ಕಡಲೇ ಒಮ್ಮೊಮ್ಮೆಯಾದರೂ ಬಾ

ಹೀಗೆ ಒಮ್ಮೊಮ್ಮೆಯಾದರೂ
ಎಲ್ಲ ಮಿತಿಗಳ ಮೀರಿ
ನನ್ನೆದೆಯ ದಡಕೆ
ಅಪ್ಪಳಿಸು ಬಾ ಕಡಲೇ.

ಶತಶತಮಾನಗಳಿಂದ
ಕಾದು ಕೆಂಡವಾಗಿರುವ
ನನ್ನೆದೆಯ ಸುಡುಮರಳ
ಕೊಂಚ ತಂಪಾಗಿಸಿಕೊಳ್ಳುತ್ತೇನೆ.

ನೀ ಹೊತ್ತು ತರುವ
ಕುಳಿರ್ಗಾಳಿಗೆ ಒಮ್ಮೆಯಾದರೂ ಅರಳಿ
ಮತ್ತೊಮ್ಮೆ ಪಕ್ಕಗಳಲ್ಲಿ
ಸಾಧ್ಯತೆಗಾಗಿ ಹೊರಳುತ್ತೇನೆ.

ನಿನ್ನೆದೆಯಲಿ ಮುಳುಗುವ
ನಿನ್ನದೆಯಿಂದ ಮೂಡುವ
ಹುಚ್ಚು ಸೂರ್ಯನ ಕಣ್ತುಂಬ ಹೀರಿ
ಹೊಸ ಭರವಸೆಗಳೊಂದಿಗೆ ಕಣ್ತೆರೆಯುತ್ತೇನೆ.

ನೀ ಅಪ್ಪಳಿಸಿದ ರಭಸಕೆ
ಎದ್ದ ಅಲೆಗಳಲಿ ನಾ
ಕಳೆದುಕೊಂಡದ್ದನ್ನೆಲ್ಲಾ
ಮತ್ತೆ ಹುಡುಕುತ್ತೇನೆ.

ನಿನ್ನ ವಿಸ್ತಾರಗಳ ಕಂಡು
ಧನ್ಯಳಾಗುತ್ತಾ ಪುಳಕಗೊಂಡು
ನನಗೆ ನಾನು ಅರ್ಥವಾಗುತ್ತೇನೆ
ಕಲ್ಲು ನಾ ಚಿಗುರುತ್ತೇನೆ.

ನಿನ್ನ ಉಪ್ಪುಪ್ಪು ನೀರಿನಲಿ
ಗಾಢ ಬಣ್ಣಗಳ ಮಾಡಿ
ಈ ತಟಸ್ಥ ಬದುಕಿಗೆರಚಿಕೊಳ್ಳುತ್ತೇನೆ
ಕೆಲಕ್ಷಣಗಳಾದರೂ ನಾನೂ ಕಡಲಾಗುತ್ತೇನೆ!
*****

ಕೀಲಿಕರಣ : ಎಮ್ ಎನ್ ಎಸ್ ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉದ್ದನ್ನವರ ಮುಂದೆ ಕೀರ್ತನ
Next post ಮೆಂಟ್ಲು ಕೇಸು ಬಳ್ಳಾರಿ ರೆಡ್ಡಿನಾ? ಯಡ್ಡಿನಾ? ಕುಮ್ಮಿನಾ?

ಸಣ್ಣ ಕತೆ