ಎನ್ನ ಬಾಳು ಮಾಯೆಯಲಿ
ಬೆರೆತು ಹುಸಿಯಾಗದಿರಲಿ
ಆ ಬದುಕಿನ ಆಳಕೆ ವಿಷಯ
ಬೆರೆತು ಕಸಿಯಾಗದಿರಲಿ

ಬತ್ತಿವೆ ಕಂಗಳ ಕಂಬನಿ
ಇಲ್ಲಿ ಬಾಡಿದೆನ್ನವದನ
ಸುತ್ತಿವೆ ಸ್ವಾರ್‍ಥಮದ ಜಂತು
ಮಾಡಿವೆನ್ನ ಅವರೋರ್‍ಧ

ನಿನ್ನ ಸಾಕ್ಷಾತ್ಕಾರ ಎನ್ನ
ಗಗನ ಕುಸುಮವಾಗದಿರಲಿ
ನಿನ್ನ ಕೃಪೆ ಸಾಗರ ಸುರಿಯದೆ
ಜೀವನ ಬರಡುವಾಗದಿರಲಿ

ನನ್ನೊಳಗೆ ಅಂತಃಕರಣಗಳು
ನಿತ್ಯ ಪುಟಿದೇಳುತ್ತಿವೆ
ಮತ್ತೆ ಬಣ್ಣದ ಕನ್ಸು ನೀಡದಿರು
ಎನ್ನ ಭಾವ ಹೇಳುತ್ತಿವೆ

ನಿನ್ನ ಪಡೆಯುವ ಆನಂದ
ಅದು ಅಮೃತಪಾನ
ಮತ್ತೆ ನಶ್ವರ ಚಂಚಲತೆ ಇಲ್ಲ
ಮಾಣಿಕ್ಯ ವಿಠಲನಧ್ಯಾನ
*****