ಇದ್ದು ಬಿಡಬೇಕು
ನಿನ್ನಂತೆ
ಇದ್ದರೂ ಇರದಂತೆ
ನಿತ್ಯ ನೆರೆದರೂ ಸಂತೆ
ಇಲ್ಲ ಚಿಂತೆ!

ಬಿಸಿಲು ಮಳೆ ಚಳಿಗಾಳಿಗೆ
ಹಿಗ್ಗದೇ ಕುಗ್ಗದೇ
ಎಲ್ಲಿಯೂ ಲೆಕ್ಕಕ್ಕೆ ಸಿಗದೇ
ಯಾರಿಗೂ ವೇದ್ಯವಾಗದೇ
ಇದ್ದು ಬಿಡಬೇಕು
ನಿನ್ನಂತೆ
ಇದ್ದರೂ ಇರದಂತೆ.

ಅದೆಷ್ಟು ತರಹೇವಾರಿ
ಹಸಿಬಟ್ಟೆಗಳು ನಿತ್ಯವೂ
ನಿನ್ನ ಮೇಲೇರಿ
ಕೆಳಗಿಳಿದು
ಒಣಗೊಣಗಿ ಮಡಿಯಾಗಿ
ರಾಜಠೀವಿಯಲಿ ಮೆರೆದವೋ
ಕೃತಜ್ಞತೆ ಎಂದವೇ?
ಇಲ್ಲವೆಂದು ನೀನೊಂದೆಯೆ?

ನಿತ್ಯ ಹಸಿಬಟ್ಟೆಗಳ ಹೇರಿಕೊಂಡು
ಒಂದಿಷ್ಟೂ ಗೊಣಗದೇ
ಒಣಗೊಣಗಿಸಿ ನೀಡಿಯೂ
ತಟಸ್ಥವಾಗಿ ನಿಂತ ತಂತಿಯೇ
ಇದ್ದು ಬಿಡಬೇಕು
ನಿನ್ನಂತೆ
ಇದ್ದರೂ ಇರದಂತೆ!
*****