ರುಚಿಯನ್ನು ಕೆರಳಿಸಲು ಕಟುಮಸಾಲೆಗಳಿಂದ
ಬೊಡ್ಡು ನಾಲಿಗೆಯನ್ನು ಚುರುಕುಗೊಳಿಸುವ ಹಾಗೆ,
ಮೈಯ ರಕ್ಷಿಸಲು ಗೊತ್ತಿರದ ಬೇನೆಗಳಿಂದ
ಅತಿ ಎನಿಸುವಷ್ಟು ಔಷಧ ತಿನ್ನಿಸುವ ಹಾಗೆ,
ನಿನ್ನ ಗುಣ ಪ್ರೀತಿ ಮಾಧುರ್‍ಯ ಯಥೇಷ್ಟ ಸವಿದು
ಚುರುಕು ಸಂಬಾರಗಳ ಕೆಣಕನ್ನಪೇಕ್ಷಿಸಿದೆ;
ಸುಖವುಂಡು ಪಟ್ಟ ಸಂತೃಪ್ತಿಯಲಿ ಬಸವಳಿದು
ತದ್ವಿರುದ್ದ ಸ್ಥಿತಿಯ ಬಯಸಿದೆ ಅಗತ್ಯವಿರದೆ.
ಇಲ್ಲದ ಅನಿಷ್ಟಗಳ ಸುಳ್ಳೆ ಕಲ್ಪಿಸಿಕೊಂಡು
ಅಲ್ಲದ್ದ ಮಾಡಿದೆ, ಶುದ್ದ ಆರೋಗ್ಯವನೆ
ಒಡ್ಡಿದೆ ಚಿಕಿತ್ಸೆಗೆ, ಅಲ್ಲಸಲ್ಲದ್ದುಂಡು
ಗುಣಪಡಿಸ ಹೊರಟೆ ಪರಿಶುದ್ದವಾದದ್ದನ್ನೆ.
ಅನುಭವಿಸಿ ಕಡೆಗೆ ನಿಜವಾದ ಪಾಠವ ಕಲಿತೆ
ನಿನಗೆ ಬೇಸರಿಸಿ ಮದ್ದುಣಲು ವಿಷ ಎಂದಂತೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 118
Like as to make our appetites more keen