ದಿಕ್ ದಿಕ್ಕಿಗೂ ಹಬ್ಬಲಿ ಕನ್ನಡದ ಕೀರುತಿ
ಕನ್ನಡ ಭುವನೇಶ್ವರಿಗೆ ಬೆಳಗಲೆಂದು ಆರತಿ
ಸಹ್ಯಾದ್ರಿಯ ಕೋಗಿಲೆಯು ಮೈದುಂಬಿ ಹಾಡಿರೆ
ಬೇಲೂರಿನ ಬಾಲೆಯರು ಮೈಮರೆತು ಕುಣಿದಿರೆ
ಬೆಳ್ಗೊಳದ ಗೊಮ್ಮಟನು ವಿಸ್ಮಯದಿ ನಿಂತಿರೆ
ಕನ್ನಡಿಗನ ಕೊರಳಲ್ಲಿ ಈ ಹಾಡು ಉಲಿದಿದೆ
ಮಲೆನಾಡಿನ ಮಾದೇವಿ ಹಸಿರುಟ್ಟು ನಲಿದಿರೆ
ಕೊಡಗಿನ ಕಾವೇರಿಯು ಜುಳುಜುಳನೆ ಹರಿದಿರೆ
ಕವಿಯಂತರಂಗದಿ ಸ್ಫೂರ್ತಿ ಚಿಲುಮೆ ಮಿನುಗಿರೆ
ಸಾಹಿತ್ಯ ಹೊನಲಾಗಿ ಕನ್ನಡದೇ ಹರಿದಿದೆ
ನೃಪತುಂಗ ಮಲ್ಲಮ್ಮರು ಪೌರುಷದಿ ಮೆರೆದಿರೆ
ವಿಜಯನಗರ ಕಿತ್ತೂರು ಇತಿಹಾಸವ ಬೆಳಗಿರೆ
ಚಿತ್ರದುರ್ಗದಾ ಕೋಟೆ ವೀರಗೀತೆ ಹಾಡುತಿರೆ
ಕನ್ನಡಿಗರ ಹೃದಯದಲಿ ರಣಕಹಳೆ ಮೊಳಗಿದೆ
ಸಂಗೀತ ಸಾಹಿತ್ಯ ಕನ್ನಡಕೇ ಒಲಿದಿರೆ
ತ್ಯಾಗ ಪ್ರೀತಿ ಶೌರ್ಯವು ಈ ನೆಲದೆ ತುಂಬಿರೆ
ಚೆಲುವಿನ ಸಿರಿನಿಧಿ ಕನ್ನಡದೇ ಅಡಗಿದೆ
ವಿಶ್ವದಾತೆ ಕೊರಳಲ್ಲಿ ಮಾಲೆಯಾಗಿ ಬೆಳಗಿದೆ
*****