ಬಯಲಿನಲಿ ಕೂತು
ಆಕಾಶಕ್ಕೆ ಕಣ್ಣು.
ಬೆಳ್ಳಂಬೆಳಗೇ ತಾರೆಗಳ ಹುಡುಕಿ
ಕಿತ್ತು ಪೋಣಿಸಿ
ಮಾಲೆ ಮಾಡುತ್ತ
ಮಡಿಲು ತುಂಬಿಕೊಳುವುದರಲೇ ಮಗ್ನ
ಈ ಬಯಲ ಬುದ್ಧ.


ಗುಡಿಸಿದ ರಾಶಿ ಬೀದಿ ಕಸ
ತನ್ನ ಪುಟ್ಟ ಬೊಗಸೆಗೆ ತುಂಬಿ
ದಿನವೂ ಪುಟ ಪುಟನೆ ಓಡಿ ಬಂದು
ಅವನ ಪಾದ ಬುಡಕ್ಕೆ ಸುರುವಿ
ತಾರೆಗಳ ಮಾಲೆ ಕಟ್ಟುತಾ
ಮೋಹಕ್ಕೆ ಬಿದ್ದವನ ಮೈತಡವಿ
ಎಬ್ಬಿಸಿ
ಇಹಕ್ಕೆ ಕಣ್ಬಿಡಿಸಿ
ಕಲ್ಲು ಹೂವು ಮುಳ್ಳು ಕಾಗದದ ಚೂರು…..
ಒಂದೊಂದೇ
ಅವಶೇಷ ಎತ್ತಿ ಹಿಡಿದು
ಪ್ರತಿ ಕಸದ ಇತಿಹಾಸ ವರ್ತಮಾನ
ಬಿಡಿ ಇಡಿಯಾಗಿ ಏರಿಳಿತದ ದನಿಯಲ್ಲೇ
ಕಥೆ ಬಿಡಿಸಿಡುತ್ತದೆ
ಈ ಬೀದಿ ಗುಡಿಸುವ ಜೀವ.


ಸಾಣೆಗೆ ಸಿಕ್ಕದ ಚೂಪುಗಲ್ಲು
ತುಳಿದು ಬಾಡಿಸಿದ ಹೂವು
ಚುಚ್ಚಲು ಕಾದಿರುವ ಮುಳ್ಳು
ಒಡೆದ ಬಳೆ ಚೂರು
ರಕ್ತದ ಕಲೆಯ ಬಟ್ಟೆ ಚಿಂದಿ
ಒಡೆದ ಭ್ರೂಣದ ಪಳೆಯುಳಿಕೆ…..
ಕಸದ ಮಣ್ಣಿನ ತುಂಬಾ ನೋವು.
ಅವನ ಪಾದಕ್ಕೆ ಕಸ ಸುರುವಿ
ಕಣ್ಣೀರಲೇ ಕೈ ತೊಳೆದರೂ
ಅವಳ ಪುಟ್ಟ ಬೊಗಸೆಯೊಂದು
ಸದಾ ಸುಡುವ ಕುಲುಮೆ.


ಅವನಿಗೆ ಕತೆ ಹೇಳುತ್ತಾ ಹೇಳುತ್ತಾ
ಕಸವಾಗಿಸಿದವರ ನಿರ್ದಯತೆಗೆ
ಕುದಿಯುತ್ತಾ ಸಿಡಿಯುತ್ತಾ
ಬಿಕ್ಕುತ್ತಾ ಉಮ್ಮಳಿಸಿ ಅಳುತ್ತಾಳೆ.


ಅವಳ ಮನ ನೇವರಿಸಿ ಸಂತೈಸುವ
ಬಯಲ ಬುದ್ಧ
ತಲೆನೇವರಿಸುತ್ತಾ
ಹೆಗಲ ಮೇಲಿನ ಚುಂಗಿನಲಿ
ಕಣ್ಣೀರೊರೆಸುತ್ತಾ
ಪ್ರತಿ ಕಸದ ಕಥೆಗೂ
ತಾನೇ ಅದಾಗಿ,
ಭವಿಷ್ಯ ನೂಲುತ್ತಾನೆ ಕರುಳ ನೂಲಿನಲಿ.


ಮುಟ್ಟುತ್ತಾ ಮುಟ್ಟುತ್ತಾ
ಕಸದ ಕಲ್ಲು ನಯವಾಗಿಸುತ್ತಾ
ಚೂಪು ಮುಳ್ಳಿನ ಮೊನೆ ಮುರಿಯುತ್ತಾ
ಬಳೆ ಚೂರು ಗುಂಡಗೆ ಅಂಟಿಸುತ್ತಾ….
ಈ ಬಯಲ ಬುದ್ಧ
ಮುರಿದ ಹೂವಿನ ದಳಗಳ
ದೇಟಿಗೆ ಜೋಡಿಸುತ್ತಾ… ಇರುತ್ತ.


ಇರುತ್ತಾ,
ಈ ಬೀದಿ ಗುಡಿಸುವ ಜೀವ
ಅವನ ಪಾದಕ್ಕೆ
ಕಸ ಸುರುವುತ್ತಾ
ಕತೆ ಹೇಳುತ್ತಾ
ಅವನ ತಾರೆಗಳ
ಮಡಿಲಿಗೆಳೆದುಕೊಂಡು
ತಾನೂ
ಮಾಲೆ ಕಟ್ಟುತ್ತಾಳೆ!
*****