
(ಹಳೆಯ ಕಥೆ)
ಮಾಲೆಗಳು, ಮಾಲೆಗಳು ಬೀದಿ ಮನೆಮನೆಗೆ;
ಮುತ್ತುಗಳ ಸೇಸೆಗಳು ತಲೆಯೊಳಗೆ ಮಿನುಗೆ;
ಮಾಳಿಗೆಗಳೊಲೆದಾಡಿ ಹಿಗ್ಗು ಮುಗ್ಗಾಗೆ;
ಎತ್ತಿದಾ ಗುಡಿ ದೀಪಗೋಪುರವ ಬೆಳಗೆ-
ಒಂದು ವರುಷದ ಕೆಳಗೆ ನನಗೆ ಮೆರವಣಿಗೆ!
ಗಾಳಿ ನೊರೆಕೀಳುವುದು ವಾದ್ಯಗಳ ಮೊರೆಗೆ;
ಊರೆ ಕಿತ್ತೊಡುವುದು ಜನದ ಜಯಜಯಕೆ.
ಕೇಳಿದೆನೆ – “ಅಣ್ಣದಿರ, ಏಕೆ ಬರಿ ಬೊಬ್ಬೆ?
ಸೂರಿಯನ ತಂದುಕೊಡಿ” ಎನುತ – ಅವರೊಡನೆ
“ಆಯ್ತಾಯ್ತು; ಮತ್ತೇನು? ಕೇಳು” ಎನುತಿಹರು.
ನಾನಕಟ! ಸೂರ್ಯನನು ತರಲು ನೆಗೆದವನು!
ನಾಡಿನೊಲುಮೆಯ ಜನದ ಕಯ್ಗೆ ಕೊಡಲದನು.
ಮಾನವನು ಮಾಡುವುದನೆಲ್ಲ ಮಾಡಿದೆನು.
ನೋಡೆನ್ನ ಪಾಡೀಗ ನಾ ಬೆಳೆದ ಬೆಳಸು,
ಒಂದು ವರುಷವು ಕಳೆದು ನಾ ಕೊಯ್ದ ಕೊಯಲು.
ಮಾಳಿಗೆಯ ಮೇಲೀಗ ಒಂದು ತಲೆ ಕಾಣೆ!
ಕಿಟಕಿಯೊಳಗಲ್ಲಲ್ಲಿ ಹೆಳವರಿಣಿಕಿಹರು.
“ಏಳಿ, ಎಲ್ಲರು ಬನ್ನಿ, ನೋಟ ಬಲುಚೆನ್ನು,
ಸುಡುಗಾಡಿನೆಡೆಯಲ್ಲಿ ಶೂಲದಡಿಯಲ್ಲಿ!”
ಅಲ್ಲಿಗೋಡಿದಲೆಲ್ಲ, ತಳ್ಳಿ ತುಳಿದಾಡಿ.
ಮಳೆಯೊಳಗೆ ಹೋಗುವೆನು; ಮುಂಗಯ್ಯ ಕೊರೆದು
ಬೆನ್ನಿನಲಿ ನೇಣಿಂದ ಬಿಗಿದು ಕಟ್ಟಿಹರು.
ಇಳಿಯುತಿದೆ ಹಣೆಯಲ್ಲಿ ರಕ್ತ ಬಸಿಬಸಿದು,
ನನ್ನ ಕಡೆ ಕಲ್ಲೆಸೆದು ಮನಸುಬಂದವರು-
ಒಂದು ವರುಷದ ನಿನ್ನ ತಪ್ಪುಗಳಿಗೆಂದು!
ಹೇಗೆ ಬಂದೆನು ನಾನು, ಹೇಗೆ ಹೋಗುವೆನು!
ಹಿಂದೆ ವಿಜಯೋತ್ಸವದಿ ಸತ್ತುಬಿದ್ದಿಹರು!
“ಲೋಕವೇ ಫಲಕೊಡಲು, ನನ್ನ ಹಂಗೇನು?”
ಎಂದು ಕೇಳನೆ ಆಗ ಭಗವಂತ! ಈಗ,
ಕೊಡುವಾತ ಭಗವಂತ-ಕ್ಷೇಮ ಅದೆ ನನಗೆ.
*****
BROWNING (1812- 1889) : The Patriot














