ಬಲುದಿನಗಳಿಂದಿಡುತ ಅಷ್ಟಷಟ್ಪದಗಳನು
ಬೇಸರಾಯಿತು ಎಂದು ಹಿರಿಹೆಜ್ಜೆಗಳ ಹಾಕಿ
ಸಿರಿಗೆಜ್ಜೆ ಕುಣಿತದಲಿ ನಲಿಯುವೆನೊ! ಎಂದೆನಿಸಿ
ಬಂದು ನಿನ್ನಡಿಗೆರಗಿ ತಲೆವಾಗಿ ಕೈಮುಗಿದು
ನಿಂತಿಹೆನು. ಒರೆಯುವದು ನಿನ್ನ ಅರಸಾಣತಿಯ,
ನೀನಿತ್ತ ಗರಿಗಳನು ಚದರಿಸೆನೆ ದೆಸೆದೆಸೆಗೆ ?
ನೀನಿತ್ತ ಒಳಹಾಡುಗಳನೊಯ್ದು ಮುಗಿಲ ಕಿವಿ
ಚಳತುಂಬು- ಬೆಂಡೋಲೆಯಾಗಿ ಮಾಡೆನೆ ? ನಿನ್ನ
ಅಮರ ಕರಸಂಸ್ಪರ್‍ಶವಾಗೆ ಮೃಣ್ಮಯ ದೇಹ,
ನನ್ನ ಚಿನ್ಮಯ ಬುದ್ದಿ, ನನ್ನ ತನ್ಮಯ ಪ್ರಾಣ
ಚಿಗಿತಲರ್‍ತು ಮಲರುಮಲರಾಗದಿಹವೇ ? ಎಲರೆ!
ಬೀಸು ಮನಬಂದತ್ತ! ಸೃಷ್ಟಿ! ತೆರೆಯನು ಸರಿಸು.
ನಿನ್ನೊಲವು ತಿಳಿದತ್ತ! ಕಣ್ಣಾಗಿ ನಿಂತಿಹೆನು.
ಇಂದು ನನ್ನ ಕಣ್ಣು ಹೊಳೆವ ನೇಸರಗಣ್ಣು.
*****



















