ಅವನ ಒಂದು ಮಾತಿಗೆ ಕಾಯುತಿದ್ದಾರೆ ಜನ
ಅವ ಮಾತ್ರ ಮಾತಾಡುವುದಿಲ್ಲ
ಭಿತ್ತಿಮುಖಿ
ತೀರ ಮೌನಿ
ಮಾತು
ಮಾತಾಡಿ ಆಗಿಲ್ಲವೇ ಸಾಕಷ್ಟು ಇಷ್ಟೂ ಕಾಲ
ಮಾತಾಡಿ ಕೊನೆ ಮುಟ್ಟಿದವರೇ ಇಲ್ಲ
ಮಾತು ಮಾತಿನ ನಡುವಣ ಶೂನ್ಯತೆಯಷ್ಟೆ
ಅರ್ಥಗರ್ಭಿತ
ಮೌನಕಣಿವೆಯ ಅಗಾಧತೆ
ಅಲ್ಲಿ ಮಾಯವಾದವರು ಹಲವು ಜನ
ಅಲ್ಲಲ್ಲಿ ತಂಗಿದರು ಕೆಲವು ಜನ
ದಾರಿ ಮಧ್ಯೆ ಹುಲ್ಲುಗಾವಲಿನ ಪಕ್ಕ ಅಥವ ಪಟ್ಟಣ
ಪ್ರದೇಶಗಳಲ್ಲಿ
ಸ್ಥಳೀಯ ಸ್ತ್ರೀಯರ ಸಂಪರ್ಕ ಬೆಳೆಸಿದರು
ಅವರ ಹೆಸರುಗಳಿಗೇ ಮುಗ್ಧರಾದರು
ಆಮೇಲೆ ಅವರು ಸಂತೆಯಲಿ ತಮ್ಮವರ ಕಂಡಾಗ ಕೂಡ
ಉಭಯ ಕುಶಲೋಪರಿ ಮುಜುಗರದ ವಿಷಯ
ಎಜ್ರಾನ ಮುಖ ಒಂದು ಅಳಿವೆಯೆನ್ನುತ್ತಾರೆ
ಎಜ್ರಾನ ಮುಖ ಒಂದು ಒಡೆದ ಗದ್ದೆಯೆನ್ನುತ್ತಾರೆ
ಹಲವು ರೇಖೆಗಳಿರುವುದು ನಿಜ ಅದರಲ್ಲಿ
ಏನು ನೋಡುತ್ತಾನೆ ಅವನು ಗೋಡೆಯಲ್ಲಿ
ನಮಗೇನೂ ಕಾಣಿಸುವುದಿಲ್ಲ
ಬಹುಶಃ ಅದೊಂದು ನಿಗೂಢ ಲಿಪಿಯಲ್ಲಿ ಬರೆದ ಪ್ರಾಕ್ತನ ಕವಿತೆ
ಬಹುಶಃ ಅವನಿಗೂ ಅರ್ಥವಾಗುವುದಿಲ್ಲ ಅರ್ಥವಾದರೂ
ಅಂತರ ಬಹಳ ನಮ್ಮ ನಡುವೆ
ಅವನು ನೋಡುವ ದಿಕ್ಕು ನಾವು ನೋಡುವ ದಿಕ್ಕು
ಒಂದೆ ಆದರೂ
ಕಾಣುವುದರಲ್ಲಿ ಬಹಳ ವ್ಯತ್ಯಾಸವಿದೆ
ಮೊದಲೇ ಬಂದ ಎಜ್ರಾ
ನಮ್ಮ ಮಿತ್ರ ಅಥವಾ ವೈರಿ
ನಮಗೆ ಮರೆತಿದೆ ಅವನೂ
ನೆನಪಿಸುವುದಿಲ್ಲ
*****

















