ಜಗವನು ಬೆಳಗುವ ರವಿಯಿಹನೆಂದು,
ತಣ್ಗದಿರನು ಶಿರದೊಳಗಿಹನೆಂದು,
ಅಪಾರ ಸಂಪದವಲ್ಲಿಹುದೆಂದು,
ಅಷ್ಟೈಶ್ವರ್ಯವು ತನಗಿಹುದೆಂದು,

ಸಗ್ಗದೊಡೆಯ ತಾ ಪೇಳುವನು!
ಬಲು ಬಲು ಬಿಂಕವ ತಾಳಿಹನು!!

ಮೀರಿದ ಶೂರರು ಅಲ್ಲಿಹರೆಂದು,
ಕುಕ್ಕುವ ಕವಿವರರಿರುತಿಹರೆಂದು,
ಮುನಿವರರೆಲ್ಲರು ತನ್ನವರೆಂದು,
ಕಲೆಗಳ ಕೋವಿದರಲ್ಲಿಹರೆಂದು,

ಸಗ್ಗದೊಡೆಯ ತಾ ಪೇಳುವನು!
ಬಲು ಬಲು ಬಿಂಕವ ತಾಳಿಹನು!!

ಸಗ್ಗ ದೊಡೆಯನೇ ತಿಳಿಯಿತು ತಿಳಿಯಿತು!
ನಿನ್ನೀ ಬಿಂಕದ ಮರ್ಮವು ಹೊಳೆಯಿತು!
ರವಿ ಕರುನಾಡನು ಕದ್ದಿಹ ಚೋರಾ!
ಕನ್ನಡ ಚಂದ್ರಮನೆತ್ತಿಹ ಚೋರಾ!

ವಿಜಯನಗರವನೆ ವೈದಿಹ ಚೋರಾ!
ನನ್ನಯಸಿರಿ ಸಲೆ ಸೇವಿಪ ಚೋರಾ!

ಚೋರನೆ ಸಗ್ಗದ ಒಡೆಯನೆ ತಿಳಿಯಿತು!
ನಿನ್ನೀ ಬಿಂಕದ ಮರ್ಮವು ಹೊಳೆಯಿತು!

ವೀರಪುಂಗ ಪುಲಿಕೇಶಿಯ ಚೋರಾ!
ಪಂಪ, ರನ್ನ ಶ್ರೀ ಹೊನ್ನರ ಚೋರಾ!
ವಿದ್ಯಾರಣ್ಯರನೊಯ್ದಿಹ ಚೋರಾ!
ಜಕ್ಕಣಶಿಲ್ಪಿಯ ಜಗ್ಗಿದ ಚೋರಾ!

ಬಿಡು ಬಿಡು ನಿನ್ನೀ ಬಿಂಕವನು!
ಹಿಡಿ ಹಿಡಿ ಸತ್ಯದ ಮಾರ್ಗವನು!!
*****