ಬೀಗರ ಹಾಡು

ಸರಕ್ಕ ಸರಿತಲ್ಲ ಬೀಗರ ಸುರಪ್ಪ ತಿಳಿತಲ್ಲ ||ಪ||

ಆನೀ ಬರತಾವಂತ ಆರಽ ಭಣವೀ ಕೊಂಡ|
ಆನೆಲ್ಲಿ ನಿನ್ಮು ದಳವೆಲ್ಲಿ | ಸರಕ್ಕ ||೧||

ಆನೆಲ್ಲಿ ನಿಮ್ಮ ದಳವೆಲ್ಲಿ ಬೀಗಾ|
ಬೋಳ್ಹೋರಿ ಮ್ಯಾಲ ಬರತಾರ | ಸರಕ್ಕ ||೨||

ಒಂಟೀ ಬರತಾವಂತ ಎಂಟಽ ಭಣವೀ ಕೊಂಡ|
ಒಂಟಿಲ್ಲಿ ನಿಮ್ಮ ದಳವೆಲ್ಲಿ | ಸರಕ್ಕ ||೩||

ಒಂಟಿಲ್ಲಿ ನಿಮ್ಮ ದಳವೆಲ್ಲಿ ಬೀಗಾ|
ಕುಂಟ್ಹೋರಿ ಮ್ಯಾಲ ಬರತಾರ | ಸರಕ್ಕ ||೪||

ಬೀಗೂತೊಳ್ಳೆವಳಂತ ದೇವರಮನಿ ಕೊಟ್ಟ|
ದೇವಽರ ಕದ್ದಾಳ ಬಗಲಾಗ | ಸರಕ್ಕ ||೫||

ಬೀಗೂತೊಳ್ಳೆವಳಂತ ಅಡಗೀಯ ಮನಿ ಕೊಟ್|ಟ
ಹೋಳೀಗಿ ಘಳಿಗಿ ಬಗಲಾಗ | ಸರಕ್ಕ ||೬||

ಹೋಳೀಗಿ ಘಳಿಗಿ ಬಗಲಾಗ ಅವರಣ್ಣ|
ನೀಡ್ಲಿಕ್ಕಿಲ್ಲಂದು ಕಸಗೊಂಡ | ಸರಕ್ಕ ||೭||

ಬೀಗೂತೊಳ್ಳೇಕಂತ ಅಡಗೀಯ ಮನಿ ಕೊಟ್ಟ|
ಬಾನಾದ ದುರುಡಿ ಬಗಲಾಗ | ಸರಕ್ಕ ||೮||

ಬಾನೂಅದಽ ದುರುಡಿ ಬಗಲಾಗ ಅವರಣ್ಣಾ|
ನೀಡ್ಲಿಕ್ಕಿಲ್ಲಂತ ಕಸಗೊಂಡ | ಸರಕ್ಕ ||೯||

ಎಲ್ಲಾರು ಕಟ್ಟ್ಯಾರ ಮಲ್ಲಿಗ್ಹೂವಿನ ದಂಡಿ|
ಬೀಗೂತಿ ಕಟ್ಟ್ಯಾಳ ಹುಲ್ಹೊರಿಯ |ಸರಕ್ಕ ||೧೦||

ಬೀಗೂತಿ ಕಟ್ಟ್ಯಾಳ ಹುಲ್ಹೊರಿ ಅವರಣ್ಣಾ|
ಕುದರೀಗಿಲ್ಲಂದು ಕಸಗೊಂಡ | ಸರಕ್ಕ ||೧೧||

ಎಲ್ಲಾರು ಕಟ್ಟ್ಯಾರ ಗುಳ್ಳಬ್ಯಾಳೀ ಮಣಿ|
ಬೀಗೂತಿ ಕಟ್ಟ್ಯಾಳ ಕೈಪಾಳಿ | ಸರಕ್ಕ ||೧೨||

ಬೀಗೂತಿ ಕಟ್ಟ್ಯಾಳ ಕೈವಾಳಿ ಅವರಣ್ಣಾ|
ಬಳಸಲಕಿಲ್ಲಂತ ಕಸಗೊಂಡ | ಸರಕ್ಕ ||೧೩||

ಒಂದ ಅಡಕೀ ಒಡೆದು ಒಂಬತ್ತು ಮದುವಿ ಮಾಡಿ|
ಇಂದೀನ ಖರ್ಚ ಬಲು ಖರ್ಚ | ಸರಕ್ಕ ||೧೪||

ಇಂದೀನ ಖರ್ಚ ಬಲು ಖರ್ಚ ಬೀಗಾ|
ಖಂಬಽದ ತೆಕ್ಕಿ ಬಿಡವಲ್ಲ | ಸರಕ್ಕ ||೧೫||

ಒಂದಽ ಎಲಿಽ ಹರಿದು ಒಂಬತ್ತು ಮದಿವಿಮಾಡಿ|
ನಿನ್ನೀನ ಖರ್ಚ ಬಲು ಖರ್ಚ | ಸರಕ್ಕ ||೧೬||

ನಿನ್ನೀನ ಖರ್ಚ ಬಲು ಖರ್ಚ ಬೀಗಾ|
ಹಂದಽರ ತೆಕ್ಕಿ ಬಿಡವಲ್ಲ| ಸರಕ್ಕ ||೧೭||

ಹಂದಾವೂರದಾಗ ಮಂದಿ ಬಂದು ಎಟ್ಟೊತ್ತಾಯ್ತು |
ಕಂಬಳಿಲ್ಲೇನ ಇವರಲ್ಲಿ| ಸರಕ್ಕ ||೧೮||

ಕಂಬಳಿಲ್ಲೇನ ಇವರಲಿ ಬೀಗುತಿ|
ಕಂಬ್ಳಿಗ್ಹೋಗ್ಯಾಳ ಮನಿ ಮನಿ | ಸರಕ್ಕ ||೧೯||

ಹಂದರಽದಾಗ ಮಂದಿ ಬಂದೆಟ್ಟೊತ್ತಾಯ್ತು|
ಕೂಕಂ ಇಲ್ಲೇನ ಇವರಲ್ಲಿ | ಸರಕ್ಕ ||೨೦||

ಕೂಕಂ ಇಲ್ಲೇನ ಇವರಲ್ಲಿ ಬೀಗುತಿ|
ಕೂಕಮ್ಮಿಗ್ಹೋಗ್ಯಾಳ ಅಂಗಡೀಗಿ | ಸರಕ್ಕ ||೨೧||

ಆಚ್ಛೀಕ ಹೊಲಗೇರಿ ಇಚ್ಚೀಕ ಮಾದರಗೇರಿ|
ನಟ್ಟನಡಬರಕ ಶಿನಪೂಜೆ | ಸರಕ್ಕ ||೨೨||

ನೆಟ್ಟಽನಡೆಬರಕ ಶಿನವೂಜೆ ಆಗಟಿಗೆ|
ನಾಲತ್ತ ನಾಯಿ ಬೊಗಳ್ಯಾವ | ಸರಕ್ಕ ||೨೩||
*****

“ಹೊಳೆ ದಾಟಿದ ಮೇಲೆ ಅಂಬಿಗರ ಮಿಂಡ” ಎನ್ನುವಂತೆ, ಲಗ್ನದ ಮುಖ್ಯ ವಿಧಾನಗಳೆಲ್ಲ ಮುಗಿದ ಮೇಲೆ, ಮದುಮಕ್ಕಳ ಮೆರವಣಿಗೆ ಹೊರಟ ಕಾಲಕ್ಕೆ ಬೀದಿಯಲ್ಲಿ ಎರಡೂ ಕಡೆಯ ಬೀಗರ ಪಕ್ಷದಿಂದ ಹೆಣ್ಣುಮಕ್ಕಳು ಎರಡು ತಂಡಗಳಾಗಿ ಒಬ್ಬರನ್ನೊಬ್ಬರು ಅಪಹಾಸ್ಯಮಾಡುತ್ತಾರೆ. ಅದರ ಮೂಲಕ ಆಗಿನ ಮಟ್ಟಿಗೆ ಕದನಗಳೂ ಆಗುತ್ತವೆ. ನಮಗೇನೋ ಇಂತಹ ಮಾತು ಅಸಹ್ಯಕರವಾಗಿ ಕಾಣುವುದು ಸಹಜ. ಆದರೆ ಜೀವನದ ಸರ್ವ ಅಂಗಗಳನ್ನೂ ಒಳಗೊಂಡ `ಭೂಮಾ’ಪೂಜಕರಾದ ಪ್ರಾಚೀನರು ಈ ತರಹದ ನಗೆಚಾಟಿಕೆಗೂ ತಕ್ಕ ಸ್ಥಾನವನ್ನೇ ಕೊಟ್ಟದ್ದಾರೆಂದು ತೋರುತ್ತದೆ.

ಛಂದಸ್ಸು:- ತ್ರಿಪದಿ.

ಶಬ್ದಪ್ರಯೋಗಗಳು:- ಸರಕ್ಕ ಸರಿತಲ್ಲ=ಕಾರ್ಯವೆಲ್ಲ ಸರಕ್ಕನೆ ಮುಗಿಯಿತಲ್ಲ. ಸುರಪ್ಪ=ಸ್ವರೂಪ. ಭಣವಿ=ಮೇವಿನ ಒಟ್ಟಲು. ಬೋಳ್ಹೋರಿ=ಕೊಂಬು ಮುರಿದ ಹೋರಿ. ಹೊರಿಹುಲ್ಲು=ಬಾಚಿಕೊಳ್ಳದ ಮುಂಗುರುಳು. ಗುಳ್ಳ=ಮಂಗಲಸೂತ್ರ. ಕೈಪಾಳಿ=ಹಿಡಿಕೆಯ ಬಟ್ಟಲು. ಎಟ್ಟೊತ್ತಾಯ್ತು=ಎಷ್ಟೋ ಹೊತ್ತಾಯ್ತು. ಕೂಕಂ-ಕುಂಕುಮ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನದಲ್ಲಿ ಯಾವುದು ಶ್ರೇಷ್ಠ?
Next post ಮಗುವಿನ ನಗು

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…