ಬೆಳಗು ಮುಂಜಾವಿನ ಸಮಯ
ಸೂರ್‍ಯ ಹುಟ್ಟುವ ಮುನ್ನ
ಚುಮುಚುಮು ನಸುಕಿನಲಿ
ನೆಲದ ಅಂಗಳಕ್ಕೆ
ಪುಟ್ಟ ಪಾದಗಳ ಅಕ್ಷರ.
ಪ್ಲಾಸ್ಟಿಕ್ ಚೀಲ ಹೆಗಲಿಗೇರಿಸಿ
ಯುದ್ಧಕ್ಕೆ ಹೋರಟ ಯೋಧರು.
ತುತ್ತು ತುಂಬಲು ಪಯಣ
ತಿಪ್ಪೆ ಗುಂಡಿಗಳ ಕೆದಕಿ
ಹಸಿವು ನೀಗುವ ಬುತ್ತಿ ತರಲು
ಹೊತ್ತು ಮುಳುಗಿತ್ತು.
ಸೂರ್‍ಯನ ಸಾವಾಯ್ತು
ಚಿಮಣಿ ದೀಪದ ಬುಡ್ಡಿ
ಗುಡಿಸಲ ಕಣ್ಣು ಮಿಟುಕಿತ್ತು
ಒಲೆಗೆ ಬೆಂಕಿ ಬಿದ್ದಿಲ್ಲ
ಕಂದ ತಿರುಗಿ ಬಂದಿಲ್ಲ
ಅಲಾಯಿ ಕುಣಿದು ಬಂದ
ಆರೀಫನ ಗೋರಿಯ ಹೂ
ಇನ್ನೂ ನಳನಳಿಸುತಿದೆ
ಅವ್ವನ ಎದೆ ನಗಾರಿ
ದೂರದೂರದ ತನಕ
ಮಕ್ಕಳ ಬರುವಿನ ಸದ್ದಿಲ್ಲ
ಕಾಲದ ಪರಿವೆಯಿಲ್ಲ
ಮಳೆ, ಚಳಿ, ಗಾಳಿಗಳ
ಚಿಂತೆಯಿಲ್ಲ ಅವರ
ಆತ್ಮಸ್ಥೈರ್‍ಯಕೆ ಎಣೆಯಿಲ್ಲ
ಬಂದೇ ಬರುತ್ತಾರೆ ಅವರು
ಕಾಲಕ್ಕೆ ಕಸುವು ತುಂಬಲು
ಬಂದೇ ಬರುತ್ತಾರೆ
ಉತ್ಖನನಕಾರರು
ಪ್ರಾಚ್ಯ ಸಂಶೋಧಕರು
ಧರೆಯ ಮೇಲೆ
ಪುಟ್ಟ ಪಾದಗಳಿಂದ
ಅಕ್ಷರ ಬರೆಯುತ್ತಾರೆ.
*****



















