ಮೇಲೆ ಅಲೆವ ಮುಗಿಲಿನೊಳಗೆ ಹೀಗೇನೇ ಒಮ್ಮೆ
ಸಂಧಿಸುವೆನು ನನ್ನ ವಿಧಿಯ ಎಂದು ನಾನು ಬಲ್ಲೆ.
ಕಾದುವವರ ಕೂಡ ನನಗೆ ಇಲ್ಲ ಯಾವ ಹಗೆತನ,
ಯಾರಿಗಾಗಿ ಕಾದುವೆನೋ ಅವರೊಳಿಲ್ಲ ಒಗೆತನ.
ಕಿಲ್ಟಾರ್‍ಟನ್ ಕ್ರಾಸ್ ಎನ್ನುವ ದೇಶ ನನ್ನ ನಾಡು
ಕಿಲ್ಟಾರ್ಟನ್ ಬಡವರ ಜೊತೆ ಹಂಚಿಕೊಂಡೆ ಪಾಡು.
ನನ್ನ ಸಾವಿನಿಂದ ಏನೂ ಹಾನಿ ಇಲ್ಲ ಜನರಿಗೆ
ಸಂತಸವೂ ಇಲ್ಲ ನನ್ನ ಸಾವಿನಿಂದ ಅವರಿಗೆ.
ಯಾವುದೊಂದು ನಿಯಮಕೂ ಕರ್‍ತವ್ಯದ ಜ್ಞಾನಕೂ
ಹೋರಾಡುವನಲ್ಲ ಯಾವ ಗುಂಪಿನ ಪ್ರೋತ್ಸಾಹಕೂ;
ಥಟ್ಟನುಕ್ಕಿ ಬಂದ ಒಂದು ಯಾವುದೊ ಸುಮ್ಮಾನಕೆ
ಸಿಕ್ಕಿ ಬಂದೆ ಮುಗಿಲಿನೊಳಗೆ ಈ ಸಂಭ್ರಮಯಾನಕೆ.
ಹಿಂದೆ ಸಂದ ವರ್‍ಷಗಳು ವ್ಯರ್‍ಥಬಾಳು ಎನ್ನಿಸಿ,
ಮುಂದೆ ಬರುವ ವರ್‍ಷಗಳೂ ವ್ಯರ್‍ಥಕಾಲ ಎನ್ನಿಸಿ,
ಬಂದ ಎಲ್ಲ ಚಿಂತಿಸಿ, ಲೆಕ್ಕಾಚಾರ ತೂಗಿಸಿ
ಈ ಬಾಳಿನ ಜೊತೆಗೆ ಈ ಸಾವನು ಸರಿತೂಗಿಸಿ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಏಟ್ಸನ ಜನಪ್ರಿಯ ಕವನಗಳಲ್ಲಿ ಒಂದು. ಇಲ್ಲಿಯ ಐರಿಷ್ ವೈಮಾನಿಕ ಲೇಡಿ ಗ್ರೆಗರಿಯ ಮಗನಾದ ಮೇಜರ್ ರಾಬರ್‍ಟ್ ಗ್ರೆಗರಿ.