ರಂಗಣ್ಣನ ಕನಸಿನ ದಿನಗಳು – ೨೦

ರಂಗಣ್ಣನ ಕನಸಿನ ದಿನಗಳು – ೨೦

ರಂಗನಾಥಪುರದ ಗಂಗೇಗೌಡರು

ರಂಗನಾಥಪುರದ ಹತ್ತಿರ ಬಸ್ಸು ನಿಂತಿತು. ರಂಗಣ್ಣ ಕೆಳಕ್ಕೆ ಇಳಿದನು, ಗುಮಾಸ್ತೆ ಶಂಕರಪ್ಪನೂ, ಹೆಡ್‌ಮೇಷ್ಟ್ರು ತಿಮ್ಮಣ್ಣ ಭಟ್ಟನೂ, ಇತರ ಮೇಷ್ಟ್ರುಗಳೂ ಕೈ ಮುಗಿದರು. ಬೀಡಾರವನ್ನು ಮುಸಾಫರಖಾನೆ ಯಲ್ಲಿ ಏರ್ಪಾಟು ಮಾಡಿದ್ದುದರಿಂದ ರಂಗಣ್ಣ ನೆಟ್ಟಗೆ ಅಲ್ಲಿಗೆ ಹೋದನು. ಒಂದು ಭಾಗದಲ್ಲಿ ತನ್ನ ಬೀಡಾರ ಏರ್ಪಾಟಾಗಿತ್ತು. ಎದುರು ಭಾಗದಲ್ಲಿ ಸಾಹೇಬರಿಗೆ ಸ್ಥಳ ಮೀಸಲಾಗಿತ್ತು. ರಂಗಣ್ಣನ ಮುಖಮುದ್ರೆ ಗಂಭೀರವಾಗಿದ್ದುದರಿಂದ ಯಾರೂ ಮಾತನಾಡಿಸಲಿಲ್ಲ. ಕೊಟಡಿಯಲ್ಲಿ ರಂಗಣ್ಣ ಕುಳಿತ ಬಳಿಕ ಗೋಪಾಲ ಉಪ್ಪಿಟ್ಟು, ಬೋಂಡ ಮತ್ತು ಕಾಫಿಗಳನ್ನು ತಂದು ಮೇಜಿನಮೇಲಿಟ್ಟನು. ಅವುಗಳನ್ನು ಮುಗಿಸಿದ್ದಾಯಿತು. ತಿಮ್ಮಣ್ಣ ಭಟ್ಟ ಹೊರಗಡೆಯೇ ಇದ್ದವನು ಎಳನೀರನ್ನು ಕೆತ್ತಿ ಬೆಳ್ಳಿಯ ಲೋಟಕ್ಕೆ ಸುರಿದು, ಅದನ್ನೂ ಕೆಲವು ರಸಬಾಳೆಯ ಹಣ್ಣುಗಳನ್ನೂ ಗೋಪಾಲನ ಕೈಯಲ್ಲಿ ಕಳಿಸಿಕೊಟ್ಟನು. ಗೋಪಾಲನು ಅವುಗಳನ್ನು ತರುತ್ತಲೂ, ‘ಇವನ್ನು ಯಾರು ಕೊಟ್ಟರು? ಏತಕ್ಕೆ ತೆಗೆದುಕೊಂಡು ಬಂದೆ?’ ಎಂದು ರಂಗಣ್ಣ ಸ್ವಲ್ಪ ಗದರಿಸಿದನು.

‘ಹೆಡ್ ಮೇಷ್ಟ್ರು ತಿಮ್ಮಣ್ಣ ಭಟ್ಟರು ಕೊಟ್ಟು ಕಳಿಸಿದರು’

‘ಆ ಭಟ್ಟರಿಗೂ ಬುದ್ದಿಯಿಲ್ಲ! ನಿನಗೂ ಬುದ್ದಿಯಿಲ್ಲ! ತೆಗೆದು ಕೊಂಡು ಹೋಗು!’

ಗೋಪಾಲನು ಹೆದರಿಕೊಂಡು ಅವನ್ನು ಹೊರಕ್ಕೆ ತಂದು ಹೆಡ್ ಮೇಷ್ಟರ ವಶಕ್ಕೆ ಒಪ್ಪಿಸಿಬಿಟ್ಟನು.

ತನ್ನ ವಿಚಾರದಲ್ಲಿ ಇನ್ಸ್‌ಪೆಕ್ಟರಿಗೆ ಬಹಳ ಕೋಪವಿದೆಯೆಂಬುದು ತಿಮ್ಮಣ್ಣ ಭಟ್ಟನಿಗೆ ದೃಢಪಟ್ಟಿತು. ಇಷ್ಟೆಲ್ಲ ಏರ್‍ಪಾಟುಗಳನ್ನು ಮಾಡಿ ಸುಖ ಸಂತೋಷಗಳು ತಾಂಡವವಾಡದೆ ಕೋಪ ವ್ಯಸನಗಳಲ್ಲಿ
ಕೊನೆಗೊಂಡಿತಲ್ಲ-ಎಂದು ಆತನಿಗೂ ಚಿತ್ತ ಕಲಕಿ ಹೋಯಿತು. ಎರಡು ನಿಮಿಷಗಳ ಕಾಲ ಹಾಗೆಯೇ ನಿಂತಿದ್ದವನು ಎಳನೀರನ್ನೂ ಬಾಳೆಯ ಹಣ್ಣುಗಳನ್ನೂ ತಾನೇ ಹಿಡಿದುಕೊಂಡು ರಂಗಣ್ಣನ ಕೊಟಡಿಗೆ ಹೋದನು. ಅವನ್ನು ಕೆಳಗಿಟ್ಟು, ದೀರ್ಘದಂಡ ನಮಸ್ಕಾರವನ್ನು
ಮಾಡಿ, ಎದ್ದು ಕೈ ಮುಗಿದುಕೊಂಡು, ‘ತಾವು ಧಣಿಗಳು, ನಾನು ಬಡವ. ನನ್ನ ಸರ್‍ವಾಪರಾಧಗಳನ್ನೂ ಕ್ಷಮಿಸಬೇಕು. ಸೇವಕರ ತಪ್ಪನ್ನು ಧಣಿಗಳು ನೋಡ ಬಾರದು. ಅರಿಕೆ ಮಾಡಿಕೊಳ್ಳುತ್ತೇನೆ. ನನ್ನ ಕೈಮೀರಿ ಏರ್ಪಾಟುಗಳು ನಡೆದಿವೆ. ತಾವು ಪ್ರಸನ್ನರಾಗಬೇಕು’-ಎಂದನು.

‘ಓ ಹೋ! ನಿಮ್ಮ ಕೈಮೀರಿ ಏರ್ಪಾಟುಗಳು ನಡೆದಿವೆಯೋ? ಈ ಆಟಗಳನ್ನು ಯಾರ ಮುಂದೆ ಕಟ್ಟುತೀರಿ! ಊಟದ ಏರ್ಪಾಟು ಬೇಡ ಎಂದು ನಾನು ಹೇಳಿದೆ. ಈ ಇನ್ಸ್‌ಪೆಕ್ಟರಿಗೆ ಚಳ್ಳೆ ಹಣ್ಣು ತಿನ್ನಿಸುತ್ತೇನೆ ಎಂದು ಹಂಚಿಕೆ ಮಾಡಿ ಗ್ರಾಮಸ್ಥರನ್ನು ಎತ್ತಿ ಕಟ್ಟಿ, ಗುಂಪು ಕಟ್ಟಿ ಕೊಂಡು ಸಾಹೇಬರ ಹತ್ತಿರ ಹೋದಿರಿ, ಸೂತ್ರಧಾರಕರಾಗಿ ಎಲ್ಲವನ್ನೂ ನಡೆಸಿದಿರಿ. ಈಗ ನಿರಪರಾಧಿಗಳಂತೆ ಬಂದು ಅರಿಕೆ ಮಾಡಿ ಕೊಳ್ಳುತಿದ್ದಿರಿ!’

‘ಕ್ಷಮಿಸಬೇಕು. ಅರಿಕೆ ಮಾಡಿಕೊಳ್ಳುತ್ತೇನೆ.’

‘ಏನಿದೆ ಅರಿಕೆ ಮಾಡಿ ಕೊಳ್ಳುವುದು? ಆಷಾಢಭೂತಿ ಮೇಷ್ಟ್ರುಗಳಲ್ಲಿ ಅಗ್ರಗಣ್ಯರಾಗಿದ್ದೀರಿ!’

‘ಸ್ವಾಮಿಯವರು ಹಾಗೆ ತಿಳಿದುಕೊಳ್ಳಬಾರದು. ನನ್ನ ಮೇಲೆ ಕೋಪ ಮಾಡಿಕೊಳ್ಳುವುದು ಸಹಜವಾಗಿದೆ. ಆದರೂ ನನ್ನ ಅರಿಕೆಯನ್ನು ಲಾಲಿಸಬೇಕು. ತಮ್ಮ ಅಪ್ಪಣೆಯನ್ನು ಶಿರಸಾವಹಿಸಿ ಪಂಚಾಯತಿ ಚೇರ್ಮನ್ನರಿಗೆ ತಮ್ಮ ಪತ್ರವನ್ನು ಕೊಟ್ಟೆ. ಚೇರ್ಮನ್ ಗಂಗೇಗೌಡರು ನೋಡಿಕೊಂಡರು. ನೋಡಿ ಕೊಂಡು, – ಹೆಡ್ ಮೇಷ್ಟ್ರ್‍ಎ! ಇನ್ಸ್‌ಪೆಕ್ಟರನ್ನು ಕಾಣುವುದಕ್ಕೆ ನಾನೇ ಹೋಗಬೇಕಾಗಿತ್ತು. ಅವರ ಮನಸ್ಸಿಗೆ ಬಹಳ ಬೇಜಾರು ಆಗಿದೆ. ನಾನೇ ಹೋಗಿದ್ದರೆ ತಕ್ಕ ರೀತಿ ಸಮಾಧಾನ ಹೇಳುತ್ತಿದ್ದೆ. ನನಗೆ ಬದಲು ನೀವೇ ಹೋದಿರಿ. ಹೀಗಾಯಿತು! ಈಗೇನು ಮಾಡೋಣ? ಎಂದು ಕೇಳಿದರು. ನಾನು, ಇನ್ಸ್‌ಪೆಕ್ಟರ್ ಸಾಹೇಬರು ಹೇಳಿರುವಂತೆ ಊಟದ ಏರ್ನಾಟನ್ನು ಕೈ ಬಿಡೋಣ ಎಂದು ಹೇಳಿದೆ. ಅದಕ್ಕೆ ಅವರು ಒಪ್ಪಲಿಲ್ಲ. ಹತ್ತು ಜನ ಮೇಷ್ಟರಿಗೆ ಅನ್ನ ಹಾಕುವ ಯೋಗ್ಯತೆ ಗಂಗೇಗೌಡನಿಗಿಲ್ಲ – ಎಂದು ಜನ ಆಡಿಕೊಳ್ಳುತ್ತಾರೆ! ಮೇಷ್ಟ್ರುಗಳೂ ತಿಳಿದುಕೊಳ್ಳುತ್ತಾರೆ! ಊಟದ ಏರ್ಪಾಟನ್ನು ಇಟ್ಟುಕೊಳ್ಳೋಣ. ದೊಡ್ಡ ಸಾಹೇಬರನ್ನು ಇಲ್ಲಿಗೆ ಬರಮಾಡಿಕೊಳ್ಳ ಬೇಕು, ಮಿಡಲ್ ಸ್ಕೂಲನ್ನು ಕೊಡುವಂತೆ ಕೇಳಿಕೊಳ್ಳಬೇಕು ಎಂದು ಮನಸ್ಸಿನಲ್ಲಿತ್ತು. ಈ ಸಂದರ್ಭದಲ್ಲಿಯೇ ಅವರನ್ನೂ ಬರಮಾಡಿ ಕೊಳ್ಳೋಣ. ಎರಡು ಕೆಲಸಗಳೂ ನೆರವೇರಲಿ; ಬನ್ನಿ, ಹೋಗಿ ಬರೋಣ- ಎಂದು ಹೇಳಿದರು. ಅವರು ಈ ಊರಿನ ಮುಖಂಡರು ಸ್ವಾಮಿ! ತಮಗೂ ಗೊತ್ತಿದೆ. ಬಹಳ ದೊಡ್ಡ ಮನುಷ್ಯರು, ಉದಾರಿಗಳು; ದೇವರಲ್ಲಿಯೂ ಬ್ರಾಹ್ಮಣರಲ್ಲಿಯೂ ಭಕ್ತಿಯುಳ್ಳವರು. ಅವರಿಂದ ಹಲವಾರು ಉಪಾಧ್ಯಾಯರು ಉಪಕಾರ ಪಡೆದಿದ್ದಾರೆ. ನಾನಂತೂ ಅವರಿಗೆ ಚಿರ ಋಣಿಯಾಗಿದ್ದೇನೆ. ಅವರ ಮಾತನ್ನು ಮೀರುವುದಕ್ಕಾಗದೆ ಅವರ ಜೊತೆಯಲ್ಲಿ ಹೋಗಿದ್ದೆ ಕ್ಷಮಿಸಬೇಕು!ಗಂಗೇಗೌಡರೇ ತಮ್ಮನ್ನು ಕಂಡು ಎಲ್ಲವನ್ನೂ ವಿವರಿಸುತ್ತಾರೆ. ತಮ್ಮ ವಿಷಯದಲ್ಲಿ ಅವರು ಬಹಳ ಗೌರವವನ್ನಿಟ್ಟಿದ್ದಾರೆ.!’

ಈ ಮೇಲಿನ ಸಮಾಧಾನವನ್ನು ಕೇಳಿದಮೇಲೆ ರಂಗಣ್ಣನಿಗೆ ಕೋಪ ಬಹುಮಟ್ಟಿಗೆ ಇಳಿಯಿತು. ತಿಮ್ಮಣ್ಣ ಭಟ್ಟನ ಕೈವಾಡ ಏನೂ ಇಲ್ಲ ಎನ್ನಿಸಿತು. ಆದರೂ ತನ್ನ ಬಿಗುಮಾನವನ್ನು ಬಿಟ್ಟು ಕೊಡಲಿಲ್ಲ; ಮೌನವಾಗಿ ಕುಳಿತೇ ಇದ್ದನು. ತಿಮ್ಮಣ್ಣ ಭಟ್ಟನು ಎಳನೀರಿನ ಲೋಟವನ್ನು ಮುಂದಿಟ್ಟು, ‘ಸ್ವಾಮಿಯವರು ಸ್ವೀಕರಿಸಬೇಕು! ಎಂದು ಕೈ ಮುಗಿದನು. ರಂಗಣ್ಣನು ಲೋಟವನ್ನು ಕೈಗೆ ತೆಗೆದುಕೊಂಡನು. ಇನ್ಸ್‌ಪೆಕ್ಟರು ತನ್ನ ವಿಚಾರದಲ್ಲಿ ಪ್ರಸನ್ನರಾದರೆಂದು ಹೆಡ್‌ಮೇಷ್ಟರಿಗೆ ಧೈರ್ಯ ಬಂತು. ” ಸ್ವಾಮಿ! ಗಂಗೇಗೌಡರು ನನಗೆ ಬಹಳ ಉಪಕಾರಮಾಡಿದ್ದಾರೆ. ಈ ಕಾಲದಲ್ಲಿ ಬಡಮೇಷ್ಟರುಗಳ ಕಷ್ಟ ದುಖಗಳನ್ನು ವಿಚಾರಿಸುವವರಾರು?’ ಎಂದನು. ರಂಗಣ್ಣನು ಎಳ ನೀರ ರುಚಿಯನ್ನು ನೋಡುತ್ತ, ನೋಡುತ್ತ, ಅದರ ಸಿಹಿ ನಾಲಗೆಗೇರುತ್ತ ಹೋದಹಾಗೆಲ್ಲ ಹೆಚ್ಚು ಹೆಚ್ಚು ಪ್ರಸನ್ನ ನಾಗುತ್ತ, ‘ನಿಮಗೇನು ಉಪಕಾರ ಮಾಡಿದ್ದಾರೆ ಅವರು!’ ಎಂದು ಕೇಳಿದನು.

‘ನೋಡಿ ಸ್ವಾಮಿ! ಈಗ್ಗೆ ಎಂಟು ವರ್ಷಗಳ ಹಿಂದೆ ನನ್ನ ಎರಡುನೆಯ ಹುಡುಗನ ಉಪನಯನ ನಡೆಯಬೇಕಾಗಿತ್ತು. ಕೈಯಲ್ಲಿ ಕಾಸಿರಲಿಲ್ಲ; ಬಾಹ್ಮಣ್ಯ ಬಿಡುವ ಹಾಗಿರಲಿಲ್ಲ. ಗೌಡರ ಹತ್ತಿರ ಒಂದು ನೂರು ರೂಪಾಯಿ ಸಾಲ ಪಡೆದುಕೊಂಡು ಉಪನಯನ ಮಾಡಿ ಬಿಡೋಣ. ಬರುವ ಸಂಬಳದಲ್ಲಿ ಹೇಗೋ ಉಳಿಸಿ ಸಾಲ ತೀರಿಸಿದರಾಯಿತು ಎಂದು ನಿಶ್ಚಯ ಮಾಡಿಕೊಂಡು ಅವರನ್ನು ಕೇಳೋಣವೆಂದು ಹೋದೆ. ನನ್ನ ಕಷ್ಟವನ್ನು ಹೇಳಿಕೊಂಡೆ. ಆಗ ಅವರು-ಮೇಷ್ಟ್ರೆ ನಿಮಗೆಷ್ಟು ಸಂಬಳ? ಎಂದು ಕೇಳಿದರು. ಹದಿನೈದು ರೂಪಾಯಿ- ಎಂದು ಉತ್ತರ ಹೇಳಿದೆ. ನಿಮಗೆ ಮಕ್ಕಳೆಷ್ಟು? ಎಂದು ಕೇಳಿದರು. ಎರಡು ಹೆಣ್ಣು ಮೂರು ಗಂಡು ಎಂದು ಹೇಳಿದೆ. ಅವರು, ರಾಮ ರಾಮ ದೇವರೇ! ಎಂದು ಉದ್ದಾರ ತೆಗೆದು ನಿಮ್ಮ ಸಂಸಾರ ನಡೆಯುವುದೇ ಕಷ್ಟವಾಗಿದೆಯಲ್ಲ! ನೀವು ಉಳಿಸುವುದೇನು! ಸಾಲ ತೀರಿಸುವುದೇನು!- ಎಂದು ಹೇಳಿದರು. ನನಗೆ ಮುಖ ಭಂಗವಾಗಿ ಹೋಯಿತು. ಅದನ್ನು ಅವರು ನೋಡಿ, ಮೇಷ್ಟ್ರೆ! ನನ್ನ ಹತ್ತಿರ ಹಣವೇನೋ ಇದೆ; ಕೊಡ ಬಲ್ಲೆ. ನಿಮ್ಮ
ಬಡತನ ಮತ್ತು ನಿಮ್ಮ ಕಷ್ಟ ನೋಡಿ ದಾನವಾಗಿಯೇ ಕೊಡ ಬಲ್ಲೆ. ಆದರೆ ಅದರಿಂದ ನೀವು ಉದ್ಧಾರವಾಗುವುದಿಲ್ಲ; ನಿಮ್ಮ ಆತ್ಮ ಗೌರವಕ್ಕೆ ಹಾನಿಯಾಗುತ್ತದೆ. ನಾನು ಹೇಳಿದಂತೆ ಮಾಡಿ. ಇಗೋ! ನೂರು ರುಪಾಯಿ ತೆಗೆದು ಕೊಳ್ಳಿ. ನನ್ನ ಲೇವಾದೇವಿಯ ಮತ್ತು ಜಮೀನು ಆದಾಯ ವೆಚ್ಚಗಳ ಲೆಕ್ಕ ಪತ್ರಗಳನ್ನು ನೋಡಿಕೊಳ್ಳಿ. ನಿಮಗೆ ತಿಂಗಳಿಗೆ ಹತ್ತು ರುಪಾಯಿ ನಾನು ಕೊಡುತ್ತೇನೆ, ನಿಮ್ಮ ಸಾಲಕ್ಕೆ ವಜಾಮಾಡಿ ಕೊಳ್ಳುತ್ತೇನೆ’- ಎಂದು ಹೇಳಿದರು ಸ್ವಾಮಿ! ಹಣವನ್ನು ಎಣಿಸಿಕೊಟ್ಟು
ಬಿಟ್ಟರು.!

‘ಬಡ್ಡಿಯ ದರವನ್ನು ಏನು ಹಾಕಿದರು? ಪತ್ರ ಏನು ಬರೆದು ಕೊಟ್ಟಿರಿ?’

‘ಬಡ್ಡಿಯಿಲ್ಲ, ಏನೂ ಇಲ್ಲ ಸ್ವಾಮಿ! ನಾನು ಪತ್ರವನ್ನು ಸಹ ಬರೆದು ಕೊಡಲಿಲ್ಲ! ಕೊನೆಗೆ ಅವರು ಹಣ ಕೊಟ್ಟಿದ್ದಕ್ಕೆ ಸಾಕ್ಷಿಗಳು ಸಹ ಇರಲಿಲ್ಲ!’

‘ಆಮೇಲೆ ಹತ್ತು ತಿಂಗಳಲ್ಲಿ ಸಾಲ ತೀರಿಹೋಯಿತೋ?’

‘ತೀರಿ ಹೋಯಿತು ಸ್ವಾಮಿ! ಆದರೆ ಗೌಡರು ನನ್ನನ್ನು ಕೆಲಸದಿಂದ ಬಿಡಿಸಲಿಲ್ಲ. ಮುಂದೆಯೂ ಹಾಗೆಯೇ ನಡೆಸಿಕೊಂಡು ಬಂದರು!’

‘ಆಮೇಲೆ ತಿಂಗಳು ತಿಂಗಳಿಗೆ ಹತ್ತು ರುಪಾಯಿಗಳನ್ನು ಕೈಗೆ ಕೊಡುತ್ತಾ ಬಂದರೋ?’

ಇಲ್ಲ ಸ್ವಾಮಿ! ನಾನು ಕೇಳಲಿಲ್ಲ. ಅವರೇ ಒಂದು ದಿನ ಮೇಷ್ಟ್ರೆ! ನಿಮಗೆ ಬರುವ ಸಂಬಳದಲ್ಲಿ ಈಗಿನಂತೆಯೇ ಹೇಗೋ ಸಂಸಾರವನ್ನು ಸುಧಾರಿಸಿಕೊಳ್ಳಿ, ನಿಮ್ಮ ಕೈಗೆ ಈ ಹಣವನ್ನು ಕೊಟ್ಟರೆ, ಹಬ್ಬ ಹುಣ್ಣಿಮೆ ಎಂದು ಹೇಳಿಕೊಳ್ಳುತ್ತ ಹೋಳಿಗೆ ಪಾಯಸಗಳಿಗೆ ಖರ್ಚು ಮಾಡಿಬಿಡುತ್ತೀರಿ. ಈ ಸಂಬಳದ ಹಣ ನನ್ನಲ್ಲಿರಲಿ-ಎಂದು ಹೇಳಿದರು. ನಾನೂ ಸುಮ್ಮನಾದೆ. ಈಗ್ಗೆ ನಾಲ್ಕು ವರ್ಷಗಳ ಹಿಂದೆ, ಒಳ್ಳೆಯ ಜಾಗದಲ್ಲಿ ನಾಲ್ಕು ಎಕರೆ ಹೊಲವನ್ನು ನನಗೆ ಮಾಡಿಸಿ ಕೊಟ್ಟರು! ಹೋದವರ್ಷ ಒಂದು ಏಕರೆ ಗದ್ದೆಯನ್ನು ಸುಲಭ ಬೆಲೆಗೆ ಒಬ್ಬ ರೈತನಿಂದ ಕೊಡಿಸಿಕೊಟ್ಟರು! ಈಗ ಮನೆಗೆ ಪ್ರತಿವರ್ಷ ಬತ್ತ, ರಾಗಿ, ಅವರೆ, ನವಣೆ, ಮೊದಲಾದ ಬೆಳೆಯೆಲ್ಲ ಬರುತ್ತಾ ಇದೆ ಸ್ವಾಮಿ! ಮುಂದಿನ ವರ್ಷ ಇನ್ನು ಸ್ವಲ್ಪ ಜಮೀನು ಕೊಂಡು ಕೊಳ್ಳೋಣ ಎಂದು ಹೇಳಿದ್ದಾರೆ. ಈ ದಿನವೇ ನನಗೆ ಪಿಂಚಿನ್ ಆದರೂ ನಾನು ಉಪವಾಸ ಇರುವುದಿಲ್ಲ; ಸುಖವಾಗಿ ಜೀವನ ನಡೆಸಬಲ್ಲೆ ಸ್ವಾಮಿ ! ಗಂಗೇಗೌಡರು ಹೀಗೆ ಉಪಕಾರ ಮಾಡಿದ್ದಾರೆ!’

ರಂಗಣ್ಣನಿಗೆ ಮನಸ್ಸು ಕೃತಜ್ಞತಾಭಾವದಿಂದ ತುಂಬಿ ಹೋಯಿತು. ಮೇಷ್ಟರ ವಿಚಾರದಲ್ಲಿ ಇಂಥ ಉಪಕಾರ ಮಾಡತಕ್ಕ ಮಹನೀಯರು ನಮ್ಮ ದೇಶದಲ್ಲಿದ್ದಾರಲ್ಲ! ನಮ್ಮ ದೇಶದ ಸೌಭಾಗ್ಯಕ್ಕೆ ಎಣೆಯುಂಟೇ! ಎಂದು ಹೇಳಿಕೊಂಡನು. ಗಂಗೇಗೌಡರ ವಿಚಾರದಲ್ಲಿ ಬಹಳ ಗೌರವವೂ ವಿಶ್ವಾಸವೂ ಉಂಟಾದುವು. ತಿಮ್ಮಣ್ಣ ಭಟ್ಟನು ತನ್ನ ಕಥೆಯನ್ನು ಮುಂದಕ್ಕೂ ಹೇಳತೊಡಗಿದನು. ‘ಸ್ವಾಮಿ! ಪ್ರತಿವರ್ಷವೂ ನವರಾತ್ರಿಯ ಕಾಲದಲ್ಲಿ ರಾಮಾಯಣವನ್ನು ನನ್ನ ಕೈಯಲ್ಲಿ ಪಾರಾಯಣ ಮಾಡಿಸುತ್ತಾರೆ. ಸಂಭಾವನೆಯಾಗಿ ಇಪ್ಪತೈದು ರೂಪಾಯಿಗಳನ್ನೂ ಒಂದು ಜೊತೆ ಪಂಚೆಯನ್ನೂ ನನಗೆ ಕೊಡುತ್ತಾರೆ! ಆ ಹಣ ನನ್ನ ಇತರ ಖರ್‍ಚಿಗೆ ಆಗುತ್ತೆ. ಹೀಗೆ ಕಾಪಾಡಿಕೊಂಡು ಬರುತ್ತಿದ್ದಾರೆ. ಅವರ ಮಾತನ್ನು ಮೀರಿ ಹೋಗುವುದಕ್ಕೆ ನನಗೆ ಮನಸ್ಸು ಬರುವುದಿಲ್ಲ ಸ್ವಾಮಿ! ಆದ್ದರಿಂದ ತಾವು ಈಗ ನಡೆದುದನ್ನೆಲ್ಲ ಕ್ಷಮಿಸಿ ಬಿಡಬೇಕು, ಮರೆತು ಬಿಡಬೇಕು’

‘ಎಲ್ಲವನ್ನೂ ಕ್ಷಮಿಸಿದ್ದೇನೆ ಭಟ್ಟರೇ! ಏನೊಂದೂ ಆಲೋಚನೆ ನಿಮಗೆ ಬೇಡ. ಅದಕ್ಕೆ ಸಾಕ್ಷಿಯಾಗಿ ಈ ಬಾಳೆಯ ಹಣ್ಣುಗಳನ್ನು ತೆಗೆದು ಕೊಳ್ಳುತ್ತೇನೆ ನೋಡಿ! ನೀವು ಸಹ ಎರಡನ್ನು ಹೊಟ್ಟೆಗೆ ಸೇರಿಸಿ!’ ಎಂದು ರಂಗಣ್ಣ ನಗುತ್ತಾ ಹೇಳಿದನು. ಈ ಪ್ರಕರಣ ಹೀಗೆ ಸಂತೋಷದಲ್ಲಿ ಮುಕ್ತಾಯವಾಗುತ್ತಿದ್ದಾಗ ಗಂಗೇಗೌಡರು ಅಲ್ಲಿಗೆ ಬಂದರು. ತಿಮ್ಮಣ್ಣ ಭಟ್ಟ ಇನ್ನು ತಾನಲ್ಲಿರಬಾರದೆಂದು ಮೆಲ್ಲಗೆ ಜಾರಿ ಕೊಂಡು ಅಡಿಗೆಯ ಏರ್ಪಾಟನ್ನು ವಿಚಾರಿಸಲು ಗೋಪಾಲನ ಹತ್ತಿರಕ್ಕೆ ಹೊರಟನು.

ಗಂಗೇಗೌಡರನ್ನು ಬಹಳ ಆದರದಿಂದ ರಂಗಣ್ಣನು ಬರಮಾಡಿ ಕೊಂಡನು. ಗೌಡರು ಸುಮಾರಾಗಿ ಕುಳ್ಳಗಿದ್ದರು; ಸ್ವಲ್ಪ ಸ್ಥೂಲಕಾಯ ವೆಂದೇ ಹೇಳಬೇಕು. ದೊಡ್ಡ ಸರಿಗೆಯ ರುಮಾಲು, ಸರ್ಜುಕೋಟು ಮತ್ತು ಉತ್ತರೀಯಗಳನ್ನು ಧರಿಸಿದ್ದರು ; ಹಣೆಯಲ್ಲಿ ವಿಭೂತಿಯ ಪಟ್ಟೆಗಳಿದ್ದುವು. ‘ಸ್ವಾಮಿಯವರ ಇಷ್ಟಕ್ಕೆ ವಿರೋಧವಾಗಿ ನಡೆದು ಕೊಂಡಿದ್ದೇನೆ. ಕ್ಷಮಿಸಬೇಕು’ ಎಂದು ಗೌಡರು ಹೇಳಿದರು.

‘ನನ್ನ ಇಷ್ಟಕ್ಕೆ ವಿರೋಧವಾಗಿ ಏನೂ ಅಲ್ಲ. ಆದರೆ ನನ್ನ ಕೋರಿಕೆಗೆ ವಿರೋಧವಾಗಿ ಏರ್ಪಾಟು ಮಾಡಿದ್ದೀರಿ! ಚಿಂತೆಯಿಲ್ಲ. ತಿಮ್ಮಣ್ಣ ಭಟ್ಟರು ಎಲ್ಲ ಸಮಾಚಾರಗಳನ್ನೂ ತಿಳಿಸಿದ್ದಾರೆ.’

‘ಏನು ಸ್ವಾಮಿ! ಹತ್ತು ಜನ ಬಡಮೇಷ್ಟರಿಗೆ ಒಪ್ಪೋತು ಅನ್ನ ಹಾಕಲಾರೆನೇ ನಾನು? ಅವರು ಸಂತೋಷವಾಗಿದ್ದರೆ ನಮಗೂ ಸಂತೋಷ, ಬಡವರು ಗೋಳಾಡುತ್ತಿದ್ದರೆ ನಮಗೇನು ಸುಖ ಸ್ವಾಮಿ? ತಾವು ಹೇಳಿ.’

‘ನಿಮ್ಮ ಮುಖಂಡರುಗಳಿಗೆ ಅದನ್ನು ಹೇಳಿ ಗೌಡರೇ!’

‘ಅಯ್ಯೋ ಸ್ವಾಮಿ! ಆ ಮುಖಂಡರ ಮಾತನ್ನು ನನಗೆ ಹೇಳ ಬೇಡಿ. ನಮ್ಮ ದೇಶ ಉದ್ಧಾರವಾಗಬೇಕಾದರೆ ಮೇಷ್ಟರಿಗೆ ಕೈತುಂಬ ಸಂಬಳ, ಹೊಟ್ಟೆ ತುಂಬ ಅನ್ನ ಕೊಡಬೇಕು. ಅವರೇ ಅಲ್ಲವೇ ಜನರಿಗೆ ವಿದ್ಯಾ ಬುದ್ದಿಗಳನ್ನು ಕಲಿಸುವ ಗುರುಗಳು! ವಿದ್ಯೆಯಿಲ್ಲದ ಜನ ಏನು ರಾಜಕೀಯ ತಿಳಿದುಕೊಂಡಾರು? ಮುಖ್ಯವಾಗಿ ನೋಡಿ : ಒಂದು ಕಡೆ ಉಪಾಧ್ಯಾಯರ ಹಿತಚಿಂತನೆ, ಇನ್ನೊಂದು ಕಡೆ ರೈತರ ಹಿತಚಿಂತನೆ ಇವೆರಡನ್ನೂ ಸಾಧಿಸಿದರೆ ದೇಶ ಉದ್ದಾರವಾಗುತ್ತದೆ. ಹೊಟ್ಟೆಗೆ ಹಿಟ್ಟು ಕಾಣಿಸುವ ಜನರು ದುಡಿಯೋ ರೈತರು. ಅವರಿಗೆ ತಿಳಿವಳಿಕೆ ಕೊಡಬೇಕು; ಹೆಚ್ಚಾಗಿ ಬೆಳೆಯುವ ಹಾಗೆ ಮಾಡಬೇಕು; ಅವರಿಗೆ ಸಾಲ ಸೋಲಗಳಿಲ್ಲದಂತೆ ನೋಡಿಕೊಳ್ಳಬೇಕು. ಈಗ ನೋಡಿ! ನಮ್ಮ
ಒಕ್ಕಲಿಗ ಜನಾಂಗ ಸರಕಾರಿ ಕೆಲಸಕ್ಕೆ ಆಶೆ ಪಟ್ಟು, ಇದ್ದ ಬದ್ದ ಹಣವನೆಲ್ಲ ಓದಿಗೆ ಹಾಕಿ, ಪೇಟೆಗಳಿಗೆ ಹೋಗಿ ಶೋಕಿ ಕಲಿತುಕೊಂಡು, ಸರಕಾರದಲ್ಲಿ ಗುಮಾಸ್ತೆಯ ರಾಗಿಯೋ ಮೇಷ್ಟ ರಗಳಾಗಿಯೋ ನರಳುತ್ತಿದಾರೆ! ಜಮೀನುಗಳೆಲ್ಲ ಬಂಜರು ಬಿದ್ದುವು ; ದುಡಿಯೋ ಜನ ಕಡಮೆ ಆದರು. ಇನ್ನು ಬೆಳೆ ಕಡಮೆಯಾಗದೆ ಏನಾದೀತು? ಹೇಳಿ ಸ್ವಾಮಿ! ಅಧಿಕಾರಿಗಳ ತಿರುಗಾಟ ಹೇಳ ತೀರದು; ಗ್ರಾಮಾಭಿವೃದ್ದಿಯ ಉಪನ್ಯಾಸಗಳನ್ನು ಕೇಳತೀರದು; ರಸ್ತೆಯ ಪಕ್ಕದಲ್ಲಿ ನಾಲ್ಕು ಸಣಕಲು ಒಣಕಲು ಗಿಡಗಳನ್ನು ನೆಟ್ಟು ‘ಗ್ರಾಮ ಪಂಚಾಯತಿ ಫೋರೆಸ್ಟ್’ ಎಂದು ಹಾಕಿರುವ ಬೋರ್ಡನ್ನು ನೋಡತೀರದು. ನಮ್ಮ ಮುಖಂಡರು ಮಾಡುತ್ತಿರುವುದೇನು! ಕೋಮುವಾರು ದ್ವೇಷ ಬೆಳಸೋದು, ತಮ್ಮ ಕಡೆಯ ನಾಲ್ಕು ಜನಕ್ಕೆ ಪ್ರೊಬೆಷನರಿ ಕೆಲಸ ಕೊಡಿ ಸ್ವಾಮಿ! ಎಂದು ಹಲ್ಲುಗಿರಿಯುತ್ತ ದಿವಾನರಿಗೆ ಔತಣ ಕೊಡಿಸೋದು, ಅವರ ಮನೆಯ ಬಾಗಿಲು ಕಾಯೋದು’

‘ಗೌಡರೇ ! ನಾನು ಸರಕಾರಿ ನೌಕರ; ನಿಮಗೆ ತಿಳಿದಿದೆಯಲ್ಲ. ನನಗೇಕೆ ಈ ರಾಜಕೀಯದ ವಿಚಾರ?’

‘ಮುಖಂಡರ ಮಾತು ಬಂತಲ್ಲ ಸ್ವಾಮಿ! ಅದಕ್ಕೋಸ್ಕರ ಹೇಳಿದೆ ಮನಸ್ಸಿಗೆ ಬೇಜಾರು ಪಟ್ಟು ಕೊಳ್ಳಬೇಡಿ. ಹಳ್ಳಿಗಳಲ್ಲಿ ಇದ್ದುಕೊಂಡು ನಾವು ಮಾಡೋ ಕೆಲಸಗಳು ಬಹಳ ಇವೆ. ನಾನು ಸನಿಕೆ ಗುದ್ದಲಿ ತೆಕ್ಕೊಂಡು ರಸ್ತೆಯ ರಿಪೇರಿಗೆ ಹೊರಟರೆ, ನನ್ನ ರೈತರು ನೂರಾರು ಜನ ನಾನು ತಾನು ಎಂದು ಕೆಲಸಕ್ಕೆ ಬರುವುದಿಲ್ಲವೆ? ದಿವಾನರ ಪಕ್ಕದಲ್ಲಿ ನಿಂತುಕೊಂಡು, ಕೈ ಕುಲುಕಿಸಿಕೊಂಡು, ರಸ್ತೆಯ ರಿಪೇರಿಯನ್ನು ಹಳ್ಳಿ ಯವರೇ ಮಾಡಿ ಕೊಳ್ಳಿ! ನಿಮ್ಮ ಕಾಲಮೇಲೇ ನೀವು ನಿಂತುಕೊಳ್ಳ ಬೇಕು ಎಂದು ಬರಿಯ ಬೋಧೆಮಾಡಿದರೆ ದೇಶಕ್ಕೆ ಪ್ರಯೋಜನ ಏನು? ಕಾಲಮೇಲೆ ನಿಂತು ಕೊಂಡಿಲ್ಲದೆ ಜನ ಕೈ ಮೇಲೆ ನಿಂತಿದ್ದಾರೆಯೇ!’

‘ಮುಂದೆ ಒಳ್ಳೆಯ ಕಾಲ ಬರುತ್ತದೆ ಗೌಡರೆ! ಪ್ರಜೆಗಳಿಗೆ ಅಧಿಕಾರ ಬಂದಾಗ ಎಲ್ಲವೂ ಚೆನ್ನಾಗಿ ನೆರವೇರುತ್ತವೆ. ಈಗ ನಿಮಗೆ ನಾನು ತಿಳಿಸಬೇಕಾದ ಒಂದು ಸಂಗತಿ ಇದೆ: ನೀವು ನಮ್ಮ ಉಪಾಧ್ಯಾಯರ ವಿಚಾರದಲ್ಲಿ ಬಹಳ ಸಹಾನುಭೂತಿಯಿಂದ ನಡೆದು ಕೊಳ್ಳುತ್ತಾ ಇದ್ದೀರಿ; ಅನೇಕರಿಗೆ ಸಹಾಯ ಮಾಡಿದ್ದೀರಿ ; ತಿಮ್ಮಣ್ಣ ಭಟ್ಟ ರನ್ನು ಉದ್ದಾರ ಮಾಡಿದ್ದೀರಿ ; ನಮ್ಮ ದೇಶಕ್ಕೆ ಆದರ್ಶಪ್ರಾಯರೂ ಭೂಷಣ ಪ್ರಾಯರೂ ಆಗಿದ್ದೀರಿ. ನಿಮಗೆ ನಾನು ಬಹಳ ಕೃತಜ್ಞನಾಗಿದ್ದೇನೆ.’

‘ಸ್ವಾಮಿ! ನನ್ನನ್ನು ಹೀಗೆಲ್ಲ ತಾವು ಸ್ತೋತ್ರ ಮಾಡಬಾರದು. ಸ್ತೋತ್ರ ಕೇಳಿದರೆ ಬುದ್ದಿ ಕೆಟ್ಟು ಹೋಗುತ್ತದೆ! ನಾನು ಮಾಡಿರುವ ಉಪಕಾರ ಏನು? ಉದ್ದಾರ ಏನು? ಏನೂ ಇಲ್ಲ. ಅವರವರು ದುಡಿದು ಸಂಪಾದನೆ ಮಾಡುತ್ತಾರೆ. ಬಿಟ್ಟಿಯಾಗಿ ನಾನೇನೂ ಕೊಟ್ಟಿಲ್ಲ.’
‘ನೀವು ಹೀಗೆಯೇ ಹೇಳಬೇಕು. ದುಡಿಯುವುದಕ್ಕೆ ಎಷ್ಟೋ ಮಂದಿ ಸಿದ್ದರಾಗಿದ್ದಾರೆ. ದುಡಿಸಿಕೊಂಡು ಕೈಗೆ ಹಣ ಕೊಡುವ ಮಹಾನುಭಾವರು ವಿರಳ! ಈಗ ತಿಮ್ಮಣ್ಣ ಭಟ್ಟರ ವಿಚಾರದಲ್ಲಿ ಒಂದು ಮಾತು : ಅವರು ನಿಮ್ಮ ಹತ್ತಿರ ಹಾಗೆ ಗುಮಾಸ್ತೆ ಕೆಲಸ ಮಾಡುವುದು ನಮ್ಮ ಸರಕಾರದ ರೂಲ್ಸಿಗೆ ವಿರುದ್ಧವಾದುದು. ಮೇಲಿನವರ ಅಪ್ಪಣೆ ಇಲ್ಲದೆ ಹಾಗೆಲ್ಲ ಬೇರೆ ಕಡೆ ಸರಕಾರಿ ನೌಕರನು ದುಡಿಯಕೂಡದು, ಸಂಪಾದಿಸಕೂಡದು.

‘ಸ್ವಾಮಿ! ಒಳ್ಳೆಯ ರೂಲ್ಸು ಮಾತು ಆಡುತ್ತಿದ್ದೀರಲ್ಲ! ನನ್ನ ಕೈ ಕೆಳಗೆ ಕೂಲಿ ಆಳುಗಳು ಕೆಲಸ ಮಾಡುತ್ತಿದಾರೆ ಸ್ವಾಮಿ! ಎರಡು ಹೊತ್ತು ಹಿಟ್ಟು, ಹೊದೆಯುವುದಕ್ಕೆ ಕಂಬಳಿ, ಕೈಗೆ ದುಡ್ಡು -ಆ ಆಳುಗಳಿಗೆ ನಾನು ಕೊಡುತ್ತಿದ್ದೇನೆ. ಸರಕಾರಾನೂ ಮೇಷ್ಟ್ರ ಸಂಸಾರಕ್ಕೆ ದಿನವೂ ಊಟ ಹಾಕಿ, ವರ್ಷಕ್ಕೆ ಬೇಕಾಗುವ ಬಟ್ಟೆ ತೆಗೆದು ಕೊಟ್ಟು, ತಿಂಗಳಿಗೆ ಹದಿನೈದು ಇಪ್ಪತ್ತು ರುಪಾಯಿ ಕೈಗೆ ಕೊಡಲಿ ಸ್ವಾಮಿ! ಹೊಟ್ಟೆಗೆ ಹಿಟ್ಟು ಹಾಕದೆ, ಮೈಗೆ ಬಟ್ಟೆ ಕೊಡದೆ, ಕೂಲಿ ಆಳುಗಳಿಗಿಂತ ಕೀಳಾಗಿ ಕಾಣುತ್ತೀರಿ! ರೂಲ್ಸು ಮಾತು ಆಡುತ್ತೀರಿ!’

‘ಸಂಬಳ ಸಾರಿಗೆಗಳನ್ನೆಲ್ಲ ಸರಕಾರದವರು ಆಯಾ ಕೆಲಸಕ್ಕನುಗುಣವಾಗಿ ನಿಗದಿ ಮಾಡಿದ್ದಾರೆ. ಅವರನ್ನು ಟೀಕಿಸಬಾರದು ಗೌಡರೇ!’

‘ಅದೇನು ಸ್ವಾಮಿ ಸರಕಾರದವರು! ಎಂದು ದೊಡ್ಡದಾಗಿ ಹೇಳುತ್ತಿರಿ, ಸರಕಾರ ಎಂದರೆ ಯಾರು ಸ್ವಾಮಿ? ಸಾವಿರಾರು ರುಪಾಯಿಗಳನ್ನು ತಮತಮಗೆ ಸಂಬಳವಾಗಿ ನಿಗದಿಮಾಡಿಕೊಂಡು ಮೋಟಾರುಗಳಲ್ಲಿ ಓಡಾಡುತ್ತ, ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸಮಾಡುತ್ತ, ಹಗಲೆಲ್ಲ ಜಬರ್‍ದಸ್ತಿ ಮಾಡಿ ರಾತ್ರಿಯೆಲ್ಲ ಮೈ ಮರೆತು ಬಿದ್ದು ಕೊಂಡಿರುವ, ಹ್ಯಾಟು ಬೂಟುಗಳ ಸರಿಗೆ ರುಮಾಲು ಸೂಟುಗಳ ದೊಡ್ಡ ಮನುಷ್ಯರ ಕ್ಲಬ್ಬು ತಾನೇ ಸ್ವಾಮಿ! ಬಡ ಮೇಷ್ಟರುಗಳ ಕಷ್ಟ, ಅವರಿಗೆ ಗೊತ್ತೇ? ಜೀವನಕ್ಕೆ ಆಗುವಷ್ಟು, ಸಂಸಾರಕ್ಕೆ ಸಾಕಾಗುವಷ್ಟು, ನಿಗದಿಮಾಡಿ ಎಲ್ಲರಿಗೂ ಒಂದು ಮಟ್ಟಕ್ಕೆ ಕಡಮೆಯಿಲ್ಲದೆ ಸಂಬಳ ಕೊಡಿ ಸ್ವಾಮಿ! ಆಮೇಲೆ ರೂಲ್ಸು ಮಾತನಾಡಿ!’

‘ನಾಳೆ ನಮಗೆ ಸ್ವರಾಜ್ಯ ಬಂದಾಗ ನೀವು ಪ್ರಧಾನಿಗಳಾಗಿ ಬರ ಬೇಕು ಗೌಡರೇ!’

‘ಅಯ್ಯೋ ಸ್ವಾಮಿ! ಅದೆಲ್ಲ ನಮಗೇಕೆ? ನಾನು ಒಕ್ಕಲ ಮಗ! ದುಡಿಯೋ ರೈತ! ಮುಂದೆ ಪ್ರಜಾಧಿಕಾರ ಬಂದರೂ ಕಚ್ಚಾಟ ತಪ್ಪೋದಿಲ್ಲ ಸ್ವಾಮಿ! ದ್ರೌಪದಿಗೆ ಐದು ಜನ ಗಂಡಂದರಿದ್ದು ಒಬ್ಬೊಬ್ಬರು ಒಂದೊಂದು ವರ್ಷ ಸರದಿಯಮೇಲೆ ಗಂಡನಾಗಿರಬೇಕು ಎಂದು ನಿಗದಿ ಮಾಡಿದ್ದರಲ್ಲಾ! ಅದು ಜ್ಞಾಪಕಕ್ಕೆ ಬರುತ್ತೆ ಸ್ವಾಮಿ! ಮುಂದೆ ಸರದಿಯಮೇಲೆ ದಿನಕ್ಕೊಬ್ಬೊಬ್ಬ ಗಂಡ ನಾನು ತಾನು ಎಂದು ನೂರಾರು ಜನ ಕಚ್ಚಾಡ್ತಾರೆ!’

ಗಂಗೇಗೌಡರು ವಿಶ್ವವಿದ್ಯಾನಿಲಯದಲ್ಲಿ ಓದಿದವರಲ್ಲದಿದ್ದರೂ ಪದವೀಧರರಲ್ಲದಿದ್ದರೂ ಎಷ್ಟು ಚೆನ್ನಾಗಿ ತಿಳಿವಳಿಕೆ ಪಡೆದಿದ್ದಾರೆ! ಎಂಬುದನ್ನು ನೋಡಿ ರಂಗಣ್ಣನಿಗೆ ಆಶ್ಚರ್ಯವಾಯಿತು. ದೇಶದಲ್ಲಿ ಸತ್ಯ ಬೇಕಾದಷ್ಟಿದೆ, ದೇಶದ ಆರೋಗ್ಯವೂ ಚೆನ್ನಾಗಿದೆ; ಆದ್ದರಿಂದ ಭವಿಷ್ಯ ಆಶಾದಾಯಕವಾಗಿದೆ ಎಂದು ರಂಗಣ್ಣನಿಗೆ ಬಹಳ ಸಂತೋಷ ವಾಯಿತು. ಮಾರನೆಯ ದಿನದ ಏರ್ಪಾಡುಗಳನ್ನು ಮಾತನಾಡುತ್ತಿದ್ದಾಗ ತಿಮ್ಮಣ್ಣ ಭಟ್ಟ ಲೋಟಗಳಲ್ಲಿ ಕಾಫಿ ತಂದು ಮುಂದಿಟ್ಟನು. ‘ಹೆಡ್‌ಮೇಷ್ಟ್ರ್‍ಏ! ಇನ್ಸ್‌ಪೆಕ್ಟರವರ ಊಟಕ್ಕೆ ಏನು ಏರ್‍ಪಾಟು ಮಾಡಿದ್ದೀರಿ?’ ಎಂದು ಗಂಗೇ ಗೌಡರು ಕೇಳಿದರು.

‘ಎಲ್ಲ ಏರ್‍ಪಾಟುಗಳನ್ನೂ ಅವರು ಮಾಡಿಕೊಂಡು ಬಂದಿದ್ದಾರೆ. ನಮ್ಮ ಸಹಾಯದ ನಿರೀಕ್ಷಣೆಯನ್ನು ಅವರು ಇಟ್ಟು ಕೊಂಡಿಲ್ಲ.’

‘ಹಾಗುಂಟೇ! ತರಕಾರಿ, ಹಾಲು ಮೊಸರು- ಇವುಗಳನ್ನಾದರೂ ತಂದು ಕೊಟ್ಟಿದ್ದೀರೋ ಇಲ್ಲವೋ?’

‘ಅವುಗಳನ್ನೆಲ್ಲ ಒದಗಿಸಿದ್ದೇನೆ.’

ರಂಗಣ್ಣನು ಆ ರಾತ್ರಿ ಊಟಕ್ಕೆ ತನ್ನ ಬಿಡಾರಕ್ಕೇನೆ ಬರಬೇಕೆಂದು ಗಂಗೇಗೌಡರಿಗೆ ಆಹ್ವಾನ ಕೊಟ್ಟನು.

‘ಏನು ಸ್ವಾಮಿ! ನೀವು ಬ್ರಾಹ್ಮಣರೇ!’

‘ಈ ದಿವಸ ನಿಮ್ಮನ್ನೂ ಬ್ರಾಹ್ಮಣನನ್ನಾಗಿ ಮಾಡುತ್ತೇನೆ ಬನ್ನಿ! ಎಲ್ಲರೂ ಬ್ರಾಹ್ಮಣರಾಗಿಹೋದರೆ ಬಹಳ ಒಳ್ಳೆಯದು’ ಎಂದು ರಂಗಣ್ಣನು ನಗುತ್ತಾ ಹೇಳಿದನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಳೆಬೀಜ
Next post ಅಂತರಂಗದ ನರಕ ಕುದಿಸಿ ಭಟ್ಟಿಯ ಇಳಿಸಿ

ಸಣ್ಣ ಕತೆ

 • ಒಂಟಿ ತೆಪ್ಪ

  ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

 • ಏಡಿರಾಜ

  ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys