ಬದುಕಿನ ಕುರಿತು Robert Frostನ ಎರಡು ಕವಿತೆಗಳು

ಬದುಕಿನ ಕುರಿತು Robert Frostನ ಎರಡು ಕವಿತೆಗಳು

“ಲಾಲಿತ್ಯಪೂರ್ಣ ಧ್ವನಿ ವಿನ್ಯಾಸವೇ ಕಾವ್ಯ, ಅದೊಂದು ನಾಟಕೀಯ ಪರಿಣಾಮ, ಸಂಗತಿ, ಕವಿತೆ ಯಾವುದೋ ಒಂದು ಸಂಗತಿಯನ್ನು ಹೇಳುತ್ತ ಅದರೊಳಗೆ ಇನ್ನೊಂದು ಅರ್ಥವನ್ನು ತುಂಬಿಡುವ ಕಲೆ. ಕವಿತೆ ಆನಂದದಕ್ಕಾಗಿ ಹುಟ್ಟುತ್ತದೆ ಆದರೆ ಜಾಣ್ಮೆಯಲ್ಲಿ ಕೊನೆಗೊಳ್ಳುತ್ತದೆ. ಇವು ರಾಬರ್ಟ ಫ್ರಾಸ್ಟ ಕಾವ್ಯದ ಪ್ರಮುಖ ತತ್ವಗಳನ್ನು ಕುರಿತು ಹೇಳಿದ ಸಂಗತಿಗಳು.

ಗೊಂದಲ ತಳಮಳಗಳು ಆಧುನಿಕ ಜಗತ್ತಿನ ವಿಲಕ್ಷಣತೆಗಳು. ಅದಕ್ಕಾಗಿ ಫ್ರಾಸ್ಟ ಹೇಳುತ್ತಾನೆ ಕವಿತೆ ಎಂದರೆ ಕ್ಷಣ ಹೊತ್ತು ನಿರುಮ್ಮಳತೆಯ ತಂಗುವಿಕೆ ಹಾಗಾಗಿ ಫ್ರಾಸ್ಟನ ಕಾವ್ಯಗಳು ಮಾನವ ಸಮಸ್ಯೆಗಳನ್ನೆ ಕೇಂದ್ರಿಕರಿಸಿಕೊಂಡಿವೆ. “Wordsworth mysticises nature, Frost merely realizes it” ಫ್ರಾಸ್ಟನ ಪ್ರಕಾರ ಮನುಷ್ಯ ನಿಸರ್ಗದ ಅವಿಭಾಜ್ಯ ಅಂಗ. ಹಾಗಾಗಿ ಆತನ ಕಾವ್ಯದ ತನ್ಮಯತೆ ಸದಾ ಪ್ರಕೃತಿ ಮತ್ತು ಅದರ ಸುತ್ತಮುತ್ತ. ವರ್ಡವರ್ಥ ನಿಸರ್ಗವನ್ನು ಅನುಭಾವಿಕ ನೆಲೆಯಲ್ಲಿ ದುಡಿಸಿಕೊಳ್ಳುತ್ತಾನೆ. ಆದರೆ ಫ್ರಾಸ್ಟನಲ್ಲಿ ನಿಸರ್ಗ ಮನುಷ್ಯನ ಬದುಕಿನ ಭಾಗ. ಮಾನವ ಮತ್ತು ಪ್ರಕೃತಿಯೊಂದಿಗೆ ಅನೂಹ್ಯವಾದ ಗಾಢ ಸಂಬಂಧದ ಮೇಲೆ ಆತನ ಕವಿತೆ ನಿಂತಿದೆ. ಫ್ರಾಸ್ಟನ ಸಾಹಿತ್ಯದ ಮೂಲ ಬೇರುಗಳು ನ್ಯೂ ಇಂಗ್ಲೆಂಡಿನ ಹಳ್ಳಿಗಳು, ಮನುಷ್ಯನೊಂದಿಗೆ ಬೆಸೆದುಕೊಂಡ ಕಾಡು, ಇಬ್ಬನಿ ತಬ್ಬಿದ ತೋಪು, ಮರಗಳು, ಸೇಬು ಕೀಳುವ ಕೆಲಸ, ಗೋಡೆಗೆ ಮಣ್ಣು ಮೆತ್ತುವುದು ಹೀಗೆ ಹಳ್ಳಿ ಬದುಕಿನ ಸುತ್ತ ಆತನ ಕವನಗಳು ಗೀರಕಿ ಹೊಡೆಯುತ್ತವೆ.

“Stopping by Woods on a Snowy Evening” ನಿಸ್ಸಂದೇಹವಾಗಿ ಫ್ರಾಸ್ಟನ ಪ್ರಮುಖ ಕವಿತೆ. ಸ್ಪಷ್ಟ ಮತ್ತು ಸರಳ ಆದರೆ ಓದುಗನ ಪದೇ ಪದೇ ಕಾಡುವ, ಪುನಃ ಪುನಃ ಓದಿಸಿಕೊಳ್ಳುವ ಕವಿತೆ. ಈ ಕವಿತೆ ಕಲ್ಪನೆ ಮತ್ತು ವಾಸ್ತವದ ನಡುವಿನ ಸಂಬಂಧಗಳ ಕ್ಲೀಷ್ಟತೆ, ಸಂದಿಗ್ಧತೆಯನ್ನು ನಿರೂಪಿಸುತ್ತದೆ. ಸೌಂದರ್ಯದ ಆಕರ್ಷಣೆ ಮತ್ತು ಕರ್ತವ್ಯದ ಪರಿಪಾಲನೆಯ ನಡುವಿನ ತಾಕಲಾಟ ತೊಯ್ದಾಟ ಕವನ ಸುಂದರವಾಗಿ ಕಟ್ಟಿಕೊಟ್ಟಿದೆ. ನೈಸರ್ಗಿಕ ಚೆಲುವನ್ನು ಮಾತ್ರ ಹೇಳದೆ ಬದುಕಿನ ಮಿತಿಗಳನ್ನು ಜಾಲಾಡುತ್ತದೆ ಕವನ.

ಕವನದ ಪ್ರಾರಂಭ ಅನಿರ್ದಿಷ್ಟತೆಯಿಂದಲೇ ತೊಡಗುತ್ತದೆ. ಆತ ತನ್ನ ಕುದುರೆಯನೇರಿ ಆಗಷ್ಟೇ ಆ ಕಾಡುವನವ ದಾಟುತ್ತಿದ್ದಾನೆ. ಆ ವನ ಯಾರದೆಂದು ಆತನಿಗೆ ತಿಳಿಯದು. ಅಲ್ಲಿ ಆತ ಏಕಾಂಗಿ, ಅಲ್ಯಾವ ಮನೆಗಳಿಲ್ಲ. ಚಳಿಗಾಲದ ದಿನವಾದ್ದರಿಂದ ಮಂಜಿನ ಮಳೆ ನಿಸರ್ಗಕ್ಕೆ ಕಳೆ ಕೊಟ್ಟಿದೆ. ಅಲ್ಲಿಯ ಸುಂದರ ಪರಿಸರದ ವ್ಯಾಮೋಹಕ್ಕೆ ಒಳಗಾದಂತೆ ತನ್ನನ್ನು ತಾನಿರುವ ಸ್ಥಳವನ್ನು ಎಲ್ಲವ ಮರೆತು ಅದೊಂದು ಸ್ವಪ್ನಲೋಕವೆಂಬ ಭ್ರಮೆಯಲ್ಲಿ ಅಲ್ಲೆ ತಲ್ಲೀನನಾಗುತ್ತಾನೆ. ಸುಂದರ ಕನಸಿನ ಜಗತ್ತು ಆತನಿಗೆ ತೆರೆದುಕೊಳ್ಳುತ್ತದೆ.

ಆದರೆ ಆತನೇರಿದ ಕುದುರೆ ಅಲ್ಲಿರಲು ಬಯಸುವುದಿಲ್ಲ. ಕಾರಣ ಅಲ್ಲೆಲ್ಲೂ ಮನೆಗಳಿಲ್ಲ. ದಾರಿಯ ಎಕ್ಕೆಲಗಳಲ್ಲಿ ಒಂದೆಡೆ ಕಾಡು ಮತ್ತು ಇನ್ನೊಂದೆಡೆ ಹೆಪ್ಪುಗಟ್ಟಿದ ಸರೋವರ. ಕುದುರೆ ವಾಸ್ತವಿಕ ಪ್ರಜ್ಞೆಗೆ ಸಾಕ್ಷಿಯಾಗುತ್ತದೆ. ಅದಕ್ಕಾಗಿ ತನ್ನ ಜೀನನ್ನು ತಿವಿದು ಮರಳುವ ಅಭಿಲಾಷೆಯನ್ನು ಸಂಕೇತಿಸುತ್ತದೆ. ಕುದುರೆ ಸಕ್ರೀಯ ಪ್ರಜ್ಞೆಗೆ ಸಂಕೇತವಾದರೆ ಸವಾರ ನಿಷ್ಕ್ರೀಯತೆಗೆ ಸಾಕ್ಷಿಯಾಗುತ್ತಾನೆ. ಕುದುರೆಯ ಜೀನಿನ ಸದ್ದು ಆತನ ವಾಸ್ತವಿಕ ಪ್ರಪಂಚಕ್ಕೆ ಎಳೆದು ತರುತ್ತದೆ. ಹೀಗಾಗಿ ಬದುಕಿನ ವಾಸ್ತವಿಕತೆಗೆ ಪುನಃ ಮರಳಲು ಸಿದ್ಧನಾಗುತ್ತಾನೆ ಆತ. ನಿತ್ಯ ಬದುಕಿನ ಜವಾಬ್ದಾರಿಗಳು ಒಪ್ಪಂದಗಳ ಮುಂದೆ ಕನಸು ಮತ್ತದರ ಸೊಗಸು ಬರೀಯ ಭ್ರಮೆ. ಅವೆರಡರ ಮಧ್ಯೆ ಹಂಚಿಹೋಗುವ ಮಾನವ ಸದಾ ಸ್ವಪ್ನಲೋಕದಲ್ಲಿ ಇರಲಾಗದು. ನೈಜ ಬದುಕು ನಿಷ್ಠುರವಾದರೂ ಅದೇ ಸರಿಯಾದ ಆಯ್ಕೆ ಎಂಬಲ್ಲಿಗೆ ಕವನ ಕೊನೆಗೊಳ್ಳುತ್ತದೆ. ಕೊನೆಯ ನುಡಿ ಇದನ್ನು ಸ್ಪಷ್ಟಪಡಿಸುತ್ತದೆ.

ಕಾರಣ ಆ ಇರುಳರಾತ್ರಿಯಲ್ಲಿ ಒಬ್ಬಂಟಿಯಾಗಿ ಮೈಕೊರೆವ ಚಳಿಯಲ್ಲಿ ಆತನೀಗ ಇರಬಯಸುವುದಿಲ್ಲ. ಸವಾರ ಈಗ ಬದುಕನ್ನೇ ಆಯ್ದುಕೊಳ್ಳುತ್ತಾನೆ. “And miles to go before sleep”. ಆ ದಾರಿಯಲ್ಲಿ ಹಲವಾರು ಉದ್ದೇಶಗಳ ಇನ್ನು ಪೂರೈಸಬೇಕಿದೆ. ಬದುಕು ಮುಗಿಯುವವರೆಗೆ ಅವುಗಳನ್ನು ನಿರ್ಲಕ್ಷಿಸುವಂತಿಲ್ಲ. ಮನುಷ್ಯ ಏಕಾಂಗಿಯಾಗಿ ಕನಸುಕಾಣಬಲ್ಲ. ವಾಸ್ತವಿಕತೆಗೆ ಮೀರಿದ ಕನಸನ್ನು ಕಾಣಬಲ್ಲ. ಕನಸು ಆತನ ಭಾವನಾತ್ಮಕ ಶುಧ್ದಿಗೆ ಬೆಂಬಲವಾದರೂ ವಾಸ್ತವವೇ ಜೀವನ ಎಂಬ ಸತ್ಯವನ್ನು ಕೊನೆಯಲ್ಲಿ ಪ್ರತಿಪಾದಿಸುತ್ತಾನೆ ಫ್ರಾಸ್ಟ.

ಇನ್ನೊಂದು ಪ್ರಮುಖ ಕವಿತೆ “The Road not Taken”. ಆಯ್ಕೆಯನ್ನು ರೂಪಕವಾಗಿ ಬಳಸಿಕೊಂಡು ಹೆಣೆದ ಕವಿತೆ. ಜೀವನದಲ್ಲಿ ಎದುರಾಗುವ ಆಯ್ಕೆ ಗೊಂದಲವನ್ನು ಕವಿ ಮಾರ್‍ಮಿಕವಾಗಿ ವಿಶ್ಲೇಷಿಸುತ್ತಾನೆ. ಆತ ಕಾಡಿನ ದಾರಿಯಲ್ಲಿದ್ದಾನೆ. ನಡೆದು ಬರುವಾಗ ಒಂದೆಡೆ ಕವಲುದಾರಿಗಳೆರಡು ತೆರೆದುಕೊಳ್ಳುತ್ತವೆ. ಅಲ್ಲಿ ಎರಡು ಆಯ್ಕೆಯ ದಾರಿಗಳಿವೆ. ಎರಡು ಅಪೂರ್ವವಾದವುಗಳೇ. ಹಸಿರಿನಿಂದ ಕಂಗೊಳಿಸುತ್ತಿವೆ. ಒಂದು ದಾರಿ ಬಳಕೆಗೆ ಸಾಕ್ಷಿಯಾಗಿದ್ದರೆ ಇನ್ನೊಂದು ಅಪರೂಪದ ಬಳಕೆ ಮಾಡಿದ್ದೆಂದು ಕಾಣಿಸುತ್ತಿದೆ. ಕವನ ಬದುಕಿನ ಪಯಣವನ್ನು ಸಂಕೇತಿಸುತ್ತದೆ. ಬದುಕು ಸರಳವಲ್ಲ. ಉದ್ದಕ್ಕೂ ಅದು ಮಾಡಲೋ ಅಥವಾ ಇದು ಮಾಡಲೋ. ಅದನ್ನು ಒಪ್ಪಿಕೊಳ್ಳಲೋ ಇದನೊಪ್ಪಿಕೊಳ್ಳಲೋ ಈ ಸಂದಿಗ್ಧತೆಗಳು ಹಲವಾರು ಮುಖಗಳಲ್ಲಿ ನಮ್ಮನ್ನು ಕಾಡುತ್ತವೆ. ಆದರೆ ಸರಿಯಾದ ಆಯ್ಕೆ ಮಾತ್ರ ನಮ್ಮ ಜೀವನವನ್ನು ಯಶಸ್ವಿಗೊಳಿಸಬಲ್ಲದು. ಬಹುಸಾಧ್ಯತೆಗಳಿದ್ದಲ್ಲಿ ಆಯ್ಕೆ ಸಮಸ್ಯೆಯಾಗದು ಆ ದಾರಿಗಳೆರಡು ಸಮಾನ ಮಟ್ಟದ್ದಾಗಿವೆ. ಆದರೆ ಎರಡರಲ್ಲಿ ಒಂದನ್ನು ಮಾತ್ರ ಆಯ್ಕೆಮಾಡಿಕೊಳ್ಳುವುದು ಕ್ಲಿಷ್ಟಕರ. ಅದಾತನ ಧೈರ್ಯ ಮತ್ತು ಸಾಮರ್ಥ್ಯಗಳ ಒರೆಗಲ್ಲಿಗೆ ಹಚ್ಚುತ್ತದೆ.

ಕವನದಲ್ಲಿ ಕವಿ ಎರಡು ದಾರಿಗಳ ತುಲನೆಗೆ ತೊಡಗುತ್ತಾನೆ. “No step had trodden black” ಎನ್ನುವಲ್ಲಿ ಎರಡು ದಾರಿಗಳು ಹೊಸದೇ. ಆ ದಾರಿಗಳನ್ನ್ಯಾರು ಇವರೆಗೂ ತುಳಿದಿಲ್ಲ. ಅಲ್ಲಿ ಬಿದ್ದ ಎಲೆಗಳು ಕಾಲಹೆಜ್ಜೆಗೆ ಅಪ್ಪಚ್ಚಿಯಾಗಿಲ್ಲ. ಆದರೂ ಆತ ಎರಡನೇಯ ಹಾದಿಯನ್ನು ಆರಿಸಿಕೊಳ್ಳುತ್ತಾನೆ. ಮತ್ತು ಮೊದಲ ದಾರಿಯನ್ನು ಇನ್ನೊಂದು ದಿನ ಸವೆಸಿದರಾಯಿತೆಂದುಕೊಂಡರೂ ಅದು ಸಾಧ್ಯವಿಲ್ಲ. “way leads on to way” ಯಾಕೆಂದರೆ ಆತನ ಆಯ್ಕೆ ಆತನ ಸ್ವಸಾಮರ್‍ಥ್ಯಕ್ಕೆ ಸವಾಲಾಗಿದೆ. ಒಬ್ಬನ ಬದುಕಿನ ನಿಜದ ಪರೀಕ್ಷೆಯಾಗಿದೆ. ಕವಿ ಇಲ್ಲಿ ಸರಳ ದಾರಿಯನ್ನು ಆರಿಸಿಕೊಳ್ಳುವುದಿಲ್ಲ. ಕಾರಣ ಆತನಿಗೆ ತನ್ನ ದಾರಿಯ ಪಯಣದ ಅನುಭವವ ಹಂಚಿಕೊಳ್ಳುವಾಗ ದೊಡ್ಡದೊಂದು ನಿಟ್ಟುಸಿರು ತೆಗೆದು ಆ ದಾರಿಯ ವಿಭಿನ್ನತೆಯನ್ನು ಮನಗಾಣಿಸುವ ಆನಂದವಿರುವುದು ಅದು ಕ್ಲೀಷ್ಟವಾದಾಗಲೇ. ಬದುಕಿನ ಹಾದಿ ಪ್ರತಿಕೂಲವಾದಾಲೇ ನಮ್ಮ ನಿಜ ಶಕ್ತಿಯ ಅರಿವಾಗುವುದು.

ಫ್ರಾಸ್ಟನ “A poem begins in delight and ends in wisdom” ಹೇಳಿಕೆಯಂತೆ ಮೇಲಿನ ಎರಡು ಕವಿತೆಗಳು ಆನಂದದ ಸ್ಥಾಯಿಭಾವದೊಂದಿಗೆ ಉದ್ದಿಪನಗೊಂಡು ಪ್ರಾರಂಭಗೊಂಡರೂ ಮುಕ್ತಾಯದಲ್ಲಿ ಬದುಕಿನ ಬುದ್ದಿವಂತಿಕೆಯ ನಿರ್ಧಾರದೊಂದಿಗೆ ಕೊನೆಗೊಳ್ಳುತ್ತವೆ.

ರಾಬರ್ಟ ಫ್ರಾಸ್ಟ ಕ್ಯಾಲಿಫೋರ್‍ನಿಯಾದ ಸ್ಯಾನ್ ಪ್ರಾನ್ಸಿಸ್ಕೋದಲ್ಲಿ ೧೮೭೫ರಲ್ಲಿ ಜನಿಸಿದ. ಆದರೆ ತಂದೆಯ ಮರಣದ ನಂತರ ಆತ ನ್ಯೂ ಇಂಗ್ಲೆಂಡಿಗೆ ಹೋದ. ಕಾಲೇಜು ಶಿಕ್ಷಣ ಅರ್ಧಕ್ಕೆ ನಿಲ್ಲಿಸಿದ ಆತ ಮಿಲ್ಲ್ ಒಂದರಲ್ಲಿ ಕೆಲಸಕ್ಕೆ ಸೇರಿದ. ಕೆಲ ಸಮಯ ಶಾಲೆಯೊಂದರಲ್ಲಿ, ಪತ್ರಿಕೆಗಳಲ್ಲಿ ಕೆಲಸಮಾಡಿದ. ಹೀಗೆ ಇದ್ದ ಆತನ ಮುಖ್ಯ ಆಸಕ್ತಿಗಳು ಕೃಷಿ ಮತ್ತು ಕಾವ್ಯವಾಗಿತ್ತು. ೧೮೯೫ರಲ್ಲಿ ವಿವಾಹವಾದ ಆತ ಹಾವರ್ಡನಲ್ಲಿ ಅಭ್ಯಸಿಸುತ್ತಿರುವ ಸಂದರ್ಭದಲ್ಲಿ ಲ್ಯಾಟಿನ್ ಗ್ರೀಕ್ ಮತ್ತು ಫಿಲೋಸೊಫಿಗಳನ್ನು ಓದಿದ. ಅಲ್ಲಿಂದ ಇಂಗ್ಲೆಂಡಿಗೆ ಬಂದ ಆತ ತನ್ನ ಮೊದಲ ಕವನಗಳ ಸಂಪುಟಗಳ ಪ್ರಕಟಿಸಿದ. ಮುಂದೆ ಪುನಃ ನ್ಯೂ ಇಂಗ್ಲೆಂಡಿಗೆ ಬಂದ ೮ ಸಂಪುಟಗಳ ಪ್ರಕಟಿಸಿದ. ಕವಿಯೂ ಆಗಿ ಕೃಷಿಕನೂ ಆಗಿದ್ದ ಫ್ರಾಸ್ಟ ಆರು ಮಕ್ಕಳ ತಂದೆ. ಆದರೆ ಆತ ೧೯೬೩ರಲ್ಲಿ ಮರಣಿಸುವಾಗ ಅದಾಗಲೇ ಎರಡು ಮಕ್ಕಳು ಹಾಗೂ ಹೆಂಡತಿ ಮರಣಹೊಂದಿದ್ದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಂದಾನೋ (ಸುಗ್ಗಿ ಆಲಾಪ)
Next post ಅಕ್ರಮ

ಸಣ್ಣ ಕತೆ

 • ಮನೆಮನೆಯ ಸಮಾಚಾರ

  ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

 • ಮಾದಿತನ

  ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

 • ಶಾಕಿಂಗ್ ಪ್ರೇಮ ಪ್ರಕರಣ

  ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

 • ಕರಾಚಿ ಕಾರಣೋರು

  ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys