ಬರಬೇಕು ನಾ ನನ್ನೂರಿಗೆ
ಹಾಳೂರೊ ಮಾಳೂರೊ
ಏನಾದ್ರೂ ನನ್ನೂರೆ
ಮುರುಕು ಛಾವಣಿಗಳೊ
ಕೊರಕು ಕಲ್ಲೋಣಿಗಳೋ
ಏನಾದ್ರೂ ನನ್ನೂರೆ

ಅಲ್ಲೆಲ್ಲೋ ನನ್ನ ಜೀವ
ಅಲ್ಲೆಲ್ಲೋ ತುಸು ತೇವ
ನೆನಪಿನಂತೇನೊ ಯಾವ
ಇನ್ನೂ ಕಾಡುವ ಒಂದು ಭಾವ

ಗುಡ್ಡ ಬೆಟ್ಟವ ದಾಟಿ
ಇಳಿದು ಕಡಿದು ಹಾದಿ
ಮುಳ್ಳುಬೇಲಿ ಗಿಡ ಕಂಟಿ
ಇನ್ನೂ ಕೇಳಿಸುವ ಮಣಿಗಂಟಿ

ಅಲ್ಲೊಂದು ತೋಟ
ಅದಕೆಂಥ ಮಾಟ
ಇಂದ್ರ ಚಂದ್ರ ಸೋತ
ಪಾತರಗಿತ್ತಿ ದುಂಬಿ ಕಾಟ

ಅಬ್ಬಿ ನೀರಿನ ತಂಪು
ಸಸ್ಯರಾಶಿಯ ಸೊಂಪು
ಎಷ್ಟೊ ಕಾಲದ ನೆಂಪು
ಹೂಗಳ ಅದೇ ಕಂಪು

ನನ್ನ ಹೆತ್ತ ಅಮ್ಮನೊಡಲು
ಈಗಿಲ್ಲಿ ಹಿಡಿ ಮಣ್ಣು
ನನ್ನ ಗುರುತಿರುವ ಹೆಸರಿಡಿದು ಕರೆವ
ಯಾರೂ ಇಲ್ಲ

ಈ ಕೊಂಪೆಯಲೇ ನಾನು
ಮೊದಲು ಕಣ್ ತೆರೆದುದು
ಈ ಕೊಂಪೆಯಲೇ ನಾನು
ತೊದಲು ನುಡಿ ನುಡಿದುದು
ಇದುವೆ ನನ್ನಯ ಹಂಪೆ
ಇದುವೆ ನನ್ನಯ ರಾಜ್ಯ
ಇಲ್ಲೆಲ್ಲೊ ನನ್ನ ಈಗಿಲ್ಲದರಮನೆ
ಅರಮನೆ ನೆಲಮನೆ ಕನಸಿನ
ಗಾಳಿಮನೆ

ಎಲ್ಲವ ತೊರೆದು ನಾನೆಲ್ಲಿಗೆ ಹೋದೆ
ಎಲ್ಲವ ಬಿಟ್ಟು ನಾನೀಗ ಏನಾದೆ
ಕಾಲವ ಹಿಡಿದಿಡಲಾರೆ
ಹಿಂದೆ ಹೋಗಲು ಆರೆ

ಹಿಂದೆ ಹೋಗಲು ಆರೆ
ಮುಂದೆ ಹೋಗಲು ಆರೆ
ನಿಂತಲ್ಲೆ ನಿಂತಿರುವೆ ಶಿವನೆ
*****