
(ದುಃಖಗೀತೆ)
ಆಳಿದ ಮಹಾಸ್ಟಾಮಿಯವರಾದ ಶ್ರೀಮನ್ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್ ಅವರ ಪವಿತ್ರಾತ್ಮಕ್ಕೆ ಚಿರಶಾಂತಿಯನ್ನು ಬಯಸಿ ಹಾಡಿದ ಚರಮಗೀತೆ.
೧
ಜಗವು ಮುಳುಗಿಹುದಿಂದು ಕಡುದುಃಖಜಲಧಿಯಲಿ
ಕಾರ್ಮುಗಿಲು ಕವಿದಿಹುದು ಕಾರಿರುಳು ಮುಸುಕಿಹುದು.
ಗುಮ್ಮನಂದದಿ ಕ್ರೂರವಿಧಿ ಬಂದು ನಂದಿಸಿತು
ಮೈಸೂರು ನಾಡಿನಲಿ ದಿವ್ಯತರ ಜ್ಯೋತಿಯನು
ಕರ್ಣಾಟದೇವಿ ಭುವನೇಶ್ವರಿಯು ದುಃಖಿಪಳು
ಕರವಾಲ ಕೆಳಗಿಟ್ಟು ಮಕುಟವನು ನೆಲಕಿಟ್ಟು
ಯಾರು ಮರೆವರು ನಾಲ್ಬಡಿಯ ಕೃಷ್ಣ ಭೂಮಿಪರೆ
ಪುಣ್ಯಾತ್ಮ ಸತ್ಯಾತ್ಮ ದಿವ್ಯಾತ್ಮ ನಿಮ್ಮನ್ನು!
೨
ಹತ್ತು ವರ್ಷದ ಹಸುಳೆ ಹಾಲುಗಲ್ಲದ ಕೂಸು
ಚಾಮರಾಜೇಂದ್ರ ತಂದೆ ಕಣ್ಮುಚ್ಚಿದಂದು
ಅಪರಂಜಿ ನಾಲ್ವಡಿಯ ಕೃಷ್ಣೇಂದ್ರ ಭೂಪರನು
ತೂಗಿ ತೊಟ್ಟಿಲೊಳಿಟ್ಟು ಜೋಗುಳವ ನುಡಿದವರು
ಕೈಹಿಡಿದು ನಡೆಗಲಿಸಿ ನುಡಿಗಲಿಸಿ ನಲಿದವರು
ಹಾಲೂಡಿ ಹಣೆಯಲ್ಲಿ ತಿಲಕವನು ಇಟ್ಟವರು
ಯಾರು ಮರೆವರು ನಾಲ್ವಡಿಯ ಕೃಷ್ಣಭೂಮಿಪರೆ
ಪುಣ್ಯಾತ್ಮ ಸತ್ಯಾತ್ಮ ದಿವ್ಯಾತ್ಮ ನಿಮ್ಮನ್ನು !
೩
ಸುಖಿಯಾಗು ನೀನೆಂದು ಹರಸಿದ್ದ ಗುರುಜನರು
ಚಿರಕಾಲ ಬಾಳೆಂದು ನುಡಿಸಿದ್ದ ಹಿರಿಜನರು
ಶುಭಮೆಂದು ಅಕ್ಷತೆಯ ಹಾಕಿದ್ದ ಬಂಧುಗಳು
ಒಡನಾಡಿ ಒಡನೋದಿ ಒಡವಳೆದ ನೇಹಿಗರು
ಮನದಣಿಯೆ ಸೇವೆಯನು ಸಲಿಸಿದ್ದ ಸೇವಕರು
ಅವಧಾನವೆನ್ನುತ್ತ ನುಡಿದಿದ್ದ ಭಟಜನರು
ಯಾರು ಮರೆವರು ನಾಲ್ವಡಿಯ ಕೃಷ್ಣಭೂಮಿಪರೆ
ಪುಣ್ಯಾತ್ಮ ಸತ್ಯಾತ್ಮ ದಿವ್ಯಾತ್ಮ ನಿಮ್ಮನ್ನು!
೪
ಮಜ್ಜನದ ಮನೆಯಲ್ಲಿ ಶಿವಪೂಜೆ ಭವನದಲಿ
ವರ ಸಜ್ಜೆಗೃಹದಲ್ಲಿ ಹೊತ್ತರಿದು ಭಾವಿಪೊಡೆ
ಇದ್ದಂತೆ ಕಾಂಬುವಿರಿ ಅರಮನೆಯ ವಾಸದಲಿ
ಚಾಮುಂಡಿ ತಪ್ಪಲಲಿ ಹಯನೇರಿ ತಿರುಗುವರೊ
ಗಿರಿಯೇರಿ ನಡೆಯುವರೊ ಎಂಬಂತೆ ತೋರುವುದು
ಬೆಳಗಪ್ಪ ಜಾಮದಲಿ ಮೈಸೂರು ನಗರದಲಿ
ಯಾರು ಮರೆವರು ನಾಲ್ವಡಿಯ ಕೃಷ್ಣಭೂಮಿಪರೆ
ಪುಣ್ಯಾತ್ಮ ಸತ್ಯಾತ್ಮ ದಿವ್ಯಾತ್ಮ ನಿಮ್ಮನ್ನು!
೫
ನೀವುಂಡ ತಾಣದಲಿ ಚಿನ್ನದಾ ಹರಿವಾಣ
ನಿಮ್ಮ ಪದವಿಟ್ಟು ನಡೆದಿದ್ದ ರನ್ನಗಂಬಳಿ
ಪವಡಿಸಿದ ಮಣಿಮಂಚ ತೂಗಿದುಯ್ಯಾಲೆಮಣೆ
ಸಾರುತಿವೆ ಮೂಕಭಾವದಿ ರಾಜನಿಷ್ಠೆಯನು
ರನ್ನಗನ್ನಡಿ ತೋರುವುದು ರಾಜಬಿಂಬವನು
ನಿಲವುಗನ್ನಡಿ ಬಿಂಬಿಪುದು ರಾಜರೂಪವನು
ಯಾರು ಮರೆವರು ನಾಲ್ವಡಿಯ ಕೃಷ್ಣಭೂಮಿಪರೆ
ಪುಣ್ಯಾತ್ಮ ಸತ್ಯಾತ್ಮ ದಿವ್ಯಾತ್ಮ ನಿಮ್ಮನ್ನು!
೬
ಹಯಶಾಲೆ ಗಜಶಾಲೆ ಮುಳುಗಿಹೆವು ದುಃಖದಲಿ
ಪಟ್ಟಹಯ ಪಟ್ಟಗಜ ಕಣ್ಣೀರ ಮಿಡಿಯುವುವು
ಮೌನದಲಿ ಮರುಗುತ್ತ ಕಾದಿಹವು ಬರುತಿಹರು
ಅಟ್ಟಹಾಸದಿ ಪಟ್ಟಭದ್ರರೆಂದೆನ್ನುತ
ಬೆಳ್ಗೊಡೆಯ ಹಿಡಿದಿಹಳು ವರರಾಜ್ಯ ಲಕ್ಷ್ಮಿತಾ
ಕಾದಿಹಳು ರತ್ನಸಿಂಹಾಸನದ ಕೆಲದಲ್ಲಿ
ಯಾರು ಮರೆವರು ನಾಲ್ವಡಿಯ ಕೃಷ್ಣ ಭೂಮಿಪರೆ
ಪುಣ್ಯಾತ್ಮ ಸತ್ಯಾತ್ಮ ದಿವ್ಯಾತ್ಮ ನಿಮ್ಮನ್ನು!
೭
ನಿಮ್ಮ ನಿರ್ಮಲ ಕೀರ್ತಿಯನು ಸಂದ ಮೂವತ್ತು
ಮೇಲೆಂಟು ವರ್ಷದಲಿ ಇಳೆಯೊಳಗೆ ಬೆಳಗಿಸಿದ
ಮೈಸೂರು ಬಾವುಟವು ತಾನಿಂದು ಅರೆವಿಳಿದು
ತಲೆವಾಗಿ ದುಃಖಿಪುದು ಮೌನದಲ್ಲಿ “ಕಾಯೌ
ಶ್ರೀಗೌರಿ” ಎಂದೆಂಬ ಗೀತೆಯನು ನುಡಿಸಿದ್ದ
ಓಲಗವು ಮೂಕವಾಗಿಹುದಿಂದು ಶೋಕದಲಿ
ಯಾರು ಮರೆವರು ನಾಲ್ವಡಿಯ ಕೃಷ್ಣಭೂಮಿಪರೆ!
ಪುಣ್ಯಾತ್ಮ ಸತ್ಯಾತ್ಮ ದಿವ್ಯಾತ್ಮ ನಿಮ್ಮನ್ನು!
೮
ಹೂಬಿಟ್ಟು ನಿಂದಿಹುವು ಉದ್ಯಾನವನದಲ್ಲಿ
ಗಿಡಬಳ್ಳಿ ಕಾದಿಹುವು ಶಿವಪೂಜೆ ಸಮಯವನು
ದಿನದಂತೆ ಬಿಡಿಸಿಲ್ಲ ಹೂಗಳನು ಬಾಡುವುವು!
ತೊಟ್ಟಿಳಿದು ಬೀಳುವುವು ಗಿಡದಿಂದ ಹಣ್ಣುಗಳು
ತಲೆಗೊಡಹಿ ರೋದಿಪುವು ಜೀಯೆಂದು ತರುರಾಜಿ
ಆತಿದುಃಖ ಮಾರುತವು ಬೀಸುತಿರೆ ಮಧುವನದಿ
ಯಾರು ಮರೆವರು ನಾಲ್ವಡಿಯ ಕೃಷ್ಣ ಭೂಮಿಪರೆ
ಪುಣ್ಯಾತ್ಮ ಸತ್ಯಾತ್ಮ ದಿವ್ಯಾತ್ಮ ನಿಮ್ಮನ್ನು!
೯
ಪೋಷಿಸಲು ನಿಮ್ಮ ಸುಕುಮಾರ ದೇಹವನು
ಅನುದಿನವು ಹಾಲಿತ್ತ ಗೋಮಾತೆ ತುಂಬಿಹಳು
ಕೆಚ್ಚಲನು ಸೂಸಲಾರಳು ಹಾಲು ಧಾರೆಯನು!
ಅಗಲಿದಿರಿ ನೀವೆಂದು ಕಣ್ಣೀರ ಸುರಿಸುವಳು
ನಿಟ್ಟುಸಿರ ಬಿಡುತಿಹಳು ದಿಟ್ಟಿಸುತ ನೋಡುವಳು
ಮೂಕಭಾವದಿ ಮರುಗುವಳು ಕರೆವ ಹಟ್ಟಿಯಲಿ!
ಯಾರು ಮರೆವರು ನಾಲ್ವಡಿಯ ಕೃಷ್ಣಭಮಿಪರೆ
ಪುಣ್ಯಾತ್ಮ ಸತ್ಯಾತ್ಮ ದಿವ್ಯಾತ್ಮ ನಿಮ್ಮನ್ನು!
೧೦
ಎಲ್ಲ ದುಃಖವ ಮೀರಿರುವ ದುಃಖವೊಂದಿಹುದು
ಮಾರಾಣಿದೇವಿ ಪ್ರತಾಪಕುವರಿಯರ
ಸುಕುಮಾರ ಹೃದಯದಲಿ ಭುಗಿಲೆಂದು ಭುಗಿಲೆಂದು
ಹೊತ್ತುತಿಹ ದುಃಖಾಗ್ನಿ ದಹಿಸುತಿದೆ ದೇಹವನು!
ಯಾವ ಭೋಗವ ಯಾವ ಭಾಗ್ಯವನು ಮಹಮಾತೆ
ಮಡಿಲಲ್ಲಿ ತುಂಬಿದೊಡೆ ಶಮನಿಪುದು ದುಃಖಾಗ್ನಿ!
ಯಾರು ಮರೆವರು ನಾಲ್ವಡಿಯ ಕೃಷ್ಣಭೂಮಿಪರೆ
ಪುಣಾತ್ಮ ಸತ್ಯಾತ್ಮ ದಿವ್ಯಾತ್ಮ ನಿಮ್ಮನ್ನು!
೧೧
ಪತಿದೇವರಡಿಯಲ್ಲಿ ತಪಗೈದು ನಾಲ್ವತ್ತು
ವರ್ಷಪರ್ಯಂತ ವ್ರತ ನೇಮ ಮಾಳ್ಕೆಯಲಿ ಪತಿ
ಸೇವೆ ಮಾಡಿಹರು ಮುತ್ತೈದೆ ಭಾಗ್ಯದಲಿ! ಹಾ!
ಇನ್ನುಂಟೆ ಆ ಭಾಗ್ಯ ಸುರಭಾಗ್ಯ ಧರೆಯಲ್ಲಿ
ಎಪ್ಪತ್ತುಲಕ್ಷ ಮಕ್ಕಳಿರುವೆವು ಮಹತಾಯೆ!
ನಾವೇನ ಮಾಡುವೆವು ನಿರ್ಭಾಗ್ಯರಾಗಿಹೆವು
ಯಾರು ಮರೆವರು ನಾಲ್ವಡಿಯ ಕೃಷ್ಣ ಭೂಮಿಪರೆ
ಪುಣ್ಯಾತ್ಮ ಸತ್ಯಾತ್ಮ ದಿವ್ಯಾತ್ಮ ನಿಮ್ಮನ್ನು!
೧೨
ತಾಯ ಕಣ್ಣೀರ ತೊರೆಯ ಕೂಡಲಿ ನಮ್ಮೊಂದು
ಕಣ್ಣೀರ ಕಾಲುವೆಯು, ನಂದಿಸಲಿ ದುಃಖಾಗ್ನಿ
ಬೇಗೆಯನು; ಮಾತಾಯಿ! ನನ್ನೊಡಲ ದುಃಖವನು
ಶ್ರೀಗಂಧ ಚಿತೆಯಲ್ಲಿ ಕಪ್ಪುರದ ರಾಶಿಯನು
ಅಳವಡಿಸಿ ಅರ್ಪಣವ ಮಾಡಿದೆವು ರಾಜರ್ಷಿ
ಭೂಪರನು ವೈಶ್ವಾನರನ ದಿವ್ಯ ಕರತಲದಿ.
ಯಾರು ಮರೆವರು ನಾಲ್ವಡಿಯ ಕೃಷ್ಣ ಭೂಮಿಪರೆ
ಪುಣ್ಯಾತ್ಮ ಸತ್ಯಾತ್ಮ ದಿವ್ಯಾತ್ಮ ನಿಮ್ಮನ್ನು!
೧೩
ಸುರರು ಹೂಮಳೆ ಸುರಿಸಿ ನುಡಿಸಿದರು ಮಂದುಭಿಯ
ಜಯವೆಂದು ಸಗ್ಗದಲಿ ನಿರ್ಜರರು ಘೋಷಿಪರು
ಚಿರಶಾಂತಿ ಮಂತ್ರವನು ಗೀರ್ವಾಣಭಾಷೆಯಲಿ
ನೀಡುವೆವು ಪ್ರಭುವರರೆ ಕಣ್ಣೀರು ಕಾಣಿಕೆಯ
ಅತಿದುಃಖ ತರ್ಪಣವ ಹತಭಾಗ್ಯರಾವಿಂದು
ನಾವೇನಮಾಡುವೆವು ನಿರ್ಭಾಗ್ಯರಾಗಿಹೆವು
ಮರೆಯೆಲಾರೆವು ನಾಲ್ವಡಿಯ ಕೃಷ್ಣ ಭೂಮಿಪರೆ
ಪುಣ್ಯಾತ್ಮ ಸತ್ಯಾತ್ಮ ದಿವ್ಯಾತ್ಮ ನಿಮ್ಮನ್ನು!
ಶಾಂತಿ ವಚನ
ಯದುವಂಶ ಕಲ್ಪಲತೆ ಪೂತು ಫಲಿಸಲಿ ನಿರುತ
ಸಂತಾನ ಫಲಗಳನು ಜಯಚಾಮ ರಾಜೇಂದ್ರ
ವರ್ಧಿಸಲಿ ಮುಂಬೆಳಗ ತೋರುತ್ತ ಕವಿದಿರುವ
ಕಾರ್ಮುಗಿಲ ಹರಿಸುತ್ತ ನಾಲ್ವಡಿಯ ಕೃಷ್ಣನೊಲು
ರಾಜರ್ಷಿಯೆನಿಸಿ ನೆರೆ ಪಾಲಿಸಲಿ ಮೈಸೂರು
ನಾಡನ್ನು! ಚಿರಕಾಲ ವರ್ಧಿಸಲಿ ಧರೆಯಲ್ಲಿ!
ನಾಡೊಡೆಯ ಜಯಚಾಮರಾಜೇಂದ್ರ; ವಂದಿಪೆವು
ಮೈಸೂರು ಕಣ್ಮಣಿಯೆ ಸುಖಿಯಾಗು ಸುಖಿಯಾಗು
*****
















