
ಏನ ಮಾಡಿದೆ ನಾನು ನಿನಗೆ
ಇಂಗ್ಲೆಂಡ್, ನನ್ನಿಂಗ್ಲೆಂಡ್
ಏನ ಮಾಡೆನು ಹೇಳು ನಿನಗೆ
ನನ್ನ ಇಂಗ್ಲೆಂಡ್!
ದೇವನೊರೆವುದ ಕೇಳಿ,
ಕಣ್ಣ ಮಿನುಗನು ತಾಳಿ,
ಘೋರಯಜ್ಞವ ಬೇಳಿ,
ಗಾನದಲಿ ತುತ್ತುರಿಯ ನೀನೂದಲು,
ಇಂಗ್ಲೆಂಡ್,
ಇಳೆಬಳಸಿ ತುತ್ತುರಿಯ ನೀನೂದಲು.
ಇನ್ನು ರವಿ ಎಲ್ಲಿ ಕಾಣುವನು,
ಇಂಗ್ಲೆಂಡ್, ನನ್ನಿಂಗ್ಲೆಂಡ್,
ನಿನ್ನಣೆಯ ಮಹತುಕಾರ್ಯವನು,
ನನ್ನ ಇಂಗ್ಲೆಂಡ್!
ಎಲ್ಲಿ ನಲಿವನು ಕಂಡು
ನಿನ್ನ ಧೀರರ ದಂಡು
ನೂಂಕುವೊಲು ಮುಂಕೊಂಡು,
ಗಾನದಲಿ ತುತ್ತುರಿಯ ನೀನೂದಲು,
ಇಂಗ್ಲೆಂಡ್,
ಎಡರಿನಲಿ ತುತ್ತುರಿಯ ನೀನೂದಲು!
ಬಳುಕುವೆವೆ ಭಕ್ತಿಯಲಿ ನಾವು
ಇಂಗ್ಲೆಂಡ್, ನನ್ನಿಂಗ್ಲೆಂಡ್!
ಕೊಳು, ಕೊಲಿಸು; ನಿನ್ನವರು ನಾವು,
ನನ್ನ ಇಂಗ್ಲೆಂಡ್!
ನಿನ್ನ ಹೊಲ, ಮನೆ, ಚೆಂದ;
ಬಾಳು ಮಿಗಿಲಾನಂದ;
ಸಾವಳಿವು-ಸಾಯುವೆವು
ಗಾನದಲಿ ತುತ್ತುರಿಯ ನೀನೂದಲು,
ಇಂಗ್ಲೆಂಡ್,
ಸ್ವರ್ಗದಲಿ ತುತ್ತುರಿಯ ನೀನೂದಲು.
ಗರ್ವಿ, ಘಾತಕಿ, ಎಂಬರಮ್ಮ,
ಇಂಗ್ಲೆಂಡ್, ನನ್ನಿಂಗ್ಲೆಂಡ್!
ಸರ್ವಧರೆ ನಿನ್ನ ಹೊರೆಯಮ್ಮ!
ನನ್ನ ಇಂಗ್ಲೆಂಡ್!
ವಜ್ರಕವಚವ ತೊಟ್ಟು,
ಗತಿಯ ಕಾವುದ ಬಿಟ್ಟು,
ಜರುಗುವೆಯ? ಮರುಗುವೆಯ?
ಗಾನದಲಿ ತುತ್ತುರಿಯ ನೀನೂದದೆ,
ಇಂಗ್ಲೆಂಡ್,
ನರಕದಲಿ ತುತ್ತುರಿಯ ನೀನೂದದೆ?
ತುಳಿದುಬಹ ನಾವೆಗಳ ತಾಯಿ,
ಇಂಗ್ಲೆಂಡ್, ನನ್ನಿಂಗ್ಲೆಂಡ್!
ಹಳೆಯುಗ್ರಸಾಗರನ ಕೆಳದಿ,
ನನ್ನ ಇಂಗ್ಲೆಂಡ್!
ಸ್ವಾಮಿಯಕ್ಕರ ಕುವರಿ,
ಧರ್ಮಖಡ್ಗದ ಮಡದಿ-
ಸೀಳಿರದೆ, ಖೂಳರೆದೆ,
ಗಾನದಲಿ ತುತ್ತುರಿಯ ನೀನೂದಲು
ಇಂಗ್ಲೆಂಡ್,
ಸತ್ಯದಲಿ ತುತ್ತುರಿಯ ನೀನೂದಲು!
*****
HENLEY (1849 – 1903) : What have I done for you , England, my England














