, ನೀನು, ಕ್ಷಪಣಕನನ್ನು ಕೊಂದೆಯಾ?” ಎನ್ನಲು ಅವನು ತನಗೆ ಆದ ಕನಸು ಮೊದಲುಗೊಂಡು ಎಲ್ಲವನ್ನೂ ಅವರಿಗೆ ಅರಿಕೆಮಾಡಿದನು. ಆಗ ಅವರು “ಈ ನಾಪಿತನು ಕುಪರೀಕ್ಷಿತಕಾರಿಯು. ಕಂಡುದನ್ನು ಪರೀಕ್ಷೆಮಾಡದೆ ಮಾಡಿದ ಪಾಪಿಯು. ಹಿಂದಿನವರು ಹೇಳಿಲ್ಲವೆ?
ಯೋಚಿಸಿ ಮಾಡದೆ ದುಡುಕಿದರೆ | ತಪ್ಪದೆ ದುಃಖವು ಒದಗುವುದು ॥ 
ಥಟ್ಟನೆ ಕೊಂದಾ ನಕುಲವನು | ಬ್ರಾಹ್ಮಣಿಯತ್ತಳು ಹಗಲಿರುಳು ॥ ೭ ॥ 
ಮಣಿಭದ್ರಸು “ಆ ಕಥೆಯೇನು?” ಎನ್ನಲು ಧರ್ಮಾಧಿಕಾರಿಗಳು ಹೇಳಿದರು: –
*****
ದೇವಶರ್ಮನ ಕಥೆ ಓದಿ
Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...