ಶರತ್ಕಾಲದ ಚೆಲುವ ಹೊದ್ದು ನಿಂತಿವೆ ಮರ
ಕಾಡುದಾರಿಗಳೆಲ್ಲ ಒಣಗಿವೆ;
ಕಾರ್‍ತಿಕದ ಸಂಜೆಬೆಳಕಲ್ಲಿ ಮಿಂಚುವ ನೀರು
ಶಾಂತ ಆಗಸವನ್ನು ಪ್ರತಿಫಲಿಸಿದೆ;
ಬಂಡಗಳ ನಡುವೆ ಮಡುನಿಂತ ನೀರಿನ ಮೇಲೆ
ಐವತ್ತೊಂಬತ್ತು ಹಂಸ ತೇಲಿವೆ.

ನಾನು ಮೊದಲೆಣಿಕೆ ಮಾಡಿದ್ದು ನೆನಪಿದೆ, ಅದು
ಹತ್ತೊಂಬತ್ತು ಶರದೃತುಗಳಷ್ಟು ಹಿಂದೆ.
ಕಂಡೆ, ಇದೊ ಎಣಿಸಿಯೇ ಬಿಟ್ಟೆ ಎನ್ನುವ ಮುಂಚೆ
ಥಟ್ಟನೇರಿ ಸವಾರಿ, ಹಾರಿಬಿಟ್ಟವು ಅಂಚೆ,
ಮೊರೆವ ರೆಕ್ಕೆಯ ಬೀಸಿ ಮುರಿದ ಬೃಹದಾಕಾರ
ವೃತ್ತ ಚಿತ್ರಗಳಾಗಿ ಹರಡಿ.

ಪರಿಭಾವಿಸಿದ್ದೆ ಆ ಉಜ್ವಲ ಜೀವಿಗಳ ಹಿಂದೆ
ಘಾಸಿಗೊಂಡಿದೆ ಈಗ ಹೃದಯ.
ಮೊದಲ ಸಲ ಸಂಜೆಬೆಳಕಲ್ಲಿ ಈ ದಡದಲ್ಲಿ
ನಿಂತು ತಲೆಮೇಲೆ
ಹಕ್ಕಿ ರೆಕ್ಕೆಯ ಗಂಟೆಬಡಿತ ಆಲಿಸಿ, ಆಹ!
ನಡೆದಿದ್ದೆ ಹಗುರಾಗಿ ಆಗ,
ಎಲ್ಲ ಬದಲಾಗಿದೆ ಈಗ

ದಣಿಯದಿವೆ ಈ ಪ್ರಣಯ ಜೋಡಿಗಳು ಈಗಲೂ
ಸ್ನೇಹ ಶೀತಳ ತರಂಗಿಣಿಯ ಬಗೆದೀಜುತ್ತ,
ಗಾಳಿಯಲ್ಲೇರುತ್ತ,
ಮುಪ್ಪು ಹೃದಯಕ್ಕೆ ಎಂದೆಂದೂ ತಾಗದಿರುತ್ತ;
ಎಲ್ಲಿ ಹಾರಲಿ ಅವು, ಆರದಿವೆ ಅವಕ್ಕೆ ರತಿಯುದ್ರೇಕ ಇಲ್ಲವೇ
ಗೆದ್ದು ಮೀರುವ ತವಕ,
ನಿಂತ ನೀರಿನ ಮೇಲೆ ಶಾಂತ ತೇಲಿವೆ ಹಕ್ಕಿ
ಏನು ಮೋಹಕ, ಎಷ್ಟು ಗೂಢ!
ಮುಂದೆಂದೊ ಒಂದು ದಿನ ಈ ಹಂಸ ಸಂಕುಲ
ಹಾರಿಹೋಯಿತೆ ಎಂದು ಚಿಂತಿಸುವ ಹೊತ್ತಲ್ಲಿ
ಯಾವ ಕೊಳದಲ್ಲಿ ಸರೋವರದ ತಡಿಯಲ್ಲಿ
ಯಾವ ಜೊಂಡುಗಳಲ್ಲಿ ತಂಗಿರುವುದೋ ಇದು
ಯಾರ ಕಣ್ಣಿಗೆ ಹಬ್ಬವಾಗಿ ನಲಿದಿರುವುದೋ!
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಕೂಲೆ ಉದ್ಯಾನ ಲೇಡಿ ಗ್ರೆಗರಿಯ ಮನೆಗೆ ಸೇರಿದ್ದು. ಏಟ್ಸ್ ಅಲ್ಲಿಯ ಕೊಳದಲ್ಲಿ ಹಂಸದ ಹಿಂಡೊಂದನ್ನು ನೋಡುತ್ತಾನೆ. ಹತ್ತೊಂಬತ್ತು ವರ್‍ಷಗಳಷ್ಟು ಹಿಂದೆ ಅಲ್ಲಿಯೇ, ಅಂಥದೇ ದೃಶ್ಯವನ್ನು ನೋಡಿದ್ದು ಅವನಿಗೆ ನೆನಪಾಗುತ್ತದೆ. ಆಗ ಅವನು ಯುವಕನಾಗಿದ್ದ; ಪ್ರೇಮದಲ್ಲಿದ್ದ; ಕುಣಿಯುವ ಹೃದಯ ಹೊತ್ತು ನಡೆದಿದ್ದ. ಈಗ ಅವನ ಮೇಲೆ ಕಾಲ ದಾಳಿಮಾಡಿದೆ, ಪ್ರೇಮ ಭ್ರಮೆಯೆನಿಸಿ ಕುಸಿದಿದೆ, ಹೃದಯ ಭಾರವಾಗಿದೆ. ಹಂಸಗಳು ಮಾತ್ರ ಆಗಿನಷ್ಟೇ ಚೆಲುವಾಗಿ, ಚುರುಕಾಗಿ, ಸಡಗರದ ಜೋಡಿಗಳಾಗಿ ಉಳಿದಿವೆ.