ಹೋಗಿ ಬರುವೆನು ನನ್ನ ಎಳೆಗನಸುಗಳೆ! ನಿಮ್ಮ
ತಳಿರ್‍ಗೆಂಪು ಹೂಗಂಪು ತಂಗಾಳಿ ಮುಗಿದು
ಸಮರವನು ಸಾರಿಹುದು ಅಮರ ಶಕ್ತಿಯದೊಂದು,
ಎದೆಮನವ ತಣಿಸಿರುವ ದಿನಗಳನೆ ಹುಗಿದು!
ನಿಂತಿರುವದೆದುರಾಳಿಯಾಗಿ ನನಸಿನ ಕಹಿಯು,
ಪ್ರಾಣಗಳ ಗಂಟೆಯನು ಗಣಗಣನೆ ಬಡಿದು;
ಪಾಪಸಂಚಯವೆಲ್ಲವಾಗಿ ಕೋಪಿಸಿದಹಿಯು
ಮಲೆತು ನಿಂತಿಹುದೀಗ ಮುಗಿಲುದ್ದ ತಡೆದು:
ಸಾಕಿನ್ನು ಕನಸಿಗನ ದಿವ್ಯ ದೀವಟಿಗೆ!
ಸಾಕು ವಂದನೆಯನ್ನು ಒಲವೆಂಬ ನಟಿಗೆ!
ಹೋಗಿ ಬರುವೆನು ಕನಸೆ! ಹೋಗಿ ಬರುವೆನು ಸೊಗಸೆ!
ನನ್ನ ಮರೆಯಲಿ ನಿನ್ನ ಕಂಗಳಾ ಬೊಗಸೆ !
*****