ವೀಣಾ ತಾತನಿಗೆ ಮೋಹದ ಮೊಮ್ಮಗಳು. ಒಂದು ಗಳಿಗೆ ಮುದುಕ ಅವಳನ್ನು ಬಿಟ್ಟಿರಲಾರ. ತಂದೆತಾಯಿಗಳ ಜೊತೆಯಲ್ಲಿ ಒಂದು ದಿನ ಸಿನಿಮಾಕ್ಕೆ ಹೋಗಿ ಬಂದರೆ ಅಲ್ಲಿ ತಾನು ಕಂಡುದು ಕೇಳಿದ್ದು ಎಲ್ಲಾ ಅವನಿಗೆ ಎರಡು ದಿನ ಹೇಳುವಳು. ಮುದುಕನಿಗೆ ಸಿನಿಮಾ ಬೇಡ. “ಛೇ ! ಬರಿ ನೆರಳಾಟ, ನೆರಳು ನೋಡಿ ಹಿಗ್ಗೋ ಜನದ ಮರುಳು ನನಗೆ ಬೇಡಪ್ಪ!” ಎನ್ನುವನು. ರಮೇಶ್ ಪ್ರಯತ್ನ ಮಾಡಿನೋಡಿ ವಿಫಲನಾಗಿ, ಹೋಗಲಿ ಎಂದು ಬಿಟ್ಟುಬಿಟ್ಟಿದ್ದ. ಈಚೆಗೆ ಒಂದು ವರ್ಷದಿಂದ ಮುರಳೀಧರನು ಹೋಟಲ್ ಕೂಡ ನಿಲ್ಲಿಸಿ ಬಿಟ್ಟಿದ್ದ. ಆ ದಿನಗಳ ಸ್ನೇಹಿತರು ಕೆಲವರು ಇರುವರು. ತಾನೇ ಅವರ ಮನೆಗೆ ಹೋಗಿ ಒಂದು ಗಳಿಗೆ ಎಂದು ನಾಲೈದು ಗಂಟೆ ಹೊತ್ತು ಇಸ್ಪೀಟು ಬಡಿದು ಸುಮಾರು ಎಂಟು ಗಂಟೆ ಹೊತ್ತಿಗೆ ಮನೆಗೆ ಬರುವನು. ಅವನಿಗೆ ಒಂದು ತೋಟ ಮಾಡಬೇಕು ಎಂದು ಇಷ್ಟ. ಆದರೆ ಹಿಂದೆ ತೋಟ ಮಾಡಿ ಸಾವಿರಾರು ರೂಪಾಯಿ ಕಳೆದು ಕೊಂಡು ಕೈ ಸುಟ್ಟುಕೊಂಡಿದ್ದುದು ನೆನಪಾಗಿ “ಛೇ ! ನಮ್ಮ ಮನೆಗೆ ತೋಟ ಹತ್ತಿ ಬರಲಿಲ್ಲ! ಹೋಗಲಿ ಬಿಡು ನಮ್ಮ ಹಣ ನಮ್ಮ ಹತ್ತಿರ ಭದ್ರವಾಗಿರಲಿ’ ಎಂದು ಸುಮ್ಮನಾಗುವನು. ಹೋಟಲು ಮಾರಿ ಹತ್ತು ಸಾವಿರ ರೂಪಾಯಿ ಬಂತು. ಅದನ್ನು ಬ್ಯಾಂಕಿನಲ್ಲಿ ಹಾಕಿ “ಸಾಕು ಬಿಡು. ಎರಡಾಯಿತು. ನನಗೂ ಅರುವತ್ತಾಯಿತು. ಇನ್ನು ಎಷ್ಟು ದಿವಸ! ಮಗನಿಗೆ ಸಂಪಾದನೆ ಚೆನ್ನಾಗದೆ, ನಾನು ಯಾರಿಗೆ ಸಂಪಾದಿಸಬೇಕು ? ಇದ್ದಷ್ಟು ದಿವಸ ರಾಮ, ಕೃಷ್ಣ, ಎಂದುಕೊಂಡು ಇದ್ದರೆ ಆಯಿತು’ ಎನ್ನುವನು. ಮತ್ತೆ ಎಷ್ಟಾಗಲಿ ದುಡಿದ ಮೈ, ಮದರಾಸಿನಲ್ಲಿ ಹೋಗಿ ಒಂದು ಉಡುಪಿ ಕೆಫೆ ತೆಗೆದರೆ ಹೇಗೆ ? ಎನ್ನಿಸುವುದು. ಹೀಗೆ ಅಷ್ಟು ದಿನ ಅನಿಸಿ ಅನಿಸಿ, ಕೊನೆಗೆ ಉಂಡುಂಡು ಕೂರುವ ಸೋಮಾರಿತನ ಅಭ್ಯಾಸವಾಗಿ ಹೋಯಿತು. ಜೊತೆಗೆ ಆಡುವುದಕ್ಕೆ ಒಂದು ಬೊಂಬೆಯಾಗಿ ವೀಣಾ ಸಿಕ್ಕಿದಳು. ಮುದುಕನಿಗೆ ಮನೆಯೇ ಸ್ವರ್ಗವಾಯಿತು. ಒಂದೊಂದು ಸಮಯದಲ್ಲಿ ಮಾತ್ರ ಅವಳೂ ಇದ್ದಿದ್ದರೆ ಚೆನ್ನಾಗಿತ್ತು. ಇದೆಲ್ಲ ನೋಡಿ ಎಷ್ಟು ಸಂತೋಷಪಡುತ್ತಿದ್ದಳೋ!’ ಎನ್ನಿಸುವುದು. ತಿರುಗಿ ಹಾಗೆಯೇ ‘ಅವಳ ಹಣೆ ಯಲ್ಲಿ ಬರೆದಿರಲಿಲ್ಲ! ಪಡೆದಷ್ಟಲ್ಲದೆ ಬಪ್ಪುದೇ ಹರಹರಾ ಶ್ರೀ ಚೆನ್ನಸೋಮೇಶ್ವರಾ!’ ಎಂದುಕೊಂಡು ಸುಮ್ಮನಾಗುವನು. ವೀಣಾ ನೋಡುವುದಕ್ಕೆ ಪರಮ ಸುಂದರಳು, ಹಾಲುಕೆನ್ನೆಯ ಹಾಗೆ ಬೆಳಗುವ ಕೆನ್ನೆಯ ಮೇಲೆ ಒಂದು ಕೆಂಪು ನೆರಳು ಹಾಯ್ದು ಹೋದಹಾಗಿದ್ದು ಆ ಬಣ್ಣ ದಂತದ ತಲೆಯ ಮೇಲೆ ಹೊಡೆದಹಾಗಿರುವುದು. ಬೆಳ್ಳಗೆ ಬೆಳ್ಳಿಯಲ್ಲಿ ಮಾಡಿಟ್ಟಂತೆ ಇದ್ದ ಪಳಪಳನೆ ಹೊಳೆಯುವ ಕಣ್ಣುಗಳಲ್ಲಿ ಆ ಕರಿಯ ಆಲಿಯು ಅದು ಏನೋ ಮುದ್ದಾಗಿ ಇರುವುದು. ತೆಳುವಾದ ರೆಪ್ಪೆ ಮುಚ್ಚಿದರೆ ಒಂದು ಸೊಗಸು ಬಿಚ್ಚಿದರೆ ಇನ್ನೊಂದು ಸೊಗಸು ಎನ್ನುವಂತಿರುವುದು. ತಿದ್ದಿದ ಹುಬ್ಬು, ಎಳಸಾದ ಮೂಗು, ತುಂಬಿದ ತುಟಿಗಳ ಸಣ್ಣ ಬಾಯಿ. ಇನ್ನೂ ಐದು ವರ್ಷದ ಆ ಹುಡುಗಿ ಥಟ್ಟನೆ ನೋಡಿದರೆ ಹದಿನೈದು ವರ್ಷದವಳ ಭಾವ ಕಾಣಿಸುವುದು. ಮಾತಿನಲ್ಲಿಯೂ ಅಷ್ಟೆ; ಎಳೆತನದ ಮುದ್ದು ಇದ್ದರೂ ಬೆಳೆದ ಹುಡುಗಿಯ ದನಿ ಭಾವ. ಮುದುಕನಿಗೆ ಇಪ್ಪತ್ತು ವರ್ಷದ ಹಿಂದೆ ಹೋದ ಹೆಂಡತಿಯ ಮೈಭಾವ ಆ ಹುಡುಗಿಯಲ್ಲಿದ್ದು ತನ್ನ ಮನಸ್ಸನ್ನು ಹಿಡಿದಿದೆಯೆಂಬುದು ತಿಳಿಯದು. ಅಂತೂ ಮೊಮ್ಮಗಳನ್ನು ಒಂದು ಗಳಿಗೆಯೂ ಬಿಟ್ಟಿರಲಾರ. ಇಸ್ಪೀಟ್ ಆಟದ ನಡುವೆಯೂ ಒಮ್ಮೊಮ್ಮೆ ಮೊಮ್ಮಗಳ ನೆನೆಪಾದರೆ ಕೈಯಲ್ಲಿ ಎಂತಹ ಆಟವಿರಲಿ, ಏನಾದರೂ ನೆಪ ಹೇಳಿ ಎಲೆ ಎಸೆದು ಮನೆಗೆ ಹೊರಟುಬರುತ್ತಿದ್ದ. ಮುದುಕನಿಗೆ ಮಾಡುವುದಕ್ಕೆ ಕೆಲಸವಿಲ್ಲ. ಯಾತ್ರೆ ಹೋಗೋಣ ಎನ್ನಿಸಿತು. ಆದರೆ ಯಾತ್ರೆ ಹೋಗಿ ಬಂದವರ ಕಥೆಗಳನ್ನೆಲ್ಲ ಕೇಳಿ ಗಾಬರಿಗೊಂಡಿದ್ದ ಗಯಾವಳಿಗಳು ಕಬ್ಬಿಣದ ಕೊಕ್ಕಿನ ಕಾಗೆಗಳು ಹಾಗೆ ಕಾಸು ಕಿತ್ತುಬಿಡುತ್ತಾರೆ ಎಂಬುದು ಕೇಳಿ, ಆ ಯಾತ್ರೆಯೇ ಬೇಡ ಎನ್ನಿಸಿತ್ತು. ‘ಹೋಗಲಿ ಬಿಡು. ನಮ್ಮ ಕಾವೇರಿಗೆ ತುಲಾ ಮಾಸದಲ್ಲಿ ಗಂಗಾದೇವಿ ಬರುತ್ತಾಳಂತೆ! ಆಗ ಹೋಗಿ ಬಂದರೆ ಗಂಗಾಸ್ನಾನವಾಯಿತು. ಗೋಕರ್ಣಕ್ಕೆ ಹೋಗಿ ಬಂದರೆ ಸಮುದ್ರ ಸ್ನಾನ ಆಯಿತು. ಬಿಡು ಸಾಕು. ಇನ್ನೂ ಬೇಕೆಂದರೆ ತಿರುಪತಿ, ಶ್ರೀಶೈಲ, ಒಂದು ವೈಕುಂಠ, ಇನ್ನೊಂದು ಕೈಲಾಸ. ಸಾಕು ಸಾಕು. ಹರಿಯಾದರೂ ಕಾಯಲಿ, ಹರನಾದರೂ ಕಾಯಲಿ, ಇಬ್ಬರಿಗೂ ಕೈ ಮುಗಿದ ಮೇಲೆ ಯಮನಿಗೆ ಅಂಜಬೇಕಾದ್ದಿಲ್ಲ’ ಎಂದೂ ಲೆಕ್ಕ ಹಾಕಿದ್ದ. ಆದರೆ ಅದಷ್ಟು ಆಗಬೇಕಾ ದರೂ ಒಂದು ಸಾವಿರವಾದರೂ ಆಗಬೇಕು. ಹೇಗೆ ಮಗನನ್ನ ಕೇಳೋದು ? ಕೈ ಮುಂದಾಗಿ ಸಂಪಾದಿಸಿ ಹತ್ತು ಜನಕ್ಕೆ ಎಸೀತಿದ್ದವ, ಇವೊತ್ತು ಇನ್ನೊಬ್ಬರನ್ನು ಕೇಳೋದು ಹ್ಯಾಗೆ ?’ ಎಂದು ಅಷ್ಟು ದಿನ ಯೋಚನೆಯಾಯಿತು. ಕೊನೆಗೆ ಒಂದು ದಿನ ಮಗನ ಮುಂದೆ ತನ್ನ ಯೋಚನೆ ಇಟ್ಟ. “ಏನಪ್ಪಾ! ತಿರುಪತಿಗೆ ಹೋಗಿ ಬರಬೇಕು ಅಂತದೆ ಜೀವ, ಹೋದ ಮೇಲೆ ಅಲ್ಲಿ ಸೇವೆ ಏನಾದರೂ ಮಾಡಿ ಆ ಮಾರಾಯನಿಗೆ ಏನಾದರೂ ಕಾಣಿಕೆಗೀಣಿಕೆ ಮಾಡಿ ಬರಬೇಕೋ ಅಲ್ಲೋ ? ಏನು ಹೋಗಿ ಬರಲಾ ?” ಎಂದ. ರಮೇಶನು ನಕ್ಕ “ಚೆನ್ನಾಯಿತು ಭಾವ. ನಾನು ಎಷ್ಟೇ ಆಗಲಿ, ನಿನ್ನ ಕೂಸಲ್ಲವೋ? ನೀನು ಯಜಮಾನ, ಬೇಕಾದ್ದು ಮಾಡು. “ಹಾಗಾದರೆ ಹೋಗಿಬರೋಕೆ ಎಷ್ಟು ಕೊಡಿತಿ ?” “ನೀ ಅಲ್ಲಿಗೆ ಹೋದಮೇಲೆ ಒಂದು ಬ್ರಹೋತ್ಸವ ಮಾಡಿಸಿಬಿಡು. ದೇವರು ಕೊಟ್ಟಾಗ ಯಾಕೆ ಮಾಡಿಸಬಾರದು ?” “ಬ್ರಹೋತ್ಸವಕ್ಕೆ ಎಷ್ಟಾಗುತ್ತದೆ ?” “ಸುಮಾರು ಎರಡು ಸಾವಿರವೋ ಏನೋ ?” ಹೋಗಿ ಬರೋಕೆ ?” “ಅದಕ್ಕೇನು? ಒಂದು ಇನ್ನೂರು ರೂಪಾಯಿ ಆದರೆ ಸಾಕು. ಕಾರು ಹೇಗಿದ್ದರೂ ಇದೆ. ಸುಮಾರು ಇನ್ನೂರೈವತ್ತು ಮೈಲಿ ಆಗಬಹುದು. ಹೋದ ಬಂದ.’ ಮುದುಕ ಒಂದು ಗಳಿಗೆ ಹುಬ್ಬು ಎತ್ತಿ ಕಣ್ಮುಚ್ಚಿ ಹಾಗೇ ಯೋಚನೆ ಮಾಡಿದ. “ನೋಡು ರಮು, ನಾವು ಮಂಜುನಾಥನ ಒಕ್ಕಲು. ಆ ಮಂಜುನಾಥನೇ ಜೀವಂತ ದೇವರು. ಅವನಿಗೆ ನಾನು ಇನ್ನೂ ಏನೂ ಭಾರಿ ಸೇವೆ ಸಲ್ಲಿಸಿಲ್ಲ, ನನ್ನ ಬೋರ್ಡಿನಲ್ಲೂ ‘ಮಂಜುನಾಥ ಪ್ರಸನ್ನ’ ಎಂದೇ ಬರೆದಿದ್ದುದು. ಅವನೇ ಇಷ್ಟೆಲ್ಲಾ ಕೊಟ್ಟವ. ಆದರಿಂದ ಅವನಿಗೆ ಮೊದಲು ನಡೆದುಕೊಂಡು ಆಮೇಲೆ ತಿರುಪತಿಗೆ ಹೋಗೋವ, ಹಾಗೆ ಮಾಡೋದೇ ಸರಿ ಅನಿಸುತ್ತದೆ. ನೀನು ಏನಂತೀ ?” ರಮೇಶನು ಗಂಭೀರವಾಗಿ ಹೇಳಿದ. “ಭಾವ, ನನಗೆ ಎಷ್ಟೋ ಸಲ ಇದ್ದಬದ್ದ ಆಸ್ತಿಯೆಲ್ಲ ಧರ್ಮ ಮಾಡಿಬಿಡೋಣ ಎನ್ನಿಸಿದೆ. ಲೋಕದಲ್ಲಿ ಈ ಬಡವರ ಪಾಡು ನೋಡಿ ನೋಡಿ ಕರುಳು ಕೊರೆದಾಗ, ನಾನು ಅದನ್ನು ತಡೆಯಲಾರೆ. ಆದರೆ ಏನು ಪ್ರಯೋಜನ ? ಬಟ್ಟೆ ಕೊಟ್ಟರೆ ಮಾರಿಕೊಳ್ಳುತ್ತಾರೆ. ಛತ್ರ ಹಾಕಿದರೆ ತಿಂದು ತಿಂದು ಸೋಮಾರಿಗಳಾಗಿ ಹೋಗುತ್ತಾರೆ. ಆಸ್ಪತ್ರೆ ಕಟ್ಟಿದರೆ ರೋಗ ವಾಸಿ ಮಾಡಿಕೊಂಡು ಹೋಗಿ ಮತ್ತೆ ರೋಗ ತಂದುಕೊಂಡು ಬರುತ್ತಾರೆ. ಸ್ಕೂಲ್ ಮಾಡೋಣ ಎಂದರೆ, ಅನಾಥಾಲಯ ಮಾಡೋಣ ಎಂದರೆ ಅಲ್ಲಿ ಓದಿ ಮುಂದೆ ಬಂದವರಿಗೆ ಸಮಾಜದ ಮೇಲೆ ಅಭಿಮಾನವೇ ಇರುವುದಿಲ್ಲ. ಇದೇ ನಾನು ಯೋಚನೆ ಮಾಡುತ್ತಿದ್ದೇನೆ. ಇದೆಲ್ಲ ನೋಡಿ, ನಾವೂ ಹಿಂದಿನವರ ಹಾಗೆ, ಯಾವುದಾದರೂ ದೇವರನ್ನು ನಂಬಿ ಅವನಿಗೆ ಕಾಣಿಕೆ ಮಾಡಿ ಸುಖವಾಗಿರೋದೆ ಸರಿ ಎನಿಸುತ್ತದೆ. ನೀನೂ ಯೋಚನೆ ಮಾಡು, ನಿನಗೆ ತೋರಿದ ಹಾಗೆ ಮಂಜುನಾಥನ ಸೇವೆ ಮಾಡು, ಅಮೇಲೆಯೇ ತಿರುಪತಿಗೆ ಹೋಗುವೆಯಂತೆ !’ ಮುದುಕ ಹೇಳಿದನು, “ನೋಡೋ ರಮು, ಈಗ ಎಂಟು ಹತ್ತು ದಿನದಿಂದ ಕನಸು ಸರಿಯಿಲ್ಲ. ಹೀಗೆ ದಿಂಬಿನ ಮೇಲೆ ತಲೆಯಿಟ್ಟರೆ, ಯಾರೋ ಬಂದು ‘ಬಾ ಹೋಗೋಣ, ಬಾ ಹೋಗೋಣ’ ಎಂದು ಎಳೆದುಕೊಂಡು ಹೋದ ಹಾಗೆ ಇರತದೆ. ಎಚ್ಚರಾಗಿರೋವಾಗ, ಯಾರೋ ಹಿಂದೆ ಹಿಂದೆ ಸುಳಿದಂತೆ ಕಾಣುತ್ತದೆ. ಒಬ್ಬನೇ ಕುಳಿತಿದ್ದರೆ ಏನೋ ಮೇಲಿಂದ ಎಲ್ಲಾ ಕುಸಿದು ಬಿದ್ದಹಾಗೆ, ನಾನು ಅದರ ಕೆಳಗೆ ಸಿಕ್ಕಿ ಸತ್ತ ಹಾಗೆ ಆಗಿ ಗಾಬರಿಯಾಗುತ್ತದೆ. ಇದೆಲ್ಲ ನೋಡಿ ನನಗೆ ದಿಗಿಲಾಗದೆ, ನಾ ಕೇಳಿದ್ದೆ, ಅನ್ನ ಮಾರೋದು ಪಾಪ ಅಂತ. ಆ ಪಾಪ ಮಾಡಿ ಸಂಪಾದಿಸಿದ ಹಣ ನನ್ನ ತಿಂದೀತೇನೋ ಅಂತ ಅಂಜಿಕೆ ಆಗಿದೆ. ಅದಕ್ಕೆ ಏನೋ ಎಂತೋ, ಈ ದೇವರು ಗಳಿಗೂ ಅಷ್ಟು ಕೊಟ್ಟು ಬಂದ ಪಾಪ ಕಳೆದುಕೊಂಡು ಮುಂದೆ ಹೋಗೋಣ ಅಂತ ಮನಸ್ಸು ಆದರೂ ನಿನ್ನ ಕೈಲಿ ನಿಜ ಹೇಳುತ್ತಿದ್ದೀನಿ. ನಾನು ಬಡತನದಲ್ಲಿ ಬಹುಕಷ್ಟ ಪಟ್ಟವ; ತಿರುಗಿ ಕಷ್ಟ ಅನುಭವಿಸಲಾರೆ. ಮೂರು ಕಾಸಿಗೆ ತನ್ನದು ತಾನು ತಿಂದು ಇತರರದಕ್ಕೆ ಕೈ ಒಡ್ಡಿದ ಎನ್ನುವ ಹಾಗೆ ಬೆಳೆದವ. ನಾನು ಕೈಯಾರ ಕೊಡಲಾರೆ. ನೀನು ತಿರುಪತಿಗೆ ಹೋಗಿ ಬಾ ಅಂತ ಎರಡು ಸಾವಿರದ ಲೆಕ್ಕ ಹೇಳಿದೆ. ನನ್ನ ಎದೆ ಜಗ್ಗಂತು. ಮನಸ್ಸು ಕ್ಷು ಅಬ್ಬಾ ಎರಡು ಸಾವಿರವೇ ಅಂತು. ಇಂಥಾ ನಾನು ಮಂಜಪ್ಪಗೇನು ಕೊಡಲಿ? ತಿಮ್ಮಪ್ಪಗೇನು ಕೊಡಲಿ ? ನನ್ನ ವೇದಾಂತ ಕೇಳೀಯಾ ? ನಿನ್ನ ಕಾರು ಕೂಡ ಅಷ್ಟು ಸಲೀಸಾಗಿ ಹೋಗೊಲ್ಲ. ನಾನು ಹುಟ್ಟಿದಾಗ ಏನೂ ತರಲಿಲ್ಲ, ಹೋಗೋವಾಗ ಏನೂ ತಕೊಂಡು ಹೋಗೋಲ್ಲ ಅಂತ ನಾನೂ ಬಲ್ಲೆ. ಆದರೆ ಕೈಯಿಂದ ಕಾಸು ಕೊಡೋದು ಅಂದರೆ ಮನಸ್ಸು ಒಪ್ಪೋದಿಲ್ಲ. ನೀನು ಜಿಪುಣ ಎನ್ನು, ಲೋಭಿ ಎನ್ನು, ಏನಾದರೂ ಅನ್ನು, ನನ್ನಿಂದ ಕಾಸು ಕೊಡೋದು ಆಗೋದಿಲ್ಲ. ಅದರಿಂದ ನೀನು ಏನಾದರೂ ನನ್ನ ಹೆಸರಿನಲ್ಲಿ ನಿನಗೆ ತೋರಿದ್ದು ಮಾಡು. ನಾನೂ ಒಪ್ಪಿಕೊಳ್ಳುತ್ತೇನೆ. ನನ್ನಂತೂ ತಿರುಪತಿಗೆ ಕಳುಹಿಸು.” ಅಷ್ಟು ಹೊತ್ತಿಗೆ ಮೊಮ್ಮಗಳು ಬಂದು ತಾತನ ತೊಡೆಯ ಮೇಲೆ ಕುಳಿತಿದ್ದಳು. “ನೀನು ದೊಡ್ಡ ಹುಡುಗಿಯಾದೆ. ತಾತನ ತೊಡೆಯ ಮೇಲೆ ಕೂತರೆ ಅವರಿಗೆ ನೋಯ್ಯಲ್ಲವೇನಮ್ಮಾ?” ಎಂದು ಮಗನೋ ಸೊಸೆಯೋ ಕೇಳಿದರೆ, ಮುದುಕನು “ಇರಲಿ ಬಿಡು, ನಮ್ಮ ಮಗುವಲ್ಲವೋ ? ನಮ್ಮ ಮಕ್ಕಳು ನಮಗೆ ಭಾರವೋ ? – ಕುಂಬಳಕಾಯಿ ತೊಟ್ಟಿಗೆ ಭಾರವಾದೀತೋ ?” ಎನ್ನುವನು.
ಈ ವೀಣೆಯು ಅಣ್ಣಾ! ಏನು ಮಾಡಬೇಕು ನಾನು ಹೇಳಲಾ ?” ಎಂದಳು.
ರಮೇಶನು ಮಾತನಾಡುವುದರೊಳಗೆ ಮುದುಕನು ಮೊಮ್ಮಗಳನ್ನು ತಬ್ಬಿಕೊಂಡು, “ಎಲೆಲಾ ! ನೋಡಿದೆಯಾ, ಎನು ಹೇಳುತೀಯೋ? ಹೇಳು. ಏನು ಹೇಳು ನೋಡೋಣ’ ಎಂದನು. ವೀಣೆ ಹೇಳಿದಳು, “ನೋಡು ತಾತ, ಒಂದು ಆಶ್ರಮ ಮಾಡಬೇಕು ತಾತ. ಅದೂ ಗಂಡು ಮಕ್ಕಳಿಗಲ್ಲ ಈ ಗಂಡು ಮಕ್ಕಳು ಅಲ್ಲಿ ಬಿದ್ದು ಇಲ್ಲಿ ಬಿದ್ದು ಬೆಳೀತವೆ. ಕಷ್ಟವೆಲ್ಲ ಇರೋದು ಹೆಣ್ಣುಮಕ್ಕಳಿಗೆ ಗತಿಯಿಲ್ಲದೆ ನಿನ್ನೆ ಆ ತಿರುಪದವಳು ಬಂದಿದ್ದಳಲ್ಲ ಆ ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು, ನಾನು ಕಾರಿನಲ್ಲಿ ಹೋಗುವಾಗ ಹಾಗೆ ಮೈಗೆ ಬಟ್ಟೆ ಇಲ್ಲದ ಮಕ್ಕಳನ್ನು ಕಂಡು ನನಗೆ ಅಳು ಬರುತ್ತೆ ತಾತ ! ನಿನ್ನೆ ನಾನೇನುಕೂ ಅತ್ತೇಬಿಟ್ಟೆ!” “ಅತ್ತರೆ ಏನಾಯಿತು ? ಅವರಿಗೆ ಏನಾದರೂ ಮಾಡಿದೆಯೋ ?” “ನೀವು ಬರೇನೋ?” “ಇಲ್ಲ, ಹೇಳು. “ಅಮ್ಮಂದು ಒಂದು ಕೋರಿ, ನನ್ನದು ಒಂದು ಲಂಗ, ನನಗೆ ಚಿಕ್ಕದು ಆಗಿದ್ದ ಎರಡು ಬನಿಯನ್ ಎಲ್ಲಾ ಗಂಟು ಕಟ್ಟಿ ತೆಗೆದುಕೊಂಡು ಹೋಗಿ ಕೊಟ್ಟುಬಿಟ್ಟೆ.’ ತಂದೆ ಮಕ್ಕಳು ಮೊಕ ಮೊಕ ನೋಡಿಕೊಂಡರು. ಮಗುವಿನ ಮಾತಾದರೂ ಇಬ್ಬರಿಗೂ ಹಿಡಿಯಿತು. ಮುದುಕನು ಚೌಕ ಮೊಕಕ್ಕೆ ಹಾಕಿಕೊಂಡು ಒಂದು ಗಳಿಗೆ ಅತ್ತುಬಿಟ್ಟನು. “ತಾಯಿ, ನನಗೆ ಬುದ್ಧಿ ಕಲಿಸಿದೆ ಕಣೇ ! ನನ್ನ ಜನ್ಮದಲ್ಲಿ ನಾನಿಷ್ಟು ಧಾರಾಳ ಮಾಡಿರಲಿಲ್ಲ; ಏನೋ ಅಂಗಡಿಯಲ್ಲಿದ್ದಾಗ ಕಾಳಿ ಕಂಗಾಳಿ ಬಂದರೆ ಒಂದಷ್ಟು ತಿಂಡಿಯೋ, ಅನ್ನವೋ ಕೊಟ್ಟು ಕಳುಹಿಸುತ್ತಿದ್ದೆ. ಈ ಮಗುವಿಗೆ ಬಂದಷ್ಟು ಧಾರಾಳ ಬುದ್ದಿ ನನಗೆ ಬರಲಿಲ್ಲ. ರಮು, ಅವಳು ಹೇಳಿದ ಹಾಗೆ ಆಗಿಹೋಗಲಿ, ನಿನಗೆ ತೋರಿದಷ್ಟು ಖರ್ಚು ಮಾಡಿ ಒಂದು ಹೆಣ್ಣುಮಕ್ಕಳ ಆಶ್ರಮ ಕಟ್ಟಿಸಿಬಿಡು. ಮಂಜನಾಥನ ಹೆಸರಿನಲ್ಲಿ ಹತ್ತು ಹನ್ನೆರಡು ಹೆಣ್ಣು ಮಕ್ಕಳಿಗೆ ಸುಖವಾಗಿರೋಕೆ ಅನುಕೂಲವಾಗಲಿ. ಅದು ಮಾಡಿದ ಮೇಲೆ ತಿರುಪತಿಗೆ ಹೋಗಿಬರೋದು. ಅದೇನೋ ತಿರುಪತಿ ಗೀಳು ಹಿಡಿದದೆ’ ಎಂದು ಹೇಳಿ ಮೊಮ್ಮಗಳನ್ನು ಕರೆದುಕೊಂಡು ಒಳಕ್ಕೆ ಹೊರಟು ಹೋದನು. * ರಮೇಶನು ಮಗಳ ಬುದ್ಧಿಗೆ ಆಶ್ಚರ್ಯಪಡುತ್ತಾ ಹೋಗಿ ಪ್ರಾಣೇಶನಿಗೆ ಫೋನ್ ಮಾಡಿದನು. ಅವನಿಗೂ ಏಕೋ ಇವೊತ್ತು ಏನೂ ಕೆಲಸ ಬೇಡ ಎನ್ನುವಂತಿತ್ತು. ಇಬ್ಬರಿಗೂ ಕೋರ್ಟಿನ ಕೆಲಸ ಅಷ್ಟು ಹೆಚ್ಚಾಗಿ ಇರಲಿಲ್ಲ. ಇದ್ದುದನ್ನು ಜೂನಿಯರ್ಸ್‌ಗೆ ವಹಿಸಿಬಿಟ್ಟು ಸುಮಾರು ಮೂರು ಗಂಟೆಗೆ ಇಬ್ಬರೂ ಸೇರುವುದು ಎಂದು ಗೊತ್ತಾಯಿತು. ಯಾವಾಗಲೂ ಪ್ರಾಣೇಶನೇ ರಮೇಶ್ ಮನೆಗೆ ಬರುವುದು ವಾಡಿಕೆ.
ಪ್ರಾಣೇಶನಿಗೆ ಕಾಫಿ ಎಂದರೆ ಪಂಚಪ್ರಾಣ. ರಮೇಶನ ಮನೆಯ ಕಾಫಿ ಯಾವಾಗಲೂ ಎ ವನ್. ರಮೇಶನು ಗೆಳೆಯನಿಗೆ ಬೆಳಗಿನ ಸುದ್ದಿಯನ್ನು ಹೇಳಿದನು. ಪ್ರಾಣೇಶನು ಏನು ಮಾಡಬೇಕು ಎಂತಿದ್ದೀಯೆ ಅದನ್ನೂ ಹೇಳು ಎಂದನು. “ಅದನ್ನು ಕೇಳುವುದಕ್ಕೇ ನಿನ್ನನ್ನು ಕರೆದದ್ದು’
“ನನ್ನ ಮಾತು ಕೇಳು. ನೀನು ಒಂದು ಐಡಿಯಲ್ ಆಶ್ರಮ ಕಟ್ಟಬೇಕು. ಹೆಣ್ಣುಮಕ್ಕಳಿಗೆ ಈಗ ಸರಿಯಾದ ಎಜುಕೇಷನ್ ಇಲ್ಲ, ಎಲ್ಲಾ ಗಂಡುಬೀರಿಯರಾಗೋ ಎಜುಕೇಷನ್. ಹೆಣ್ಣು ಎಷ್ಟಾದರೂ ತಾಯಿಯಾಗೋಕೆ ಹುಟ್ಟಿರೋಳು. ತಾಯಿಯೂ ತಂದೆಯ ಹಾಗೇ ಆದರೆ ಗತಿಯೇನು ? ಎನ್ನೋದು ನಮ್ಮ ಎಜುಕೇಷನಿಸ್ಟ್ ಮನಸ್ಸಿಗೇ ಬಂದಿಲ್ಲ. ತಾಯಿ ಎಂದರೆ ಹ್ಯಾಗಿರಬೇಕು ಗೊತ್ತೆ? ಹೊಟ್ಟೆಯ ತುಂಬ ಬಡಿಸಬೇಕು, ವಿಶ್ವಾಸವಾಗಿರಬೇಕು, ಸಾಯೋವರೆಗೂ ನೆನೆದುಕೊಳ್ಳೋ ಹಾಗೆ ನಡೆಯಬೇಕು. ಅದು ಬಿಟ್ಟು ‘ಈ ಹಾಳು ಏಕೆ ಹುಟ್ಟಿತೋ ?’ ಎಂದು ಬಿಡಿಸಿಕೊಳ್ಳೋಳು ಆಗಬಾರದು. ಹಾಗೆ ತಾಯಿತನದ ಎಜುಕೇಷನ್ ಕೊಡೋ ಆಶ್ರಮ ಕಟ್ಟಬೇಕಪ್ಪ!”
“ಮಾಡರ್ನ್ ಟೆಂಡೆನ್‌ಸೀಸ್ ಆರ್ ಅಗೆನ್ ಇಟ್. ಹೆಣ್ಣು ಗಂಡಿನಂತೆಯೇ ಸಮಾಜದ ಒಂದು ಯೂನಿಟ್. ಈಕ್ವಲ್ ಆಪರ್‌ಚ್ಯುನಿಟಿ ಕೊಡಬೇಕು. ಅದಕ್ಕೆ ಐಡೆಂಟಿಕಲ್ ಆಗಿರಬೇಕು.” ಎಲ್ಲಾ “ನಾನ್ಸೆನ್ಸ್, ಈಕ್ವಲ್ ಆಪರ್‌ಚ್ಯುನಿಟಿ ಎಂದರೆ ಐಡೆಂಟಿಕಲ್ ಫಂಕ್ಷನ್ ಎಂದು ಹೇಳಿದವರು ಯಾರಯ್ಯಾ? ನೇಚರ್‌ನೇ ಹಾರಿಸೋ ಮಾತೇ ಆಡ್ತೀಯಲ್ಲಾ ನೇಚ ಪ್ರೊವೈಡ್ಸ್ ಫಾರ್ ಕೋಆಪರೇಷನ್ ಅಂಡ್ ನಾಟ್ ಫಾರ್ ಕಾಂಪಿಟಿಷನ್, ಸಾವಿರ ಹೇಳು, ಫೀಮೇಲ್ ಎಜುಕೇಷನ್ ಮಸ್ಟ್ ಡಿಫ ಫಂ ಮೇಲ್ ಎಜುಕೇಷನ್.” “ಲೋ ಪ್ರಾಣೇಶ್, ಐ ಯಾಮ್ ಎ ಲೇಜೀ ಫೆಲೋ ! ಆ ಡೀಟೆಲ್ಸ್ ಎಲ್ಲಾ ನೀನು ಯೋಚನೆ ಮಾಡು. ಬೇಕಾದರೆ ನಾನು ಯಾವಾಗಲೂ ಏನಾದರೂ ಹೇಳೀನಿ. ಕೊನೆಗೊಂದು ಚೆಕ್ ಬರೀತೀನಿ, ಬೇಕಾದರೆ ಕಮಿಟಿಯಲ್ಲಿ ಹಾಕು, ಬೇಡದಿದ್ದರೆ ಬಿಡು. ಅಂತೂ ಒಂದು ಆಶ್ರಮ ಮಾಡು. “ರಮೇಶ್, ನೀನು ಯಾಕೋ ಇಂಡೋಲೆಂಟ್ ಆಗಿಹೋದೆ. ಕೂತು ಒಂದು ಗಳಿಗೆ ಚೆನ್ನಾಗಿ ಯೋಚನೆ ಮಾಡಿ ಒಂದು ಐಡಿಯಲ್ ಇನ್‌ಸ್ಟಿಟ್ಯೂಟ್ ಮಾಡೋಣ. ಮುಂದೆ ಇತರರು ನಮ್ಮನ್ನು ನೋಡಿ ಕಾಪಿ ಮಾಡುವಂತಿರಲಿ ಎಂದರೆ ನೀನು ನನ್ನ ಮಾತೇ ಕೇಳುವುದಿಲ್ಲವಲ್ಲ.” “ನೋ ಪ್ರಾಣೇಶ್, ಐ ಯಾಮ್ ಓನ್‌ಲಿ ಇನ್ ಕೋರ್ಟ್, ಅದರ್ ಟೈಮ್ಸ್ ಐ ವಾಂಟು ಸ್ಟೇಚ್ ಆನ್ ಏ ಫೈರ್ ಬೆಡ್.. “ವಿತ್ ಆರ್ ವಿತ್ ಔಟ್ ?’ “ಆಲ್‌ವೇಸ್ ಫಸ್ಟ್, ಆಫೀಸಿನಲ್ಲಿ ಜೂನಿಯರ್ ಕೆಲಸ ನಾವು ಮಾಡುತ್ತೇವೇನೋ ? ಹಾಗೆ ಈ ಡೀಟೆಲ್ಸ್, ನೀನೂ ಮಾಡಿದರೆ ಮಾಡು. ಇಲ್ಲದಿದ್ದರೆ ಯಾರಿಗಾದರೂ ಹೇಳು. ಅನ್ ಐಡಿಯಾ, ಆಸ್ಟ್ ದಿ ಪ್ರೊಫೆಸರ್ ಟು ಡು ಇಟ್. ಹಿ ವಿಲ್ ಬಿ ಫೀಡ್.” ಆ ವೇಳೆಗೆ ವೀಣಾ ಕಾಫಿ ತೆಗೆಸಿಕೊಂಡು ಬಂದಳು. “ಪ್ರಾಣೇಶ್, ಹಿಯರೀಸ್ ದಿ ಗರ್ಲ್. ಷಿ ಈಸ್, ಟು ಮಿ ಇಂಟೆಲಿಜೆಂಟ್, ಟು ಯು ಪ್ರೇಷಸ್, ಆಸ್ಟ್ ಹರ್, ಲೆಟ್ ಅಸ್ ಸೀ.” ವೀಣಾ ಕೇಳಿದಳು, “ಸೀ ಅಂದರೆ ಸಮುದ್ರ ಅಲ್ಲ?” “ನಿನಗೆ ಹೇಗೆ ಗೊತ್ತು?”
‘ಮೊನ್ನೆ ಪೇಪರ್‌ನಲ್ಲಿ ಹಡಗು ಮುಳುಗಿಹೋದ ಚಿತ್ರ ಬಂದಿತ್ತು. ಆಗ ನಾನು ಹಡಗು, ಸಮುದ್ರ ಎರಡಕ್ಕೂ ಇಂಗ್ಲಿಷ್ ಕೇಳಿದೆ. ಅಮ್ಮ ಹೇಳಿದಳು ಷಿಪ್, ಸಿ ಅಂತ.” “ರಮೇಶ್, ಏನು ನಿನ್ನ ಮಗಳು ಷಿಪ್‌ರೆಕ್‌ನಿಂದ ಆರಂಭಿಸುತ್ತಿದ್ದಾಳಲ್ಲ!” “ದಟ್ ವಾಸ್ ಯುವರ್ ಛಾರ್ಜ್ ಅಗೆನ್‌ಸ್ಟ್ ಮಾಡರ್ನ್ ಎಜುಕೇಷನ್ ಅಫ್ ದಿ ಗರ್ಲ್ಸ್, ಷಿ ಮೈಟ್ ಹಾವ್ ರಿಫೆಕ್ಸೆಡ್ ಯುವರ್ ಐಡಿಯ.” ಅಂಡ್ ಸೋ, ಐ ಯಾಮ್ ದಿ ವಿಲನ್ ಆಫ್ ದಿ ಪ್ಲೆ ಲೆಟ್ ಇಟ್ ಬಿ. ಏನು? ವೀಣಾ ? ನೀನು ಆಶ್ರಮ ಕಟ್ಟಬೇಕು ಅಂದೆಯಂತಲ್ಲ, ಹೇಗಿರಬೇಕು ಹೇಳು.” “ಮಾವ, ಭಾವನ ಕೈಲಿ ಆಗೋದಿಲ್ಲ. ನೀವು ನಿಂತುಕೊಂಡು ಕಟ್ಟಿ, ಅಲ್ಲಿ ನೋಡಿ ಮಾವ, ಈ ಹಾಳು ಸ್ಕೂಲುಗಳಲ್ಲಿರೋ ಹಾಗೆ ಬರೀಗೋಡೆ, ಮುರುಕಲು ಬೆಂಚು ಮಾಡಬೇಡಿ. ಒಂದು ಸಣ್ಣ ತೋಟ, ಅದರಲ್ಲಿ ಒಂದು ಸಣ್ಣ ಮನೆ. ನಾವು ಹೆಣ್ಣು ಮಕ್ಕಳು ಬೊಂಬೆ, ಮಡಿಕೆ ಕುಡಿಕೆ ಇಟ್ಟುಕೊಂಡು ಆಟ ಆಡ್ತಾ ಆಡ್ತಾ ಕಲಿಯ ಬೇಕು ಮಾವ. ಹೊಟ್ಟೆ ಹಸಿಯೋ ವೇಳೆಗೆ ಯಾರಾದರೂ ಅನ್ನ ಹಾಕಬೇಕು, ಮಡಿ ಬಟ್ಟೆ ಕೊಡಬೇಕು, ನಾವು ದೊಡ್ಡವರಾದರೆ ನಾವೇ ಒಕ್ಕೋಬೇಕು; ನಾವೇ ತಿಂಡೀ ಮಾಡಬೇಕು; ಇನ್ನೂ ದೊಡ್ಡವರಾದರೆ ನಾವೇ ಅಡುಗೆ ಮಾಡಿ ಬಡಿಸಬೇಕು, ಹಾಗಿರಬೇಕು.’
“ಪುಸ್ತಕ, ಓದು, ಲೆಕ್ಕ, ಏನು ಬೇಡವೇನಮ್ಮ?” “ನಂಗೆ ಅದೆಲ್ಲಾ ಗೊತ್ತಾಗೋಲ್ಲ, ಮಾವ, ಚಿತ್ರ ಇರೋ ಪುಸ್ತಕ ಇರಲಿ. ಆದರೆ, ನಮಗೆ ಬೇಕಾದಾಗ ಓದುಕೊಳ್ಳೋಕೆ. ಮೇಡಂ ಓದೇ ಕರಂಡೇ ಅನ್ನೋ ಹಾಗಿರಬಾರದು.” “ನಿನಗೆ ಅಕ್ಷರ ಕಲಿಸೋರು ?” “ಬಿಡಿ, ಮಾವ, ನಮ್ಮನ್ನು ಹೊಡೆದುಬಡಿದು ಅಕ್ಷರ ಕಲಿಸೋ ಗೋಳು ತಪ್ಪಬೇಕು. ಮಾವ ! ಅಂಗಡಿಗೆ ಹೋದರೆ ಬಟ್ಟೆ ನಮಗೆ ಬೇಕಾದ್ದು, ಸ್ಕೂಲಿನಲ್ಲಿ ಆದರೆ, ಪಾಠ ಮಾತ್ರ ಮೇಡಂಗೆ ಬೇಕಾದು, ಎಲ್ಲಿ ನ್ಯಾಯ ಮಾವ ! ಊಟಕ್ಕೆ
ಕೂತುಕೊಂಡರೆ ನೀವು ಸಾರು ಎಂದರೆ ಅತ್ತೆ ಮಜ್ಜಿಗೆ ಬಡಿಸಿದರೆ ನಿಮಗೆ ಹ್ಯಾಗಾಗುತ್ತೆ Bee?” “ಬ್ಯೂಟಿಫುಲ್ ಅನಾಲಜಿ, ರಮೇಶ್ ನಿನ್ನ ಮಗಳು ನಿನ್ನ ಮೀರಿಸುತ್ತಾಳಪ್ಪ! ‘ಮಿಸ್, ವೀಣಾ, ಬಿ. ಎ., ಎಲ್ ಎಲ್. ಬಿ., ಅಡ್ವಕೇಟ್’ ಎಂದು ಈಗಲೇ ಬೋರ್ಡ್ ಬರೆಸಿತು.”
*ಉಹೂಂ ಹುಂ. ನಾನು ಲಾಯರ್ ಆಗೋಲಪ!’ “ಹಾಗಾದರೆ ಏನಾಗುತ್ತೀಯೆ ?” “ನಾನು ಡಾಕ್ಟರ್ ಆಗುತ್ತೇನೆ. ಸೊಗಸಾದ ಕಲಾಪತ್ತಿನ ಕರಿಯ ಸೀರೆ ಉಟ್ಟು ಕೊಂಡು, ಬೆಳ್ಳಗಿರೋ ಲಾಂಗ್‌ಟ್ ಹಾಕ್ಕೊಂಡು ಬಂದರೆ, ಹೇಗಿರಬೇಕು !” “ನೀನು ಡಾಕ್ಟರನ್ನು ಯಾವೊತ್ತು ನೋಡಿದೆ ?’ “ಅವೊತ್ತು ಅಮ್ಮನ ಜೊತೆಯಲ್ಲಿ ಆಸ್ಪತ್ರೆಗೆ ಹೋಗಿದ್ದ ಮಾವ ! ಅವೊತ್ತು ! ಡಾಕ್ಟರ್ – ಅಮ್ಮನಿಗೆ ಒಂದು ದೊಡ್ಡ ಹಾರ ಹಾಕಿ, ಹಣ್ಣು ಹಂಪಲು ಎಲ್ಲಾ ಕೊಟ್ಟು, ಅಮ್ಮ, ನಿಮ್ಮಿಂದ ಬದುಕಿದ್ದೂ ಅಮ್ಮ, ಅಂತ ಅವರೆಲ್ಲರೂ ಕಾಲಿಗೆ ಬೀಳುತ್ತಿದ್ದರು. ಅವೊತ್ತೇ ಅಮ್ಮನಿಗೆ ಹೇಳಿದೆ. ಅಮ್ಮಾ ನಾನು ದೊಡ್ಡವಳಾದರೆ ಡಾಕ್ಟರಾಗುತೀನಿ ಅಂತ!” “ಡಾಕ್ಟರಾದರೆ ಗಂಡುಸರ ಜೊತೇಲಿ ಓದಬೇಕು. ಹೆಣ ಕೊಯ್ಯಬೇಕು. ‘ಗಂಡಸರೇನು ಮನುಷ್ಯರಲ್ಲವೇ ? ನೀವೆಲ್ಲ ಹುಲಿಗಳೇನೋ ? ಹುಲಿಗಳೇ ಆದರೂ ಸರ್ಕಸ್‌ನಲ್ಲಿ ಯಾರಪ್ಪಾ ಹುಲಿ ಆಡಿಸೋರು ಹೆಂಗುಸು. ಹಾಗೇ ! ಈಗ ಹೆಣ್ಣು ಬೊಂಬೆ ಇಟ್ಟುಕೊಂಡು ಆಡೋ ಹಾಗೆ ಆ ಗಂಡುಸರ ಜೊತೇಲಿ ಆಡೋದು. ಇನ್ನು ಹೆಣ ಕೊಯ್ಯೋದು. ನಮ್ಮ ಅಡಿಗೆ ಭಟ್ಟ ಈರುಳ್ಳಿ ಬದನೆಕಾಯಿ ಕೊಯ್ಯೋಲ್ಲವೇ ಹಾಗೇ ! ಅದಕ್ಕೇನು ಮಹಾ !” ಪ್ರಾಣೇಶನಿಗೆ ಆಶ್ಚರವಾಯಿತು. ಐದಾರು ವರ್ಷದ ಹುಡುಗಿ, ಇಷ್ಟು ಮಾತು ಆಡಬಲ್ಲಳೆ ? ಸಾಲದ್ದಕ್ಕೆ ಮಾತ್ರ ಅನನ್ವಯವಾಗಿಯೂ ಇಲ್ಲ ಹಾಗೆಯೇ ಒಂದು ಗಳಿಗೆ ಯೋಚಿಸುತ್ತಿದ್ದು “ಹಾಗಾದರೆ ಬೊಂಬೆ, ಮಡಿಕೆ, ಕುಡಿಕೆ, ಪುಸ್ತಕ, ಇರೋ ಸ್ಕೂಲ್ ಬೇಕೋ ?’ ಎಂದ. “ತೋಟ ? ಅದನ್ನೇ ಮರೆತರಲ್ಲಾ? “ಆಗಲಮ್ಮಾ! ಮಾಡಿಸೋಣ ?” “ಎಷ್ಟು ಜನ ಇರಬೇಕಮ್ಮಾ?” “ದೊಂಬಿ ಇರಬಾರದು ಮಾವ! ಹೂ, ಆ ದೊಂಬೀಲಿ ಅಸಯ್ಯ ! ಎಂಟು ಹತ್ತು ಜನ ಅಷ್ಟೇ !” “ಅವರಿಗೆ ಊಟ ?” “ಓ, ಊಟದ್ದೀಗ ಮಹಾ! ಯಾರಾದರೂ ಬಡವರನ್ನು ಕರೆದು ಈ ಮಕ್ಕಳಿಗೆ ಅನ್ನಮಾಡಿ ಹಾಕಿ, ನೀವೂ ಸುಖವಾಗಿರಿ ಎಂದರಾಯಿತು.
“ಐ, ಸೆ, ರಮೇಶ್, ದಿಸ್ ಇಸ್ ರಿಯಲಿ ಟ್ರೆಮೆಂಡೆಸ್ ಈಸ್ ಮಿ ಕೇಪಬಲ್ ಆಫ್ ಸೋಮಚ್ ಅಫ್ ಥಾಟ್.’ ~ “ನೋ. ಇಟಿಸ್ ನಾಟ್ ಥಾಟ್. ಲೈಕ್ ಮೈ ಆರ್ಗ್ಯುಮೆಂಟ್ಸ್ ಇನ್ ದಿ ಕೋರ್ಟ್, ಇಟೀಸ್ ಹರ್ ಎಕ್ಸ್‌ಪ್ರೆಷನ್, ನೆವರ್ ದಿ ರಿಸಲ್ಟ್ ಆಫ್ ಕೋಜಿಟೇಷನ್’ “ಆಗಲಮ್ಮ! ಹಾಗೇ ಮಾಡೋಣ, ಜಾಗಾ ಎಲ್ಲಾದರೂ ನೋಡಿದ್ದೀಯಾ?” “ಹೋ ! ನಮ್ಮ ಬಸವನಗುಡಿ ಬಂಗಲೇ.” “ರಿಯಲಿ, ರಿಯಲಿ, ರಮೇಶ್, ದಿಸ್ ಇಸ್ ಎಕ್ಸ್‌ಪರ್ಟ್ ಒಪಿನಿಯನ್, ಆ ಬಂಗಲೇ ಎಲ್ಲಾ ವಿದದಲ್ಲೂ ಆಶ್ರಮ ಇದ್ದ ಹಾಗೇ ಇದೆ ಕಣಯ್ಯ !’ “ಹೆಸರೇನಮ್ಮ!” “ತಾತನ ಹೆಸರಿಡಿ, ಮಾವ, ಹಣ ಎಲ್ಲ ಅವರದಲ್ಲವೆ ?” “ನಿನ್ನ ಹೆಸರಿಟ್ಟರೆ ?” “ಕಳ್ಳ ಮಾವ, ಎಲ್ಲೋ ತಾತನ್ನ ಕೇಳಿದ್ದೀರಿ. ತಾತಾ ಹೇಳಿದಿರೇನೋ?” ಪ್ರಾಣೇಶನು ಅವಳನ್ನು ಬರಸೆಳೆದು ತಬ್ಬಿಕೊಂಡು ಮುತ್ತಿಟ್ಟು ವೀಣಾ, ನೀನು ಸಾಮಾನ್ಯಳಲ್ಲ ಚೆನ್ನಾಗಿ ಬದುಕು ತಾಯಿ’ ಎಂದು ತಲೆ ಸವರಿದನು. ವೀಣೆಯು ನಗುತ್ತ ಬಿಡಿಸಿಕೊಂಡು ಬಂದು ತಂದೆ ಮಗ್ಗುಲಲ್ಲಿ ನಿಂತಳು. ರಮೇಶನು ಆನಂದದಿಂದ ಮಗಳ ಮಾತನ್ನು ಕೇಳಿ ಸಂತೋಷಪಡುತ್ತಿದ್ದನು. “ಪ್ರಾಣೇಶ್, ಫಾದರ್ ಅರ್ ಡಾಟರ್, ವಿ ಹ್ಯಾವ್ ಸಪ್ಲೆಡ್ ದಿ ಡೀಟೆಯಿಲ್ಸ್, ಫೀಸ್ ಕಂಪ್ಲೇಟ್ ದಿ ರೆಸ್ಟ್ ಅಂಡ್ ಬ್ರಿಂಗ್ ಅಪ್ ಫಾರ್ ಸಿಸ್ಟೇಚರ್, ಯಾವೊತ್ತು?’ “ಇನ್ನೊಂದು ಎರಡು ಮೂರು ದಿನ.”
ಅವರು ಹಾಗೇ ಇನ್ನೂ ಒಂದು ಗಳಿಗೆ ಹಾಗೇ ಮಾತನಾಡುತ್ತಿದ್ದರು. ಆಳು ಬಂದು ಪಿಳ್ಳೇಗೌಡರು ಬಂದಿದ್ದಾರೆ ಎಂದನು. ಬರಹೇಳು ಎನ್ನುತ್ತಿರುವ ಹಾಗೆಯೇ ಗೌಡನು ಬಂದು ಬಾಗಿಲಲ್ಲಿ ಕಾಣಿಸಿಕೊಂಡು “ಸರಣು, ಬುದ್ಧಿ ಸರಣು. ಇಬ್ಬರೂ ಇಲ್ಲೇ ಇದ್ದೀರಿ, ಸರಿ ಬಿಡಿ” ಎನ್ನುತ್ತಾ ಒಳಗೆ ಬಂದನು. ರಮೇಶನು ಬಾಯಲ್ಲಿದ್ದ ಅಡಕೆ ದವಡೆಗೆ ಒತ್ತರಿಸಿಕೊಂಡು ಬನ್ನಿ ಎಂದು ಹಲ್ಲು ಕಿಸಿಯುವುದರೊಳಗಾಗಿ ಪ್ರಾಣೇಶನು ಕಾಫೀ ಕಿಂಗ್ ಬರಬೇಕು, ಬರಬೇಕು” ಎಂದು ಕರೆದನು. ರಮೇಶನು ಜಾರಿದ್ದ ದಟ್ಟಿ ಸುತ್ತಿಕೊಂಡು ಕೈ ಕುಲಿಕಿ, ಸೋಫಾದ ಮೇಲೆ ಕೂರಿಸಿದನು. ಪ್ರಾಣೇಶನೂ ಕೈ ಕುಲಿಕಿ, “ಏನು ಗೌಡರು ಸುದ್ದಿ ಕೊಡದೆ ಬಂದುಬಿಟ್ಟಿದ್ದು?” ಎಂದು ವಿಚಾರಿಸಿದನು. ಗೌಡನು ಮಹಡಿಯಲ್ಲೆಲ್ಲಾ ತುಂಬುವಂಥಾ ನಗು ನಕ್ಕು “ಅಲ್ಲಾ, ಕೋರ್ಟ್‌ಂದು ಏನಾದರೂ ಇದ್ದಿದ್ದರೆ ಮೊದಲೇ ಸುದ್ದಿ ಕೊಡಬೇಕು. ಏನೋ ರಿಕಾರ್ಡ್ ಗಿಕಾರ್ಡ್ ನೋಡಿ ಇಡಲಿ ಅಂತ. ಈಗ ನಾನು ಬಂದಿರೋದು ಬೇರೆ ಕೆಲಸ. ಈ ಸಲ ತಾವಿಬ್ಬರೂ ನಮ್ಮ ಊರಿಗೆ ಬರಬೇಕು ಅಂತ ಕರೆಯೋಕೆ ? ಒಂದು ನಾಕು ದಿವಸ ಅಲ್ಲಿದ್ದು ಬರೋರಂತೆ ಬನ್ನಿ, ಅಲ್ಲದೆ ಅಲ್ಲಿಗೆ ಒಬ್ಬರು ಸನ್ಯಾಸಿಗಳು ಬಂದಿದ್ದಾರೆ. ಅವರಂಥಾವರನ್ನು ನಾನು ಇದುವರೆಗೂ ಕಾಣೆ. ಆ ಗಿರಿ ನಮ್ಮ ಮಗ್ಗುಲಲ್ಲೆ ಅಲ್ಲವಾ ಇರೋದು. ಅಲ್ಲಿಗೆ ಬರದವರೇ ಇಲ್ಲ. ಎಷ್ಟೋ ಜನ ಸನ್ಯಾಸಿಗಳು ಬರುತಾರೆ. ಆದರೆ ಇವರು ಎಲ್ಲರಂತಲ್ಲ! ಈಗ ಇದೋ ಇಲ್ಲಿ ನಾವು ಮಾತಾಡುತ್ತಾ ಇದ್ದೇವೋ, ನಾವು ನಾಳೆ ಅಲ್ಲಿಗೆ ಹೋಗುತ್ತೇವಲ್ಲ, ಅಲ್ಲಿ ನೀವು ಮೂರು ಜನ, ಮಾತಾಡುತ್ತಿದ್ದಿರಿ. ಇದದೇ ಮಾತಾಡಿದಿರಿ ಎಂದು ಹೇಳದಿದ್ದರೆ ಕೇಳಿ.” ಪ್ರಾಣೇಶನು ರಮೇಶನ ಮುಖವನ್ನು ನೋಡಿದನು. ರಮೇಶನು ಮಾತನಾಡಿ ದನು; “ಆಯಿತು, ಗೌಡರೇ, ಅವರನ್ನು ನೋಡಿ ನಮಗಾಗಬೇಕಾದುದೇನು ? ತಾವು ಹೇಳಿದಿರಿ, ಸರಿ. ಸಾಕು. ನಾವೂ ಅವರನ್ನು ದೊಡ್ಡವರು ಎಂದುಬಿಡೋಣ, ಇಲ್ಲಿ ನಮ್ಮ ಕೆಲಸಗಳು ನಮಗೆ ಏನೇನೋ ಇವೆ. ಇವೆಲ್ಲ ಬಿಟ್ಟು ಒಬ್ಬ ಸನ್ಯಾಸಿಯನ್ನು ನೋಡೋಕೆ ಅಷ್ಟು ದೂರ ಹೋಗಿಬರುವುದು ಎಂದರೇನು ? ಯಾಕೆ ಅಷ್ಟು ಆಯಾಸ’ ಆ ಸರಣಿ ಪ್ರಾಣೇಶನಿಗೆ ಒಪ್ಪಲಿಲ್ಲ; ಈ ರಾಯರ ಮಾತೇ ಹೀಗೇ ! ಅದನ್ನು ಮನಸ್ಸಿಗೆ ಹಾಕಿಕೊಳ್ಳಬೇಡಿ. ತಾವು ಹೇಳಿ, ಗೌಡರೇ ! ಆಯಿತು. ಇನ್ನೇನೇನು ಮಹಿಮೆಗಳು ಕಂಡಿದ್ದೀರಿ ?” ಗೌಡನಿಗೆ ರಮೇಶನ ಮಾತಿನಿಂದ ಕೋಪ ಬಂದಿತ್ತು, ಉತ್ತಮರು ಎನ್ನಿಸಿಕೊಂಡವರು ಸಾಧುಸಂತರಲ್ಲಿ ಭಕ್ತಿಯಿಲ್ಲದೆ ನಡೆಯುವುದು ಅವನ ಮನಸ್ಸಿಗೆ ಬರಲಿಲ್ಲ. ಆದರೆ ದೊಡ್ಡ ಲಾಯರು ತನ್ನ ಕೇಸು ಗೆದ್ದುಕೊಟ್ಟ ಉಪಕಾರ ಮಾಡಿದ್ದಾನೆ; ಹಿಂತಿರುಗಿ ಮೊಕದ ಮೇಲೆ ಹೊಡೆದ ಹಾಗೆ ಮಾತನಾಡುವಂತಿಲ್ಲ. ಅದರಿಂದ ಪ್ರಾಣೇಶನಿಗೆ ಹೇಳುವಂತಿದ್ದರೂ ರಮೇಶನಿಗಾಗಿಯೇ ಹೇಳುತ್ತಾ ಅವನ ಮುಖವನ್ನೇ ನುಡಿದನು: “ನಾವು ಗೌಡರುಗಳು ಬಹಳ ಜಂಭದೋರು. ತಮ್ಮಿಂದಲೇ ಲೋಕವೆಲ್ಲ ಬದುಕಿರೋದು ಅನ್ನುವಷ್ಟು ಅಹಂಕಾರದವರು. ಅದರೊಳಗೂ ಈಗ ರಾಜ್ಯ ನಮ್ಮದೇ ಆಗದೆ ಅಂದಮೇಲೆ ಕೇಳಬೇಕಾ ? ಜೊತೆಗೆ ನಾನು ಗತಿಯಿಲ್ಲದಿದ್ದವನಲ್ಲ ಇಂಥಾವನು ಒಬ್ಬ ಸನ್ಯಾಸೀನ, ಅದೂ ಬ್ರಾಹ್ಮಣ ಸನ್ಯಾಸೀನ ಒಪ್ಪಿಕೊಂಡು, ಅವರನ್ನ ನೋಡೋಕೆ ಬನ್ನಿ ಅಂತ ಕರೆದರೆ, ನೀವು, ಉತ್ತಮರು ಬರೋಲ್ಲ ಅಂತೀರಲ್ಲ ನ್ಯಾಯವಾ? ತಮ್ಮ ಕಾರೂ ತರಬೇಡಿ, ನಮ್ಮ ವ್ಯಾನ್‌ನಲ್ಲಿ ಹೋಗೋವ, ತಮಗೆ ಇಷ್ಟ ಇಲ್ಲದಿದ್ದರೂ ಹೊರಡಿ. ನಮ್ಮ ಬಲವಂತ ಅಂತ ಹೊರಡಿ. ಈಗ ನಾನೇ ಶಿವಮೊಗ್ಗಕ್ಕೆ ಬನ್ನಿ ಸ್ವಾಮಿ, ಫೀಸ್ ಕೊಡುತೀನಿ ಅಂದರೆ ಬರುತಿದ್ದರೋ ಇಲ್ಲವೊ ? ಹಾಗೇ ಈಗಲೂ ಬನ್ನಿ. ಎಂಟು ದಿನ ಇರಿ. ನಿಮ್ಮ ಇಬ್ಬರಿಗೂ ದಿನಕ್ಕೆ ನೂರು ರೂಪಾಯಿನಂಗೆ ಎಂಟುನೂರು ರೂಪಾಯಿ, ಹೋಗತಾ ಬರತಾ ಖರ್ಚಿಗಿನ್ನೂರು ರೂಪಾಯಿ ಒಂದು ಸಾವಿರ ರೂಪಾಯಿ ಕೊಡುತೀನಿ, ಇಕೋ ಚೆಕ್ ಬರೀಲಾ ?
ರಮೇಶನಿಗೂ ಮನಸ್ಸು ಕದಲಿತು. ಏನೋ ನಿದ್ದೆಯಿಂದ ಎದ್ದವನಂತೆ, “ಆಫರ್ ಆಲ್, ಗೌಡರು ಹೇಳುತಿರೋದು ಹಾಲಿಡೇ ತಕೊಳ್ಳಿ, ಅಂತ! ಅಷ್ಟೇ ತಾನೇ ! ಪ್ರಾಣೇಶ್, ಅವರು ಎಂಟು ದಿವಸ ಹೇಳಿದರು. ನಾವು ಅದನ್ನು ಮೂರು ದಿವಸ ಮಾಡೋಣ, ಶನಿವಾರ, ಭಾನುವಾರ, ಸೇರಿ ಐದು ದಿನವಾಯಿತು. ಹೋಗಿಬರೋಣ ನಡಿ, ಕೋರ್ಟ್ ವ ಎಲ್ಲಾ ಜೂನಿಯರ್ಸ್ ನೋಡಿಕೊಳ್ಳಲಿ’ ಎಂದನು. ಪ್ರಾಣೇಶನಿಗೆ ಮೊದಲೇ ಮನಸ್ಸು ಅತ್ತ ಕಡೆ ಹೊರಟೇ ಹೋಗಿತ್ತು ಅದರಿಂದ ನಸುನಗುತ್ತ “ದಟ್ಸ್ ರೈಟ್. ಹಾಗಿರಬೇಕು. ಕಾಂಪ್ರಮೈಸ್ ಇಲ್ಲದಿದ್ದರೆ ಆಗತ್ತೆಯೇ? ಸರಿ. ಅದು ಹಾಗೇ ಮಾಡೋಣ ! ಇನ್ನೇನು ಗೌಡರೆ, ತಮ್ಮ ಪಾಯಿಂಟ್ ಗೆದ್ದಿತಲ್ಲ!”
“ಹಂಗಾದರೆ ಈಗ ಚೆಕ್ ಎಷ್ಟಕ್ಕೆ ಬರೀಬೇಕು ?” ~ ರಮೇಶನು ಮೊದಲು ಅಲ್ಲಿ ಹೋಗಿ ಅಲ್ಲಿ ನಮಗೆ ಏನೇನು ಖರ್ಚು ಆಗುತ್ತೇ ? ಏನೇನು ಕಷ್ಟ ಆಗುತ್ತೆ? ನೋಡಿಕೊಳ್ಳೋಣ, ಅದಕ್ಕೆ ತಕ್ಕಂತೆ ಡಿಮಾಂಡ್ ಮಾಡಿ ಬಿಲ್ ಕಳುಹಿಸುತ್ತೇವೆ. ಅದುವರೆಗೂ ಚೆಕ್‌ಬುಕ್ ಜೇಬಿನಲ್ಲಿರಲಿ, ಈಗ ನೀವು ಇಷ್ಟು ಮಾತು ಆಡಿ ನಮ್ಮನ್ನು ರೇಗಿಸಿದ್ದಕ್ಕೋಸ್ಕರ, ನಿಮಗೊಂದು ಡ್ರಿಂಕ್ ಕೊಟ್ಟು ಹೊಟ್ಟೆ ಉರಿ ತೀರಿಸಿಕೊಳ್ಳುತ್ತೇವೆ. ಏನಂತೀರಿ ?” ಆಗಲಿ.” “ವೈದ್ಯ ಹೇಳಿದ್ದೂ ಹಾಲೂ ಅನ್ನ ಅಂದಂಗಾಯಿತು. ಅಷ್ಟೇ ತಾನೇ ?” “ರಮೇಶ್, ಈಗ ಕಾಫಿ ತರಿಸು. ಸನ್ಯಾಸಿ ಮಾತು ಮುಗಿಸಿ, ಆಮೇಲೆ ಡ್ರಿಂಕ್ “ಸರಿ, ಬಿಡಯ್ಯಾ, ಬಿಗ್ಗೆಸ್ಟ್ ಕಾಫಿಪ್ಲಾಂಟ, ಅವರು ಕೊಟ್ಟ ಕಾಫೀನೆ ಅವರಿಗೆ ಕೊಡೋದೆ ? ಇನ್ನೇನಾದರೂ ಕೊಡೋಣ.”
“ಅವರಿಗಿಲ್ಲದ್ದು ನೀನೇನು ಕೊಟೀಯ ? ಪಂ ದಿ ಡರ್ಟೀಯಸ್ಟ್ ಕಂಟ್ರಿ ಲಿಕ್ಕರ್ ಅಪ್ ಟು ದಿ ಕ್ಲಾಸ್ಸಿಯೆಸ್ಟ್ ಫಾರಿನ್ ಒನ್‌ಸ್ ? ಅದರಿಂದ ಈಗ ನಾನು ಹೇಳಿದ ಹಾಗೆ ಮಾಡು. ಅಥವಾ ಅವರನ್ನೇ ಕೇಳು. ಅವರು ಹೇಳಿದ ಹಾಗೆ ಮಾಡು.” “ಎಗ್ರೇನ್ ಎ ಕಾಂಪ್ರಮೈಸ್ ಆಗಲಪ್ಪ, ಏನು ಗೌಡರೆ ? ತಾವು ಹೇಳಿದ್ದು ಏನು ಬೇಕು ಅಪ್ಪಣೆಯಾಗಲಿ.” “ತಾವು ಉತ್ತಮರು, ಇನ್ನೂ ಮೂರು ಗಂಟೆ. ಈಗಲೇ ತಮ್ಮನ್ನು ಡ್ರಿಂಕ್ ಕೇಳಿ ಯಾಕೆ ಕೆಡಿಸಬೇಕು ? ಕಾಫಿ ತರಿಸಿ.” “ಗೌಡರೆ, ನಮ್ಮನ್ನು ಕೆಡಿಸಿದ್ದು ಡ್ರಿಂಕ್ ಕೇಳೋ ತಾವಲ್ಲ, ತಮ್ಮಂಥಾ ಹಣವಂತರ ಮರ್ಜಿ ಹಿಡಿಯೋಕೆ ಬೇಕಾದ್ದು ಮಾಡುವುದಕ್ಕೆ ಸಿದ್ಧವಾದ ಮನಸ್ಸು. ಅಲ್ಲದೆ, ನೋಡಿರಿ. ನಿಮ್ಮ ಮಲೆನಾಡಿನಲ್ಲಿ ನಿಂತ ನೀರೂ, ಮನುಷ್ಯನ ಹತ್ತಿರ ನಿಂತ ಹೆಚ್ಚು ಹಣ, ಎರಡೂ ಕರಪ್ಟಿವ್ ನೋಡಿ. ಒಂದು ಮಸ್ಕಿಟೋಬ್ರಿಡ್ ಮಾಡಿ ಮಲೇರಿಯಾ ಕಂದರೆ ಇನ್ನೊಂದು ಆನ್ ಟೆರಿಲಿಜನ್ ಟೆಂಡೆನ್‌ಸೀಸ್ ಬೀಡ್ ಮಾಡಿ ಮನುಷ್ಯನ್ನ ಸೈಟಾನ್‌ಸ್ ಬೀಡ್ ಮಾಡುತ್ತೆ ಇರಲಿ, ಬಿಡಿ. ಈಗ ಹಾಗಿದ್ರೆ ಕಾಫೀನೇನೋ ?”
“ನಾನು ಇಲ್ಲಿ ಇರೋವರೆಗೆ ತಾವು ಹೇಗೆ ಹೇಳಿದ್ರೆ ಹಾಗೆ ನಮ್ಮ ಚಿಕ್ಕರಾಯರು ಹೇಳಿದಂಗೇ ಆಗಲಿ ಬಿಡಿ.” “ನಾನು ರಮೇಶನಿಗಿಂತ ವಯಸ್ಸಿನಲ್ಲಿ ದೊಡ್ಡನು ಕಣಿ.” “ಅಲ್ಲಾ ರಾಯರೆ, ವಯಸ್ಸಿನಲ್ಲಿ ದೊಡೋರು ತಾವು ನಿಜ. ಬುದ್ದೀಲಿ, ತಾವು ಇಬ್ಬರೂ ಸರಿಸರಿ. ಆದರೆ, ಅಲ್ಲಿ ಒಂದು ಗೆಪ್ಪೆ ಕೂತು, ಅದು ತಮ್ಮನ್ನು ನೀನು ಚಿಕ್ಕೋನು ನಾನು ಚಿಕ್ಕೋನು ಅಂದು ಅಂದು, ತಾವು ಚಿಕ್ಕೋರಂಗೆ ನಡೆದು ನಡೆದು, ಅದು ನಮ್ಮ ಕಣ್ಣಿಗೆ ಬಿದ್ದು ಬಿದ್ದು, ನಮ್ಮ ಬುದ್ದೀಲಿ, ಇದು ಎಡ, ಇದು ಬಲ, ಅಂತ ನಿಂತೋಗದೆ. ಅದಕ್ಕೆ ಹಾಗಂದೆ, ಕೋಪ ಮಾಡಿಕೋಬೇಡಿ. ಪ್ರಾಣೇಶನಿಗೆ ಸೋಫಾದ ಮೇಲೆ ಕೂತಿದ್ದಾಗ ಮುಳ್ಳು ಚುಚ್ಚಿದಂತಾಗಿತ್ತು ಸಾವಿರಾರು ರೂಪಾಯಿ ಕೊಡುವ ಕೌಂಟ್ ಅಲ್ಲದಿದ್ದರೆ, ಅವನ ಕೋಪದಲ್ಲಿ ಎದ್ದು ಒದ್ದುಬಿಡಬೇಕು. ಆದರೂ ಅದೆಲ್ಲ ನುಂಗಿಕೊಂಡು, ಅದನ್ನೆಲ್ಲ ಲಘುವಾಗಿ ಹಾರಿಸುವ ಬುದ್ಧಿವಂತಿಕೆಯ ನಗುವಿನಿಂದ ಹೇಳಿದನು, “ಎಷ್ಟಾಗಲಿ ರಮೇಶ್ ನೋಡಿ ಗೌಡರೆ! ರಮೇಶ ಎಂದರೆ ವಿಷ್ಣು ಲಕ್ಷ್ಮೀಪತಿ, ಅವನ ಹತ್ತಿರ ಎಲ್ಲರೂ ತಗ್ಗಬೇಕು. ನಿಜ. ಇಲ್ಲದಿದ್ದರೆ ತಾವು ತಾನೇ ಒಲೀತಿದ್ದೀರಾ ? ಅದಿರಲಿ, ಆ ಸನ್ಯಾಸಿಗಳ ವಿಚಾರ ಅಷ್ಟು ಹೇಳಿ.” ಗೌಡನಿಗೂ ಗೊತ್ತಾಯಿತು ತಾನು ಆಡಿದ ಮಾತು ಚುಚ್ಚಿ ನೋಯಿಸಿತು ಎಂದು. ಅವನಿಗೆ ನೋಯಿಸಬೇಕು ಎಂದು ಆಸೆಯಿರಲಿಲ್ಲ. ಲೋಕಾಭಿರಾಮವಾಗಿ, ತನ್ನ ಅನುಭವಕ್ಕೆ ಬಂದಿದ್ದ ವಿಷಯವನ್ನು ತನ್ನ ವೈಖರಿಯಲ್ಲಿ ಹೇಳಿದ್ದ ಅಷ್ಟೆ! ಆದರೆ ಅದು ಕವಣೆಕಲ್ಲು ಆಗಿಹೋಯಿತು. ಅದನ್ನು ಮರೆಸುವುದಕ್ಕಾಗಿ ವಿಷಯಾಂತರವಾಗಲೆಂದು ಹೇಳಿದನು:- ನೋಡಿ, ದೇವು, ನಾವು ಹಳ್ಳಿ ಜನ. ನಮಗೆ ಮಾತು ಅಷ್ಟು ಚೆನ್ನಾಗಿ ಬರೋಲ್ಲ. ನಮ್ಮ ಮನಸ್ಸಿಗೆ ಹಿಡಿಯೋದು ನಿಮ್ಮ ಶಾಸ್ತ್ರಗೀಸ್ರ ಅಲ್ಲ, ಮನುಷ್ಯ ನೇರವಾಗಿರಬೇಕು. ಕಟ್ಟುನಿಟ್ಟಾಗಿರಿಬೇಕು. ಹೊಳೇಲಿರೋ ಬಂಡೆಹಾಗೆ, ಭದ್ರವಾಗಿರಬೇಕು. ನುಡಿಯೋ ನುಡಿ ನಡೆಯೋ ನಡೆ, ಎರಡೂ ಕರಾರ್‌ವಾಕ್ಕಾಗಿರಬೇಕು. ಆಗ ನಾವು ಒಪ್ಪೋದು. ಅಲ್ಲದೆ, ನಮ್ಮ ಸನ್ಯಾಸಿಗಳು ಕರಾಮತ್ತಿನವರು. ನೀವು ಊರಲ್ಲಿರೋರು ನಿಮಗೆ ದೈಯ, ಪೀಡೆ, ಪಿಶಾಚಿ, ಅಂದರೆ ನಂಬಿಕೆಯಿಲ್ಲ.” ಪ್ರಾಣೇಶ್ ನಡುವೆ ಬಾಯಿ ಹಾಕಿದನು: “ಹಾಗಲ್ಲರೀ! ನಾವೇ ದೈಯ, ಪೀಡೆ, ಪಿಶಾಚಿ ಆಗಿರೋವಾಗ ನಮಗಿಂತ ಇನ್ನು ಯಾವ ದೈಯ, ಪೀಡೆ, ಪಿಶಾಚಿ ಬರಬೇಕು
“ನಿಜ, ಸೋಮಿ, ಇಲ್ಲಿ ತಮ್ಮಿಬ್ಬರನ್ನು ಬಿಡಿ. ತಾವೇನೋ ನನ್ನ ಭಾಗಕ್ಕೆ ದೇವರಾಗಿದ್ದೀರಿ. ಇಷ್ಟು ಕೊಡು ಅಂತ ಈ ಐದು ವರ್ಷದಿಂದ ತಮ್ಮ ಬಾಯಲ್ಲಿ ಒಂದು ದಿನವಾದರೂ ಬಂದಿಲ್ಲ. ತಮ್ಮನ್ನು ಅಂದರೆ ಬಾಯಲ್ಲಿ ಹುಳು ಸುರಿದೀತು.
ಆದರೆ ಈ ಊರಲ್ಲೇ ಇನ್ನೂ ಕೆಲವರು ಮಹಾನುಭಾವರು ಇದ್ದಾರೆ ಸೋಮಿ. ಶನಿಮಹಾರಾಯ ಹೆಗಲಮೇಲೆ ಹತ್ತಿದರೆ ಅವರ ಆಫೀಸಿಗೆ ಹೋಗಬೇಕು. ಅವರೆಲ್ಲ ಈ ಜನ್ಮದಲ್ಲಲ್ಲ; ಹಿಂದಿನ ಜನ್ಮದಲ್ಲಾದರೂ ದೈಯ, ಪೀಡೆ, ಪಿಶಾಚಿ ಆಗದಿದ್ದರೆ, ಅವರಿಗೆ ಕಬ್ಬಿಣದ ಕೊಕ್ಕು ಬರತಿತ್ತು ಅಂತ ನನ್ನ ಯೋಚನೆ. ಬಿಡಿ, ಮನೆ ಅಂದ ಮೇಲೆ ಕಕ್ಕಸು ಇರಬೇಕು. ಈಗಂತೂ ರೂಮು ಕಟ್ಟು ಅಂದರೆ ಇಂಜನಿಯರ್ ಮೊದಲು ಕಕ್ಕಸ್ ಎಲ್ಲಿರಬೇಕು ಅಂತಾರೆ. ಬಹುಶಃ ಅವರಿಗೂ ಈಗೀಗ ಎಲ್ಲೆಲ್ಲೂ ಎಲ್ಲರ ಮನಸ್ಸು ಕಕ್ಕಸ್ಸೇ ಆಗತಾ ಅದೆ ಅಂತ ಅನ್ನಿಸದೇನೋ ? ಅದಿರಲಿ, ಬಿಡಿ, ನಾವು ನೋಡಿ, ನಮಗೆ ಸನ್ಯಾಸಿಗಳನ್ನ, ವಿರಕ್ತರನ್ನ, ಅಳೆಯೋ ಕೋಲಿಲ್ಲ, ಅದಕ್ಕಾಗಿ ನಾವು ಅವರ ಕರಾಮತ್ತು ನೋಡೋದು, ಮೊದಲು ಆ ಸನ್ಯಾಸಿ ಮೇಲೆ ನಂಗೆ ಅಷ್ಟು ಭಕ್ತಿ ಯಾಕೆ ಬಂತು ಬಲ್ಲಿರಾ! ಅಲ್ಲಿ ಚಿಕ್ಕಮಗಳೂರಿನಿಂದ ಗಿರಿಗೆ ಹೋಗುವಾಗ ಆ ಬಲಗಡೆಗೆ ಒಂದು ಭಾರಿಯ ಬಟ್ಟಲಿನಂತೆ ಕಮರಿ ಅದೆ. ನೋಡಿ, ಅಲ್ಲಿ ರಸ್ತೆಗೆ ಸುಮಾರು ಒಂದು ಮೈಲಿ ದೂರದಲ್ಲಿ ಒಂದು ಗವಿ ಅದೆ. ಅದನ್ನು ಎಲ್ಲರೂ ದೊಡ್ಡ ಹುಲಿ ಗವಿ ಅಂತಾರೆ. ಅದರೊಳಗೆ ಹುಲಿ ಇದೆಯೋ ಇಲ್ಲವೋ ಹೋಗಿ ನೋಡಿದೋರಿಲ್ಲ. ಅಂತೂ ಒಬ್ಬೊಬ್ಬರೇ ಅಲ್ಲಿಗೆ ಹೋಗೋದಿಲ್ಲ. ಇಲ್ಲಿ ಇವಯ್ಯ ಹೋಗಿ ಇದ್ದುಬಿಡೋದಾ ? ಇದು ನನಗೆ ತಿಳೀತು. ಅಲ್ಲಿಂದ ನಮ್ಮ ಬಂಗಲೆ ಎಷ್ಟು ದೂರ ? ಒಂದು ನಾಕೈದು ಮೈಲಿ ಆದೀತು. ಆ ಸುದ್ದಿ ಕೇಳತಲೆ ನನಗೆ ಮೈ ಜುಮ್ಮಂತು. ಹಾಡು ಹಗಲಿನಲ್ಲೂ ಆ ಗವಿ ಬಳಿ ಹೋಗೋಕೇ ದಿಗಿಲಾಗತದೆ. ನಾವು ಹಿಂದೆ ಪೈಲೆಪಂಚವೀಸೆ ಆಗಿದ್ದಾಗ ನಾಕೈದು ಜನ ಸೇರಿ ಭಾರಿ ಟಾರ್ಚ್ ತಕೊಂಡು ಹೋಗಿದ್ದೋ! ಒಳಕ್ಕೆ ಹೋದರೆ, ಇನ್ನೊಂದು ಲೋಕದವರು ಬಂದು ಸೇರಿಕೊಂಡು ನಮ್ಮನ್ನ ಬೇಕೂ ಅಂತ ಅಂಜಿಸಿದಂತಾಯಿತು. ಅಲ್ಲಿ ಒಂದು ಫರ್ಲಾಂಗು ಹೋದರೆ, ಅಲ್ಲಿ ಸೊಗಸಾದ ನೀಲ ಅನ್ನೋ ಅಂಥಾ ನೀರು ಮೂರು ಬೆರಳಗಾತ್ರ ಧುಮುಕತದೆ. ತಣ್ಣಗೆ ಕೊರೆಯೋ ನೀರು ಅಲ್ಲಿ ಒಂದು ಹತ್ತು ಹದಿನೈದು ಅಡಿ ಭಾವಿಯಾಗಿ ನಿಂತದೆ. ಅಲ್ಲಿಗೆ ಅಷ್ಟು ದೂರದಲ್ಲಿ ಮೇಲಕ್ಕೆ ಒಂದು ಗವಾಕ್ಷಿ ಹೊಡೆದ್ದಾಗೆ ಒಂದು ತೂತಾಗಿ ಅಷ್ಟು ಬೆಳಕು ಬರುತ್ತದೆ. ಆ ಗವೀಲಿ ಒಂದು ವಿಚಿತ್ರ. ಅಂದರೆ, ಮಿಕ್ಕ ಗವಿಗಳಂಗೆ, ದುರ್ವಾಸನೆ ಇಲ್ಲ. ಏನೋ ಒಂದು ತರದ್ದು ಗಮ್ಮನ್ನೂ ವಾಸನೆ. ಯಾಕೋ ಮುಂದಕ್ಕೆ ಹೋಗೋಕೆ ಮನಸ್ಸಾಗಲಿಲ್ಲ. ಬಂದುಬಿಟ್ಟೆ ಆ ಗವೀಲಿ ಒಬ್ಬ ಮನುಷ್ಯ ಸೇರಿಕೊಂಡು ಇದ್ದಾನೆ ಅಂದರೆ ಯಾಕೋ ಆಶ್ಚದ್ಯವಾಯಿತು. ಹೋಗಬೇಕು ನೋಡಬೇಕು ಅಂದುಕೊಂಡೆ, ಆಗಲಿಲ್ಲ. ನಮಗೆ ಇದ್ದೇ ಇದೆಯಲ್ಲ ಇವತ್ತು ಮಂಗಳೂರು, ಅಲ್ಲಿಂದ ಮೈಸೂರು, ಅಲ್ಲಿಂದ ಶಿವಮೊಗ್ಗ, ಅಲ್ಲಿಂದ ಬೆಂಗಳೂರು, ಅಲೆಯಲೇ ಬೇಕಲ್ಲ. ಹೀಗೇ ಒಂದು ಎರಡು ತಿಂಗಳು ಕಳೆದುಹೋಯಿತು.
“ಕೊನೆಗೆ ಒಂದು ದಿನ ಹೋಗಿ ನೋಡಿದೆ. ಅವರಿಗೆ ವಯಸ್ಸೆಲ್ಲ ಮೂವತ್ತೈದು ನಲವತ್ತು ಇರಬಹುದು. ನೋಡುತ್ತಿದ್ದರೆ ಏನೋ ಎಷ್ಟೋ ದಿನದಿಂದ ಗುರುತಿದ್ದಾನೆ,
ಹಿಂದಿನ ನೆಂಟರನ್ನ ಕಂಡಾಗೆ ಆಗೋದಾ ? ಹಾಗಾಗಿ ಕಣ್ಣುತುಂಬಾ ನೀರು ಬಂತು: ಹೋಗಿ ಅಡ್ಡಬಿದ್ದೆ: ‘ನನ್ನ ಉದ್ಧಾರಮಾಡಬೇಕು’ ಎಂದು ಕೈಮುಗಿದೆ. “ಅವರೂ ನಗುನಗುತ್ತ ‘ಹೌದು, ಹೌದು ನಿನಗೋಸ್ಕರಲೇ ಬಂದಿದ್ದೀನಿ. ನಿನ್ನ ಸಾಲ ತೀರಿಸಿಯೇ ಮುಂದಕ್ಕೆ ಹೋಗಬೇಕಪ್ಪಾ!’ ಎಂದರು. ಅವೊತ್ತಿನಿಂದ ಅವರಿಗೂ ನನಗೂ ಏನೋ ಗಂಟು ಬಿದ್ದುಹೋಯಿತು. “ಏನು ಹೇಳಲಿ ಅವರ ವಿಚಿತ್ರ ? ವಾರಕ್ಕೆ ಮೂರು ಸಲ ಹಣ್ಣ ಹಾಲೂ ತಕೋತಾರೆ. ಗುರುವಾರ ಮಾತ್ರ ಅವರ ಪೂಜೆ. ಆ ಪೂಜೇನೂ ಬಹಳ ವಿಚಿತ್ರ. ಅವರು ಸಾನಾ ಮಾಡಿಕೊಂಡು ಬಂದು ಕೂತುಕೋತಾರೆ. ಮೂಗಿಂದ ಒಂದು ನೇರಳೆ ಹಣ್ಣಿನ ಗಾತ್ರದ ಸಾಲಿಗ್ರಾಮ ತೆಗೆಯುತ್ತಾರೆ. ಅದನ್ನು ಮಂತ್ರ ಹೇಳಿ ಒಂದು ಹಾಲು ತುಂಬಿದ ಬಟ್ಟಲಲ್ಲಿ ಇಡುತ್ತಾರೆ. ಒಂದು ಝಾವದ ಹೊತ್ತು ಮಂತ್ರ ಹೇಳುತಿದ್ದು ಆಮೇಲೆ ಅದನ್ನು ನೀರಿನಲ್ಲಿ ತೊಳೆದು ಮತ್ತೆ ಮೂಗಿನಿಂದ ಸೇದಿಕೊಂಡು ಬಿಡುತ್ತಾರೆ. ಆ ಹಾಲು ಕುಡಿಕೋತಾರೆ. ಆ ದೇವರಿಗೆ ನೈವೇದ್ಯಕ್ಕೆ ಎಷ್ಟು ಹಣ್ಣು ಇಟ್ಟಿದ್ದರೆ ಅಷ್ಟು ತಿಂದುಬಿಡುತ್ತಾರೆ.” ಪ್ರಾಣೇಶನು ಕೇಳಿದನು: “ಏನೇನು ಹಣ್ಣು ಇಡುತ್ತೀರಿ ?” “ಅಲ್ಲಿ ನಮಗೆ ಸಿಕ್ಕುವುದು ಇನ್ನೇನು? ಬಾಳೇಹಣ್ಣು, ತೆಂಗಿನಕಾಯಿ. ಈಚೆಗೆ ಹಣ್ಣು ಕತ್ತರಿಸಿ, ಕಾಯಿಬೆಲ್ಲ ಯಾಲಕ್ಕಿ ಹಾಕಿ ಪಂಚಾಮೃತಮಾಡಿ ಇಡುತ್ತೇವೆ. ಒಂದೊಂದು ದಿನ ಹೊರಗಿನಿಂದ ಸೇಬಿನ ಹಣ್ಣು ದಾಳಿಂಬೆಹಣ್ಣು ತೆಗೆದುಕೊಂಡು ಹೋದರೆ, ಅವು. “ಎಷ್ಟಾದರೂ ತಿಂದುಬಿಡುತ್ತಾರೆಯೆ ?” “ನಮಗೆ ಒಂದು ದಿನ ಹೇಳಿಬಿಟ್ಟರು; ‘ಹೆಚ್ಚಾಗಿ ಇಟ್ಟು ಪರೀಕ್ಷೆ ಮಾಡಬೇಡಿ’ ಅಂತ. ಈಗ ನಾವು ಇಟ್ಟುದನ್ನೆಲ್ಲಾ ಎಲ್ಲೋ ಅಷ್ಟು ಇಟ್ಟುಕೊಂಡು ಮಿಕ್ಕುದ್ದೆಲ್ಲ ನಮಗೆ ಪ್ರಸಾದವಾಗಿ ಕೊಟ್ಟುಬಿಡುತ್ತಾರೆ.” “ನೈವೇದ್ಯಕ್ಕೆ ಇಟ್ಟ ಹಣ್ಣೆಲ್ಲ ತಿನ್ನುತ್ತಾರೆ, ಅಂದರಲ್ಲ ಮತ್ತೆ? ಅದು ನಿಮಗೆ ಹೇಗೆ ಗೊತ್ತು?” “ನಮಗೆ ಗೊತ್ತಿಲ್ಲವೇ ಒಂದು ಪರೀಕ್ಷೆ ನಡೆದುಹೋಯಿತು. ಒಂದು ದಿನ ನಾವೆಲ್ಲರೂ ಹೊರಟಿದ್ದೀವಿ. ಯಾರು ಯಾರು ? ನಾನು ನಮ್ಮ ಇಬ್ಬರು ಹೆಂಡತಿ, ಇಬ್ಬರು ಆಳುಗಳು, ಬಂಗಲೆಯಿಂದ ಅಷ್ಟು ದೂರ ಬಂದು ನೋಡಿದರೆ ತೆಂಗಿನಕಾಯಿ, ಬೆಲ್ಲ ಇಟ್ಟಿದ್ದಾರೆ: ಹಣ್ಣಿಲ್ಲ. ಇನ್ನು ಹೋಗಿ ತರಬೇಕು. ಆಗಲೇ ಹೊತ್ತಾಗಿಹೋಗದೆ. ಎತ್ತಿನ ಬಂಡಿ. ಏನು ಮಾಡೋದು ? ನೋಡಿದೆ. ಪಕ್ಕದಲ್ಲೇ ನಮ್ಮ ಬಾಳೇ ತೋಟ ಇತ್ತು. ಅದರಲ್ಲಿ ಒಂದು ಗೊನೆ ಗಿಡದ ಮೇಲೆ ಹಣ್ಣಾದ್ದು ಇತ್ತು. ಅದನ್ನು ತರಿಸಿಕೊಂಡು ಹೋದೆ. ಅಲ್ಲಿಗೆ ಹೋದರೆ ನನ್ನ ಹೆಂಡತಿ ಅದೇನು ತೋರಿತೋ ಏನೋ ಪೂರ್ತಾ ಗೊನೆ ಅವರೆದುರಿಗೇ ಇಟ್ಟುಬಿಟ್ಟಳು. ನಾನೂ ಏನೋ ಮನಸ್ಸಿನಲ್ಲಿದ್ದೆ, ನೋಡಲಿಲ್ಲ.
ನಾನು, ಎಂಟು ಚಿಪ್ಪು ಹಣ್ಣು ಇತ್ತು, ಒಂದು ಎರಡು ಮೂರು ಚಿಪ್ಪು ಅವರ ಪೂಜೆಗೆ ಇಡೋದು ಅಂತ ಇದ್ದೆ. “ಅವರೂ ಅದನ್ನು ಕಂಡು ‘ಇದೇನು ?’ ಎಂದರು. ಆಗ ನಾನೂ ನೋಡಿದೆ. “ಆಗಲಿ ಬಿಡಿ. ಇನ್ನೊಂದು ದಿನಕ್ಕೆ ಒಂದು ಎರಡು ಚಿಪ್ಪು ತೆಗೆದಿಟ್ಟರೆ ಆಯಿತು’ ಅಂದೆ. ಉಂಟೆ ? ಸನ್ಯಾಸಿಗಳು ಯಾವಾಗಲೂ ನಾಳೆ ಚಿಂತೆ ಮಾಡಬಾರದು. ಆಗಲಿ ಇವೊತ್ತೇ ನೈವೇದ್ಯಮಾಡಿ ಬಿಡೋಣ. ಇನ್ನೊಂದು ಸಲ ಹೀಗೆ ಮಾಡಬೇಡಿ. ಐದು ಹಣ್ಣಿಗಿಂತ ಹೆಚ್ಚಾಗಿ ನಮಗೆ ಉಳಿಯದಂತೆ ನೋಡಿಕೊಳ್ಳಿ” ಎಂದರು. ಪೂಜೆ ಯಾಯಿತು. ಗೊನೆಯಲ್ಲಿ ನೂರು ಹಣ್ಣಿಗಿಂತ ಹೆಚ್ಚಾಗಿತ್ತು. ಕಾಯಿ ಹಣ್ಣು ನಾವು ಎಷ್ಟು ತಿಂದೇವು ? ನಾವು ಐದು ಜನವೂ ಸೇರಿ ಸುಮಾರು ಐವತ್ತು ಹಣ್ಣಿನಷ್ಟು ತಿಂದೆವು ಅಂದುಕೊಳ್ಳಿ. ಮಿಕ್ಕದ್ದೆಲ್ಲ ಅವರೇ ತಕೊಂಡೇಬಿಟ್ಟರು. “ನಮಗೆ ದಿಗಿಲು ಅಂದರೆ ದಿಗಿಲು, ಹೊಟ್ಟೆಗಿಟ್ಟೆ ಊದಿಕೊಂಡರೆ ಏನು ಗತಿ? ಈ ಸನ್ಯಾಸೀನ ಕೊಂದ ಪಾಪ ನಮಗೆಲ್ಲಿ ಗಂಟುಬೀಳುತ್ತದೆಯೋ, ಅಂತ! ಹೊರಟು ಆಳನ ಬಿಟ್ಟು ಹೋಗಲಾ ? ಅಂತ ಕೇಳಿದರೆ, ಯಾಕೆ ಏನಾಗುತ್ತೆಯೋ ಬರುವಾಗ ಒಬ್ಬ ಅಂತ ದಿಗಿಲೇನೋ ? ಏನೂ ಇಲ್ಲ, ಹೋಗಿ ಅಂತ ಧೈಯ್ಯ ಹೇಳಿ ಕಳುಹಿಸಿಬಿಟ್ಟರು. ತಿರುಗಿ ಸೋಮವಾರದ ದಿನ ಹೋಗಿ ಅವರನ್ನು ನೋಡುವವರೆಗೂ ನಮಗೆ ಪ್ರಾಣದಲ್ಲಿ ಪ್ರಾಣವಿರಲಿಲ್ಲ!” ರಮೇಶನು ತಲೆ ಅಲ್ಲಾಡಿಸಿ ಸಣ್ಣಗೆ ನಗುತ್ತ “ಒಳ್ಳೆಯ ಭೀಮಸೇನ ಸನ್ಯಾಸಿ ಇರಬೇಕು. ಆಳು ಮಜಬೂತಾಗಿದ್ದಾರೋ ?” ಎಂದು ಕೇಳಿದನು. “ಇಲ್ಲ, ಈ ರಾಯರಂಗೆ ಕೂಡಾ ಇಲ್ಲ, ಇನ್ನೂ ಪೀಚು. ಸುಮಾರು ಐದೂವರೆ ಅಡಿ ಇರಬಹುದು. ಕೈಕಾಲು ಕಡ್ಡಿ ಅಲ್ಲ; ಹಾಗಂತ ಒಳ್ಳೆ ದುಂಡುಮೈಯ್ಯನ ವಾದಿಯೂ ಅಲ್ಲ. ಸಾಧಾರಣವಾಗಿದ್ದಾರೆ. ಸುಮಾರು ನೂರಿಪ್ಪತ್ತು ಪೌಂಡು ಇರಬಹುದು. “ಸರಿ, ಇವೊತ್ತು ಮಂಗಳವಾರ, ನಾಳೆ ನಾವು ಹೊರಡುತ್ತೇವೆ. ಅವರ ದರ್ಶನ ಯಾವೊತ್ತು ಆಗೋದು ?” “ಗುರುವಾರ.’ “ಈ ಶನಿವಾರಕ್ಕೆ ಏನು ಹಣ್ಣು ಎಷ್ಟು ತೆಗೆದುಕೊಂಡು ಹೋಗೋಣ ?” “ನಾನೆಲ್ಲ ತರಿಸುತ್ತೇನೆ, ತಮಗೇಕೆ ಕಷ್ಟ?”
“ಹಾಗಲ್ಲ. ನಾವು ದರ್ಶನಕ್ಕೆ ಒಂದು ಬುಟ್ಟಿ ಸೇಬು, ಒಂದು ಬುಟ್ಟಿ ಮುಸುಂಬಿ, ಒಂದು ಬುಟ್ಟಿ ದ್ರಾಕ್ಷಿ ತೆಗೆದುಕೊಂಡು ಹೋಗೋಣ. ಎಲ್ಲಾ ನಮಗೇ ಆಗುತ್ತೆ ಸ್ವಾಮಿ ಗಳಿಗೆ ಅಂತ ತೆಗೆದುಕೊಂಡು ಹೋದರೂ ನಿಜವಾಗಿಯೂ ನಮಗೇ ತಾನೇ. ಸಾಧ್ಯವಾದರೆ ನಿಮ್ಮ ಕುಟುಂಬ, ಮಗು, ನಿಮ್ಮ ತಂದೆಯವರು ಎಲ್ಲರೂ ಬನ್ನಿ ನಮ್ಮ ರಾಯರು ನಮ್ಮ ಕಾರಲ್ಲಿ ಬರುತ್ತಾರೆ. ಅವರೂ ಎಲ್ಲರನ್ನೂ ಕರೆದುಕೊಂಡು ಬರುವುದಾದರೆ, ಅವರ ಕಾರೂ ಬರಲಿ.”
“ಇಲ್ಲ, ನಮ್ಮ ಕಾರು ಚಿಕ್ಕದು. ನಾನೊಬ್ಬನೇ ಬರುತ್ತೇನೆ. ನಿಮ್ಮ ಕಾಗೆ ಇನ್ನು ಯಾರೂ ಇಲ್ಲವಲ್ಲ?” “ಯಾರೂ ಇಲ್ಲ. ನಾನೂ ತಾವೂ.
“ನಮ್ಮ ತಂದೆ ಬರೋಲ್ಲ. ಇನ್ನು ಹೆಂಡತಿ, ಮಗು, ಆಗಲಿ. ಬರುತ್ತಾರೆ. ನಮ್ಮ ಕಾರು ಯಾಕೆ ? ನಿಮ್ಮ ಕಾರಿನಲ್ಲಿ ಜಾಗ ಇಲ್ಲವೆ ?” “ಹಾಗಲ್ಲ ದೇವರು. ಫ್ಯಾಮಿಲಿ ಹೊರಟಾಗ ಕಾರು ಇರಬೇಕು. ಏನು ರಾಯರೇ !’ ಬನ್ನಿ….
“ಆಗಲಿ, ನಾಳೆ ಊಟ ಮಾಡಿಕೊಂಡು ಹತ್ತು ಗಂಟೆಗೆ ಹೊರಡೋಣ. “ಸರಿ, ನಾವೂ ಮೂರು ನಾಕು ಗಂಟೆ ವೇಳೆಗೆ ತೋಟಕ್ಕೆ ಹೋಗಬಹುದು.’ ಗೌಡರೆ, ನಮ್ಮ ಹುಡುಗ ಮಲ್ಲೇಶನನ್ನೂ ಕರೆದುಕೊಂಡು ಹೋಗೋಣ.” “ಅಗತ್ಯವಾಗಿ, ದೆವ್ವನಂತಹ ಕಾರು. ಬೇಕಾದರೆ ಇನ್ನೂ ಎಂಟು ಜನ ಕರೆದುಕೊಂಡು ಬನ್ನಿ”.
*****
ಮುಂದುವರೆಯುವುದು

















