ಎಳ್ಳಾಮಾಸೀ ಹಾಡು

ವರಸೀಗಿ ಬರವೂದು|
ಸರಸವ್ವ ಎಳ್ಳಾಮಾಸೀ| ಕೋಲಣ್ಣ ಕೋಲ ||೧||

ಏಳ ಮಂದಿ ನೆಗೇಣಿ ಮಕ್ಳು |
ಬೆಳ್ಳೆ ಬೆಳಗಾಽನ ಏಳ್ರೆ| ಕೋ ||೨||

ಬೆಳ್ಳೆ ಬೆಳಗಾಽನ ಏಳ್ರೆ|
ಮನಮಾರ ಸಾರಿಸರೆವ್ವಾ| ಕೋ ||೩||

ಮನಮಾರ ಸಾರಿಸರೆವ್ವಾ |
ತಲಿಯಾರೆ ಎರಕೋರೆವ್ವಾ| ಕೋ ||೪||

ಕಾಯ್‌ಪಲ್ಲ್ಯಾ ಸೋಸರೆವ್ವಾ|
ಅಡಿಗೆಂಬಲಿ ಮಾಡಕೆವ್ವಾ| ಕೋ ||೫||

ಅಡಿಗೆಂಬಲಿ ಮಾಡರೆವ್ವಾ|
ಹೆಡಗಿ ಬುಟ್ಟಿ ತುಂಬರೆವ್ವಾ| ಕೋ ||೬||

ಸಣ್ಣಕ್ಕಿ ನಾಗುಬಾಯಿ|
ಮನಿಮಾರ ಜ್ವಾಕಿನವ್ವಾ ಕೋ ||೭||

ಮನಿಮಾರ ಜ್ವಾಕಿನವ್ವಾ|
ಕರ ಬಿಟ್ಟು ಕರ ಕಟ್ಟ| ಕೋ ||೮||

ಕರ ಬಿಟ್ಟು ಕರಕಟ್ಟಟಿಗೆ
ಕರ ಹೊಯ್ತ ರಾಽಜಬೀದಿಗಿ। ಕೋ ||೯||

ಪಟ್ಟನೆ ಸಾಲ್ಯಾಗ|
ಸೆಟ್ಟಿ ಸಾವುಕಾಽರ ಮಗನ| ಕೋ ||೧೦||

ಸೆಟ್ಟೀನೆ ಸಾವುಕಾರಾಽನ|
ಮನಸ ಅಕೀ ಮ್ಯಾಲ| ಕೋ ||೧೧||

ಬಿರಿಬಿರಿ ಹೋಗ್ಯಾನ|
ಮನಿಯಾಗ ಮನಗ್ಯಾನ| ಕೋ ||೧೨||

ಏನ ಬ್ಯಾನೆಪ್ಪಾ ಮಗನ|
ಎಂತ ಬ್ಯಾನೆಪ್ಪಾ ಮಗನ| ಕೋ ||೧೩||

ಏನ ಬ್ಯಾನಿಲ್ಲ ತಾಯಿ|
ಎಂತ ಬ್ಯಾನಿಲ್ಲ ತಾಯಿ| ಕೋ ||೧೪||

ಕಳಸೆಟ್ಟ್ಯವರ ಸೊಸಿ ಮ್ಯಾಲ|
ನನ ಮನಸ ಹೋಗ್ಯಾದ ತಾಯಿ| ಕೋ ||೧೫||
* * *
ಏಳ್ಮಂದಿ ನೆಗೇಣಿ ಮಕ್ಳ್ಯಾ|
ಮುತ್ತೈಽದಿತನ ಹೇಳ್ತೆವ್ರಿ| ಕೋ ||೧೬||

ಸಣ್ಣಕ್ಕಿ ನಾಗುಬಾಯಿಗಿ|
ನಣ ಹೊಡೆದು ಹೆಣಾಹಾಕಿ| ಕೋ ||೧೭||

ಸಟ್ಟ ಸರವತ್ತನಾಗ|
ಹಿಂದಽಕ ಮುಂದಽಕ| ಕೋ ||೧೮||

ಆರು ಮಂದಿ ನೆಗೇಣಿ ಮಕ್ಳ್ಯಾ|
ಮುಂಜಾನೆದ್ದು ಬರತಾಳ್ಹೋಗ್ರೆ| ಕೋ ||೧೯||
* * *

ಸಟ್ಟ ಸರವಽತನಾಗ|
ಮೈಯ್‌ಮುಟ್ಟಿ ಕೈಯ ಮುಟ್ಟಿ| ಕೋ ||೨೦||

ಕೊರಳಾನ ಪುತಳ ಸರ|
ಹರದ ದಿಕಪಾಲ ಮಾಡಿ| ಕೋ ||೨೧||

ನಮ್ಮತ್ತಿ ಬೈತಾಳ;
ಪೋಣಿಕೊಡರೀ ನಮಗ| ಕೋ ||೨೨||

ಮುಂದ ಮುಂದ ಪೋಣಸ್ತ|
ಹಿಂದ ಹಿಂದ ಉಚ್ಚ್ಯಾಳ| ಕೋ ||೨೩||

ಇಟ್ಟನೆ ಆಗಲಿಗೆ
ಬೆಳ್ಳಬೆಳಗಾಽನೆ ಆಗಿ| ಕೋ ||೨೪||
* * *

ಕಾಲಮಡಿ ಬಂದಿದಾಽವ|
ಬಾಗಿಲ ತೆರೀರಿ ನಮಗ| ಕೋ ||೨೫||

ಬರತೇನಿ ಅಂಽತ್ಹೀಳಿ|
ಭಾಷ್ಯೇರೆ ಕೊಟ್ಹೋಗ! ಕೋ ||೨೬||

ಎದಿಯ ಮ್ಯಾಲಿಽನ ಸೆರಗ|
ಆತನ ಕೈಯಽಲಿ ಕೊಟ್ಟ| ಕೋ ||೨೭||

ಒಂದ ಪಾಟುಽಣಗಿಳದಾಳ|
ಒಂದ ನಿರಗಿ ಉಚ್ಚ್ಯಾಳ| ಕೋ ||೨೮||

ಎಡ್ಡ ಪಾಟುಣಗಿಽಳದಾಳ|
ಎಡ್ಡ ನಿಲಗಿ ಉಚ್ಚ್ಯಾಳ| ಕೋ ||೨೯||

ಮೂರ ಪಾಟುಣಗಿಽಳದಾಳ|
ಮೂರ ನಿಲಗಿ ಉಚ್ಚ್ಯಾಳ| ಕೋ ||೩೦||

ನಾಕೆಂಬು ಪಾಽಟುಣಗಿ|
ಎಮ್ಮೀ ಖೋಡೀಗಿ ಸಿಗಸಿ| ಕೋ ||೩೧||
* * *

ಅತ್ತೆವ್ವಾ ಅತ್ತೆವ್ವಾ |
ಬಾಗೀಲ ತೆರೀರಿ ನಮಗ| ಕೋ ||೩೨||

ಸಟ್ಟ ಸರವತ್ತ ನಾಗ|
ದೆವ್ವಿದ್ಯಾ ಭೂತಿದ್ಯಾ| ಕೋ ||೩೩||

ದೆವ್ವಿಲ್ಲ ಭೂತಿಲ್ಲ|
ಸಣ್ ಕಿ ನಾಗೂಬಾಯಿ| ಕೋ ||೩೪||
* * *

ಕಳಸೆಟ್ಟೆವರ ಮನಿಽಮುಂದ |
ಜಂಬ ನೀಲಽದ ಹಣ್ಣ| ಕೋ ||೩೫||

ಕೈಗ್ಯಾದರು ಬಂದಽವ |
ಬಾಯಿಗ್ಯಾದರ ಬರಲಿಲ್ಲ! ಕೋ ||೩೬||
*****

ಒಬ್ಬ ಶ್ರೀಮಂತನಿಗೆ ಏಳು ಮಂದಿ ಸೊಸೆಯಂದಿರಿರುತ್ತಾರೆ. ಹಿರಿಸೊಸೆಯರಿಗೂ ಅತ್ತೆಗೂ ಬಹಳ ಹಿತವಿತ್ತು. ಅವರೆಲ್ಲರು ಕೂಡಿ ಚಿಕ್ಕ ಸೊಸೆಯನ್ನು ಒಂಟಿಯನ್ನಾಗಿ ಮಾಡಿ ಕಾಡುತ್ತಿದ್ದರು. ಮಾರ್ಗಶೀರ್ಷ ಮಾಸದ ಕೊನೆಗೆ ಬರುವ ಎಳ್ಳಮಾಸಿಯ ಕಾಲಕ್ಕೆ ಜನರು ವನಭೋಜನಕ್ಕೆ ಹೋಗುವ ರೂಢಿಯುಂಟು. ಅಂದು ಮನೆಯವರೆಲ್ಲರು ಚಿಕ್ಕ ಸೊಸೆಗೆ ಮನೆಗೆಲಸವನ್ನು ನಿಯಮಿಸಿ ವನಭೋಜನಕ್ಕೆ ಹೋದರು. ಮನೆಯಲ್ಲಿ ಅವಳು ಆಕಳ ಕರುವನ್ನು ಬಿಚ್ಚಿ ಕಟ್ಟುವಷ್ಟರಲ್ಲಿ ಆದು ಕೊಸರಿಕೊಂಡು ಬೀದಿಗೆ ಹೋಯಿತು. ಅದನ್ನು ಬೆನ್ನಟ್ಟಿ ಹೋದಾಗ ಮತ್ತೊಬ್ಬ ಶ್ರೀಮಂತನ ಮಗನ ದೃಷ್ಟಿಯು ಅವಳ ಮೇಲೆ ಬಿತ್ತು. ಆವಳ ಚಿಂತೆಯಲ್ಲಿ ಅವನು, ತನ್ನ ಮನೆಗೆ ಹೋಗಿ ಮಲಗಿಕೊಂಡನು. ಅವನ ತಾಯಿ ಕೇಳಿದಾಗ ನಡೆದ ಸಂಗತಿಯನ್ನೆಲ್ಲ ಹೇಳಿದನು(ನುಡಿ ೧-೧೫). ಅವನ ತಾಯಿಯು ಆ ದಿನ ಸಂಜೆಗೆ ಆ ಹೆಣ್ಣಿನ ಮನೆಯ ಏಳೂ ಮಂದಿ ಸೊಸೆಯಂದಿರಿಗೆ ಮುತ್ತೈದೆತನದ ಊಟಕ್ಕೆ ನಿಮಂತ್ರಣವನ್ನು ಕೊಟ್ಟಳು. ಚಿಕ್ಕವಳ ಭೋಜನ ಪದಾರ್ಥದಲ್ಲಿ ಬೇಕೆಂತಲೇ ಒಂದು ನೊಣವನ್ನು ಹಾಕಿದ್ದರು. ಅದರಿಂದ ಅವಳಿಗೆ ವಾಂತಿಯಾಗಹತ್ತಿತು. ಆ ನೆವನದಿಂದ ಅವಳನ್ನು ಆ ರಾತ್ರಿಯ ಮಟ್ಟಿಗೆ ತಮ್ಮ ಮನೆಯಲ್ಲಿಟ್ಟು ಕೊಂಡು ಉಳಿದವರನ್ನು ಅವರ ಮನೆಗೆ ಕಳೆಸುವರು (೧೬-೧೯). ನಡುರಾತ್ರಿಯಲ್ಲಿ ಆ ತರುಣನು ಆಕೆಯ ಮೈ ಮುಟ್ಟ ಹೋಗುವನು. ಆಗ ಅವಳು ಒಂದು ಹಂಚಿಕೆಯನ್ನು ಮಾಡುವಳು. ತನ್ನ ಕೊರಳೊಳಗಿನ ಆಭರಣವನ್ನು ಹರಿದೊಗೆದು ಅವುಗಳನ್ನೆಲ್ಲ ಪೋಣಿಸಿಕೊಡಲು ಹೇಳುವಳು. ಅವನು ಮುಂದೆ ಮುಂದೆ ಪೋಣಿಸುತ್ತಿದ್ದಾಗ ಅವಳು ಮರೆಮಾತಿಗೆ ಹಾಕಿ ಹಿಂಜಿ ಹಿಂದೆ ಅವುಗಳನ್ನೆಲ್ಲ ಉಚ್ಚುತ್ತ ಬಂದಳು. ಇಷ್ಟೊತ್ತಿಗೆ ಬೆಳಗಾಯಿತು (೨೦-೨೪). ಆಗ ಲಘುಶಂಕೆಯ ನೆವನಮಾಡಿ ಬಾಗಿಲ ತೆರೆಯಹೇಳುವಳು. ಅವನು ತಿರುಗಿ ಬರುವುದಕ್ಕೆ ಆಣೆಮಾಡೆಂದನು. ಅವಳು ತನ್ನ ಸೀರೆಯ ಸೆರಗನ್ನೇ ಅವನ ಕೈಯಲ್ಲಿ ಕೊಟ್ಟು ಸಂಶಯಬಾರದಂತೆ ಮಾಡಿ, ಒಂದೊಂದು ನಿಲಗಿ (ನಿರಿಗೆ) ಯನ್ನು ಉಚ್ಚುತ್ತ ಒಂದೊಂದು ಮೆಟ್ಟಿಲನ್ನು ಇಳಿದು ಕೊನೆಗೆ ಅಂಗಳದಲ್ಲಿದ್ದ ಎಮ್ಮೆಯ ಕೋಡಿಗೆ ಸೀರೆಯ ಮತ್ತೊಂದು ತುದಿಯನ್ನು ಸಿಕ್ಕಿಸಿ ಬತ್ತಲೆಯಾಗಿಯೇ ತಮ್ಮ ಮನೆಗೆ ಹೋದಳು (೨೫-೩೧). ನಸುಕಿನಲ್ಲಿ ಮನೆಗೆ ಹೋಗಿ ಬಾಗಿಲ ತೆರಿಯಿರೆಂದಾಗ ಆತ್ತೆಯು ಹೆದರಿಕೊಂಡಳು. ಆದರೆ ಮುಂದೆ ನಿಜಸಂಗತಿಯು ಗೊತ್ತಾಯಿತು (೩೨-೩೪). ಕೊನೆಯ ಎರಡು ನುಡಿಗಳಲ್ಲಿ “ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ” ಎಂಬ ಉಪಸಂಹಾರವಿದೆ. ಜನರೂಢಿಯ ಕಥೆಯಲ್ಲಿ ಇನ್ನೂ ಸ್ವಲ್ಪ ಹೆಚ್ಚಿನ ಮಾತುಗಳಿವೆ.

ಛಂದಸ್ಸು:- ಲಲಿತರಗಳೆಗೆ ಸಮೀಪವಾಗಿದೆ.

ಶಬ್ದಪ್ರಯೋಗಗಳು:- ಕಾಯಿಪಲ್ಲೆ=ತರಕಾರಿ, ಜ್ವಾಕಿ=ಜೋಕೆ. ಕಟ್ಟಟಿಗೆ-ಕಟ್ಟುವಷ್ಟರಲ್ಲಿ. ನಣ=ನೊಣ. ಸಟ್ಟನರವತ್ತ=ನಡುರಾತ್ರಿ. ಹಿಂದಕ-ಮುಂದರ್=ವಾಂತಿ. ದಿಕಪಾಲ=ಚೆಲ್ಲಾ ಪಿಲ್ಲಿ. ಕಾಲ್ಮಡಿ=ಮೂತ್ರ. ಪಾಟುಣಗಿ=ಮೆಟ್ಟಲು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕ್ರಾಂತಿಕಾರಿಗಳು ನಾವು
Next post ವಿದ್ವಂಸರ ಕೃತ್ಯಗಳಿಗೆ ಬಳಕೆಯಾಗುತ್ತಿರುವ R.D.X

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

cheap jordans|wholesale air max|wholesale jordans|wholesale jewelry|wholesale jerseys