-ಮೋಸದ ಜೂಜಾಟದಲ್ಲಿ ಪಾಂಡವರ ಸಂಪತ್ತಿನೊಂದಿಗೆ ದ್ರೌಪದಿಯನ್ನೂ ಗೆದ್ದ ದುರ್ಯೋಧನನು ಅಂದು ಮಯಸಭೆಯಲ್ಲಾದ ಅಪಮಾನಕ್ಕೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಪಾಂಚಾಲಿಯನ್ನು ಸಭೆಗೆ ಎಳೆದು ತರಿಸಿ, ಅವಳ ವಸ್ತ್ರಾಪಹರಣಕ್ಕೆ ಯತ್ನಿಸಿದ. ಆದರೆ ದ್ರೌಪದಿಯು ಜಾಣ್ಮೆಯಿಂದ ತಾನು ಸ್ವತಂತ್ರಳಾಗಿ, ಗಂಡಂದಿರ ಸ್ವಾತಂತ್ರ್ಯವನ್ನು ಮರಳಿ ಪಡೆಯುವುದರ ಜೊತೆಗೆ ಇಂದ್ರಪ್ರಸ್ಥ ಸಾಮ್ರಾಜ್ಯವನ್ನೂ ಹಿಂಪಡೆದಳು. ದುರ್ಯೋಧನನಿಗೆ ತನ್ನ ಸಂಚು ಅರ್ಧದಷ್ಟು ಫಲಿಸಿದ್ದು ಸಂತೋಷವೆನಿಸಿದರೂ ಪೂರ್ಣ ತೃಪ್ತಿಯಾಗಲಿಲ್ಲ. ಶಕುನಿಯ ಸೂಚನೆಯಂತೆ ಅವನು ಮತ್ತೊಂದು ಸಂಚು ಹೂಡಲು ನಿರ್ಧರಿಸಿದ-
ಪಾಂಡವರೆಲ್ಲರೂ ಕೌರವ ಬಲೆಯಲಿ ಸಿಲುಕಿಕೊಂಡಿರಲು ಆ ಹೊತ್ತು
ಪಾಂಚಾಲಿಯ ಜಾಣ್ಮೆಯ ತೋರಿದ್ದಳು, ಬಾಳಿನಲ್ಲಿ ಬೆಳಕಾಗಿತ್ತು
ಮಾತಿನಲ್ಲಿಯೇ ಮೋಡಿಯ ಮಾಡುತ ಹೆದರಿಸಿ ಕೌರವಕುಲವನ್ನು
ಮಾತಿನಲ್ಲಿಯೇ ತೋರ್ಪಡಿಸಿದ್ದಳು ತನಗಿರುವಂತಹ ಬಲವನ್ನು
ಸೋತು ಸುಣ್ಣವಾಗಿದ್ದ ಪತಿಗಳನು ಉಳಿಸಿಕೊಂಡು ಆ ಸಭೆಯಲ್ಲಿ
ಸೋತುದೆಲ್ಲವನು ಹಿಂಪಡೆದಿದ್ದಳು ಧೃತರಾಷ್ಟ್ರನ ಮನ ಗೆದ್ದಲ್ಲಿ
ಆದರೆ, ವೈರಿಯು ಹಂಗಿಸಿ ನುಡಿದರು ಹೆಣ್ಣಿನಿಂದ ಬದುಕಿದರೆಂದು
ಆಲಿಸಿ ಮಾತನು ಕೆರಳಿ ಪಾಂಡವರು ಸುಮ್ಮನೆ ನಡೆದರು ಮನನೊಂದು!
ದುರ್ಯೋಧನನೋ ಚಿಂತೆಯ ಮಾಡುತ ಕುಳಿತಿದ್ದಂತಹ ಸಮಯದಲಿ
ಒಂದೇ ಕ್ಷಣದಲಿ ತಂದೆಯು ಕೆಡಿಸಿದ ಅಂದುಕೊಂಡನವ ಮನಸಿನಲಿ
ಶಕುನಿ, ಕರ್ಣ, ದುಶ್ಯಾಸನರೆಲ್ಲರು ಹತ್ತಿರ ಬಂದರು ಮರುನಿಮಿಷ
ಏನೇ ಆಗಲಿ ಪಾಂಡುಕುಮಾರರು ನರಳುತಿರಬೇಕು ಪ್ರತಿದಿವಸ
ದುಷ್ಟಚತುಷ್ಟಯ ಚಿಂತನೆ ಮಾಡುತ ರೂಪಿಸಿದರೊಂದು ಯೋಜನೆಯ
ಧೃತರಾಷ್ಟ್ರನ ಬಳಿ ದುರ್ಯೋಧನನನು ಕಳುಹಿಸಿಕೊಟ್ಟರು ಆ ಸಮಯ!
ದುರ್ಯೋಧನ, ತಂದೆಯ ಬಳಿ ಬಂದನು ಜೋಲುಮುಖವನ್ನು ಧರಿಸುತ್ತ
ಕೃತಕತನದಿಂದ ನಡೆಯತೊಡಗಿದನು ವಿನಯವ ತೋರಿಸಿಕೊಳ್ಳುತ್
ಮೊದಲಿನ ಹಾಗೆಯೆ ನಟಿಸಿದ ಕೌರವ ತಂದೆಯ ಒಪ್ಪಿಗೆ ಪಡೆದಿದ್ದ
ಮಗನ ಮೇಲಿರುವ ಕುರುಡು ಪ್ರೇಮದಲಿ ರಾಜನು ತೆಪ್ಪಗೆ ಒಪ್ಪಿದ್ದ!
“ಮಗನೇ ನಿನ್ನಯ ಮಾತಿಗೆ ಒಪ್ಪಿದೆ ಮತ್ತೆ ನಡೆಸಿಕೋ ಜೂಜಾಟ
ನಿನ್ನ ಅಭ್ಯುದಯ ನನ್ನಯ ಏಳಿಗೆ ನಿನ್ನಿಷ್ಟದಂತೆಯೆ ನಿನ್ನಾಟ”
ಹಿಂದು ಮುಂದು ಆಲೋಚನೆ ಮಾಡದೆ ನುಡಿದನು ರಾಜನು ಮುದದಿಂದ
ತಂದೆಯು ಒಪ್ಪಿದ ಮೇಲಿನ್ನೇನಿದೆ ಕೌರವ ನಡೆದನು ಮದದಿಂದ
ರಾಜನ ಒಪ್ಪಿಗೆ ಸಿಕ್ಕಿದ ನಂತರ ಸುಮ್ಮನಿರಲು ಅವಲಕ್ಷಣವು
ಕೂಡಲೆ ದೂತನ ಕಳುಹಿಸಿಕೊಟ್ಟನು ಪಾಂಡವರಲ್ಲಿಗೆ ಮರುಕ್ಷಣವು
ಒಂದೇ ಏಟಿಗೆ ಎರಡು ಹಕ್ಕಿಯನ್ನು ಬೀಳಿಸಬೇಕೆನ್ನುತ ಅಂದು
ಅಂದೇ ಧರ್ಮನ ಬರಲು ಹೇಳಿದನು ಮರುಜೂಜನಾಡಲು ಎಂದು!
ಪಾಂಡವಾಗ್ರಜನ ಅವಿವೇಕಕ್ಕೆ ಜೂಜಾಡುವ ಆ ಮೋಹಕ್ಕೆ
ಕಳೆದುಕೊಂಡು ಸಾಮ್ರಾಜ್ಯವನೆಲ್ಲ ಧಕ್ಕೆಯಾಯ್ತು ಸ್ವಾತಂತ್ರ್ಯಕ್ಕೆ
ಜಾಣೆ ದ್ರೌಪದಿಯ ವಾಕ್ಚಾತುರ್ಯವು ಮರಳಿ ತಂದಿತ್ತು ರಾಜ್ಯವನು
ದಾಸರಾಗಿದ್ದ ಪತಿಗಳನೈವರ ದಾಸ್ಯ ಕಳೆದು ಸ್ವಾತಂತ್ರ್ಯವನು
ರಾಜನ ಆಜ್ಞೆಯ ಸೂಚನೆ ಮೇರೆಗೆ ಅಂದೇ ಹೊರಡಲು ಸಿದ್ಧತೆಯು
ರಾಜಸಭೆಯಲ್ಲಿ ಹೊರಡಿಸಿದಂತಹ ರಾಜಾಜ್ಞೆಗೆ ಕಟಿಬದ್ಧತೆಯು
ಆದರೆ ಧರ್ಮನಿಗೊಂದೇ ಚಿಂತೆಯು ತಾನು ಹಸ್ತಿನಾಪುರವನ್ನು
ಜೂಜಿನಲ್ಲಿಯೇ ಗೆಲ್ಲಲುಬೇಕಿದೆ ಇಲ್ಲದೆ ಹೋದರೆ ಫಲವೇನು?
ಹೆಂಗಸಿನಿಂದಲಿ ಬದುಕಿದರೆಂಬುವ ಅಪವಾದವ ಅಳಿಸಲುಬೇಕು
ಸೋದರರೆಲ್ಲರು ಒಪ್ಪಿಗೆಯಿತ್ತರು ಧರ್ಮಜನಿಗೆ ಅಷ್ಟೇ ಸಾಕು
ಅವರಿಗೆ ಹೆಂಗಸಿನಿಂದಲಿ ಬದುಕಿದೆವೆಂಬುದು ರುಚಿಸದೆ ಹೋಗಿತ್ತು
ಗಂಡಸರೆಂಬುವ ಅಹಂಭಾವದಲ್ಲಿ ಮೆರೆದರು, ಅವರಿಗೆ ಆಪತ್ತು!
‘ಅಂಚು ಕೊರೆದ ಹೊಸ ಗರಗಳ ಬಳಸುತ ಸಂಚು ಮಾಡಿದರು ಆ ಹೊತ್ತು
ಇಂದು ಬೇರೆಯೇ ಗರಗಳ ತರಿಸುತ ಗೆದ್ದುಕೊಳ್ಳುವೆನು ಸಂಪತ್ತು’
ಎಂದಾಲೋಚಿಸಿ ನಿಶ್ಚಯ ತಾಳಿದ ಧರ್ಮನು ಅಂದಿನ ದಿನದಂದು
ಊರಿಗೆ ಹೊರಡುವ ತಯಾರಿ ನಿಲ್ಲಿಸಿ ಕುಳಿತನು ನಿರ್ಧಾರಕ್ಕೆ ಬಂದು
ಕುಳಿತಲ್ಲಿಯೆ ಕಿರುನಿದ್ದೆಯು ಬಂದಿತು ಕಂಡನು ಧರ್ಮನು ಕನಸನ್ನು
ಕನಸಲಿ ಹಸ್ತಿನಪುರದರಮನೆಯಲಿ ಚಕ್ರವರ್ತಿಯಾಗಿರೆ ತಾನು
ಕೌರವರಾರೂ ಕಣ್ಣಿಗೆ ಕಾಣರು ಎಲ್ಲೆಡೆ ತನ್ನವರೇ ಎಲ್ಲ
ಆದರೆ, ಏನೋ ಸೂತಕದಂತಿದೆ ಅರಮನೆಯಲಿ ಕಳೆ ಇರಲಿಲ್ಲ
ಧರ್ಮನು ಕೂಡಲೆ ಕಣ್ಣನು ತೆರೆದನು ಏನಿದು ಇಂತಹ ಕನಸೇಕೆ
ಕನಸಲಿ ಕಂಡುದು ನನಸಾಗುವುದೆ? ಸಿಕ್ಕನು ಚಿಂತೆಯ ಸೆಳೆತಕ್ಕೆ!
ಇರುಳಲಿ ನೋಡಿದ ಬಾವಿಗೆ ಹಗಲಲಿ ಬೀಳುವುದೆಂದರೆ ಹೀಗೇನೆ
ಮರುಳರ ಮನವನು ಅರಿಯಲು ಆಗದು ಅಳತೆಗೆ ನಿಲುಕದ ಹಾಗೇನೆ
ದುರುಳರ ಉರುಳಿನ ಬಲೆಯಲಿ ಬೇಗನೆ ಸಿಲುಕಿಕೊಳ್ಳುವರು ಸುಲಭದಲಿ
ಮರಳುಗಾಡಿನಲಿ ನೀರನು ಅರಸುತ ತೆರಳಿದಂತೆಯೇ ಬದುಕಿನಲಿ
ಅಪರಾಹ್ನದಲ್ಲಿ ಹಸ್ತಿನಾಪುರದ ದೂತನು ಹೊರಟನು ವೇಗದಲಿ
ಉಪಕಾರವ ಮಾಡುವೆ ತಾನೆನ್ನುತ ಕುದುರೆಯನ್ನೇರಿ ಬೇಗದಲಿ
ಅಂದಿನ ದಿನವೇ ಇಂದ್ರಪ್ರಸ್ಥಕೆ ತೆರಳುವವರ ತಡೆವ ತೆರದಲ್ಲಿ
ಕಂಡು ಪಾಂಡವರ ಒಂದೇ ಉಸಿರಲಿ ನುಡಿದನು ಧರ್ಮನ ಬಳಿಯಲ್ಲಿ
“ಪಾಂಡವ ಕುಲಕ್ಕೆ ತಿಲಕದಂತಿರುವ ಧರ್ಮಮೂರ್ತಿ ದೊರೆಯೇ ನಿನಗೆ
ರಾಜ ಕಳುಹಿದನು ಆಮಂತ್ರಣವನ್ನು ದ್ಯೂತವನಾಡಲು ಈ ಘಳಿಗೆ”
ದೂತನು ಬಂದನು ಸುದ್ದಿಯ ತಂದನು ಮರುಜೂಜಿಗೆ ಬರಬೇಕೆಂದು
ಹಿರಿಯರೆಲ್ಲ ಒಪ್ಪಿಗೆ ಕೊಟ್ಟಿರುವರು ಎಂದನು ಧರ್ಮನ ಬಳಿ ಬಂದು
ರೋಗಿಯು ಬಯಸಿದ ವೈದ್ಯನು ನೀಡಿದ ಅಂತೆಯೇ ಧರ್ಮ ಸುಖದಿಂದ
ತಮ್ಮಂದಿರ ಜೊತೆ ಕೂಡಲೆ ಹೊರಟನು ಜೂಜಿನ ಮನೆಯೆಡೆ ಮುದದಿಂದ
ಹೆಣ್ಣಿನಿಂದ ಬದುಕಿದರಿವರೆಂಬುವ ಅಪವಾದವ ಅಳಿಸಲು ಎಂದು
ಧರ್ಮನು ತಳೆದನು ಅತಿ ವಿಶ್ವಾಸವ ಗೆದ್ದೇ ಗೆಲ್ಲುವೆ ತಾನೆಂದು!
ತಮ್ಮಂದಿರು ಬಿಡುವಿಲ್ಲದೆ ದುಡಿಯುತ ರಾಜ್ಯದ ಏಳಿಗೆಯಲ್ಲಿರಲು
ಧರ್ಮನು ಬಿಡುವಿನ ಸಮಯವನೆಲ್ಲ ಜೂಜಿನ ಆಟದಿ ಕಳೆದಿರಲು
ದೊರೆಯನು ಸೋಲಿಸಬಾರದು ಎನ್ನುತ ಎದುರಾಳಿಯು ಸೋಲುತ್ತಿದ್ದ
ತಾನೇ ಜಾಣನು ಎನ್ನುವ ತೆರದಲಿ ಧರ್ಮರಾಯ ಬೀಗುತ್ತಿದ್ದ
ಗೆದ್ದೂ ಗೆದ್ದೂ ಬೇಸರವಾಗಿರೆ ಸೋಲು ಬಯಸಿ ಆಡುತ್ತಿದ್ದ
ಆದರೂ ಅವನು ಗೆಲ್ಲುತಲಿದ್ದನು ಎದುರೇ ಇಲ್ಲೆಂದೆನುತಿದ್
ತನ್ನನು ಸೋಲಿಸುವವರೇ ಇಲ್ಲೆಂದೆನ್ನುತ ಬೀಗುತ ಮೆರೆದಿದ್ದ
ಜೂಜನಾಡುವುದು ಚಟವಾಗಿದ್ದಿತು ಬೇರೆಯ ಯೋಚನೆ ಮರೆತಿದ್ದ
ಆದುದರಿಂದಲೇ ಜೂಜೆಂದಾಕ್ಷಣ ಬೇಡೆಂದೆನ್ನದೆ ತೆರಳಿದ್
ಸರ್ವಸ್ವವನೂ ಕಳೆದುಕೊಂಡವನು ಬರಿಗೈಯಲಿ ತಾನುಳಿದಿದ್ದ!
ಮಡದಿಯು ನೆರವಿಗೆ ಬಂದಿರದಿದ್ದರೆ ಗುಲಾಮನಂತಿರಬೇಕಿತ್ತು
ಕಳೆದುಕೊಂಡು ಸ್ವಾತಂತ್ರ್ಯವನೆಲ್ಲರು ಅಲ್ಲಿಯೇ ಉಳಿಯಬೇಕಿತ್ತು
ಕೌರವ ಮರುಜೂಜಿಗೆ ಕರೆಕಳುಹಿಸೆ ನಗುತಲಿ ಹಿಂದಕೆ ಬಂದಿದ್ದ
ಒಂದೇ ಆಟವು ಎಂದು ಹೇಳಿರಲು ಜೂಜಿನ ಕಣದಲಿ ಕುಳಿತಿದ್ದ!
ಭೀಷ್ಮ, ದ್ರೋಣ, ಕೃಪ, ಅಶ್ವತ್ಥಾಮರು ಬೇಡೆಂದರು ಮರುಜೂಜನ್ನು
ಆದರೆ ಧೃತರಾಷ್ಟ್ರನು ಒಪ್ಪಿದ್ದನು ಆಡಿಬಿಡಲಿ ಇನ್ನೊಂದನ್ನು
ಆಟದೊಳೇನೋ ವಂಚನೆ ಇರುವುದು ವಿದುರನು ಸಂಶಯ ಹೊಂದಿದ್ದ
ಧರ್ಮನ ಇಷ್ಟಕೆ ಎಲ್ಲವ ಬಿಟ್ಟರೆ ಏನೋ ಎಂತೋ ಹೆದರಿದ್ದ
ಧೃತರಾಷ್ಟ್ರನು ಮೌನವ ತಾಳಿದ್ದನು ಮಗನಿಗೆ ಹೆದರುತ ಅವನಂದು
ಅವನಿಗೆ ತೋಚಿದ ಹಾಗೆಯೆ ಮಾಡಲಿ ಎಂದುಕೊಂಡ ಮನದಲಿ ನೊಂದು
ದುರ್ಯೋಧನ ಸರ್ವರ ಸಮ್ಮುಖದಲಿ ಪಂದ್ಯದ ಪಣವನು ಹೇಳಿದನು
ಸೋತವರಂತೂ ಚಾಚೂತಪ್ಪದೆ ಪಾಲಿಸಿ ಕರಾರು ಮಾಡಿದನು-
“ಸೋತವರಂದೇ ತೆರಳಲುಬೇಕಿದೆ ತಪ್ಪದೆ ಕಾಡಿಗೆ ವನವಾಸ
ವರುಷ ಹನ್ನೆರಡು ಕಳೆಯಲುಬೇಕಿದೆ ಕಾಡಿನಲ್ಲಿಯೇ ಪ್ರತಿದಿವಸ
ಹದಿಮೂರನೆ ಆ ವರ್ಷವೆಲ್ಲವೂ ಯಾರಿಗೂ ಗೊತ್ತಾಗದ ರೀತಿ
ವೇಷವ ಮರೆಯಿಸಿ ಬದುಕಿರಬೇಕಿದೆ, ತಪ್ಪಿ ನಡೆದರೆ ಅದೇ ನೀತಿ
ಮತ್ತೆ ಹನ್ನೆರಡು ವರುಷ ಕಾಡಿನಲಿ, ಮತ್ತೆ ಉಳಿದುಕೊಂಡಿರಬೇಕು
ಬಳಿಕ ಮತ್ತೊಂದು ವರುಷದ ಕಾಲ ಅಜ್ಞಾತವಾಸದೊಳಿರಬೇಕು”
ಧರ್ಮನು ಎಲ್ಲ ಷರತ್ತಿಗೆ ಒಪ್ಪಿದ ಗೆದ್ದೇ ಗೆಲ್ಲುವೆ ತಾನೆಂದು
ಕಂಡ ಕನಸನ್ನು ನೆನಪಿಸಿಕೊಂಡನು ಎದುರೇ ಇಲ್ಲ ತನಗಿನ್ನೆಂದು
ಅತಿಯಾದಂತಹ ವಿಶ್ವಾಸದಲ್ಲಿ ಬೀಗುತ ನುಡಿದನು ‘ಸರಿ’ ಎಂದು
ತನ್ನ ಕೈಚಳಕ ತೋರಿಸಿಕೊಡುವೆನು ಎಂದು ಕುಳಿತ ಕಣದಲ್ಲಂದು!
ಹೆಗಲೇರಿದ ಶನಿ ನಗುನಗುನಗುತಲಿ ಬಿಗಿಗೊಳಿಸಿದ್ದನು ಹಿಡಿತವನು
ಬಗೆಬಗೆ ರೀತಿಯ ಬೆರಗನು ಮೂಡಿಸಿ ಏರಿಸಿದನು ಎದೆಬಡಿತವನು
ಹಗಲಿನ ಸಮಯದಿ ತಾರೆಯ ತೋರಿಸಿ ಮನಸಿಗೆ ಮೋಡಿಯ ಮಾಡಿದನು
ಸೊಗಸಿನ ಮಾತುಗಳಾಡುತ ಆಳದ ಕತ್ತಲ ಕೂಪಕೆ ದೂಡಿದನು
ಎರಡೂ ಪಡೆಯವರುಸಿರು ಬಿಗಿಹಿಡಿದು ನಿಂತರಲ್ಲಿ ತುದಿಗಾಲಲ್ಲಿ
ಯುವರಾಜನಿಗೇ ಜಯವೆನ್ನುತ್ತಲಿ, ಕೌರವ ಪಡೆ ಕಾದಿತ್ತಲ್ಲಿ
ಧರ್ಮಕ್ಕೇ ಜಯ ಎನ್ನುವ ಮಂತ್ರವ ಜಪಿಸುತ ಪಾಂಡವ ಪಡೆಯಿತ್ತು
ಧರ್ಮನಿಗೇ ಜಯವಾಗಲಿ ಎನ್ನುತ ಭೀಷ್ಮ, ವಿದುರ ಪಡೆ ಬಯಸಿತ್ತು
ಸಭೆಯಲಿ ಸೂಜಿಯು ಬಿದ್ದರೆ ತಿಳಿಯುವ ತೆರದಲಿ ಮೌನವು ನೆಲೆಸಿತ್ತು
ಸಭಾಸದರು ಮಾತಾಡಿದರೇನೋ ಎಂದು ಕುಳಿತಿರಲು, ಬೇಸತ್ತು
ಬೇರೆಯ ದಾಳವ ತರಿಸಿದ ಧರ್ಮನು ತಾನೇ ದಾಳವನೆಸೆದಿದ್ದ
ಆದರೂ ವಿಧಿಯ ವಂಚಿಸಲಾಗದೆ ಆಗಲೂ ಧರ್ಮ ಸೋತಿದ್ದ!!
ದುರ್ಯೋಧನನೋ ಮೀಸೆಯ ತೀಡಿದ, ತುಟಿಯಂಚಿನಲ್ಲಿ ಕಿರುನಗೆಯು
ಶಕುನಿಯು ಅವನೆಡೆ ನೋಡುತ, ನಕ್ಕನು ಹೇಗಿದೆ ಎನ್ನುತ ಸಾಧನೆಯು
ಶಕುನಿಯ ಅಪ್ಪಿದ ಕುರುಯುವರಾಜನು ಧನ್ಯವಾದವನ್ನರ್ಪಿಸಿದ
ತಾಯಿಯ ಅಣ್ಣನ ಚಾಣಾಕ್ಷತೆಗೆ ಅಂತಿಮ ಜಯವ ಸಮರ್ಪಿಸಿದ!
ಧೃತರಾಷ್ಟ್ರನಿಗೋ ಮನದೊಳಗೊಳಗೇ ಸಂತಸದಲೆ ಮೂಡುತ್ತಿತ್ತು
ದುರ್ಯೋಧನನಿಗೆ ಎಲ್ಲಾ ದೊರಕಿತು ಎಂದು ಮನವು ಹಾಡುತ್ತಿತ್ತು
ಗಾಂಧಾರಿಗೆ ಸರಿಕಾಣದಿದ್ದರೂ ಸುಮ್ಮನೆ ಕುಳಿತಳು ಮೌನದಲಿ
‘ದಾಯಾದಿಗಳಲಿ ವೈರವು ಬಂದಿತು’ ಚಿಂತೆಮಾಡಿದಳು ಮನದಲ್ಲಿ
ಪಾಂಡವರೋ ತಲೆ ತಗ್ಗಿಸಿ ಕುಳಿತರು ಮುಂದೇನೆನ್ನುತ ಚಿಂತೆಯಲಿ
ದ್ರೌಪದಿ ಪತಿಗಳಿಗೊದಗಿದ ಸ್ಥಿತಿಗೆ, ನೊಂದಳು ಮನದಲಿ ಮರುಗುತಲಿ!
ದಾರಿಯಲಿ ನಡೆವ ಮಾರಿಯು ಮನೆಯೆಡೆ ಬಂದುಹೋಗೆಂಬ ತೆರದಲ್ಲಿ
ಕೋರಿಕೊಂಡು ತಮ್ಮವನತಿಯನ್ನು ಹೇರಿಸಿಕೊಂಡರು ಹೆಗಲಲ್ಲಿ
ಕೌರವಪಡೆಯೋ ಖುಷಿಯಲಿ ಕೂಗಿತು- `ಪಾಂಡವರಿಗೆ ವನವಾಸ ಗತಿ’
ಬೇರೆಯ ದಾರಿಯು ಇಲ್ಲೆಂದವರಿಗೆ ಅರಿವಾಗಿದ್ದಿತು ಪರಿಸ್ಥಿತಿ!
ಸಭೆಯಲಿದ್ದವರು ನೋಡುತಿದ್ದವರು ಅವರಿಗೆಲ್ಲ ಇದು ಅಯೋಮಯ
ಮರುಗತೊಡಗಿದರು- ‘ಕೇಡನು ಬಯಸದ ಪಾಂಡುಪುತ್ರರಿಗೆ ಅನ್ಯಾಯ!’
ಹಿರಿಯರು ಸೋಲನು ಒಪ್ಪದೆ ಕುಳಿತರು ಮೋಸವೆಂದು ಗೊಣಗಾಡಿದರು
ಪಾಂಡವರಿಗೆ ವನವಾಸವು ಎಂದರೆ ನಂಬಲು ಆಗದೆ ತಿಣುಕಿದರು
ಭೀಷ್ಮ, ದ್ರೋಣ, ಕೃಪರೆಲ್ಲ ಹೇಳಿದರು- “ದುರ್ಯೋಧನ ಇದು ತರವಲ್ಲ
ರಾಜ್ಯಕೋಶಗಳು ಭೋಗ ಭಾಗ್ಯಗಳು ಯಾವುವೂ ಇಲ್ಲಿ ಸ್ಥಿರವಲ್ಲ
ಪಾಂಡವರನು ವನವಾಸಕ್ಕೆ ಕಳುಹಿಸಿ ಅಲೆಯಿಸುವುದು ಒಳಿತೇನಲ್ಲ
ಅವರ ರಾಜ್ಯವನು ಅವರಿಗೆ ಕೊಡುವುದು ಉಚಿತವು ಎರಡನೆ ಮಾತಿಲ್ಲ”
ಕುರುಯುವರಾಜನು ಬಿರುಸಲಿ ನುಡಿದನು- “ನಮಗಾಗಿದ್ದರೆ ಈ ಸೋಲು
ಪಕ್ಷಪಾತಿಗಳು ನೀವೆಂದಾದರೂ ಬಡಿಯುತಲಿದ್ದಿರೆ ಕೈ ಕಾಲು
ಧರ್ಮವು ಜಯಿಸಿತು ಎನ್ನುತ ಎಲ್ಲರು ಮೆರೆಯುತಲಿದ್ದಿರಿ, ನಿಜ ತಾನೆ?
ಬಾಯಿಮುಚ್ಚಿ ನೀವೆಲ್ಲರು ಕುಳಿತಿರಿ ಎಲ್ಲ ನಡೆಯುವುದು ತಂತಾನೆ”
ಹಿರಿಯರೆಲ್ಲರೂ ನೋಡುತಲಿದ್ದರು ಮಾತೇ ಹೊರಡದೆ ಬಾಯಿಂದ
ತಲೆಗಳ ತಗ್ಗಿಸಿ ಕುಳಿತೇಬಿಟ್ಟರು ಸಹಿಸಲು ಆಗದ ನೋವಿಂದ!!
* * *
ಮಂಗಳ ಮೂರುತಿ ಗಜಮುಖ ಗಣಪತಿ ವಂದಿಪೆನಯ್ಯಾ ವಿನಾಯಕ
ಕವಿಮನದಲ್ಲಿನ ನುಡಿ ಸಾಲಾಗಿಸಿ ನುಡಿಸಿದೆ ನನ್ನಲಿ ಈ ತನಕ
ಲೀಲಾಮಯನೆ ಪಾರ್ವತಿ ತನಯನೆ ಕರುಣಾಮೂರುತಿ ಓ ಬೆನಕ
ನೀ ನುಡಿಸಿದ ನುಡಿಗಳು ಹಿತವಾಗಿವೆ ಮೂಡಿಸು ಮುಂದಿನ ಕಥಾನಕ
ನಿನ್ನಯ ಕಟಾಕ್ಷದಿಂದಲಿ ರಚಿಸಿದ ಹಸ್ತಿನಾವತಿಯ ಸಮಸ್ತವನು
ಮನಸಿಗೆ ಶಕುತಿಯ ನೀಡುತ ನಡೆಯಿಸು ಪರ್ವತಾರಣ್ಯವಾಸವನು
* * *
ಮುಂದಿನ ಭಾಗ : ಪರ್ವತಾರಣ್ಯ
*****