ಜಾಜಿ ಮಲ್ಲಿಗೆ ಸೂಜಿ ಮಲ್ಲಿಗೆ
ನನ್ನ ಅತ್ತಿಗೆಯಿರುತಿದ್ದರೆ
ಮಾಲೆ ಕಟ್ಟಿ ನಿಮ್ಮ ಮುಡಿಗೇರಿಸುತಿದ್ದಳು
ನೀವಿಂತು ಬಾಡಲು ಬಿಡದೆ

ಗಂಗೆ ಗೌರಿ ಕಪಿಲೆ
ನನ್ನ ಅತ್ತಿಗೆಯಿರುತಿದ್ದರೆ
ಹುಲ್ಲು ನೀರಿತ್ತು ನಿಮ್ಮ ಹಸಿವಿಂಗಿಸುತಿದ್ದಳು
ನೀವಿಂತು ಕೂಗಲು ಬಿಡದೆ

ಬಂದುಹೋಗುವ ಅತಿಥಿಗಳೆ
ನನ್ನ ಅತ್ತಿಗೆಯಿರುತಿದ್ದರೆ
ಬಾಳೆಲೆಯಲಿ ಊಟ ಕೊಡುತಿದ್ದಳು.
ನೀವಿಂತು ಹಸಿಯಲು ಬಿಡದೆ

ಅಂಗಳದ ಗಿಡಗಳೆ
ನನ್ನ ಅತ್ತಿಗೆಯಿರುತಿದ್ದರೆ
ನಿಮ್ಮ ಕಾಲ ಬುಡಕೆ ನೀರೆರೆಯುತಿದ್ದಳು
ನೀವಿಂತು ಬಾಡಲು ಬಿಡದೆ

ನನ್ನತ್ತಿಗೆಯಿರುತಿದ್ದರೆ
ಕೈಬಳೆ ಖಣ ಖಣ
ನಗು ಮಾತು ಜೀವ ಸಂಸಾರ
ನನ್ನತ್ತಿಗಿಲ್ಲದೆ ಎಲ್ಲವೂ ಭಣ ಭಣ
ನಾನಿನ್ನು ನೆನೆಯಲಿ ಯಾರ
*****