Home / ಕವನ / ಕವಿತೆ / ತ್ಯಾವಣನಾಯಕ

ತ್ಯಾವಣನಾಯಕ

(೧)

ಇದೊ! ನನ್ನ ಸ್ಮತಿಪಧದಿ ಎಸದನೀ ನಾಯಕನ
ಹಾಳುಹಂಪೆಯಲಿರುವ ಮೂಲಗುಂಪೆಯನೊಂದ
ಶೋಧಿಸುತ ನಡೆದಿರಲು ಹಾಳು ದೇಗುಲವೊಂದ
ಕಂಡೆ ಜನರಗಿಯುತಿಹುದನು ಅವರ ಕಾಯಕವ-
ನೀಕ್ಷಿಸುತ ನಿಂತಿರಲು ಗುಡಿಯ ಕಲ್ಲಂಬದಡಿ-
ಗಿರುವ ಗುಹೆಯೊಂದರಲಿ ಓರ್‍ವ ವ್ಯಕ್ತಿಯ ಕಂಡೆ,
ಸುತ್ತುವರಿದಿರೆ ಜನರ ಸಂದಣಿಯು, ಏನೆಂಬೆ!
ಅಂಕುರಿಸಿತೆನ್ನೆದೆಯೊಳನುರಾಗದೊಂದು ಮಿಡಿ

ಆಗ ಬಂದಿತು ಮುಂದೆ ವ್ಯಕ್ತಿ ಮತ್ತೆಂದಿತದು!
ಮೂರು ಶತಮಾನದಾಚೆಗೆ ಜೀವಿಸಿದ ಬೊಂಬೆ-
ಯೆನಬೇಡಿ! ಮಾನಿಸನೆ ನಾನಿಹೆನು ಕಂದಿತದು
ವಿಜಯನಗರದ ವೆಂಪು ಆ ಬನಸಿರಿಯ ರೆಂಬೆ
ನಾನೊರ್‍ವನುಳಿದಿಹೆನು, ಅದರ ಸಂದೇಶವನು
ತಂದು ಮುಟ್ಟಿಸಲೆಂದು ನಿಮ್ಮ ಹೃದ್ದೇಶವನು!

(೨)

ತಾಳಿಕೋಟೆಯ ರಣದಿ ಕಣಕಣವು ಸಹ ಹೋಗಿ
ಸಾಮ್ರಾಜ್ಯವಳಿದಿರುವ ಪರಿಯ ನಾ ಧೇನಿಸಿದೆ
ನರಪತಿಯನುಳಿಸಲೆಂದತಿಯಾಗಿ ಹವಣಿಸಿದೆ
ಮಾಡಲೇನಹುದಿನ್ನು, ಕಾಲಬಂದಿರೆ ಮಾಗಿ
ಅಸಹಾಯನಾಗಿರಲು ಇಂಥ ವೇದನೆ ತಾಗಿ
ರಾಜಧಾನಿಗೆ ಮರಳಿ ಕ್ಲೇಶವನು ಗಮನಿನದ
ರಾಣಿವಾಸವನುಳುಹಿ ಕ್ಲೇಶವನು ಸಮನಿಸಿದೆ.
ಅಂದಿನಿಂದಿನ್ನುವರಗಿರುವೆ ನಾ ಬೈರಾಗಿ!

ವಿಜಯನಗರದಿ ಮೂರು ದಿನವು ನಡದಿಹ ಕೊಲೆಯ
ನೋಡಲೆಂದವಿತು ಕುಳಿತಿದ್ದೆ ನೆಲಮನೆಯೊಳಕೆ!
ಅಂತ ನಿಮ್ಮನು ನಾನು ಕಾಂಬುದಕೆ ಕಾರಣನು!
ಅದಕಂತೆ ಕಾಯ್ದು ಕೊಂಡಿದ್ದೆ ನನ್ನಯ ತಲೆಯ.
ಇನಿತು ದಿನವಿರಲಿಲ್ಲವೆನಗೆ ಜನತೆಯ ಬಳಕೆ!
ಇಂದು ನಿಂತಿಹೆ ಬಂದು ನಿಮ್ಮೆದುರು,-ತ್ಯಾವಣನು!

(೩)

ಅಡಗಿದೆನು ಮೂರು ದಿನವೀ ಗುಹಾಭಾಗದಲಿ,
ತುಂಗಭದ್ರೆಯು ಹರಿದು ರಕ್ತಾನುರಕ್ತೆಯಿರ,
ಯವನನೇನೆಗೆ ಯಮನ ಸೇವೆಯಾಸಕ್ತಿಯಿರ
ಬಾಳಿದೆನು ಬಲು ಬಳಲಿ ನಾ ಭೀತಿರೋಗದಲಿ
ಆ ಮೇಲೆ ಬಂದು ಸುತ್ತೆಲ್ಲ ದಿಟ್ಟಿಯ ಚೆಲ್ಲೆ
ಸೂರ್‍ಯಾಸ್ತವಾಗಿತ್ತು ವರರಾಜ ಹಸ್ತವದು
ರಾಜ್ಯರಮೆಗಿಹ ದುಕೂಲವ ಸೆಳೆಯೆ, ಗ್ರಸ್ತವದು
ಅಭಿಮಾನಧನವೆಂದು ಒರಲಿದಳು ಆ ನಲ್ಲೆ!

ವಿಜಯನಗರವದಂದು ಅಪಜಯನಗರವಾಗಿ
ಸುಖಕಿರುವ ನೆಲೆವೀಡು ದುಃಖದಾಗರವಾಗಿ
ಕೆನ್ನೀರು ಕಣ್ಣೀರು ನಿಲಲು ಸಾಗರವಾಗಿ,
ಮನದಿ ಮಲ್ಲಳಿಗೊಂಡೆ: ಎಲೆ! ಸ್ಮಶಾನವಿದೇನು?
ಕನ್ನಡದ ಮೈಸಿರಿಯು ಬತ್ತಲಾಗಿಹುದೇನು?
ಕೊನೆವರೆಗು ನಮ್ಮ ನಾಡಿನಲ್ಲಿ ದುರ್‍ಗತಿಯೇನು?

(೪)

ಇಂತಲ್ಲ ಹೊಸತೊಂದು ಸ್ಫೂರ್ತಿಯದು ಜನಿಸುವದು
ನಾಡಿನೊಳು, ಹೊಸತೊಂದು ಸಾಮ್ರಾಜ್ಯವೇಳುವದು
ಕನ್ನಡಕೆ ಹೃದಯವಿರುವನಕ ನೆರೆ ಬಾಳುವದು
ನಾಡ ಹಸುಮಕ್ಕಳಿಗೆ ಇದು ಕಾರ್‍ಯವೆನಿಸುವದು
ನಾಡಿನವರೆದೆಯಲ್ಲಿ ಹೊನ್ನಕ್ಕರದಿ ಬರದು
ಬಾಳುವರು ಕಬ್ಬಿಗರು, ತಮ್ಮ ಸಾಹಸಗಳನು
ಅವರ ಸುಖ ದುಃಖವನು, ಉಮ್ಮಳುಲ್ಲಸಗಳನು
ನೆನೆಯುವರು ನೆರೆನಾಡಿನವರು ತಮ್ಮನು ಮರೆದು

ಅದಕಂತ ಕರುನಾಡ ತುಂಬೆಲ್ಲ ಸಂಚರಿಸುವೆನು
ಹಿಂದಿನವರೆಸಕ ತಣಿಸದಿಹ ಬೆಂತರದಂತೆ
ಇಂದಿನವರನು ಕನಸಿನಲಿ ಹೋಗಿ ಹರಸುವನು
ಅವರೆದೆಯು ಪುಟಿಯುವದ ನೋಡಿ ತುಂತುರದಂತೆ
ಹಿಂದಿನಿರವನು ನೆನೆದು ಮುಂದಿಹುದ ಸ್ಮರಿಸುವೆನು
ಕಂಡುಬರುತಿಹುದೊಂದು ಯುಗ-ಯುಗಾಂತರದಂತೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...