Home / ಕವನ / ಕವಿತೆ / ಮಗಳ ಮೊರೆ

ಮಗಳ ಮೊರೆ

ಬಾ ಮಗಳ ಬಾ ಮಗಳೆ ಬಾ ಮಗಳೆ ಮನೆಗೆ
ಹಾರೈಸಿ ಕುಳಿತಿಹೆನು ಬೇಗ ಬಾರಮ್ಮ
ಘನವಾದ ಮನೆತನದ ಮನೆಯಲ್ಲಿ ಬಂದೆ
ಮನೆಯವರ ಮನ್ನಣೆಗೆ ಮನೆಯಾಗಿ ನಿಂದೆ
ಬಾ ಮಗಳೆ ಬಾ ಮಗಳೆ ಬಾ ಮಗಳೆ ಮನೆಗೆ
ಹಾರೈಸಿ ಕುಳಿತಿಹೆನು ಬೇಗ ಬಾರಮ್ಮ
ಬಾಲ್ಯದಲಿ ಲಾಲನೆಯ ಪಾಲನೆಯ ಗೆಯ್ದು
ಲೀಲೆಯಿಂದಲಿ ಬೆಳಸಿ ಕಾಲವನ್ನು ಕಳೆದೆ
ಹುಲುಸಾದ ಕಲೆಗಳನ್ನು ಕಲಿಸಬೇಕೆಂದು
ಕಲೆಗಳಿಗೆ ನೆಲೆಯಾದ ನಿಲಯವನು ತೋರ್ದೆ
ಬಾ ಮಗಳೆ ಬಾ ಮಗಳೆ ಬಾ ಮಗಳೆ ಮನೆಗೆ
ಬಾ ಮನೆಗೆ ಬೇಗದಿಂ ಬಾ ಮುದ್ದು ಗಿಣಿಯೆ
ಪೊಳಲು ಹಳ್ಳಿಗಳೆಂಬ ತಿರುಳೆಲ್ಲ ತಿಳಿದು
ಪೊಳಲನ್ನು ಬಳಸುತ್ತ ಬಳೆಯುತ್ತ ಬಂದೆ
ಕುಲವಧೂಕಾಮಿನಿಯರೊಲವನ್ನು ಕಲಿತು
ಕುಲಶೀಲರೂಪಗಳ ಕಳೆಯನ್ನು ತಿಳಿದೆ
ಬಾ ಮಗಳೆ ಬಾ ಮಗಳೆ ಬಾ ಮಗಳೆ ಮನೆಗೆ
ಬಾ ಮನೆಗೆ ಬೇಗದಿಂ ಬಾ ಮುದ್ದು ಮಗಳೆ
ಮದುವೆಯನು ಹಮ್ಮಲು ಮನವನ್ನು ತೆಗೆದೆ
ವಿದುಷಿಮಣಿ ಮಾಡಬೇಕನ್ನುತ್ತ ಬಗೆದೆ
ಒಳಿತಾದ ಕಲೆಗಳನು ಕಲಿತಾದ ಬಳಿಕ
ಕೆಳೆಗೊಂಬ ಕುಲಜರನು ಕಾಣಬೇಕೆಂದೆ
ಬಾ ಮಗಳೆ ಬಾ ಮಗಳೆ ಬಾ ಮಗಳೆ ಮನೆಗೆ
ಭಯರಹಿತ ಬಗೆಯಿಂದ ಬಾ ಮಗಳೆ ಬೇಗ
ಶಾರದಾ ಕಾಯಿದೆಯು ಕವಲೊಡೆವ ಮುಂಚೆ
ನೂರಾರು ಲಗುನಗಳ ನೆರೆಯೆಲ್ಲ ನೋಡೆ
ತಂದೆತಾಯ್ಗಳ ತೆರೆದ ಬಂಧುಜನವೆಲ್ಲ
ಬಂಧಿಸಿತು ನನ್ನನ್ನು ಸಂಧಿಸಲು ನಂಟ
ಬಾ ಮಗಳೆ ಬಾ ಮಗಳೆ ಬಾ ಮಗಳೆ ಮನೆಗೆ
ಬೇಗದಿಂ ಬಾರವ್ವ ಹಾರೈಸಿ ಇಹೆನು
ವರಸುಧಾರಕನಾಗಿ ಮೆರೆದಿರುವ ನಾನು
ಪರಿಣಯವ ವಿಧಿಸುವೆನೆ ಜವ್ವನದ ಮುಂಚೆ
ಲೇಸಲ್ಲ ಮದುವೆಯಿದು ಮನದಿಂದ ಬಗೆದೆ
ಹಾಸಿಗೆಯ ಹಿಡಿದಿರುವ ಹೆಂಡತಿಯ ಕೇಳ್ದೆ
ಬಾ ಮಗಳೆ ಬಾ ಮಗಳೆ ಬಾ ಮಗಳೆ ಮನೆಗೆ
ಬೇಗದಿಂ ಬಾರವ್ವ ನಮ್ಮವ್ವ ನೀನು
ಸಾವಿನ್ನು ಸೆರೆಗೆಯ್ವ ಮುನ್ನಮೆ ನನ್ನ
ಭಾವನೆಯ ಮುಗುಳಾದ ಮಗಳ ಮದುವೆಯನು
ನಮ್ಮಯ್ಯ ದಮ್ಮಯ್ಯ ಹಮ್ಮುವೆನು ಎಂದು
ದುಮ್ಮಾನದಿಂದುಸಿರೆ ಹಮ್ಮಿದೆನು ಸೆರೆಯ
ಬಾ ಮಗಳೆ ಬಾ ಮಗಳೆ ಬಾ ಮಗಳೆ ಮನೆಗೆ
ಕಳವಳವ ಕಳೆದುಳಿದ ಕತದಿಂದ ಬಾರೆ
ಅರಿಯದಿಹ ಮನೆತನಕೆ ಅರಿಯದಿಹ ಜನಕೆ
ಸಿರಿವಂತರೆಂದೆಂಬ ಹಳ್ಳಿ ಮುರುಕರಿಗೆ
ಬಂಧುಗಳು ಬಲವಂತ ಮಾಡಲಾಕ್ಷಣದೆ
ಸಂಧಿಸಿದೆ ಸಂಬಂಧವನು ತಂತಿಮುಖದೆ
ಬಾ ಮಗಳೆ ಬಾ ಮಗಳೆ ಬಾ ಮಗಳೆ ಮನೆಗೆ
ಬಾರವ್ವ ತವರೂರ ತಾಯ್ಮನೆಗೆ ನೀನು
ಹೊರಬಾರದೊಜ್ಜೆಯನು ಹೊರಿಸಿದರೆ ನಿನಗೆ
ಉಣಬಾರದುಣಿಸನ್ನು ತಿನಿಸಿದರೆ ನಿನಗೆ
ಹೊಲೆತನದ ಮಾತನ್ನು ಕುಲಕೆಲ್ಲ ಬಳಿಸಿ
ಕುಲವೆಲ್ಲ ಪಾವನವ ಗೆಯ್ದರೇನಮ್ಮ
ಬಾ ಮಗಳೆ ಬಾ ಮಗಳೆ ಬಾ ಮಗಳೆ ಮನೆಗೆ
ಸಿರಿವನೆಯ ಸೆರೆ ಬೇಡ ತಿರಿದುಂಬ ಬಾರೆ
೧೦
ಅತ್ತೆನಾದಿನಿಯರಿಗೆ ತುತ್ತಾಗಲಿತ್ತೆ
ಚಿತ್ತಚಂಚಲಮಾಗೆ ಬಿತ್ತರಿಸಿಯಿತ್ತೆ
ಹುಚ್ಚೆದ್ದು ಕಾಲ್ಮುರಿಯೆ ಹೊಯ್ವ ಗಂಡನಿಗೆ
ನೆಚ್ಚುವದದೆಂತಕಟ ಹಾ ದೇವ! ಎಂದ
ಬಾ ಮಗಳೆ ಬಾ ಮಗಳೆ ಬಾ ಮಗಳೆ ಮನೆಗೆ
ಕಡಲಿಡುವ ಕಂಬನಿಯೊಳಲೆದಾಡಿ ಬಾರೆ
೧೧
ಊರೆಲ್ಲ ಸೇರದಿಹ ಸಿರಿವನೆಯ ಸೆರೆಗೆ
ತೂರಿದೆನೆ ನಿನ್ನನ್ನು ಹೊಣೆಗಾರನಾಗಿ
ಮೀರಿರ್ದ ಮರುಕವನು ಮರೆವೆ ನಾನೆಂತು
ದೂರವಿರು ನಮ್ಮವ್ವ ಕಂದವ್ವ ನೀನು
ಬಾ ಮಗಳೆ ಬಾ ಮಗಳೆ ಬಾ ಮಗಳೆ ಮನೆಗೆ
ಬೆಚ್ಚದಲೆ ಬೆದರದಲೆ ಬಾರವ್ವ ನೀನು
೧೨
ವಿಧಿಬರಹಕಿದಿರಾದೆ ಎಂದೆಂಬ ಮಾತು
ಉದಯಿಸದು ಹೃದಯದಲಿ ನಾಗೆಯ್ದ ತಪ್ಪೆ
ಎದುರಾಗಿ ಬರುತಿಹುದು ದುಗುಡದಿಂ ಕೂಡಿ
ಇದಿರಾಗ ಬೇಕಾಯ್ತು ಮಾಡಿದನುಚಿತಕೆ
ಬಾ ಮಗಳೆ ಬಾ ಮಗಳೆ ಬಾ ಮಗಳೆ ಮನೆಗೆ
ಬೇಗದಿಂ ತೊರೆಯವ್ವ ಸಿರಿವನೆಯ ಸೆರೆಯ
೧೩
ಸಂಸ್ಕಾರ ಹೊಂದಿರುವ ಮಗಳನ್ನು ತಂದು
ಸಂಸ್ಕಾರ ಹೊಂದದಿಹ ಮನೆತನಕೆ ನೀಡೆ
ಬರುತಿರುವ ಕಷ್ಟಗಳ ಗುರು ಮುಖದೆ ಕೇಳ್ವ
ಗುರುತನದ ಗುರಿಗಾಗಿ ಇತ್ತೆನೇನಮ್ಮ
ಬಾ ಮಗಳೆ ಬಾ ಮಗಳೆ ಬಾ ಮಗಳೆ ಮನೆಗೆ
ಬಾರವ್ವ ಬೇಗದಿಂ ತೊರೆಯುತ್ತ ಸರೆಯ
೧೪
ಕಲೆಗಳಿಗೆ ನೆಲೆಯಾದ ಕುಲವಧೂಜನರ
ಕಲೆನೋಡಿ ಕುಲನೋಡಿ ಲಗುನವನು ಗೆಯ್ಯೆ
ಕುಲವು ಪಾವನವು ಮೇಣ್ ಸಂಸ್ಕೃತಿಯ ಸಿರಿಯ
ಕೊಲೆಯಾಗದುಳಿಯುವದು ನೆಲದಲ್ಲಿ ಬಲಿತು
ಬಾ ಮಗಳ ಬಾ ಮಗಳೆ ಬಾ ಮಗಳೆ ಮನೆಗೆ
ಬಾರವ್ವ ಬೇಗದಿಂ ಕಂದವ್ವ ನೀನು
೧೫
ಕೆರೆಬಾನಿ ಕಟ್ಟೆಗಳ ತಿಳಿದೆಲ್ಲ ನೋಡಿ
ಪಿರಿದಾದ ಹರಣವನು ತೊರೆಯಲ್ಕೆಯೆಳಸಿ
ಕರುಣಾಳು ದೇವಂಗೆ ಮೊರೆಯಿಟ್ಟು ನೀನು
ಸೆರೆಯಾಳು ತನದಿಂದ ಮರೆಯಾದೆಯೇನೆ
ಬಾ ಮಗಳೆ ಬಾ ಮಗಳೆ ಬಾ ಮಗಳೆ ಮನೆಗೆ
ಧರೆಯನ್ನು ಧರಿಸಿರುವ ದೊರೆಯ ಸಿರಿವನೆಗೆ
೧೬
ಬಂಧುಭಗಿನಿಯರೆಲ್ಲ ಬಿಕ್ಕುತ್ತಲಳಲೆ
ತಂದಿರ್ದ ತಾಯಮ್ಮ ಹಿಂದಾದ ಮಾತ
ಹೊದಿಸುತ ಹಲಬುತ್ತ ನೆಲವನ್ನೆ ಹಿಡಿಯೆ
ಬ೦ದಿರ್ದ ದಂದುಗವ ನೀಗಿಸುವರಾರೊ
ಬಾ ಮಗಳೆ ಬಾ ಮಗಳೆ ಬಾ ಮಗಳೆ ಮನೆಗೆ
ಧರೆಯನ್ನು ಧರಿಸಿರುವ ದೊರೆಯ ಸಿರಿವನೆಗೆ
೧೭
ಸಂಸಾರ ತಿರುವಿನಲ್ಲಿ ಸಿಲುಕಿರುವ ನಾನು
ಸಂಸಾರ ಸಾಗರವ ಸಾಹಸದೆ ದಾಂಟಿ
ತಿರೆಗಾಗಿ ತಂದಿರುವ ದೊರೆಯ ಚರಣವನು
ಪರಮ ಹರುಷದೆ ಸೇರಿ ಕಾಂಬೆ ನಾ ನಿನ್ನ
ಬಾ ಮಗಳೆ ಬಾ ಮಗಳೆ ಬಾ ಮಗಳೆ ಮನೆಗೆ
ಧರೆಯನ್ನು ಧರಿಸಿರುವ ದೊರೆಯ ಸಿರವನೆಗೆ
*****
Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...