ಅಂತರಂಗದ ನರಕ ಕುದಿಸಿ ಭಟ್ಟಿಯ ಇಳಿಸಿ
ಕೊಟ್ಟ ಮೋಹಿನಿಯ ಕಂಬನಿಯ ಅದೆಷ್ಟು ಕುಡಿದೆ!
ಭರವಸೆಗೆ ಶಂಕೆಯ ಶಂಕೆಗಾಸೆಯ ಬೆರಸಿ,
ಗೆದ್ದೆ ಇನ್ನೇನೆಂಬ ಗಳಿಗೆಯಲ್ಲೇ ಬಿದ್ದೆ.
ಕೊಳಕು ತಪ್ಪುಗಳಲ್ಲಿ ಬಳಸಿಯೂ ನಾನೆಂಥ
ಅದೃಷ್ಟವಂತ ಎನ್ನುವ ಹಿಗ್ಗಿನಲ್ಲಿದ್ದೆ;
ಎಲ್ಲೆ ತಪ್ಪಿತು ಏಕೆ ನನ್ನ ದೃಷ್ಟಿಗೆ? ಇಂಥ
ಕಾಮಸನ್ನಿಯ ಉರಿಗೆ ಹೇಗೆ ನಾ ಬಲಿಯಾದೆ ?
ಕೆಡಕಿನುಪಕಾರ ಎಂಥದು! ಸತ್ಯ ತಿಳಿಯಿತು,
ಒಳಿತು ಇನ್ನಷ್ಟು ಒಳಿತೆನಿಸುವುದು ಕೆಡುಕಿಂದ,
ಕುಸಿದ ಪ್ರೇಮವ ಮತ್ತೆ ಎತ್ತಿಕಟ್ಟಲು ಆಯ್ತು
ಇನ್ನಷ್ಟು ಭದ್ರ ಇನ್ನೆಷ್ಟು ಎತ್ತರ ಚೆಂದ.
ಸಾಕಷ್ಟು ನರಳಿ ಮರಳಿರುವೆ, ಮಾಡಿದ್ದಕ್ಕೆ,
ಮೂರುಮಡಿ ಗಳಿಸಿರುವೆ ಮುಂಚೆ ಕಳೆದದ್ದಕ್ಕೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 119
What potions have I drunk of Siren tears